ಕನ್ನಡ ವಾರ್ತೆಗಳು

ತಂತ್ರಜ್ಞಾನ ಬಳಕೆಯಿಂದ ಸರಕಾರಿ ಸೇವೆ ಸುಗಮ’

Pinterest LinkedIn Tumblr

Dc_eproject_photo_1

ಮಂಗಳೂರು, ಮಾರ್ಚ್. 25 : ಸರಕಾರಿ ಸೇವೆಗಳಲ್ಲಿ ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಸಾರ್ವಜನಿಕರಿಗೆ ಬಹಳ ಅನುಕೂಲವಾಗಲಿದ್ದು, ತ್ವರಿತವಾಗಿ ಜನಸಾಮಾನ್ಯರಿಗೆ ಸೇವೆ ದೊರಕಲಿದೆ ಎಂದು ಬೆಂಗಳೂರು ಇ-ಆಡಳಿತ ಕೇಂದ್ರದ ಯೋಜನಾ ನಿರ್ದೇಶಕ ಪ್ರಭಾಕರ್ ತಿಳಿಸಿದ್ದಾರೆ. ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಇ-ಆಡಳಿತ ಯೋಜನೆಯ ವಿಭಾಗಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು.

2003 ರಿಂದ ಕರ್ನಾಟಕದಲ್ಲಿ ಇ ಆಡಳಿತ ಯೋಜನೆ ಆರಂಭವಾಗಿದೆ. ರಾಜ್ಯದ ಎಲ್ಲಾ ಸರಕಾರಿ ನೌಕಕರ ಸಂಪೂರ್ಣ ವೇತನಗಳನ್ನು ಎಚ್‌ಆರ್‌ಎಂಎಸ್ ವ್ಯವಸ್ಥೆಯಲ್ಲಿ ಅಳವಡಿಸುವ ಮೂಲಕ ಸಂಪೂರ್ಣ ಗಣಕೀಕರಣಗೊಳಿಸಲಾಗಿದೆ. ಇದು ದೇಶದಲ್ಲೇ ಅತ್ಯುತ್ತಮ ವ್ಯವಸ್ಥೆಯಾಗಿದೆ. ಇದಲ್ಲದೆ 5 ಲಕ್ಕಕ್ಕೂ ಮೀರಿದ ಸರಕಾರದ ಎಲ್ಲ ಕಾಮಗಾರಿ, ಸಂಗ್ರಹಣೆ ಮತ್ತು ಖರೀದಿಗಳನ್ನು ಇ ಪ್ರೊಕ್ಯೂರ್‌ಮೆಂಟ್ ವ್ಯವಸ್ಥೆಯ ಮೂಲಕ ನಿರ್ವಹಿಸಲಾಗುತ್ತಿದೆ. ಇದುವರೆಗೆ ಸುಮಾರು 2.50  ಲಕ್ಷ ಕೋಟಿ ರೂ.ಗಳ ವ್ಯವಹಾರ ಇದರಲ್ಲಿ ನಡೆದಿದೆ ಎಂದು ಅವರು ಹೇಳಿದರು.

Dc_eproject_photo_2

ಪ್ರಸಕ್ತ ಕೇಂದ್ರ ಸರಕಾರವು ಇ-ಆಡಳಿತ ನಿರ್ವಹಣೆಗಾಗಿ 1  ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಪ್ರಕಟಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಇಲಾಖೆಗಳು ತಾಂತ್ರಿಕವಾಗಿ ಮೇಲ್ದರ್ಜೆಗೇರಲಿವೆ ಎಂದು ಪ್ರಭಾಕರ್ ತಿಳಿಸಿದರು.

ಸಾರ್ವಜನಿಕರು ಸರಕಾರದ ಯಾವುದೇ ಸೌಲಭ್ಯ ಪಡೆಯಲು ಅಥವಾ ಅರ್ಜಿ ಸಲ್ಲಿಸಲು ಸರಕಾರಿ ಕಚೇರಿಗಳಿಗೆ ಬರುವುದನ್ನು ತಪ್ಪಿಸಿ, ತಾವು ಕೂತಲ್ಲಿಂದಲ್ಲಿಯೇ ಯಾವುದೇ ಸಮಯದಲ್ಲೂ ಸೌಲಭ್ಯ ಪಡೆಯುವಂತಾಗುವುದೇ ಇ-ಆಡಳಿತದ ಉದ್ದೇಶವಾಗಿದೆ. ಈಗಾಗಲೇ ಕರ್ನಾಟಕ ಸರಕಾರವು ಜಾರಿಗೆ ತಂದಿರುವ ಕರ್ನಾಟಕ ಮೊಬೈಲ್ ಒನ್ ಆಪ್ ಮೂಲಕ ಸುಮಾರು 4000 ಗಳಷ್ಟು ಸೇವೆಗಳನ್ನು ಮೊಬೈಲ್ ಮೂಲಕ ಪಡೆಯಬಹುದಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಜನಪರ ಸೇವೆಗಳನ್ನು ಇ ಆಡಳಿತ ಇಲಾಖೆಯ ಮೂಲಕ ನೀಡಲಾಗುವುದು ಎಂದು ಪ್ರಭಾಕರ್ ವಿವರಿಸಿದರು.

Dc_eproject_photo_3

ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಸರಕಾರಿ ಕಾಮಗಾರಿಗಳ ಗುತ್ತಿಗೆ ನೀಡುವಿಕೆ ವ್ಯವಸ್ಥೆಯು ಈಗ ಬಹಳ ಪಾರದರ್ಶಕವಾಗಿ ನಡೆಯುತ್ತಿದೆ. ಇದರಿಂದ ಕಾಮಗಾರಿಗಳ ಗುಣಮಟ್ಟವೂ ಉತ್ತಮವಾಗಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಇ-ಆಡಳಿತ ಇಲಾಕೆಯ ಲಕ್ಷೀಕಾಂತ್, ಎಚ್.ಎಸ್.ಶಂಕರ್, ಶ್ರೀನಿವಾಸ ರೆಡ್ಡಿ ಉಪಸ್ಥಿತರಿದ್ದರು.  ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವಾಗತಿಸಿದರು.

Write A Comment