ಕರ್ನಾಟಕ

ಅಕಾಲಿಕ ಮಳೆಗೆ ಹಾನಿ: ಉಪ್ಪು, ಗೋಡಂಬಿ, ಮಾವು ಬೆಳೆಗೂ ಸಂಕಷ್ಟ

Pinterest LinkedIn Tumblr

pvec02marchgkn1

ಹುಬ್ಬಳ್ಳಿ: ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಶನಿವಾರ ರಾತ್ರಿ ಹಾಗೂ ಭಾನುವಾರ ಅಕಾಲಿಕ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆ ಮತ್ತು ಬೆಳಗಾವಿ ನಗರದಲ್ಲಿ ಧಾರಾಕಾರ ಮಳೆಯಾ­ಗಿದ್ದರೆ ಉಳಿದೆಡೆ ತುಂತುರು ಇಲ್ಲವೇ ಜಿಟಿಜಿಟಿ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾನುವಾರ ಬೆಳಿಗ್ಗೆ ಮಳೆ ಸುರಿದಿದೆ. ಇದರಿಂದ ಗೋಡಂಬಿ ಹಾಗೂ ಮಾವಿನ ಬೆಳೆಗಳಿಗೆ ಹಾನಿಯಾಗಿದೆ. ಅಲ್ಲದೇ, ಗೋಕರ್ಣದಲ್ಲಿನ ಉಪ್ಪು ಉತ್ಪಾದನಾ ಘಟಕಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಬಿದ್ದ ಮಳೆಗೆ ನೂರಾರು ಟನ್‌ಗಳಷ್ಟು ಉಪ್ಪು ಒದ್ದೆಯಾಗಿದೆ. ಮುಂದಿನ ಕೆಲ ದಿನ­ಗಳಲ್ಲೂ ಮಳೆ ಬೀಳುವ ಲಕ್ಷಣವಿದ್ದು, ಉಪ್ಪು ಉತ್ಪಾದಕರ ಮುಖದಲ್ಲಿ ಆತಂಕದ ಛಾಯೆ ಮೂಡಿಸಿದೆ.

‘ಜಿಲ್ಲೆಯಲ್ಲಿ ರೈತರಿಗೆ ಮತ್ತು ಉಪ್ಪು ಉದ್ಯಮಕ್ಕೆ ತುಂಬಾ ನಷ್ಟವಾಗಿದೆ. ಒಂದು ದಿವಸದ ಮಳೆಯಿಂದಾಗಿ ವಾರಕ್ಕಿಂತಲೂ ಹೆಚ್ಚಿನ ಕಾಲ ಉಪ್ಪು ತೆಗೆಯಲು ಸಾಧ್ಯ­ವಾಗುವುದಿಲ್ಲ’ ಎಂದು ಸಾಣಿಕಟ್ಟಾದ ನಾಗರಬೈಲ್ ಉಪ್ಪಿನ ಮಾಲೀಕರ ಸಹಕಾರಿ ಸಂಘದ ಅಧ್ಯಕ್ಷ ಅರುಣ ನಾಡ್ಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷ ಮೇನಲ್ಲಿಯೇ ಮಳೆ ಆರಂಭವಾದ ಕಾರಣ ಸಂಘಕ್ಕೆ ಸುಮಾರು 4,000 ಟನ್‌ಗಳಷ್ಟು ಕೊರತೆ ಅನುಭವಿಸಿತ್ತು. ಈ ವರ್ಷ ಉತ್ತಮ ಉತ್ಪಾದನೆಯ ನಿರೀಕ್ಷೆ ಇತ್ತು. ಸ್ವಲ್ಪ ಮಳೆಯಾದರೂ ಉಪ್ಪಿನ ಆಗರ­ಗಳ ಗುನ್ನಗಳಲ್ಲಿ ನೀರು ತುಂಬಿ ಉಪ್ಪಿನ ಸಾಂದ್ರತೆಯು ಕಡಿಮೆಯಾಗುವುದು. ಪುನಃ ಉಪ್ಪು ಬರಲು 8–10 ದಿನಗಳೇ ಬೇಕಾಗುತ್ತದೆ’ ಎಂದು ನುಡಿದರು.

ಹೊನ್ನಾವರ, ಕುಮಟಾ ತಾಲ್ಲೂಕು­ಗಳಲ್ಲಿ ಅಕಾಲ ಮಳೆಯಿಂದ ರೈತರು ಬಿಸಿಲಿಗೆ ಒಣಗಿಸಿದ್ದ ಅಡಿಕೆ, ಕೊಬ್ಬರಿ, ಶೇಂಗಾ ಮೊದಲಾದ ಬೆಳೆ ಹಾನಿಗೀ­ಡಾಗಿದೆ. ಇದು ಕಬ್ಬಿನ ಆಲೆಮನೆ ಸಮಯವಾಗಿರುವುದರಿಂದ ಆಲೆಮನೆಯಲ್ಲಿದ್ದ ಬೆಲ್ಲ ಮೊದಲಾದ ವಸ್ತುಗಳಿಗೂ ಹಾನಿಯಾಗಿದೆ.

ಮಲೆನಾಡಲ್ಲೂ ಮಳೆ: ಜಿಲ್ಲೆಯ ಕರಾವಳಿಯ ಕೆಲ ಭಾಗ­ದಲ್ಲಿ ಮುಂಜಾನೆಯಿಂದ ಆರಂಭವಾದ ಮಳೆ ಮಧ್ಯಾಹ್ನದವರೆಗೆ ಸುರಿದಿದೆ. ಮಲೆನಾಡಿನ ಶಿರಸಿ, ಸಿದ್ದಾಪುರ­ದಲ್ಲೂ ಬೆಳಿಗ್ಗೆ ಸ್ವಲ್ಪ ಹೊತ್ತು ಮಳೆ ಬಿದ್ದಿದೆ. ಧಾರವಾಡ, ಬೆಳಗಾವಿ, ಬಾಗಲ­ಕೋಟೆ, ಗದಗ ಜಿಲ್ಲೆಗಳ ವಿವಿಧೆಡೆ ಹಾಗೂ ಬಳ್ಳಾರಿ ಜಿಲ್ಲೆಯ ಹೊಸಪೇಟೆ­ಯಲ್ಲಿ ತುಂತುರು ಮಳೆಯಾಗಿದೆ.

Write A Comment