ಕರ್ನಾಟಕ

ಮೊಬೈಲ್‌ ಸ್ಫೋಟ: ಮುಖಕ್ಕೆ ಶಸ್ತ್ರಚಿಕಿತ್ಸೆ; ಬಿಹಾರದ ಯುವಕನಿಗೆ ಮೈಸೂರಿನಲ್ಲಿ ಮರುಜನ್ಮ

Pinterest LinkedIn Tumblr

mo

ಮೈಸೂರು: ಮೊಬೈಲ್‌ ಸ್ಫೋಟದಿಂದ ಛಿದ್ರ­ಗೊಂಡಿದ್ದ ಸೀತಾರಾಮ್‌ನ (18) ಮುಖಕ್ಕೆ ಇಲ್ಲಿನ ಜೆಎಸ್‌ಎಸ್‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ನಡೆಸಿದ ಎರಡು ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿವೆ.

ಬಿಹಾರ ರಾಜ್ಯದ ಸಿವಾನ್‌ ಜಿಲ್ಲೆಯ ಪುನ್‌ದೇವ್‌ ಹಾಗೂ ಅವರ ಪುತ್ರ ಸೀತಾರಾಮ್‌ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಕದಬಳ್ಳಿ ಬಳಿ ಕಟ್ಟಡ ಕಟ್ಟಲು ಬಂದಿದ್ದರು. ಫೆ. 3ರಂದು ಸಂಜೆ ಮೊಬೈಲ್‌ ಚಾರ್ಜ್‌ಗೆ ಹಾಕಿದಾಗ ಕರೆ ಬಂತು. ಚಾರ್ಜ್‌ನ ಸಂಪರ್ಕ ಕಡಿತಗೊಳಿಸದ ಸೀತಾರಾಮ್‌ ಕರೆ ಸ್ವೀಕರಿಸಿದ್ದು ಘಟನೆಗೆ ಕಾರಣ ಎನ್ನಲಾಗಿದೆ.

ಗಂಭೀರವಾಗಿ ಗಾಯ­ಗೊಂಡಿದ್ದ ಆತನನ್ನು ನಾಗಮಂಗಲದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಯಿತು. ಮೂಗು, ಬಾಯಿ, ದವಡೆ, ಅನ್ನನಾಳ ಮತ್ತು ಶ್ವಾಸನಾಳ ಭಾಗಶಃ ವಿರೂಪ­ಗೊಂಡಿದ್ದವು. ಪ್ರಾಥಮಿಕ ಚಿಕಿತ್ಸೆಯ ಬಳಿಕ ಆತನನ್ನು ಫೆ. 4ರಂದು ಜೆಎಸ್‌ಎಸ್‌ಗೆ ಕರೆತರಲಾಯಿತು.

ಚರ್ಮ ಹಾಗೂ ದವಡೆ ಮರು­ಜೋಡಣೆಯ ಅಗತ್ಯವಿದ್ದು, ಇನ್ನೂ ಒಂದು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಿದೆ. ತೀವ್ರ ರಕ್ತಸ್ರಾವ­ದಿಂದಾಗಿ ಐದು ಬಾಟಲಿಯಷ್ಟು ರಕ್ತವನ್ನು ನೀಡಬೇಕಾಯಿತು. ತೀವ್ರ ನಿಗಾ ಘಟಕದಲ್ಲಿ ಇರಿಸಿ, ಆರೈಕೆ ಮಾಡಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಸೀತಾರಾಮ್ ಕೊಂಚ ಚೇತರಿಸಿಕೊಂಡ ಬಳಿಕ ಶಸ್ತ್ರಚಿಕಿತ್ಸೆಗೆ ನಿರ್ಧರಿಸಲಾಯಿತು.

ಫೆ. 9ರಂದು ‘ಸರ್ಜಿಕಲ್‌ ವೂಂಡ್ ಡಿಬ್ರೈಡ್‌ಮೆಂಟ್‌’ ಶಸ್ತ್ರ­ಚಿಕಿತ್ಸೆ ಮಾಡಲಾಯಿತು. ಈ ಮೂಲಕ ಅನ್ನನಾಳ ಮತ್ತು ಶ್ವಾಸನಾಳಕ್ಕೆ ಮರುರೂಪ ನೀಡಲಾಗಿದೆ. ಆಹಾರ ಸೇವನೆಗಾಗಿ ಫೆ. 13ರಂದು ‘ಫೀಡಿಂಗ್‌ ಜುಜುನಾಸ್ಟಮಿ’ ಶಸ್ತ್ರಚಿಕಿತ್ಸೆ ನೆರ­ವೇ­ರಿದೆ. ಇನ್ನೂ ಕೆಲ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯ ಡಾ.ವಿಜಯ್‌ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಪುತ್ರನ ಚಿಕಿತ್ಸಾ ವೆಚ್ಚ ಭರಿಸುವ ಶಕ್ತಿ ಪುನ್‌ದೇವ್‌ ಅವರಿಗಿಲ್ಲ. ಚಿಕಿತ್ಸೆಗೆ ಈವರೆಗೆ ತಗುಲಿದ ₹ 3 ಲಕ್ಷ ವೆಚ್ಚದಲ್ಲಿ ಬಹುಪಾಲನ್ನು ಆಸ್ಪತ್ರೆಯೇ ಭರಿಸಿದೆ. ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅಗತ್ಯವಿದ್ದು, ಇನ್ನೂ ಕನಿಷ್ಠ ₹3 ಲಕ್ಷ ವೆಚ್ಚವಾಗುವ ಸಾಧ್ಯತೆ ಇದೆ.

ಸಾರ್ವಜನಿಕರ ನೆರವಿಗಾಗಿ ಪುನ್‌ದೇವ್‌ ಕಾಯುತ್ತಿದ್ದಾರೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನ ‘ಜೆಎಸ್‌ಎಸ್‌ ಆಸ್ಪತ್ರೆ’ಯ ಹೆಸರಿನಲ್ಲಿರುವ 54007360103 (ಐಎಫ್ಎಸ್‌ಸಿ ಕೋಡ್‌– ಎಸ್‌ಬಿಎಂವೈ 0040249) ಖಾತೆಗೆ ದಾನಿಗಳು ಧನಸಹಾಯವನ್ನು ಜಮಾ ಮಾಡಬಹುದು ಎಂದು ಹೇಳಿದರು.

ಮೊಬೈಲ್ ಬಳಕೆ ಜಾಗೃತಿ ಅಗತ್ಯ
ಮೊಬೈಲ್‌ ಸ್ಫೋಟಗೊಂಡ ಪ್ರಕರಣ­ಗಳು ಈಚೆಗೆ ವರದಿ­ಯಾಗುತ್ತಿವೆ. ಮೊಬೈಲ್‌ ಅವಘಡಗಳಿಂದ ಗಾಯಗೊಂಡ ಇಬ್ಬರಿಗೆ ಆಸ್ಪತ್ರೆ ಚಿಕಿತ್ಸೆ ನೀಡಿದೆ. ಜನವರಿ ಕೊನೆಯ ವಾರ ಇಂತಹದೇ ಒಂದು ಪ್ರಕರಣ ಬೆಳಕಿಗೆ ಬಂದಿತ್ತು. ಬಾಲಕನ ಕೈಯಲ್ಲಿದ್ದ ಮೊಬೈಲ್‌ ಸ್ಫೋಟಗೊಂಡು ಎರಡು ಬೆರಳು­ಗಳು ಊನ ಆಗಿದ್ದವು. ಹೀಗಾಗಿ, ಮೊಬೈಲ್‌ ಬಳಕೆಯಲ್ಲಿ ಜಾಗೃತಿ ಅಗತ್ಯ ಎಂದು ಜೆಎಸ್‌ಎಸ್‌ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಬಸವನಗೌಡಪ್ಪ ಸಲಹೆ ನೀಡಿದರು.

Write A Comment