ಕರ್ನಾಟಕ

ಭಾಷಾ ಮಾಧ್ಯಮ ವಿವಾದ: ಕಾಲಾವಕಾಶಕ್ಕೆ ಹೈಕೋರ್ಟ್‌ ನಕಾರ

Pinterest LinkedIn Tumblr

High_Court_of_Karnataka

ಬೆಂಗಳೂರು: ‘1ರಿಂದ 5ನೇ ತರಗತಿವರೆಗೆ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿಸಲು ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ (ಕ್ಯಾಮ್ಸ್‌) ಅನುಮತಿ ನೀಡುವ ವಿಚಾರ ಕುರಿತು ತೀರ್ಮಾನ ಕೈಗೊಳ್ಳಲು ಇನ್ನೂ ಒಂದು ತಿಂಗಳು ಕಾಲಾವಕಾಶ ನೀಡಬೇಕು’ ಎಂಬ ರಾಜ್ಯ ಸರ್ಕಾರದ ಮನವಿಯನ್ನು ಹೈಕೋರ್ಟ್‌ ಖಡಾಖಂಡಿತ ದನಿಯಲ್ಲಿ ನಿರಾಕರಿಸಿದೆ.ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ಪೀಠವು ಈ ಸಂಬಂಧ ಕ್ಯಾಮ್ಸ್‌ ಸಲ್ಲಿಸಿರುವ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿತು.

ಈ ವೇಳೆ ಅಡ್ವೊಕೇಟ್‌ ಜನರಲ್‌ ಪ್ರೊ.ರವಿವರ್ಮ ಕುಮಾರ್ ಅವರು, ‘ಸುಪ್ರೀಂ ಕೋರ್ಟ್‌ನಲ್ಲಿ  ಸಲ್ಲಿಸ­ಲಾ­ಗಿರುವ ಪರಿಹಾರಾತ್ಮಕ ಅರ್ಜಿಯು (ಕ್ಯುರೇಟಿವ್‌ ಅರ್ಜಿ) ವಿಚಾರಣೆಗೆ ಬಾಕಿ ಇದೆ. ಅಂತೆಯೇ ರಾಜ್ಯ ಸರ್ಕಾರ ಭಾಷಾ ಮಾಧ್ಯಮ ನೀತಿಗೆ ಸಂಬಂಧಿಸಿದಂತೆ  ಪ್ರತ್ಯೇಕ ನೀತಿಯೊಂದನ್ನು ರೂಪಿಸಲು ಸಿದ್ಧತೆ ನಡೆಸಿದೆ.ಕೇಂದ್ರ ಸರ್ಕಾರಕ್ಕೂ ಈ ಕುರಿತಂತೆ ಮನವಿ ಸಲ್ಲಿಸಿದೆ. ಆದ್ದರಿಂದ  ಎಲ್ಲವೂ ಇತ್ಯರ್ಥಗೊಳ್ಳಲು ಇನ್ನಷ್ಟು ಸಮಯದ ಅವಶ್ಯಕತೆ’ ಇದೆ ಎಂದು ಪ್ರತಿಪಾದಿಸಿದರು.ಆದರೆ ನ್ಯಾಯಪೀಠವು ಇದಕ್ಕೆ ಒಪ್ಪದೆ  ವಿಚಾರಣೆ­ಯನ್ನು ಶುಕ್ರವಾರಕ್ಕೆ (ಫೆ.27) ಮುಂದೂಡಿತು.

ಭಾಷಾ ಮಾಧ್ಯಮ ನೀತಿಗೆ ಸಂಬಂ­­ಧಿಸಿದಂತೆ 1993ರ ರಾಜ್ಯ ಸರ್ಕಾರದ ಆದೇಶ­ವನ್ನು ಪ್ರಶ್ನಿಸಿ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಯೋ­­­ಜನೆ (ಕ್ಯಾಮ್ಸ್‌) ಹೈಕೋರ್ಟ್‌ ಮೊರೆ ಹೋಗಿತ್ತು.‘ಮಾತೃಭಾಷಾ ಶಿಕ್ಷಣ  ಕಡ್ಡಾಯ ಬೇಡ. ಭಾಷಾ ಮಾಧ್ಯಮ ಆಯ್ಕೆ ಪಾಲಕರು, ಪೋಷಕರ ವಿವೇಚನೆಗೆ ಬಿಟ್ಟ ವಿಚಾರ. ರಾಜ್ಯ ಸರ್ಕಾರದ ಇಂತಹ ನಿರ್ಧಾರ ನಾಗರಿಕರ ಮೂಲಭೂತ ಹಕ್ಕಿನ ಉಲ್ಲಂಘ­ನೆ­ಯಾಗು­ತ್ತದೆ’ ಎಂಬ ಕ್ಯಾಮ್ಸ್‌ ವಾದವನ್ನು ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಆದರೆ ಈ ಆದೇಶದ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು.

ಸುಪ್ರೀಂಕೋರ್ಟ್‌ ಸಾಂವಿಧಾನಿಕ ಪೀಠವು ಕ್ಯಾಮ್ಸ್‌ನ ವಾದವನ್ನು  ಎತ್ತಿ ಹಿಡಿದಿತ್ತು. ಪಟ್ಟು ಬಿಡದ ಸರ್ಕಾರ ಮರು ಪರಿಶೀಲನಾ ಅರ್ಜಿ ಮೂಲಕ ಈ ತೀರ್ಪನ್ನು ಪ್ರಶ್ನಿಸಿತ್ತು. ಆದರೆ ಈ ಅರ್ಜಿಯೂ  ವಜಾ ಆಗಿತ್ತು. ಕಡೆಯ ಅಸ್ತ್ರವಾಗಿ ಸರ್ಕಾರ ಸಲ್ಲಿಸಿ­ರುವ ಪರಿಹಾರಾತ್ಮಕ ಅರ್ಜಿಯು ವಿಚಾರಣೆಗೆ ಬಾಕಿ ಇದೆ.

ಬಗೆಹರಿಯದ ಬಿಕ್ಕಟ್ಟು: ಸುಪ್ರೀಂ ಕೋರ್ಟ್‌ ತೀರ್ಪಿನ ಅನುಸಾರ ಕ್ಯಾಮ್ಸ್‌ 2014ರ ಅಕ್ಟೋಬರ್‌ 31ರಂದು ಸ್ವಾಭಾವಿಕವಾಗಿ ಹಿಂದಿನ ಶುಲ್ಕದ ಅನು­ಸಾರ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ಕೋರಿ ಹೊಸ ಅರ್ಜಿ ಸಲ್ಲಿಸಿದವು. ಈ ಬೆಳವಣಿಗೆಯ ನಡುವೆಯೇ ರಾಜ್ಯ ಸರ್ಕಾರ 2014ರ ನವೆಂಬರ್‌ 11ರಂದು  ಅಧಿಸೂಚನೆಯೊಂದನ್ನು ಹೊರಡಿಸಿತು.

ಈ ಅಧಿಸೂಚನೆಯಲ್ಲಿ ಹೊಸ ಶಾಲೆಗಳ ಆರಂಭಕ್ಕೆ ಭರಿಸಬೇಕಾದ ಶುಲ್ಕದಲ್ಲಿ ಏರಿಕೆ ಮತ್ತು ಇತರೆ ಷರತ್ತು­ಗಳನ್ನು ವಿಧಿಸಲಾಗಿತ್ತು. ‘ಈ ಷರತ್ತುಗಳು ಪಾಲನೆಗೆ ಅಸಾಧ್ಯವಾಗಿವೆ’ ಎಂದು ಕ್ಯಾಮ್ಸ್‌ ಮತ್ತೆ ಹೈಕೋರ್ಟ್‌ ಮೆಟ್ಟಿಲೇರಿತು. ‘ನಮ್ಮವೆಲ್ಲಾ ಹಳೆಯ ಶಾಲೆಗಳು. ಈಗಿನ ನಿಯಮ­ಗಳು ಹೊಸ ಶಾಲೆಗಳಿಗೆ ಮಾತ್ರ ಅನ್ವಯಿಸುತ್ತವೆ ಹಾಗೂ ಹೊಸ ಆದೇಶದಲ್ಲಿ ಇಂಗ್ಲಿಷ್‌ ಮಾಧ್ಯಮ­ದಲ್ಲಿ ಶಾಲೆಗಳನ್ನು ಆರಂಭಿಸುವ ಪ್ರಸ್ತಾಪ ಇಲ್ಲ. ಆದ್ದರಿಂದ ಸಂಘಟನೆಯ ಸದಸ್ಯ ಶಾಲೆಗಳು ಮರು ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು’ ಎಂದು ಈ ರಿಟ್‌ ಅರ್ಜಿಯಲ್ಲಿ ಕೋರಲಾಗಿತ್ತು.

ಇದರನ್ವಯ ಹೈಕೋರ್ಟ್‌  ಈ ಅರ್ಜಿಗಳನ್ನು ಸ್ವೀಕ­ರಿ­ಸು­ವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. 90 ದಿನ ಕಳೆದರೂ ಈ ಅರ್ಜಿಗಳ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳದ ಕಾರಣ ಕ್ಯಾಮ್ಸ್‌ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿತ್ತು.

ಏತನ್ಮಧ್ಯೆ ಸರ್ಕಾರವು ಈ ಅರ್ಜಿಗಳ ಕುರಿತಂತೆ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳದ  ಕಾರಣ  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು 2014ರ ನವೆಂಬರ್‌ 11ರಂದು ಹೊರಡಿಸಿರುವ ಅಧಿಸೂಚನೆ ರದ್ದುಗೊಳಿಸುವಂತೆ ಕೋರಿ ಕ್ಯಾಮ್ಸ್‌ ಈ ಮಧ್ಯಾಂತರ ಅರ್ಜಿ ಸಲ್ಲಿಸಿದೆ.

1 Comment

  1. Karnatakadalli shaale nadesuvudu kulithalliya hana sampadane neeru kudidanthe sulaba indina dinagalalli site ondu iddu modalu ondu room avaru katti prambisidaadare saaku munde yeluva shalege bekada yell sowkarygalu poshakarindiale vividarithiyalli kittukolluthare. Karnatakadali vyavahara nadesuva (Shikshanada Hesarinalli) ivarige kannada kalisalu avamana kevala bekaabitty nepamathrakke teacher avarige sambala kammi avaru yaavude reetihiyalli training padedirada shikshikare iruva shallegale hechhu. mukyasharige kannada madyama iddare hana sampadanege daari siguvudilla baruvuvaru bada madyama vargadavarendu ivaru kannada madyama beda yennuthare. YELLA SHALEGALALU MAKKALA MATHRUBHASHE YAAVUDU IRUTHADEYU MODALU ADANNU KALISI NANTHARA PRADESHIKA BHASHE KADDAYAVAAGI YELLA MAKKALU KALIYALE BEKU YENDU NANTHARA ULIDA BHASHE YENDU NYALAYA THIRMANA KOTTAGA MATHRA KARNATKADALLI I KANNADA ULIYALU SAADYA IDU PRATHIYUOBBA KANNADIGARA ASHE IDAKKE NYAYALAYA KANNADIGARA PARAVAAGI SHALLE NADESSALU TEERPU NEEDA BEKU.

Write A Comment