ಬೆಂಗಳೂರು: ಅಕ್ರಮ ಕೃಷಿ ಪಂಪ್‌ಸೆಟ್‌ಗಳ ಸಕ್ರಮಕ್ಕೆ ಮಾರ್ಚ್ 31ರೊಳಗೆ ಅರ್ಜಿ ಸಲ್ಲಿಸಿ, ಹಣ ಸಂದಾಯ ಮಾಡದಿದ್ದರೆ ವಿದ್ಯುತ್ ಕಡಿತಗೊಳಿಸಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಗುರುವಾರ ಇಲ್ಲಿ ತಿಳಿಸಿದರು.
‘ರಾಜ್ಯದಲ್ಲಿ ಒಟ್ಟು 3.30 ಲಕ್ಷ ಅಕ್ರಮ ಕೃಷಿ ಪಂಪ್‌ಸೆಟ್‌ಗಳು ಇದ್ದು ಅವುಗಳಲ್ಲಿ 86,809 ಪಂಪ್‌ಸೆಟ್‌ಗಳ ಸಕ್ರಮಕ್ಕೆ ರೈತರು ಹಣ ಸಂದಾಯ ಮಾಡಿದ್ದಾರೆ. 57,491 ಪಂಪ್ಸೆಟ್ಗಳನ್ನು ಸಕ್ರಮಗೊಳಿಸಿ, ಮೂಲಸೌಲಭ್ಯ ಒದಗಿಸಲಾಗಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
‘ಇನ್ನುಳಿದ ಅಕ್ರಮ ಪಂಪ್‌ಸೆಟ್ ಮಾಲೀಕರು ಮಾರ್ಚ್ 31ರೊಳಗೆ ₹ 10 ರಿಂದ 15 ಸಾವಿರ ಶುಲ್ಕ ಕಟ್ಟಿ ಸಕ್ರಮಕ್ಕೆ ಅರ್ಜಿ ಸಲ್ಲಿಸಬೇಕು’ ಎಂದು ಅವರು ಹೇಳಿದರು.
ಟ್ರಾನ್ಸ್‌ಫಾರ್ಮರ್ ಬ್ಯಾಂಕ್: 174 ತಾಲ್ಲೂಕುಗಳಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ (ಟಿ.ಸಿ) ಬ್ಯಾಂಕ್ಗಳನ್ನು ಸ್ಥಾಪಿಸಲಾಗಿದೆ. 107 ತಾಲ್ಲೂಕುಗಳಲ್ಲಿ ಅವುಗಳ ದುರಸ್ತಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ಹೇಳಿದರು.
‘ಕೃಷಿ ಪಂಪ್‌ಸೆಟ್ ಮಾರ್ಗಗಳ ಟಿ.ಸಿ.ಗಳನ್ನು ಮೂರು ದಿನಗಳ ಒಳಗೆ ಹಾಗೂ ಕುಡಿಯುವ ನೀರಿಗೆ ಸಂಬಂಧಿಸಿದ ಟಿ.ಸಿ. ಗಳನ್ನು 24 ಗಂಟೆಯೊಳಗೆ ಬದಲಿಸುವ ವ್ಯವಸ್ಥೆ ಮಾಡಲಾಗಿದೆ. ಒಂದು ಲಕ್ಷ ಟಿ.ಸಿ.ಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಇದರಲ್ಲಿ 30 ಸಾವಿರ ಟಿ.ಸಿ. ಲಭ್ಯ ಇದ್ದು, ಬೇಡಿಕೆ ಬಂದಂತೆ ಹಂಚಿಕೆ ನಡೆಯಲಿದೆ’ ಎಂದರು.
‘ಟ್ರಾನ್ಸ್‌ಫಾರ್ಮರ್ ತಯಾರಿಕೆಗಾಗಿ ಸರ್ಕಾರಿ ಸ್ವಾಮ್ಯದ ಕರ್ನಾಟಕ ವಿದ್ಯುತ್ ಕಂಪೆನಿಗೆ (ಕವಿಕ) ₹ 20 ಕೋಟಿ ಮುಂಗಡ ನೀಡಲಾಗಿದೆ. ಗುಣಮಟ್ಟದ ವಿದ್ಯುತ್ ಸರಬರಾಜಿಗೆ ಆದ್ಯತೆ ನೀಡಲಾಗಿದೆ’ ಎಂದು ಡಿ.ಕೆ. ಶಿವಕುಮಾರ್ ವಿವರಿಸಿದರು.
ಛತ್ತೀಸಗಡ ವಿದ್ಯುತ್: ‘ಎನ್‌ಟಿಪಿಸಿ ಸಹಯೋಗದಲ್ಲಿ ಛತ್ತೀಸಗಡದಲ್ಲಿ ವಿದ್ಯುತ್ ಸ್ಥಾವರಕ್ಕೆ ಇಂಧನ ಇಲಾಖೆ ಇದುವರೆಗೂ ₹ 200 ಕೋಟಿ ಹೂಡಿಕೆ ಮಾಡಿದೆ. ಯೋಜನೆ ಅನುಷ್ಠಾನಗೊಂಡ ನಂತರ ಶೇ 50ರಷ್ಟು ವಿದ್ಯುತ್ ನೀಡುವಂತೆ ಕೋರಿಕೆ ಸಲ್ಲಿಸಲಾಗಿದೆ’ ಎಂದರು.
ಸೌರವಿದ್ಯುತ್ ಪಂಪ್‌ಸೆಟ್: ಸೌರ ವಿದ್ಯುತ್ ಪಂಪ್‌ಸೆಟ್‌ಗಳ ಕಾರ್ಯಕ್ಷಮತೆ ಬಗ್ಗೆ ಅನುಮಾನಗಳು ಇದ್ದು, ತಯಾರಕರು ಕನಿಷ್ಠ 15 ರಿಂದ 20 ವರ್ಷ ಖಾತರಿ ಕೊಟ್ಟರೆ ಖರೀದಿಗೆ ಆಸಕ್ತಿ ತೋರಲಾಗುವುದು ಎಂದು ಸಚಿವರು ತಿಳಿಸಿದರು.
‘ಸೌರವಿದ್ಯುತ್ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅದೇ ರೀತಿ ಪಂಪ್‌ಸೆಟ್‌ಗಳೂ ಆದರೆ ರೈತರ ಗತಿ ಏನಾಗಬೇಕು? ಏಕೆಂದರೆ ಒಂದೊಂದು ಸೌರ ವಿದ್ಯುತ್ ಪಂಪ್‌ಸೆಟ್‌ಗೆ ₹6.5 ಲಕ್ಷ ಆಗುತ್ತದೆ’ ಎಂದು ವಿವರಿಸಿದರು.
ಎಸ್‌ಎಂಎಸ್‌ನಲ್ಲಿ ವಿದ್ಯುತ್ ಮಾಹಿತಿ
‘ವಿದ್ಯುತ್ ಯಾವಾಗ ಬರುತ್ತದೆ ಮತ್ತು ಯಾವಾಗ ಹೋಗುತ್ತದೆ ಎನ್ನುವ ಮಾಹಿತಿಯನ್ನು ಎಸ್.ಎಂ.ಎಸ್ ಮೂಲಕ ರೈತರಿಗೆ ನೀಡುವ ವ್ಯವಸ್ಥೆ ಜಾರಿ ಮಾಡಲಾಗುವುದು’ ಎಂದು ಸಚಿವ ಶಿವಕುಮಾರ್ ಹೇಳಿದರು.
‘ಈ ಸಲುವಾಗಿ ರೈತರ ಮೊಬೈಲ್ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸುತ್ತಿದ್ದೇವೆ. ಅದು ಪೂರ್ಣವಾದ ನಂತರ ಎಸ್‌ಎಂಎಸ್ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಬರುತ್ತದೆ. ಇದರಿಂದ ರೈತರಲ್ಲಿನ ಆತಂಕ ಕಡಿಮೆ ಮಾಡಬಹುದು’ ಎಂದರು.
300– 500 ದಶಲಕ್ಷ ಯೂನಿಟ್ ಕೊರತೆ?
ಈ ಸಲದ ಬೇಸಿಗೆಯಲ್ಲಿ 300ರಿಂದ 500 ದಶಲಕ್ಷ ಯೂನಿಟ್ ವಿದ್ಯುತ್ ಕೊರತೆ ಬೀಳುವ ಸಾಧ್ಯತೆ ಇದ್ದು, ಅದನ್ನು ಟೆಂಡರ್ ಮೂಲಕ ಖರೀದಿಸಲು ಸಿದ್ಧತೆ ನಡೆದಿದೆ ಎಂದು ಶಿವಕುಮಾರ್ ಹೇಳಿದರು.
ಕೇವಲ 300 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆಗೆ ಕೇಂದ್ರ ಅವಕಾಶ ನೀಡಿದ್ದು, ಅದರ ಪ್ರಮಾಣ ಹೆಚ್ಚಿಸುವಂತೆ ಕೋರಲಾಗಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಒಂದು ಸಾವಿರ ಮೆಗಾವಾಟ್ ಉತ್ಪಾದನೆಗೆ ಅನುಮತಿ ನೀಡಲಾಗಿದೆ. ಅದೇ ರೀತಿ ನಮಗೂ ನೀಡಬೇಕು ಎಂದು ಕೋರಿಕೆ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಪ್ರತಿ ಯೂನಿಟ್‌ಗೆ ₹ 4.5 ಸಬ್ಸಿಡಿ ನೀಡಲಿದೆ’ ಎಂದರು.