ಬೆಂಗಳೂರು: ‘ಒಬ್ಬ ಮನುಷ್ಯನ ಸಮತೋಲಿತ ಬದುಕಿಗೆ ಆತನ ಸುತ್ತಲಿನ ಪರಿಸರದಲ್ಲಿ 35 ಮರಗಳು ಇರಬೇಕು. ಆದರೆ, ನಗರದಲ್ಲಿ ಆರು ಜನಕ್ಕೆ ಒಂದೇ ಮರ ಮಾತ್ರ ಇದೆ. ಇದು ಆತಂಕದ ವಿಚಾರ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ವಿಜಯ್ ಕುಮಾರ್ ಅವರು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಮಂಡಳಿ ಆಯೋಜಿಸಿದ್ದ ‘ಪರಿಸರ ಮಿತ್ರ ಶಾಲೆ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕೋಟಿ ಜನಸಂಖ್ಯೆ ತಲುಪಿರುವ ಈ ನಗರದಲ್ಲಿ ಸುಮಾರು 53 ಲಕ್ಷ ವಾಹನಗಳಿದ್ದು, ಎರಡೇ ಜನರಿಗೆ ಒಂದು ವಾಹನವಿದೆ. ಆದರೆ, ಕೇವಲ 14.78 ಲಕ್ಷ ಮಾತ್ರ ಮರಗಳಿವೆ ಎಂಬ ಅಂಶ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಕೈಗೊಂಡ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ನಮ್ಮ ಬದಲಾದ ಜೀವನ ಶೈಲಿಯಿಂದಾಗಿಯೇ ಶೇ 76– 80 ರಷ್ಟು ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಪ್ರಸ್ತುತ ನಗರದಲ್ಲಿ ಪ್ರತಿನಿತ್ಯ 3500 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ’ ಎಂದು ಹೇಳಿದರು.
‘ಪ್ರತಿಯೊಂದು ಅಭಿವೃದ್ಧಿ ಕಾರ್ಯಕ್ಕೆ ಮರಗಳು ಮೊದಲು ಬಲಿಯಾಗುತ್ತವೆ. ಅವುಗಳನ್ನು ಅವಲಂಬಿಸಿದ ಜೀವ ಸಂಕುಲಗಳು ಇದರಿಂದ ನಾಶವಾಗುತ್ತವೆ. ಆದ್ದರಿಂದ, ಮಕ್ಕಳು ಪರಿಸರ ಸಂರಕ್ಷಣೆಯನ್ನು ತಮ್ಮ ದೈನಂದಿನ ಚಟುವಟಿಕೆಯ ಭಾಗವನ್ನಾಗಿ ಮಾಡಿಕೊಳ್ಳುವ ಅಗತ್ಯವಿದೆ. ಜತೆಗೆ ಜನರಲ್ಲಿ ಮಾಲಿನ್ಯದಿಂದ ಉಂಟಾಗುವ ದುಷ್ಪರಿಣಾಮ, ಪರಸರ ರಕ್ಷಣೆ ಲಾಭಗಳು ಮತ್ತು ನವೀಕರಿಸಬಹುದಾದ ಸಂಪನ್ಮೂಲಗಳ ಮಹತ್ವ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.
ಮಂಡಳಿಯ ಅಧ್ಯಕ್ಷ ವಾಮನ ಆಚಾರ್ಯ ಮಾತನಾಡಿ, ‘ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಪ್ರಜ್ಞೆ ಬೆಳೆಸಲು ಮಂಡಳಿಯು ವಿವಿಧ ಇಲಾಖೆ, ಸಂಸ್ಥೆಗಳ ಸಹಯೋಗದಲ್ಲಿ ಪರಿಸರ ಮಿತ್ರ ಶಾಲಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬರುತ್ತಿದೆ. ಈ ವರ್ಷ ಇದರಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸುಮಾರು 7 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ’ ಎಂದು ಹೇಳಿದರು.
‘ಮಕ್ಕಳಿಂದ ಬದಲಾವಣೆ ಸಾಧ್ಯ. ಆದ್ದರಿಂದ, ಪ್ರತಿಯೊಬ್ಬ ವಿದ್ಯಾರ್ಥಿ ಮನೆ ಮತ್ತು ಶಾಲೆ ಆವರಣದಲ್ಲಿ ಪರಿಸರ ಸಂರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣದ ಕ್ರಮಗಳನ್ನು ಪಾಲಿಸಬೇಕು. ಇತರರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಕೂಡ ಮಾಡಬೇಕು’ ಎಂದು ತಿಳಿಸಿದರು.
ಆದಿಚುಂಚನಗಿರಿ ಮಠದ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಅವರು ಪ್ರಶಸ್ತಿ ವಿಜೇತ ಶಾಲೆಗಳ ಮಾಹಿತಿ ಮತ್ತು ಛಾಯಾಚಿತ್ರಗಳನ್ನು ಒಳಗೊಂಡ ‘ನನಸಾದ ಕನಸು’ ಎಂಬ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಎರಡು ಸಾವಿರ ನಗದು ಪುರಸ್ಕಾರ ಹೊಂದಿದ ‘ಹಸಿರು ಶಾಲೆ’ ಎಂಬ ದ್ವಿತೀಯ ಪ್ರಶಸ್ತಿಯನ್ನು ಮತ್ತು ಒಂದು ಸಾವಿರ ನಗದು ಪುರಸ್ಕಾರದ ‘ಹಳದಿ ಶಾಲೆ’ ಎಂಬ ತೃತೀಯ ಪ್ರಶಸ್ತಿಯನ್ನು ತಲಾ 10 ಶಾಲೆಗಳಿಗೆ ವಿತರಿಸಲಾಯಿತು. ‘ಪರಿಸರ ಮಿತ್ರ ಶಾಲೆ’ ಎಂಬ ಪ್ರಥಮ ಸ್ಥಾನದ ಪ್ರಶಸ್ತಿಯು ₹ 20 ಸಾವಿರ ನಗದು ಪುರಸ್ಕಾರ ಒಳಗೊಂಡಿದೆ.