ಬೆಂಗಳೂರು: ಕಬ್ಬಿಣ ಅದಿರಿನ ಗಣಿಗಳನ್ನು ಹರಾಜಿನ ಮೂಲಕ ಹಂಚಿಕೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಹೇಳಿದ್ದರೂ ರಾಜ್ಯ ಗಣಿ ಇಲಾಖೆ ಎಂಟು ಗಣಿ ಕಂಪೆನಿಗಳ ಗುತ್ತಿಗೆ ನವೀಕರಣ ಮಾಡಿರುವುದರಿಂದ ರಾಜ್ಯ ಬೊಕ್ಕಸಕ್ಕೆ ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ, ಬಿಜೆಪಿಯ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಇದರಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಈ ಬಗ್ಗೆ ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
‘ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಗೆ ಜನವರಿ 12ರಂದು ತಿದ್ದುಪಡಿ ತಂದಿದೆ. ಇದನ್ನು ಉಲ್ಲಂಘಿಸಿ 2,386 ಎಕರೆ ಭೂಮಿಯನ್ನು ಈ ಕಂಪೆನಿಗಳಿಗೆ ಹಂಚಿಕೆ ಮಾಡಲಾಗಿದೆ’ ಎಂದರು.
‘ಗುತ್ತಿಗೆ ನವೀಕರಣಗೊಂಡ ಕಂಪೆನಿಗಳ ಪೈಕಿ, ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ಕಂಪೆನಿಗಳೂ ಸೇರಿವೆ. ಸರ್ಕಾರಕ್ಕೆ ರಾಜಧನ ಪಾವತಿಸದ ಕಂಪೆನಿಯೂ ಇದೆ’ ಎಂದರು.
‘ಈ ಗಣಿಗಳನ್ನು ಹರಾಜು ಹಾಕಿದ್ದರೆ ಸರ್ಕಾರಕ್ಕೆ ಸಾವಿರಾರು ಕೋಟಿ ಸಂಗ್ರಹವಾಗುತ್ತಿತ್ತು. ಎಂಎಂಆರ್ಡಿ 1957ರ ಕಾಯ್ದೆ ಪ್ರಕಾರವಾಗಿಯೇ ಗಣಿ ಗುತ್ತಿಗೆ ನವೀಕರಣ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ಕಾಯ್ದೆ ರೂಪದಲ್ಲಿ ತಿದ್ದುಪಡಿ ಜಾರಿಗೆ ಬಂದಾಗ ಹಿಂದಿನ ಕಾನೂನು ಅನ್ವಯವಾಗುವುದಿಲ್ಲ ಎಂಬ ಕನಿಷ್ಠ ಅರಿವು ಮುಖ್ಯಮಂತ್ರಿಗಳಿಗೆ ಇಲ್ಲವೇ?’ ಎಂದು ವ್ಯಂಗ್ಯವಾಡಿದರು.
‘ಗಣಿ ಹಂಚಿಕೆಯನ್ನು ತಕ್ಷಣ ರದ್ದುಗೊಳಿಸಿ ಕೇಂದ್ರದ ಹೊಸ ಕಾಯ್ದೆ ಅನ್ವಯ ಮರುಹರಾಜು ಹಾಕಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.
ಈಶ್ವರಪ್ಪ ಆರೋಪಗಳೇನು…?
*ಅಕ್ರಮ ಗಣಿಗಾರಿಕೆ ನಡೆಸಿರುವ ಕಂಪೆನಿಗಳ ಪಟ್ಟಿಯಲ್ಲಿರುವ ಸೀಸಾಸ್ಟೆರ್ಲೈಟ್‌ಗೆ ಜನವರಿ 7ರಂದು 504 ಎಕರೆ ಜಮೀನು ನಾಲ್ಕನೇ ಬಾರಿ ಮಂಜೂರು
*ಹೊಸ ಕಾಯ್ದೆ ಜಾರಿಗೆ ಬಂದಿದ್ದರೂ, ಜನವರಿ 12 ಮತ್ತು 19ರಂದು ಎಂಟು ಕಂಪೆನಿಗಳ ಗಣಿ ಗುತ್ತಿಗೆ ನವೀಕರಣಕ್ಕೆ ತಾತ್ವಿಕ ಒಪ್ಪಿಗೆ. ಆದರೆ ಈ ಕಂಪೆನಿಗಳು ಪಡೆದಿದ್ದ ಗುತ್ತಿಗೆ ಅವಧಿ 2–3 ವರ್ಷಗಳ ಹಿಂದೆಯೇ ಮುಗಿದಿದೆ.
*ಗುತ್ತಿಗೆ ನವೀಕರಣ ಪಡೆದಿರುವ ರಾಮ್‌ಗಡ ಮಿನರಲ್ಸ್ ಹಾಗೂ ಮಿನರಲ್ ಎಂಟರ್‌ಪ್ರೈಸ್ ವಿರುದ್ಧ ಸಿಬಿಐನಲ್ಲಿ ಪ್ರಕರಣಗಳು ದಾಖಲಾಗಿವೆ.
***
108 ಕಂಪೆನಿಗಳ ಪೈಕಿ ಎಂಟು ಕಂಪೆನಿಗಳಿಗೆ ಮಾತ್ರ ಗುತ್ತಿಗೆ ನವೀಕರಣ ಮಾಡಿರುವ ಕಾರಣವೇನು? ಅವರೆಲ್ಲ ನಿಮ್ಮ ಬೀಗರೇ?
– ಕೆ.ಎಸ್. ಈಶ್ವರಪ್ಪ