ಲಂಡನ್: ಇಡೀ ಪ್ರಪಂಚದಲ್ಲಿಯೇ ಭಾರತದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಬೀಗುವುದರಲ್ಲಿ ಅಷ್ಟೊಂದು ಹುರುಳಿಲ್ಲ ಎಂದು ಭಾರತ ಮತ್ತು ಬ್ರಿಟನ್‌ನ ವಿಜ್ಞಾನಿಗಳ ತಂಡವೊಂದು ಹೇಳಿದೆ.
ಹುಲಿಗಳ ಸಂಖ್ಯೆಯನ್ನು ಗುರುತಿಸುವುದಕ್ಕೆ ಆಯ್ದುಕೊಂಡ ವಿಧಾನ ಪಕ್ಕಾ ಅಲ್ಲ, ಅದು ದೋಷಪೂರಿತ ಎಂದು ಆಕ್ಸ್‌ಫರ್ಡ್ ವಿವಿ, ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ ಮತ್ತು ವೈಲ್ಡ್‌ಲೈಫ್ ಕನ್ಸ್‌ರ್ವೇಷನ್ ಸೊಸೈಟಿಯ ವಿಜ್ಞಾನಿಗಳ ತಂಡ ಹೇಳಿದೆ.
ನಾಲ್ಕು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ವ್ಯಾಘ್ರಗಳ ಸಂಖ್ಯೆ ಶೇ.30ರಷ್ಟು ಹೆಚ್ಚಿದೆ. 2011ರಲ್ಲಿ 1,706 ಹುಲಿಗಳಿದ್ದವು. 2015ರ ಜನವರಿಗೆ ಈ ಸಂಖ್ಯೆ 2,226ಕ್ಕೆ ಹೆಚ್ಚಿದೆ ಎಂದು ಭಾರತ ಸಾರಿತ್ತು.
ಹುಲಿಗಳು ಎಷ್ಟಿವೆ ಎಂದು ತಿಳಿಯಲು ಭಾರತ ಸರಕಾರ, ಕ್ಯಾಮೆರಾ ಟ್ರ್ಯಾಪ್ ಮತ್ತು ರೇಡಿಯೊ ಕಾಲರ್ ವಿಧಾನವನ್ನು ಅನುಸರಿಸಿತ್ತು. ಹುಲಿ ಮತ್ತು ಅಪರೂಪದ ವನ್ಯಜೀವಿಗಳ ಗಣತಿಯಲ್ಲಿ ಇದೊಂದು ಜನಪ್ರಿಯ ವಿಧಾನ. ಹುಲಿಗಳನ್ನು ಪ್ರತ್ಯಕ್ಷವಾಗಿ ಕಂಡು ಲೆಕ್ಕ ಹಾಕುವುದಕ್ಕಿಂತ ಅವು ಸಂಚರಿಸುವ ಎಡೆಗಳಲ್ಲಿ ಕ್ಯಾಮೆರಾ ಅಳವಡಿಸಿ ಗುರುತು ಮಾಡಿಕೊಳ್ಳುವುದು ಹಾಗೂ ಹುಲಿಗಳ ಕೊರಳಿಗೆ ರೇಡಿಯೊ ಕಾಲರ್ ಹಾಕಿ ಸಂಖ್ಯೆಯನ್ನು ಪತ್ತೆ ಹಚ್ಚುವುದು, ಈ ಎರಡು ವಿಧಾನಗಳ ದತ್ತಾಂಶಗಳನ್ನು ಕೂಡಿಸಿ ತಾಳೆ ಹಾಕುವುದಕ್ಕೆ ಮಾಪನಾಂಕ ಸೂಚಿ ವಿಧಾನ (ಇಂಡೆಕ್ಸ್ ಕ್ಯಾಲಿಬ್ರೇಷನ್ ಮಾಡೆಲ್) ಎನ್ನಲಾಗುತ್ತದೆ.
ಈ ವಿಧಾನದೊಳಗೆ ಲೋಪಗಳು ಅಂತರ್ಗತವಾಗಿವೆ. ಇದನ್ನು ಬಳಸಿ ನಡೆಸುವ ಮಾಪನದಿಂದ ಬರುವ ಫಲಿತಾಂಶ ನಿಖರವಾಗಿರುವುದಿಲ್ಲ ಎಂಬುದು ಈ ವಿಜ್ಞಾನಗಳ ತಂಡದ ವಾದ. ಏಕೆಂದರೆ, ಕಾಲರ್ ಮತ್ತು ಕ್ಯಾಮೆರಾದಿಂದ ಹುಲಿಗಳನ್ನು ಗುರುತಿಸುವ ವಿಧಾನ ತೀರಾ ಸಣ್ಣ ಪ್ರದೇಶಗಳಲ್ಲಿ ಯಶಸ್ವಿಯಾಗುತ್ತದೆ. ಫಲಿತಾಂಶ ಕೂಡ ನಂಬಲರ್ಹವಾಗಿರುತ್ತದೆ. ಆದರೆ ವಿಶಾಲ ಪ್ರದೇಶಗಳಲ್ಲಿ ಇದರ ಕಾರ್ಯ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ.
ಆಕ್ಸ್‌ಫರ್ಡ್ ವಿವಿಯ ಪ್ರಾಣಿಶಾಸ್ತ್ರ ವಿಭಾಗದ ವೈಲ್ಡ್ ಲೈಫ್ ಕನ್ಸರ್‌ವೇಶನ್ ರೀಸರ್ಚ್ ಯುನಿಟ್‌ನ ಮುಖ್ಯಸ್ಥ ಅರ್ಜುನ್ ಗೋಪಾಲ್ ಸ್ವಾಮಿ ಅವರು ಭಾರತ ಅನುಸರಿಸಿರುವ ವೈಧಾನಿಕ ಲೋಪಗಳನ್ನು ಪಟ್ಟಿ ಮಾಡಿದ್ದಾರೆ.
”ರೇಡಿಯೋ ಕಾಲರ್ ಮತ್ತು ಕ್ಯಾಮೆರಾ ಟ್ರ್ಯಾಪ್ ವಿಧಾನದಲ್ಲಿ ಸಿಕ್ಕುವ ವನ್ಯಜೀವಿಗಳ ಹಾಜರಿ ಸಾಕ್ಷ್ಯ ಹೆಚ್ಚಿರುತ್ತದೆ ಹಾಗೂ ಅದು ಬದಲೇ ಆಗದು ಎಂದು ನಂಬಲಾಗುತ್ತದೆ. ಆದರೆ ವಾಸ್ತವವಾಗಿ ಇದನ್ನು ಸಾಧಿಸುವುದು ಅಸಾಧ್ಯ. ಇದಕ್ಕೆ ಬದಲಾಗಿ ಕಳೆದ ಒಂದು ದಶಕದಲ್ಲಿ ಬೇರೆಬೇರೆ ಪರಿಸರ ಸಂಖ್ಯಾಶಾಸ್ತ್ರಜ್ಞರು ವಿಭಿನ್ನ ಮಾದರಿಗಳನ್ನು ರೂಪಿಸಿ ಖಚಿತ ಮುನ್ನೊಳಹುಗಳನ್ನು ನೀಡಿದ್ದಾರೆ,” ಎಂದು ಅವರು ತಿಳಿಸಿದ್ದಾರೆ.
”ಕಳೆದ 7-8 ವರ್ಷಗಳಲ್ಲಿ ಭಾರತದ ಬೇರೆ ಬೇರೆ ಎಡೆಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇದರ ಬಗ್ಗೆ ನಾವು ತಕರಾರು ತೆಗೆಯುತ್ತಿಲ್ಲ. ಆದರೆ ಹುಲಿ ಹೆಚ್ಚಿದೆ ಎಂದು ಹೇಳುವುದಕ್ಕೆ ಬಳಸಿದ ವಿಧಾನ ಮತ್ತು ಆಧಾರಗಳು ಸರಿಯಿಲ್ಲ. ಇದು ಹೆಚ್ಚು ನಿಖರವಾಗಿರಬೇಕು. ಮಾದರಿ ಸಂಗ್ರಹಣೆ, ಮಾಪನ ಮತ್ತು ಊಹೆಯಲ್ಲಿ ಮೂಲಭೂತ ದೋಷಗಳಿವೆ,”ಎಂದು ವೈಲ್ಡ್ ಲೈಫ್ ಕನ್ಸರ್‌ವೇಶನ್ ಸೊಸೈಟಿಯ ಡಾ. ಉಲ್ಲಾಸ್ ಕಾರಂತ ಹೇಳಿದ್ದಾರೆ.