ಕರ್ನಾಟಕ

ಚಾಮುಂಡಿ ಬೆಟ್ಟದ ಅರಣ್ಯಕ್ಕೆ ಬೆಂಕಿ

Pinterest LinkedIn Tumblr

be

ಮೈಸೂರು: ಇಲ್ಲಿಯ ಚಾಮುಂಡಿ ಬೆಟ್ಟ­ದಲ್ಲಿ ಮಂಗಳವಾರ ಆಕಸ್ಮಿಕ ಬೆಂಕಿ ಕಾಣಿಸಿ­­ಕೊಂಡಿದ್ದರಿಂದ ಹಲವು ಎಕರೆ­ಗಳಷ್ಟು ಅರಣ್ಯ ಪ್ರದೇಶ ನಾಶವಾಗಿದೆ.

ಮೈಸೂರು ತಾಲ್ಲೂಕಿನ ಉತ್ತನಹಳ್ಳಿ ಮಾರ್ಗದಲ್ಲಿ ಬರುವ ಬೆಟ್ಟದ ಪ್ರದೇಶ ಹಾಗೂ ಲಲಿತಾದ್ರಿಪುರದ ಭಾಗದಲ್ಲಿ ಮಧ್ಯಾಹ್ನ ೧೨.೩೦ರ ಸುಮಾರಿನಲ್ಲಿ ಅರಣ್ಯದ ಹುಲ್ಲುಗಾವಲು ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ ಕ್ರಮೇಣ ಎಲ್ಲೆಡೆ ವ್ಯಾಪಿಸಿತು. ಬೆಟ್ಟದ ಅರಣ್ಯದ ಪ್ರತ್ಯೇಕ ಮೂರು ಸ್ಥಳಗಳಲ್ಲಿ ಬೆಂಕಿ ಕಾಣಿಸಿ­ಕೊಂಡು ದಟ್ಟವಾಗಿ ಹೊಗೆಯಾಡು­ತ್ತಿತ್ತು. ಇದನ್ನು ಗಮನಿಸಿದ ಚಾಮುಂಡಿ­ಬೆಟ್ಟ ಗ್ರಾಮಸ್ಥರು ಮತ್ತು ಪೊಲೀಸರು ಬೆಂಕಿ ನಂದಿಸಲು ಹೋದಾಗ, ಅದರ ಕೆನ್ನಾಲಿಗೆ ಎತ್ತರಕ್ಕೆ ಚಿಮ್ಮಿ ಎಲ್ಲೆಡೆ ಆವರಿಸಿದ್ದರಿಂದ ಸ್ಥಳದಿಂದ ಕಾಲ್ಕಿತ್ತರು.

ನಗರದ ವಿವಿಧೆಡೆ ಬೆಂಕಿ ಅನಾಹುತ ಸಂಭವಿಸಿದ್ದರಿಂದ ಅಗ್ನಿಶಾ­ಮಕ ವಾಹನ ಸ್ಥಳಕ್ಕೆ ಬರುವುದು ತಡ­ವಾಯಿತು. ಕೆಲವರು ಹಸಿರು ಸೊಪ್ಪು ಹಿಡಿದು ಬೆಂಕಿ ನಂದಿಸಲು ಮಾಡಿದ ಪ್ರಯತ್ನ ವ್ಯರ್ಥವಾಯಿತು. ಬೆಟ್ಟದಲ್ಲಿ ದಟ್ಟ ಹೊಗೆ ಆವರಿಸಿದ್ದರಿಂದ ಪ್ರವಾಸಿ­ಗರು ಮತ್ತು ಚಾಮುಂಡಿ ಬೆಟ್ಟದ ಗ್ರಾಮ ಸ್ಥರಲ್ಲಿ ಆತಂಕ ಮನೆ ಮಾಡಿತು.

ಚಾಮುಂಡಿ ಬೆಟ್ಟಕ್ಕೆ ತೆರಳುವ ಪ್ರವಾ­ಸಿ­ಗರು ವಾಹನ ನಿಲ್ಲಿಸಿ ಬೆಂಕಿ ಅನಾಹುತ ನೋಡಲು ಮುಂದಾದರು. ಸ್ಥಳದಲ್ಲಿದ್ದ ಪೊಲೀಸರು ಪ್ರವಾಸಿಗರನ್ನು  ಸ್ಥಳದಿಂದ ದೂರ ಕಳುಹಿಸಿದರು.  ಮುಂಜಾಗ್ರತಾ ಕ್ರಮವಾಗಿ ಚಾಮುಂಡಿ ಬೆಟ್ಟಕ್ಕೆ ತೆರಳುವ ಸಾರಿಗೆ ಬಸ್‌ ಮತ್ತು ಖಾಸಗಿ ವಾಹನ­ಗಳ ಸಂಚಾರ  ಸ್ಥಗಿತಗೊಳಿಸಲಾಯಿತು. ಚಾಮುಂಡಿ ಬೆಟ್ಟಕ್ಕೆ ಪೂಜೆಗೆಂದು ತೆರಳಿ ದ್ದವರನ್ನು ಬೆಟ್ಟದ ಮೇಲೆ ಕೆಲ ಗಂಟೆಗಳ ಕಾಲ ಅಲ್ಲಿಯೇ ಇರಿಸ­ಲಾಗಿತ್ತು.

ನಾಗರಹಳ್ಳಿ ನೀಲಗಿರಿ ನೆಡುತೋಪು ನಾಶ
ಚಿಕ್ಕಮಗಳೂರು: ತಾಲ್ಲೂಕಿನ ಕಳಸಾಪುರ ಸಮೀಪದ ನಾಗರಹಳ್ಳಿಯ ಸಾಮಾಜಿಕ ಅರಣ್ಯಕ್ಕೆ ಮಂಗಳವಾರ ಕಾಳ್ಗಿಚ್ಚು ತಗುಲಿ ನೂರಾರು ಎಕರೆ ನೀಲಗಿರಿ ನೆಡುತೋಪು ನಾಶವಾಗಿದೆ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಕಾಣಿಸಿಕೊಂಡ ಕಾಳ್ಗಿಚ್ಚಿನಿಂದಾಗಿ ಅಪಾರ ಪ್ರಮಾಣದ ಸಸ್ಯಸಂಪತ್ತು ನಾಶವಾಗಿದೆ. ವಲಯ ಅರಣ್ಯಾಧಿಕಾರಿ ಅಜೀಜ್‌ ನೇತೃತ್ವದಲ್ಲಿ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಮಾಡಿದರು.

ಬಿಸಿಲಿನ ತಾಪಕ್ಕೆ ಬೆಂಕಿ ಇನ್ನಷ್ಟು ರಭಸವಾಗಿ ಹೊತ್ತಿ ಉರಿಯಲಾ­ರಂಭಿಸಿತು. ಸಂಜೆ ವೇಳೆಗೆ ಸ್ವಲ್ಪಮಟ್ಟಿಗೆ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇದೇ ಅರಣ್ಯಕ್ಕೆ ನಾಗರಹಳ್ಳಿ ಸಮೀಪ 20 ದಿನಗಳ ಹಿಂದೆ ಬೆಂಕಿ ಬಿದ್ದಿದ್ದು, ಹತ್ತಾರು ಎಕರೆ ನೀಲಗಿರಿ ನೆಡುತೋಪು ಮತ್ತು ಕುರುಚಲು ಕಾಡು ನಾಶವಾಗಿತ್ತು.

Write A Comment