ಕರ್ನಾಟಕ

ನಗರ ಪ್ರದೇಶಗಳಲ್ಲಿ ಕಟ್ಟಡ­ಗ­ಳ ಅಕ್ರಮ– ಸಕ್ರಮ ಶೀಘ್ರ ಅಧಿಸೂಚನೆ

Pinterest LinkedIn Tumblr

Vidhan_Saudan_bengaluru_0

ಬೆಂಗಳೂರು: ನಗರ ಪ್ರದೇಶಗಳಲ್ಲಿ ನಿಯಮ ಉಲ್ಲಂಘಿಸಿ 2013ರ ಅಕ್ಟೋಬರ್‌ 19ಕ್ಕೆ ಮೊದಲು ಕಟ್ಟಿರುವ ಕಟ್ಟಡ­ಗ­ಳನ್ನು ಸಕ್ರಮಗೊಳಿಸುವ ‘ಅಕ್ರಮ ಸಕ್ರಮ’ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಶೀಘ್ರ ಹೊಸ ಅಧಿಸೂಚನೆ ಹೊರಡಿಸಲಿದೆ.

ಮಾರ್ಚ್‌ 20ರಿಂದ ಅರ್ಜಿ ಸ್ವೀಕರಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಅವಕಾಶ ನೀಡಬೇಕು ಎಂದು ನಗರಾಭಿವೃದ್ಧಿ ಇಲಾಖೆಯು ಪ್ರಸ್ತಾವನೆ ಸಲ್ಲಿಸಿದೆ.

2006ರಲ್ಲಿ ರೂಪಿಸಲಾಗಿದ್ದ ಮಹಾತ್ವಾಕಾಂಕ್ಷೆಯ ಈ ಯೋಜನೆ ಜಾರಿಗೆ ರಾಜ್ಯ ಸರ್ಕಾರವು ಕರ್ನಾಟಕ ಪಟ್ಟಣ ಮತ್ತು  ಗ್ರಾಮೀಣ ಯೋಜನಾ ಕಾಯ್ದೆ ಅಡಿಯಲ್ಲಿ  ಕಳೆದ ಜೂನ್‌ನಲ್ಲೇ ಅಂತಿಮ ಅಧಿಸೂಚನೆ ಹೊರಡಿಸಿತ್ತು.

ಆದರೆ, ಹೈಕೋರ್ಟ್‌ ನೀಡಿದ್ದ ತಡೆಯಾಜ್ಞೆ­ಯಿಂದಾಗಿ ಅಧಿ­ಸೂಚನೆ­ಯನ್ನು ತಡೆ ಹಿಡಿಯಲಾಗಿತ್ತು. ಇತ್ತೀಚೆಗಷ್ಟೇ ಕೋರ್ಟ್‌ ಈ ಯೋಜನೆ ಜಾರಿಗೆ ಹಸಿರು ನಿಶಾನೆ ತೋರಿದೆ.

ಬಿಬಿಎಂಪಿ ಚುನಾವಣೆ ಈ ವರ್ಷವೇ ನಡೆಯಲಿರುವುದರಿಂದ ಯೋಜನೆಯ ಫಲ­ವನ್ನು ಪಡೆಯಲು ಕಾಂಗ್ರೆಸ್‌ ಸರ್ಕಾರ ಉತ್ಸುಕವಾಗಿದೆ. ಮಾತ್ರ­ವ­ಲ್ಲದೇ, ಈ ಯೋಜನೆ ಸ್ಥಳೀಯ ಸಂಸ್ಥೆ­ಗಳಿಗೆ ವರಮಾನವನ್ನೂ ತರಲಿದೆ.

ನಗರಾಭಿವೃದ್ಧಿ ಇಲಾಖೆಯು ಅನು­ಮತಿ­­ಗಾಗಿ ಕರಡು ಅಧಿಸೂಚನೆಯನ್ನು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳುಹಿಸಿದೆ.
ಈ ಸಂಬಂಧ, ಇಲಾಖೆಯ ಕಾರ್ಯದರ್ಶಿ ಟಿ.ಕೆ. ಅನಿಲ್‌ ಕುಮಾರ್‌ ಅವರನ್ನು ಸಂಪರ್ಕಿಸಿದಾಗ, ‘ಹೊಸ ಅಧಿಸೂಚನೆಗೆ ಸಂಬಂಧಿಸಿದಂತೆ ಸರ್ಕಾರ ಚರ್ಚೆ ನಡೆಸುತ್ತಿದೆಯಷ್ಟೆ. ಯಾವುದನ್ನೂ ಅಂತಿಮಗೊಳಿಸಿಲ್ಲ’ ಎಂದರಲ್ಲದೇ, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು  ನಿರಾಕರಿಸಿದರು.

ಯಾವುದು ಸಕ್ರಮ
ಕಟ್ಟಡ ನಿರ್ಮಾಣ (ಕಟ್ಟಡದ ಸುತ್ತ ನಿಗದಿಯಷ್ಟು ಜಾಗ ಬಿಡದಿರುವುದು), ನೆಲ ವಿಸ್ತೀರ್ಣ ಪ್ರಮಾಣದ ನಿಯಮಗಳ ಉಲ್ಲಂಘನೆ, ಕೃಷಿ ಭೂಮಿ ಪರಿವರ್ತನೆ ಮಾಡದೇ ಇರುವುದು, ಅಕ್ರಮ ಬಡಾವಣೆಗಳ ನಿರ್ಮಾಣ ಮತ್ತು ಸ್ಥಳೀಯ ನಗರ ಸಂಸ್ಥೆ­ಗಳ ವ್ಯಾಪ್ತಿಯಲ್ಲಿ ಬರುವ ಅಕ್ರಮ ನಿವೇಶನಗಳು ಈ ಯೋಜನೆ ಅಡಿಯಲ್ಲಿ ಸಕ್ರಮ­ಗೊಳ್ಳಲಿವೆ. ವಸತಿ ಉದ್ದೇಶದ ಆಸ್ತಿಯಲ್ಲಿನ ಶೇ 50ರಷ್ಟು ಹಾಗೂ ವಾಣಿಜ್ಯ ಉದ್ದೇಶದ ಆಸ್ತಿಯ ಶೇ 25ರಷ್ಟು ಅಕ್ರಮಗಳನ್ನು ಈ ಯೋಜನೆ ಸಕ್ರಮಗೊಳಿಸಲಿದೆ.

ಆದರೆ, ಕಟ್ಟಡದ ಸುತ್ತ ನಿಗದಿಯಷ್ಟು ಜಾಗ ಬಿಡದೇ ಇರುವುದಕ್ಕೆ ಸಂಬಂಧಿಸಿ­ದಂತೆ ಸರ್ಕಾರ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಿದೆ. ಕಟ್ಟಡದ ಯಾವು­ದಾ­­ದರೂ ಒಂದು ಬದಿಯಲ್ಲಿ ಶೇ 50ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ನಿಯಮ ಉಲ್ಲಂ­ಘಿಸಿ­­ದರೆ, ಆ ಕಟ್ಟಡ ಸಕ್ರಮಕ್ಕೆ  ಅನರ್ಹ ಎಂದು ಮೂಲಗಳು ಹೇಳಿವೆ.

ದಂಡ ಶುಲ್ಕ
ಹೊಸ ನಿಯಮಗಳ ಅಡಿಯಲ್ಲಿ ಶೇ 25ರಷ್ಟು ಪ್ರಮಾಣದವರೆಗೆ ನಿಯಮ ಉಲ್ಲಂಘಿಸಿರುವ ವಸತಿ ಕಟ್ಟಡಗಳನ್ನು ಸಕ್ರಮ ಗೊಳಿಸಲು ಆಸ್ತಿಯ ಮಾರ್ಗಸೂಚಿ ದರದ ಶೇ 6ರಷ್ಟು ಶುಲ್ಕ ಪಾವತಿಸಬೇಕು. ಶೇ 25ರಿಂದ 50ರಷ್ಟು ನಿಯಮ ಉಲ್ಲಂಘಿಸಿದವರು ಶೇ 8ರಷ್ಟು ಶುಲ್ಕ ಪಾವತಿಸಬೇಕು.

ವಾಣಿಜ್ಯ ಕಟ್ಟಡಗಳ ಮಾಲೀಕರು ಶೇ 12.5ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ನಿಯಮ ಉಲ್ಲಂಘಿಸಿದ್ದರೆ, ಆಸ್ತಿಯ ಮಾರ್ಗಸೂಚಿ ದರದ ಶೇ 20ರಷ್ಟು, ಶೇ 25ರಷ್ಟು ಪ್ರಮಾಣದವರೆಗೆ ನಿಯಮ ಉಲ್ಲಂಘಿಸಿದವರು ಮಾರ್ಗ­ಸೂಚಿ ದರದ ಶೇ 35ರಷ್ಟು ಶುಲ್ಕ ಪಾವತಿಸಬೇಕಾಗುತ್ತದೆ. ಅನಧಿಕೃತ ಬಡಾವಣೆಗಳ ವಿಚಾರ­ದಲ್ಲಿ ಪ್ರತಿ ಚದರಮೀಟರ್‌ ಜಾಗಕ್ಕೆ ರೂ. 1 ಮತ್ತು ಕಟ್ಟಡದ ಒಟ್ಟು ನೆಲ ವಿಸ್ತೀರ್ಣದ ಪ್ರತಿ ಚದರ ಮೀಟರ್‌ಗೆ ರೂ. 2 ಶುಲ್ಕ ಪಾವತಿಸಬೇಕು.

Write A Comment