ಬೆಂಗಳೂರು: ನಗರದಲ್ಲಿ ಎಲ್ಲೆಡೆ ಉದುರಿರುವ ಒಣ ಎಲೆಗಳನ್ನು ರಾಶಿ ಹಾಕಿ ಸುಟ್ಟು ಹಾಕಲಾಗುತ್ತಿದೆ. ಇದರಿಂದ, ನಗರದ ವಾಯುಮಾಲಿನ್ಯ ಹೆಚ್ಚಳವಾಗುತ್ತಿದೆ.
ನಿವಾಸಿಗಳು, ಪೌರಕಾರ್ಮಿಕರು, ಕಟ್ಟಡ ಕಾರ್ಮಿಕರು ಎಲೆಗಳನ್ನು ರಸ್ತೆಬದಿಯಲ್ಲಿ ರಾಶಿ ಹಾಕಿ ಬೆಳಿಗ್ಗೆ ಮತ್ತು ಮಧ್ಯಾಹ್ನ ಸುಟ್ಟು ಹಾಕುತ್ತಿದ್ದಾರೆ. ಈ ಎಲೆಗಳಲ್ಲಿ ಕಸವನ್ನೂ ಕೂಡ ಸುಟ್ಟು ಹಾಕುತ್ತಿರುವುದರಿಂದ ನಗರದ ವಾತಾವರಣದ ಮೇಲೆ ಪರಿಣಾಮ ಬೀರುತ್ತಿದೆ.
ನಗರದ ಮುಖ್ಯ ಪ್ರದೇಶಗಳಾದ ಮಾಗಡಿ ರಸ್ತೆ, ಬನಶಂಕರಿ, ಎನ್.ಆರ್. ಕಾಲೊನಿ, ರಾಜರಾಜೇಶ್ವರಿನಗರ, ಮಲ್ಲೇಶ್ವರ, ರಾಜಾಜಿನಗರ, ಯಶವಂತಪುರ, ಕಾಕ್ಸ್‌ಟೌನ್, ಲಿಂಗರಾಜಪುರ, ಇಂದಿರಾನಗರ, ವಿಲ್ಸನ್ ಗಾರ್ಡನ್, ಜಯನಗರ, ಕನಕಪುರ ರಸ್ತೆ ಇನ್ನೂ ಮುಂತಾದೆಡೆಗಳಲ್ಲಿ ಎಲೆಗಳನ್ನು ಸುಟ್ಟು ಹಾಕುತ್ತಿರುವ ದೃಶ್ಯ ಕಂಡುಬಂದಿದೆ.
‘ಎಲೆಗಳ ಸುಡುವಿಕೆಯಿಂದ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚಳವಾಗುತ್ತದೆ. ಹೈಕೋರ್ಟ್ ಸಹ ನಗರದ ವಾಯು ಮಾಲಿನ್ಯ ಪ್ರಮಾಣವನ್ನು ಕಡಿಮೆ ಮಾಡುವಂತೆ ನಿರ್ದೇಶನ ನೀಡಿದೆ. ಇದರಿಂದ, ಎಲೆಗಳನ್ನು ಸುಡುವುದನ್ನು ಕಾನೂನು ಉಲ್ಲಂಘನೆಯೆಂದು ಪರಿಗಣಿಸಬೇಕಾಗಿದೆ’ ಎಂದು ಪರಿಸರ ತಜ್ಞ ಅ.ನ.ಯಲ್ಲಪ್ಪ ರೆಡ್ಡಿ ಹೇಳಿದರು.
‘ಜನರು ಅದರಲ್ಲೂ ವಿಶೇಷವಾಗಿ ಸರ್ಕಾರದ ಜನರಿಗೆ ಒಣಗಿದ ಎಲೆಗಳು ಗೊಬ್ಬರದ ಒಂದು ದೊಡ್ಡ ಮೂಲ ಎಂಬುದು ತಿಳಿದಿಲ್ಲ. ಈ ರೀತಿ ಎಲೆಗಳನ್ನು ಸುಡುವುದರಿಂದ ನಗರದ ವಾಯುಮಾಲಿನ್ಯ ಇನ್ನೂ ಹೆಚ್ಚಾಗುತ್ತದೆ. ಹೀಗಾಗಿ ಎಲ್ಲಾ ಒಣಗಿದ ಎಲೆಗಳನ್ನು ಒಂದು ಕಡೆ ಸಂಗ್ರಹಿಸಿ ಕಾಂಪೋಸ್ಟ್ ಗೊಬ್ಬರ ತಯಾರಿಸಬಹುದು. ಎಲೆ ಸುಡುವ ಗಾಳಿಯನ್ನು ಸೇವಿಸಿದರೆ ಇದು ಧೂಮಪಾನ ಮತ್ತು ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮದಷ್ಟೇ ಪರಿಣಾಮ ಬೀರಬಹುದು’ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ವಾಮನ ಆಚಾರ್ಯ, ‘ಎಲೆಗಳನ್ನು ಸುಡದೆ ಇರುವಂತೆ ಮಾಡಲು ಯಾವುದೇ ಕಾನೂನುಗಳಿಲ್ಲ. ಆದರೆ, ಮಂಡಳಿಯು ತ್ಯಾಜ್ಯ ಮತ್ತು ಎಲೆಗಳನ್ನು ಸುಡದಂತೆ ಹೇಳುತ್ತಲೇ ಬಂದಿದೆ. ಎಲೆಗಳಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸಬಹುದು. ಆದರೆ, ಈ ಕೆಲಸ ನಡೆಯುತ್ತಿಲ್ಲ’ ಎಂದರು.