ಕರ್ನಾಟಕ

ವೀರಶೈವ– ಲಿಂಗಾಯತ ಎರಡೂ ಒಂದೇ: ಸಂಶೋ­ಧಕ ಡಾ.ಎಂ.­ಚಿದಾನಂದ ಮೂರ್ತಿ

Pinterest LinkedIn Tumblr

chida

ಬೆಂಗಳೂರು: ‘ವೀರಶೈವ ಮತ್ತು ಲಿಂಗಾ­ಯತ ಪದಗಳು ಒಂದೇ ನಾಣ್ಯದ ಎರಡು ಮುಖದಂತಿವೆ. ಇವು ಭಿನ್ನ ವರ್ಗ­ಗಳನ್ನು ಹೇಳುತ್ತವೆಯೋ ಅಥವಾ ಒಂದೇ ವರ್ಗ ಸೂಚಕವೋ ಎನ್ನುವ ವಾದ­ಗಳಿಗೆ ಯಾರೂ ಕಿವಿಗೊಡ­ಬಾ­ರದು’ ಎಂದು ಸಂಶೋ­ಧಕ ಡಾ.ಎಂ.­ಚಿದಾನಂದ ಮೂರ್ತಿ ಹೇಳಿದರು.

‘ವೀರಶೈವ–ಲಿಂಗಾಯತ ಸಮ­ನ್ವಯ ವೇದಿಕೆ’ ನಗರ­ದಲ್ಲಿ ಸೋಮವಾರ ಆಯೋ­ಜಿಸಿದ್ದ ‘ಲಿಂಗಾಯತ–ವೀರ­ಶೈವ’ ಎಂಬ ಸಂವಾ­ದದಲ್ಲಿ ಅವರು ಮಾತನಾಡಿದರು.

‘ಪ್ರಸ್ತುತ ಕೆಲವರು ಬಸವಣ್ಣ ವೀರ­ಶೈವ­ನಲ್ಲ. ಆತ ಲಿಂಗಾಯತ ಎಂದು ವಾದಿಸುವ ಜತೆಗೆ ಪಂಚಪೀಠಗಳ ಅನು­ಯಾಯಿಗಳು ವೀರಶೈವರು, ಬಸವಣ್ಣನ ಅನುಯಾಯಿಗಳು ಲಿಂಗಾಯತರು ಎನ್ನುವ ವಿಭಾಗ ಮಾಡುತ್ತಿದ್ದಾರೆ. ಇದು ಬಹಳ ದೊಡ್ಡ ತಪ್ಪು. ಎರಡೂ ಪದಗಳು ಬೇರೆಯಲ್ಲ. ವೀರಶೈವ ವಿದ್ಯಾವಂ­ತರು ಬಳಸುವ ಶಿಷ್ಟ ಪದ­ವಾದರೆ, ಲಿಂಗಾಯತ ಎನ್ನುವುದು ಜನ­ಸಾಮಾ­ನ್ಯರ ಬಳಕೆಯಲ್ಲಿದೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಸಂಶೋಧಕ ಡಾ.ಎಸ್‌.­ವಿದ್ಯಾ­ಶಂಕರ್‌ ಮಾತನಾಡಿ, ‘ಈ ಪದಗಳ ಚರ್ಚೆ 21ನೇ ಶತಮಾನದ ಆರಂಭ­ದಿಂದ ಈವರೆಗೆ ಮತ್ತಷ್ಟು ಉಗ್ರವಾಗಿ ಹರಡಿ­ಕೊಂಡು ಸಮಾಜ ವಿಘಟಿಸುವ ನೆಲೆ­­ಯಲ್ಲಿ ಗುಂಪುಗಳನ್ನು ಸೃಷ್ಟಿಸುವ ಪ್ರವೃತ್ತಿ ಕಂಡುಬರುತ್ತಿದೆ. ಆದ್ದರಿಂದ, ಇಂದು ನಾವೆಲ್ಲ ಒಂದು ಎಂಬ ಸಮ­ನ್ವ­ಯದ ಸೂತ್ರವನ್ನು ಅನಿವಾರ್ಯ­ವಾಗಿ ಪಾಲಿ­ಸ­ಬೇಕಿದೆ’ ಎಂದರು.

‘ಈ ಧರ್ಮಕ್ಕೊಂದು ಹೆಸರಿಡಬೇಕು ಎಂಬ ವಾದ ಮುಂದಿಟ್ಟುಕೊಂಡು ಪಾಲುಗಾರಿಕೆ ಮಾಡಲು ಹೊರಟ­ವ­ರಲ್ಲಿ ಪ್ರಮುಖರಾದ ಮಾತೆ ಮಹಾ­ದೇವಿ­ಯವರು ಬಸವ ಧರ್ಮ ಎಂದು ಕರೆದರು. ಚಿತ್ರದುರ್ಗದ ಮುರುಘಾ ಶರಣ­ರು ಬಸವ ಧರ್ಮವನ್ನು ವ್ಯಕ್ತಿ­ಕೇಂದ್ರಿತ ಧರ್ಮವನ್ನಾಗಿ ಮಾಡಲು ಹೊರ­ಟರು. ಆ ಪ್ರಯತ್ನ ತೀವ್ರ ಟೀಕೆಗೆ ಒಳ­ಗಾದರೂ ಅವರು ಅದನ್ನು ಬಳ­ಸು­ತ್ತಲೇ ಇದ್ದಾರೆ’ ಎಂದು ಹೇಳಿದರು.

ನಿವೃತ್ತ ಉಪನ್ಯಾಸಕ ಡಾ.ಸಿ.ಯು.­ಮಂಜುನಾಥ ಮಾತನಾಡಿ, ‘ಈ ಎರಡು ಪದಗಳ ಪ್ರಾಚೀನತೆ ಜಾಲಾಡು­ವುದ­ರಲ್ಲಿ ಗೆಲ್ಲಬೇಕೆಂಬ ಹಟ ಬದಿಗಿಟ್ಟು, ಪೂರ್ವ­ಗ್ರಹಗಳನ್ನು ಬಿಟ್ಟು, ಉದಾರ ಭಾವನೆ­ಯಿಂದ ಯೋಚಿಸಿದರೆ ಇಡೀ ಸಮಾ­ಜಕ್ಕೆ ಒಳಿತಾಗುತ್ತದೆ. ವಿತಂಡ­ವಾದ­­ಗಳೇ ಮುಂದುವರೆದರೆ ವಿಷಬೀಜ­ಗಳಿಗೆ ಇಡೀ ಸಮುದಾಯವೇ ಬಲಿ­ಯಾಗ­ಬೇಕಾಗುತ್ತದೆ’ ಎಂದರು.

ಕರ್ನಾಟಕ ರಾಜ್ಯ ವೀರಶೈವ–ಲಿಂಗಾ­ಯತ ಪಂಚಮಶಾಲಿ ಸಂಘದ ಅಧ್ಯಕ್ಷ ಬಸವರಾಜ ದಿಂಡೂರು ಮಾತನಾಡಿ, ‘ಈ ಪದಗಳ ವಾದಗಳಲ್ಲಿ ಜನಸಾಮಾನ್ಯ­ರಿಗೆ ಆಸಕ್ತಿ ಇಲ್ಲ. ಈ ಹಿಂದೆ ವೀರಶೈವ ಮಹಾಸಭೆಯ ಪದಾಧಿಕಾರಿಯಾಗಿದ್ದ ಮಾತೆ ಮಹಾ­ದೇವಿ­ಯವರು 1986ರಲ್ಲಿ ನಡೆದ ಮಹಾಸಭೆಯ ಸಾಮಾನ್ಯ ಸಭೆ­ಯಲ್ಲಿ ವೀರಶೈವ ಪದವನ್ನು ಒಪ್ಪಿ­ಕೊಂಡು ಸಹಿ ಹಾಕಿ­ದ್ದರು. ಇಂದು ಅವರು ಅದನ್ನು ಮರೆತು ವಿವಾದ­ಗ­ಳನ್ನು ಹುಟ್ಟು ಹಾಕು­ತ್ತಿ­ದ್ದಾರೆ. ಇಂತಹ ವಾದಗಳಲ್ಲಿ ಮುಳುಗಿ ಯುವ ಜನರ ಆಶೋತ್ತರ­ಗಳನ್ನು ಅರಿತುಕೊಳ್ಳಲು ಸಮಾ­ಜದ ಮುಖಂಡರು ಅಸಡ್ಡೆ ತೋರಿ­ದರೆ ಭವಿಷ್ಯದಲ್ಲಿ ಸಮಾಜ ನಾಶವಾ­ದರೂ ಅಚ್ಚರಿಯಿಲ್ಲ’ ಎಂದರು.

ಧರ್ಮ ನಾಶದ ಆತಂಕ
‘ಶಿರಸಿ, ಕುಮಟಾ, ಹೊನ್ನಾವರ ಹಾಗೂ ಉತ್ತರ ಕನ್ನಡದ ಆರೇಳು ತಾಲ್ಲೂಕುಗಳಲ್ಲಿ ಹವ್ಯಕ ಬ್ರಾಹ್ಮಣ­ರಲ್ಲಿ ಸಾವಿರ ಗಂಡಸರಿಗೆ 786 ಹೆಣ್ಣು­ಮಕ್ಕಳಿದ್ದಾರೆ. ಆದ್ದರಿಂದ, ಆ ಸಮು­ದಾಯದ ಜನರು ಮಧ್ಯವರ್ತಿ­ಗಳಿಗೆ ಹಣದ ಆಮಿಷ ತೋರಿಸಿ ವೀರಶೈವ ಲಿಂಗಾಯತ ಧರ್ಮದ ಬಡ ಕುಟುಂಬಗಳ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಳ್ಳುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ನಮ್ಮ ಧರ್ಮ ಉಳಿಯುತ್ತದೆಯೇ ಎನ್ನುವ ಆತಂಕ ಕಾಡುತ್ತಿದೆ’ ಎಂದು ಬಸವರಾಜ ದಿಂಡೂರು ಹೇಳಿದರು.

Write A Comment