ಕುಂದಾಪುರ: ಪತಿ ನೀಡಿದ ಕಿರುಕುಳ, ಪ್ರಚೋದನೆಯಿಂದ ನನ್ನ ಮಗಳು ವಿಶಾಲ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯಡಮೊಗ್ಗೆ ಗ್ರಾಮದ ನಡ್ತುಂಡ್ ನಿವಾಸಿ ಆನಂದ ಶೆಟ್ಟಿ ಕೊಲ್ಲೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಆರು ವರ್ಷದ ಹಿಂದೆ ಕೆರಾಡಿ ಚಂದ್ರ ಶೆಟ್ಟಿ ಎಂಬವರೊಂದಿಗೆ ಮದುವೆ ಮಾಡಿಕೊಡಲಾಗಿದೆ. ಅವರಿಗೆ ಮಕ್ಕಳಾಗಿರಲಿಲ್ಲ. ಈ ವಿಷಯದಲ್ಲಿ ಚಂದ್ರ ಶೆಟ್ಟಿ ಮತ್ತು ಅವರ ಅಣ್ಣ ನರಸಿಂಹ ಶೆಟ್ಟಿ ವಿಶಾಲಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ತವರು ಮನೆಗೆ ಬಂದಾಗ ಆಕೆ ಅದನ್ನು ಹೇಳಿಕೊಂಡಿದ್ದಾಳೆ. ಗಂಡನ ಕಿರುಕುಳದಿಂದ ಬೇಸತ್ತು ವಿಶಾಲ ಗಂಡನ ಮನೆಯಲ್ಲಿದ್ದಾಗ ದಿನಾಂಕ 13.01.2015 ರಂದು ರಾತ್ರಿ ಆತ್ಮ ಹತ್ಯೆ ಮಾಡಿ ಕೊಳ್ಳುವರೇ ಯಾವುದೇ ವಿಷ ಪದಾರ್ಥ ಸೇವಿಸಿದ್ದು ಆಕೆಯನ್ನು ಗಂಡನ ಮನೆಯವರು ಚಿಕಿತ್ಸೆಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರಾಗಲೇ 16.01.2015 ರಂದು ರಾತ್ರಿ 12.15 ಗಂಟೆಗೆ ಮೃತ ಪಟ್ಟಿರುತ್ತಾಳೆ. ಮೃತದೇಹವನ್ನು ಬೇಗ ಪಡೆಯುವ ಉದ್ದೇಶದಿಂದ ಆಕೆಯ ಪತಿ ಗಂಡಹೆಂಡಿರ ನಡುವೆ ಯಾವುದೇ ದ್ವೇಷವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಆದರೆ ಶವಮಹಜರು ಸಮಯ ತಹಶೀಲ್ದಾರರಲ್ಲಿ ನಿಜ ವಿಚಾರ ತಿಳಿಸಿದ್ದು, ಮಗಳು ವಿಶಾಲಳ ಸಾವಿಗೆ ಆಕೆಯ ಗಂಡ ಚಂದ್ರ ಶೆಟ್ಟಿ ಮತ್ತು ಆತನ ಅಣ್ಣ ನರಸಿಂಹ ಶೆಟ್ಟಿಯೇ ಕಾರಣರಾಗಿದ್ದು,ಇನ್ನೊಂದು ಮದುವೆಯ ಹುನ್ನಾರದಲ್ಲಿದ್ದ ಆಪಾದಿತ ಚಂದ್ರ ಶೆಟ್ಟಿ ಇನ್ನೊಂದು ಹೆಣ್ಣಿನ ಬಾಳನ್ನು ಹಾಳು ಮಾಡದಂತೆ ಕೇಸು ದಾಖಲಿಸಿ ತನಿಖೆ ನಡೆಸಬೇಕು ಎಂಬುದಾಗಿ ಆರೋಪಿಸಿ ಆನಂದ ಶೆಟ್ಟಿ ರವರು ದೂರಿನಲ್ಲಿ ತಿಳಿಸಿದ್ದಾರೆ.
ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
