ಕರ್ನಾಟಕ

ಉಪಯೋಜನೆ ಕಾಯ್ದೆ ಸೆಕ್ಷನ್‌ 7(ಡಿ) ರದ್ದಾಗಲಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಸದಸ್ಯ ಶ್ರೀಧರ ಕಲಿವೀರ

Pinterest LinkedIn Tumblr

kaliiii

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪಯೋಜನೆ ಮತ್ತು ಬುಡ­ಕಟ್ಟು ಉಪಯೋಜನೆಗಳಿಗೆ ಮೀಸ­ಲಿ­ಡುವ ಅನುದಾನವನ್ನು ಅನ್ಯ ಉದ್ದೇ­ಶಗಳಿಗೆ ಬಳಕೆ ಮಾಡಲು ಅವಕಾಶ ಕಲ್ಪಿ­ಸುವ ‘ಎಸ್‌ಟಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆ 2013’ ಸೆಕ್ಷನ್‌ 7(ಡಿ)ಯನ್ನು ರದ್ದುಪಡಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಸದಸ್ಯ ಶ್ರೀಧರ ಕಲಿವೀರ ಒತ್ತಾಯಿಸಿದರು.

ದಲಿತ ಸೇನೆ ಸೋಮವಾರ ಆಯೋ­ಜಿಸಿದ್ದ, ‘ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆ 2013’  ತಿದ್ದುಪಡಿ ಮತ್ತು ‘ದಲಿತ ಬಜೆಟ್‌’ ಕುರಿತ ವಿಚಾರ­ಸಂಕಿರಣದಲ್ಲಿ ಮಾತನಾಡಿದರು.

ಸಂವಿಧಾನದ ಪರಿಚ್ಚೇದ 38/39­/42ರ ಪ್ರಕಾರ ದಲಿತರಿಗೆ ಸ್ವಉದ್ಯೋ­ಗಕ್ಕೆ ಪ್ರೋತ್ಸಾಹಿಸುವುದು, ಆರ್ಥಿಕ ಕ್ಷೇತ್ರ­ದಲ್ಲಿ ವಿಶೇಷ ಅವಕಾಶ ನೀಡು­ವುದು ಕೇಂದ್ರ ಮತ್ತು ರಾಜ್ಯ ಸರ್ಕಾರ­ಗಳ ಕರ್ತವ್ಯವಾಗಿದೆ. ಆದರೆ ಕಳೆದ 35 ವರ್ಷಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಿಟ್ಟ ಸುಮಾರು ₹ 15ಸಾವಿರ ಕೋಟಿ ಹಣ ಅಣೆಕಟ್ಟು, ರಸ್ತೆ, ಕಟ್ಟಡ ನಿರ್ಮಾಣಗಳಿಗೆ ಬಳಸ­ಲಾಗಿದೆ ಎಂದು ಆರೋಪಿಸಿದರು.

ಸೆಕ್ಷನ್‌ 7(ಡಿ)ಅಡಿಯಲ್ಲಿ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ರಾಜ್ಯ ಪರಿಷತ್‌ ಅನುಮೋದನೆ ಪಡೆದು ಬಯಸಿದಷ್ಟು ಹಣವನ್ನು ಬಳಸಿಕೊಳ್ಳಲು ಅವಕಾಶವಿದೆ. ಪರಿಷತ್‌ಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರು.  ಮುಖ್ಯ ಕಾರ್ಯದರ್ಶಿಯವರನ್ನು ಪರಿಷತ್‌ನಿಂದ ಹೊರಗಿಡಲಾಗಿದೆ. ಇದರಿಂದ ಹಣ ದುರುಪಯೋಗವಾಗುತ್ತಿದೆ. ಮುಖ್ಯ ಕಾರ್ಯದರ್ಶಿಯವರನ್ನೂ ಪರಿಷತ್‌ಗೆ ಸೇರಿಸಕೊಳ್ಳಬೇಕು ಎಂದು ಒತ್ತಾಯಿಸಿದರು.

ಅನಧಿಕೃತ ಬಹಿಷ್ಕಾರ: ದಲಿತರ ಉದ್ಧಾರ­ಕ್ಕಾಗಿ ಶ್ರಮಿಸಿದ ಮೈಸೂರಿನ ಗೋಪಾಲಸ್ವಾಮಿ ಅಯ್ಯರ್‌ ಮತ್ತು ಉಡುಪಿಯ ಕುದ್ಮಲ್‌ ರಂಗರಾವ್‌ ಅವ­ರಿಗಿಂತ ಹತ್ತುಪಟ್ಟು ಹೆಚ್ಚು ಹಿಂಸೆ ಅನುಭವಿಸಿದ್ದೇನೆ ಎಂದು ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮಿ ಹೇಳಿದರು.
ಅವರಿಗೆ ಕುಟುಂಬ ಮಾತ್ರ ಇತ್ತು. ನನಗೆ ಒಂದು ಸಂಸ್ಥೆ ಇದೆ. ಆದರೆ, ನಾನು ದಲಿತರ ಪರ ಕೆಲಸ ಮಾಡು­ವು­ದನ್ನು ಸೇವೆ ಎಂದುಕೊಂಡಿದ್ದೇನೆ. ಅದಕ್ಕಾಗಿ ಅನಧಿಕೃತ ಬಹಿಷ್ಕಾರಕ್ಕೂ ಒಳಗಾಗಿದ್ದೇನೆ ಎಂದರು.

1996ರಲ್ಲಿ ಬಡ್ತಿಯಲ್ಲಿ ಮೀಸಲಾತಿ ತೆಗೆದುಹಾಕಿದಾಗ ಮೀಸಲಾತಿ ಬೇಕು ಎಂದು ಮೂರು ತಿಂಗಳು ಹೋರಾಟ ಮಾಡಿದ ಪರಿಣಾಮವಾಗಿ ಮಧು­ಮೇಹ ಬಂತು. ರಾಜ್ಯದಲ್ಲಿರುವ ಒಂದೂ­ವರೆ ಸಾವಿರ ಮಠಗಳ ಪೈಕಿ ಒಂದು ಮಠವಾದರೂ ದಲಿತರ  ಏಳಿಗೆ­ಗಾಗಿ ಶ್ರಮಿಸಬೇಕು ಎಂದು ಬಯಸಿದ್ದು ತಪ್ಪಲ್ಲ ಎಂದರು.

ಮುಖ್ಯಮಮಂತ್ರಿ ಸಿದ್ದರಾಮಯ್ಯ ಅಂತಃಕರಣ ಇರುವ ವ್ಯಕ್ತಿ. ಅವರ ಮನ ಒಲಿಸುವುದು ಸುಲಭ. ಮುಂದಿನ ಅನುದಾನವನ್ನಾದರೂ ಬೇರೆ ಉದ್ದೇ­ಶಕ್ಕೆ ಬಳಸದಂತೆ ಮನವೊಲಿಕೆ ಮಾಡ­ಬೇಕು ಎಂದು ದಲಿತ ಸಂಘಗಳಿಗೆ ಒತ್ತಾಯಿಸಿದರು.

ದಲಿತರ ಪ್ರಶ್ನೆ ಕೇಳುವ ಸೌಜನ್ಯವಿಲ್ಲ: ವೀರಯ್ಯ
‘ವಿಧಾನ ಮಂಡಲಗಳ ಅಧಿವೇ­ಶ­ನ­ದಲ್ಲಿ ದಲಿತರ ಪ್ರಶ್ನೆಗಳನ್ನು ಕೇಳಲು ಅವಕಾಶ ಸಿಗುವಾಗ ಊಟದ ವಿರಾಮಕ್ಕೆ ಐದು ನಿಮಿಷ ಇರುತ್ತದೆ. ಅಥವಾ ಶೇಕಡಾ 80­ರಷ್ಟು ಸದಸ್ಯರು, ಅಧಿಕಾರಿಗಳು ಖಾಲಿ­ಯಾದ ಮೇಲೆ ಅವಕಾಶ ನೀಡು­ತ್ತಾರೆ. ಅಷ್ಟರ ಮಟ್ಟಿಗೆ ನಮ್ಮ ನೋವು­ಗಳನ್ನು ಕೇಳುವ ಮನಸ್ಥಿತಿ­ಯನ್ನೂ ಆಡಳಿತದ ಮಂದಿ ಕಳೆದು­ಕೊಂಡಿದ್ದಾರೆ’ ಎಂದು ವಿಧಾನ ಪರಿ­ಷತ್‌ ಸದಸ್ಯ ಡಿ.ಎಸ್‌. ವೀರಯ್ಯ ಬೇಸರ ವ್ಯಕ್ತಪಡಿಸಿದರು.

ದಲಿತರ ಪರ ಇರುವ ಕಾಯ್ದೆ­ಗಳು ಜಾರಿಯಾಗಲು ಕಾನೂನು ಮತ್ತು ಆರ್ಥಿಕ ಇಲಾಖೆಗಳ ಅಧಿ­ಕಾರಿಗಳು ಅಡ್ಡಿಯಾಗಿದ್ದಾರೆ. ಆ ಸ್ಥಾನಗಳಿಗೆ ದಲಿತರು ಏರುವವರೆಗೆ ಅನ್ಯಾಯ ನಿಲ್ಲದು. ಜನಾಂಗದ ಪರ ಹೋರಾಡಲು ಅಧಿಕಾರ, ಪಕ್ಷ ತ್ಯಜಿಸಲೂ ಸಿದ್ಧ ಎಂದರು.

Write A Comment