ಕರ್ನಾಟಕ

ಶಿಕ್ಷಕಿ ಬಾನಂಗಳದ ನರ್ತಕಿ…!: ವಿಂಗ್‌ ವಾಕರ್ಸ್’ ಮನದಾಳ

Pinterest LinkedIn Tumblr

pvec23febrwing walker girls1

ಬೆಂಗಳೂರು: ‘ಒಮ್ಮೆ ಪೋಷಕರೊಂದಿಗೆ ಲಂಡನ್‌ನಲ್ಲಿ ವೈಮಾನಿಕ ಪ್ರದರ್ಶನ ವೀಕ್ಷಿಸಲು ತೆರಳಿದ್ದೆ. ಆದರೆ, ಸಂಘಟಕರು ಪ್ರದರ್ಶನ ಸ್ಥಳಕ್ಕೆ ಹೋಗಲು ಅವಕಾಶ ನೀಡಲಿಲ್ಲ. ಅಪ್ಪ ಅಮ್ಮ ತುಂಬಾ ಬೇಸರ ಮಾಡಿಕೊಂಡರು.  ಆಗ ನನಗೆ 14 ವರ್ಷ ವಯಸ್ಸು. ನಾನು ಕೂಡ ವಿಮಾನವೇರಿ ನರ್ತಿಸಬೇಕು ಎಂಬ ಛಲ ಮೂಡಿದ್ದೇ ಆಗ’

–ಈ ರೀತಿ ಹೇಳಿ ಹೆಮ್ಮೆಯಿಂದ ನಗು ಬೀರಿದ್ದು ಫ್ರೆಯಾ ಪ್ಯಾಟರ್ಸನ್‌. ಅವರೀಗ ಬ್ರಿಟ­ನ್‌ನ ಬ್ರೆಟ್ಲಿಂಗ್‌ ‘ವಿಂಗ್‌ ವಾಕರ್ಸ್’ ಏರೋಬಾಟಿಕ್ಸ್‌ ತಂಡದ ಸದಸ್ಯೆ. ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನದ ವೇಳೆ ‘ಪ್ರಜಾವಾಣಿ’ ಜೊತೆ ಮಾತಿಗೆ ಸಿಕ್ಕಿದರು.

‘ಪೋಷಕರಿಗೆ ಬೇಸರವಾಗಿದ್ದು ನನಗೆ ತುಂಬಾ ನೋವುಂಟು ಮಾಡಿತು. ಅದಾಗಿ ಕೇವಲ ಮೂರು ವರ್ಷಗಳಲ್ಲಿ ಅದೇ ತಂಡದಲ್ಲಿ ಸ್ಥಾನ ಪಡೆದೆ. ಆಗಸದಲ್ಲಿ ನಾನು ನರ್ತಿಸುವುದನ್ನು ಪೋಷಕರು ವಿವಿಐಪಿ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದರು’ ಎಂದ ಅವರ ಕಂಗಳಲ್ಲಿ ಏನನ್ನೋ ಸಾಧಿಸಿದ ಹೊಳಪು.

ಪ್ಯಾಟರ್ಸನ್‌ ಈಗಾಗಲೇ 15 ದೇಶಗಳಲ್ಲಿ 300ಕ್ಕೂ ಹೆಚ್ಚು ಪ್ರದರ್ಶನ ನೀಡಿ­ದ್ದಾರೆ. ‘ಮೊದಲ ಬಾರಿ ಪ್ರದರ್ಶನ ನೀಡಲು ವಿಮಾನವೇರಿದಾಗ ಪೋಷಕರು ತುಂಬಾ ಭಯಪಟ್ಟರು. ಆದರೆ, ಅಂದಿನ ಮುಜುಗರ ಘಟನೆಯನ್ನು ನೆನಪಿಸಿ ಅವ­ರನ್ನು ಸಮಾಧಾನಪಡಿಸಿದ್ದೆ. ಈ ಜವಾಬ್ದಾರಿ ನನ್ನ ಕನಸು ನನಸು ಮಾಡಿದ್ದು ಮಾತ್ರ­ವಲ್ಲ, ಕುಟುಂಬವನ್ನು ಸಾಕಲು ನೆರವಾಗುತ್ತಿದೆ’ ಎಂದು ಖುಷಿಯಿಂದ ಹೇಳಿ­ಕೊಂಡರು.

ನಿಕಿಟಾ ಎಂಬ ಶಿಕ್ಷಕಿ: ‘ವಿಂಗ್‌ ವಾಕರ್ಸ್‌’ ತಂಡದ ಮತ್ತೊಬ್ಬ ಸದಸ್ಯೆ ನಿಕಿಟಾ ಸಲ್ಮೋನ್‌ ಅವರು ಶಿಕ್ಷಕಿ. ಇವರು ಪಾಠ ಮಾಡಲೂ ಸೈ, ಆಗಸದಲ್ಲಿ ನರ್ತಿಸಲೂ ಸೈ. ಪ್ರಾಥ­ಮಿಕ ಶಾಲೆಯ ಶಿಕ್ಷಕಿಯಾಗಿರುವ ಇವರು ಬಿಡುವಿನ ಸಮಯದಲ್ಲಿ ಮಾತ್ರ ವೈಮಾನಿಕ ಪ್ರದರ್ಶನಗಳಲ್ಲಿ ಪಾಲ್ಗೊಳ್ಳುತ್ತಾರೆ.

‘ಅಪ್ಪ ಹಾಗೂ ಅಣ್ಣ ಸೇರಿದಂತೆ ನಮ್ಮ ಕುಟುಂಬದ ಬಹುತೇಕ ಸದಸ್ಯರು ಪೈಲಟ್‌­ಗಳಾ­ಗಿ­ದ್ದಾರೆ. ಅವರ ಪ್ರಭಾವದಿಂದ ನಾನು ಆಗಸದಲ್ಲಿ ನರ್ತಿಸಲು ಮುಂದಾದೆ ಅಷ್ಟೆ. ನನ್ನ ಆಸಕ್ತಿ ಇರುವುದು ಪಾಠ ಮಾಡುವುದರತ್ತ. ಶಿಕ್ಷಕಿ ಎಂದು ಕರೆಸಿಕೊಳ್ಳಲು ಹೆಚ್ಚು ಇಷ್ಟಪಡುತ್ತೇನೆ’ ಎಂದು ನಿಕಿಟಾ ಹೇಳುತ್ತಾರೆ.

‘ಸೋಮವಾರ ತವರೂರಿಗೆ ತೆರಳುತ್ತಿದ್ದು, ಮಾರನೇ ದಿನ ಶಾಲೆಗೆ ಹೋಗುತ್ತೇನೆ. ಮಕ್ಕಳಿಂದ ದೂರ ಉಳಿದು 15 ದಿನಗಳಾದವು’ ಎಂದು ಬೇಸರದಿಂದಲೇ ನುಡಿದರು.

ಆಗಸದಲ್ಲೇ ಪ್ರೇಮಾಂಕುರ: ತಂಡದ ಮತ್ತೊಬ್ಬ ಸದಸ್ಯೆ ಡೇನಿಯೆಲಾ ಹ್ಯೂಸ್‌ ಇದುವರೆಗೆ 800 ಪ್ರದರ್ಶನ ನೀಡಿದ್ದಾರೆ. ಆಗಸದಲ್ಲಿ ನರ್ತಿಸುವಾಗಲೇ ಪ್ರೇಮದ ಬಲೆಗೆ ಬಿದ್ದಿರುವ ಇವರ ‘ಬಾಯ್‌ಫ್ರೆಂಡ್‌’ ಎಮಿಲಿಯನೊ ಡೆಲ್‌ ಕೂಡ ಪೈಲಟ್‌.

‘ಎಮಿಲಿಯಾನೊ ಸ್ವಿಟ್ಜರ್ಲೆಂಡ್‌­ನವರು. ಒಮ್ಮೆ ಆ ದೇಶದಲ್ಲಿ ಪ್ರದರ್ಶನಕ್ಕೆಂದು ಹೋದಾಗ ಅಭ್ಯಾಸ ನಡೆಸುತ್ತಿದ್ದೆ. ಈ ಸಂದರ್ಭದಲ್ಲಿ ಎಮಿಲಿಯಾನೊ ಅವರ ಪರಿಚಯವಾಯಿತು’ ಎಂದು ತಮ್ಮ ಪ್ರೀತಿಯ ಆರಂಭವನ್ನು ಬಿಚ್ಚಿಟ್ಟರು.

‘ಚೀನಾ, ಆಸ್ಟ್ರೇಲಿಯಾ, ಹಾಲೆಂಡ್‌, ಸಿಟ್ಜರ್ಲೆಂಡ್‌, ದಕ್ಷಿಣ ಆಫ್ರಿಕಾದಲ್ಲಿ ಪ್ರದ­ರ್ಶನ ನೀಡಿದ್ದೇನೆ. ಇದೇ ಮೊದಲ ಬಾರಿ ಭಾರತಕ್ಕೆ ಬಂದಿದ್ದೇನೆ. ಐದೂ ದಿನ ಖುಷಿ­ಯಿಂದ ಪ್ರದರ್ಶನದಲ್ಲಿ ಪಾಲ್ಗೊಂಡೆ. ಇಲ್ಲಿನ ಜನರ ಆಸಕ್ತಿ ಕಂಡು ತುಂಬಾ ಖುಷಿ­ಯಾಯಿತು. ಹೆಚ್ಚು ಜನರ ಸೇರಿದರೆ ನಮಗೂ ಸ್ಫೂರ್ತಿ ಲಭಿಸುತ್ತದೆ’ ಎಂದರು.

ಪ್ರದರ್ಶನ ನೀಡುವಾಗ ಯಾವತ್ತಾದರೂ ಭಯವಾಗಿದೆಯೇ ಎಂಬ ಪ್ರಶ್ನೆಗೆ, ‘ಖಂಡಿತ ಇಲ್ಲ. ಪ್ರದರ್ಶನಕ್ಕೂ ಮುನ್ನ ಹಲವು ಬಾರಿ ಪ್ರದರ್ಶನ ನೀಡಿರುತ್ತೇವೆ. ಇಲ್ಲಿ ಕೂಡ ಒಂದು ವಾರ ಮುಂಚಿತವಾಗಿಯೇ ಬಂದು ಅಭ್ಯಾಸ ನಡೆಸಿದ್ದೇವೆ. ಆದರೆ, ಮಳೆ ಬರುವಾಗ ಪ್ರದರ್ಶನ ನೀಡುವುದು ಸವಾಲಿನ ಕೆಲಸ’ ಎಂದರು.

Write A Comment