ಕರ್ನಾಟಕ

ಎಚ್1ಎನ್‌1 ಸೋಂಕು ದೃಢಪಡಿಸಲಷ್ಟೆ ‘ಗಂಟಲಿನ ದ್ರವ’ ಪರೀಕ್ಷೆ: ಚಿಕಿತ್ಸೆಗೆ ‘ಸ್ವ್ಯಾಬ್‌ ಟೆಸ್ಟ್‌’ ಅನಗತ್ಯ

Pinterest LinkedIn Tumblr

h1

ಹುಬ್ಬಳ್ಳಿ: ರಾಜ್ಯದಾದ್ಯಂತ ಎಚ್‌1ಎನ್‌1 ಸೋಂಕು ಹರಡದಂತೆ ತಡೆಗಟ್ಟಲು ಆರೋಗ್ಯ ಇಲಾಖೆ ವಿವಿಧ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿ­ದ್ದರೂ ಸಾವಿನ ಸಂಖ್ಯೆ ಏರುತ್ತಿರುವುದು ಆತಂಕ ಮೂಡಿಸಿದೆ. ಈ ಮಧ್ಯೆ, ಸ್ವ್ಯಾಬ್‌ (ಗಂಟಲಿನ ದ್ರವ) ಟೆಸ್ಟ್‌ ವರದಿ ವಿಳಂಬವಾಗುತ್ತಿರುವುದರಿಂದ ಎಚ್‌1­ಎನ್‌1 ಸೋಂಕಿತರು ಸೂಕ್ತ ಚಿಕಿತ್ಸೆ ಲಭ್ಯವಾಗದೆ ಸಾವಿಗೀಡಾ­ಗುತ್ತಿದ್ದಾರೆ ಎಂಬ ಭೀತಿ ವ್ಯಕ್ತವಾಗುತ್ತಿದೆ.

ಉಡುಪಿಯಲ್ಲಿರುವ ‘ಮಣಿಪಾಲ್ ಸೆಂಟರ್‌ ಫಾರ್‌ ವೈರಸ್‌ ರಿಸರ್ಚ್‌’ನ ಮುಖ್ಯಸ್ಥ (ಸೋಂಕು ರೋಗಗಳ ಪ್ರಯೋಗಾಲಯದ ಸಮನ್ವಯ ಅಧಿಕಾರಿ) ಡಾ.ಜಿ. ಅರುಣ್‌ಕುಮಾರ್‌ ಅವರ ಪ್ರಕಾರ ಸ್ವ್ಯಾಬ್‌ ಟೆಸ್ಟ್‌ಗೂ, ಚಿಕಿತ್ಸೆಗೂ ಯಾವುದೇ ಸಂಬಂಧ ಇಲ್ಲ.
‘ತೀವ್ರ ಸ್ವರೂಪದ ಜ್ವರ, ಶೀತ, ಕೆಮ್ಮು, ಗಂಟಲು ಬೇನೆ, ಉಸಿರಾಟ ಸಮಸ್ಯೆ ಮತ್ತಿತರ ಎಚ್1ಎನ್‌1 ಸೋಂಕಿನ ಶಂಕಿತ ಲಕ್ಷಣ ಇರುವವವರಿಗೆ 48 ಗಂಟೆಯೊಳಗೆ ಟಮಿಫ್ಲೂ ಔಷಧಿ ನೀಡಬೇಕು. ಸೋಂಕು ದೃಢಪಟ್ಟ ಬಳಿಕವೂ ಚಿಕಿತ್ಸೆಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಸೋಂಕಿತರ ಸಂಖ್ಯೆ ತಿಳಿಯಲು ಮಾತ್ರ ಈ ಟೆಸ್ಟ್‌ ಮಾಡಲಾಗುತ್ತದೆ’ ಎನ್ನುತ್ತಾರೆ ಅವರು.

‘ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ­ರುವ ಎರಡು ವೈರಸ್‌ ಸಂಶೋಧನಾ ಕೇಂದ್ರಗಳಲ್ಲಿ ನಮ್ಮದೂ ಒಂದು. ಇನ್ನೊಂದು ನಿಮ್ಹಾನ್ಸ್‌ನಲ್ಲಿದೆ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಿಂದ ಮತ್ತು ಕೇರಳದಿಂದ ಸ್ವ್ಯಾಬ್‌ ಟೆಸ್ಟ್‌ಗೆ ಮಾದರಿ­ಗಳು ನಮ್ಮಲ್ಲಿಗೆ ಬರುತ್ತಿವೆ. ಸದ್ಯ ದಿನವೊಂದಕ್ಕೆ 60ರಷ್ಟು ಪರೀಕ್ಷೆಗಳು ನಮ್ಮಲ್ಲಿ ನಡೆಯುತ್ತಿದ್ದು, 24ರಿಂದ 48 ಗಂಟೆಯೊಳಗೆ ವರದಿ ಸಿದ್ಧವಾಗುತ್ತದೆ. ಆದರೆ ಸೋಂಕು ದೃಢಪಟ್ಟ ಮಾಹಿತಿ­ಯನ್ನು ಸರ್ಕಾರ ತಡವಾಗಿ ಬಹಿರಂಗಪಡಿಸುತ್ತದೆ’ ಎಂದರು.

‘ಎಚ್‌1ಎನ್‌1 ದೃಢಪಟ್ಟರೆ ಮಾತ್ರ ಟಮಿಪ್ಲೂ ಔಷಧಿ ನೀಡಬೇಕು ಅಥವಾ ನೀಡಲಾಗುತ್ತದೆ ಎನ್ನುವ ತಪ್ಪು ಅಭಿಪ್ರಾಯ ಸಾರ್ವಜನಿಕರಲ್ಲಿದೆ. ಅದು ಸರಿಯಲ್ಲ. ಸ್ವ್ಯಾಬ್‌ ಟೆಸ್ಟ್‌ನ ವರದಿ ಬಂದ ಬಳಿಕ ಔಷಧ ನೀಡಿದರೆ ಸಾಕು ಎನ್ನುವುದು ಸರಿಯಲ್ಲ. ಸೋಂಕು ದೃಢ­ಪಟ್ಟು ಸಾವಿಗೀಡಾದವರು ನ್ಯೂಮೋ­ನಿಯಾ, ಹೃದಯ ಸಂಬಂಧಿ ಕಾಯಿಲೆ­ಗಳಿಂದ ಬಳಲುತ್ತಿದ್ದರು’ ಎನ್ನುತ್ತಾರೆ ಅವರು.

‘ಹಾಗೆಂದು ಸ್ವ್ಯಾಬ್‌ ಟೆಸ್ಟ್‌ನಲ್ಲಿ ಸೋಂಕು ದೃಢಪಟ್ಟವರಿಗೆ ಮಾತ್ರ ಎಚ್‌1ಎನ್‌1 ಇದೆ ಎಂದು ನಿರ್ಧರಿ­ಸುವುದು ಕಷ್ಟ. ಅನೇಕ ಸಂದರ್ಭಗಳಲ್ಲಿ ಟೆಸ್ಟ್‌ಗಾಗಿ ಗಂಟಲಿನ ದ್ರವ ತೆಗೆಯುವ ರೀತಿಯಲ್ಲಿ ವ್ಯತ್ಯಾಸವಾದರೂ ಪರೀಕ್ಷೆ ನೆಗೆಟಿವ್‌ ಆಗುವ ಸಾಧ್ಯತೆ ಇದೆ. ಹೀಗಾಗಿ ಗಂಭೀರ ಸೋಂಕು ಲಕ್ಷಣ ಕಾಣಿಸಿಕೊಂಡವರಿಗೆ ತಕ್ಷಣ ಟಮಿಫ್ಲೂ ನೀಡುವುದೊಂದೇ ಚಿಕಿತ್ಸೆ’ ಎನ್ನುತ್ತಾರೆ ಅವರು.

h2

‘ಶೀತ, ಮೈಕೈ ನೋವು ನೆಗಡಿ ಮುಂತಾದ ಸಾಂಕ್ರಾಮಿಕ ರೋಗ ಲಕ್ಷಣ ಕಂಡುಬಂದವರನ್ನು ಎ, ಬಿ, ಸಿ ಎಂದು ವಿಂಗಡಿಸಲಾಗುತ್ತದೆ. ‘ಎ’ ವರ್ಗದ­ವರಿಗೆ  ಸಾಮಾನ್ಯ ಲಕ್ಷಣದವರು ಎಂದು ಔಷಧಿ ನೀಡಲಾಗುತ್ತದೆ. ರೋಗ­ನಿರೋಧಕ ಶಕ್ತಿ ಕಳೆದುಕೊಂಡವರನ್ನು ‘ಬಿ’ ಮತ್ತು ‘ಸಿ’ ವರ್ಗದವರು ಎಂದು ವಿಂಗಡಿಸಿ ಶಂಕಿತ ಎಚ್‌1ಎನ್‌1 ಸೋಂಕಿತರೆಂದು ಪರಿಗಣಿಸಿ ತಕ್ಷಣವೇ ಟಮಿಫ್ಲೂ ಔಷಧಿ ನೀಡಲಾಗುತ್ತದೆ. ಗಂಭೀರ ಲಕ್ಷಣಗಳಿದ್ದವರಿಗೆ (ಸಿ ವರ್ಗದವರು) ಎಚ್‌1ಎನ್‌1 ಸೋಂಕು ಪತ್ತೆಹಚ್ಚಲು ಸ್ವ್ಯಾಬ್‌ ಟೆಸ್ಟ್‌ ನಡೆಸಲಾ­ಗುತ್ತದೆ. ಈ ಪರೀಕ್ಷೆಯಿಂದ ಸೋಂಕು ದೃಢಪಡಿಸಲು ಮತ್ತು ಆ ರೋಗಿ ಇರುವ ಪ್ರದೇಶದಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಲು ಅನುಕೂಲವಾ­ಗುತ್ತದೆಯೇ ಹೊರತು ಟೆಸ್ಟ್‌ಗೂ ಚಿಕಿತ್ಸೆಗೂ ಸಂಬಂಧ ಇಲ್ಲ’ ಎನ್ನುತ್ತಾರೆ ರಾಜ್ಯ ಸರ್ವೇಕ್ಷಣಾಧಿಕಾರಿ ಡಾ. ಬಿ.ಸಿ.ಪ್ರಕಾಶಕುಮಾರ್‌. ಬೆಂಗಳೂರಿನಲ್ಲಿರುವ ಮಣಿಪಾಲ, ನಾರಾಯಣ ಆಸ್ಪತ್ರೆ ಮತ್ತು ಏರ್‌ಫೋರ್ಸ್‌ನ ಕಮಾಂಡ್‌ ಆಸ್ಪತ್ರೆಗಳಲ್ಲೂ ಸ್ವ್ಯಾಬ್‌ ಟೆಸ್ಟ್‌ ನಡೆಯುತ್ತಿದೆ.

Write A Comment