ಬೆಂಗಳೂರು: ಮಹಿಳಾ ಸಬಲೀಕರಣ ಮತ್ತು ಸ್ತನ ಕ್ಯಾನ್ಸರ್‌ನ ಬಗ್ಗೆ ಜಾಗೃತಿ ಮೂಡಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹಾಗೂ ಯುನೈಟೆಡ್ ಸಿಸ್ಟರ್ಸ್ ಪ್ರತಿಷ್ಠಾನದ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ‘ಪಿಂಕಥಾನ್–2015’ ಮ್ಯಾರಥಾನ್ ಆಯೋಜಿಸಲಾಗಿತ್ತು.
ಕಂಠೀರವ ಕ್ರೀಡಾಂಗಣದಿಂದ ಆರಂಭವಾದ ಮ್ಯಾರಥಾನ್‌ನಲ್ಲಿ ಸುಮಾರು 10 ಸಾವಿರ ಮಹಿಳೆಯರು ಪಾಲ್ಗೊಂಡಿದ್ದರು. 3, 5, 10 ಹಾಗೂ 21 ಕಿ.ಮೀ ವಿಭಾಗದಲ್ಲಿ ನಡೆದ ಮ್ಯಾರಥಾನ್‌ಗೆ ಖ್ಯಾತ ರೂಪದರ್ಶಿ ಮಿಲಿಂದ್ ಸೋಮನ್ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ಆರೋಗ್ಯವಂತ ಕುಟುಂಬ, ರಾಷ್ಟ್ರ ಹಾಗೂ ಜಗತ್ತು ಮಹಿಳೆಯರಿಂದ ನಿರ್ಮಾಣವಾಗುತ್ತದೆ. ಅಂತಹ ಮಹಿಳೆಯರು ದೈನಂದಿನ ಕೆಲಸಗಳ ನಡುವೆ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ. ಅವರು ಸ್ವಲ್ಪ ಸಮಯವನ್ನು ತಮಗಾಗಿ ಮೀಸಲಿಡುವುದರ ಜತೆಗೆ ಕುಟುಂಬದ ಆರೋಗ್ಯವನ್ನು ಕಾಪಾಡಬೇಕು’ ಎಂದರು. ಮಹಿಳೆಯರು ಜೀವನ ಶೈಲಿಯನ್ನು ಬದಲಿಸಿಕೊಳ್ಳುವ ಮೂಲಕ ಕಾಯಿಲೆಗಳನ್ನು ದೂರ ಇಡಬೇಕು. ಪ್ರತಿನಿತ್ಯ ವಾಯುವಿಹಾರ ಮಾಡಬೇಕು ಎಂದು ಸಲಹೆ ನೀಡಿದರು.
ಕ್ಯಾನ್ಸರ್ ಕಾಯಿಲೆಯಿಂದ ಗುಣಮುಖರಾದವರು, ಕಿವುಡ ಹಾಗೂ ಮೂಕ ಬಾಲಕಿಯರು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು.
ಎಸ್‌ಬಿಐ ಕಾರ್ಪೊರೇಟ್ ಕಮ್ಯುನಿಕೇಷನ್ ವಿಭಾಗದ ಪ್ರಧಾನ ವ್ಯವಸ್ಥಾಪಕ ವಿಮಲ್ ಪಾಂಡೆ, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಬಿ.ದಯಾನಂದ, ಪಿಂಕಥಾನ್ ಸಹಸ್ಥಾಪಕಿ ರೀಮಾ ಸಾಂಘ್ವಿ, ಸ್ತನ ಕ್ಯಾನ್ಸರ್ಗೆ ಚಿಕಿತ್ಸೆ ಪಡೆದು ಗುಣಮುಖರಾದ ವಕೀಲೆ ಗಾಯಿತ್ರಿ ಬಾಲು ಇತರರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.