ಕರ್ನಾಟಕ

ಯುದ್ಧವೆಂದರೆ ನಮಗೆ ಹಬ್ಬ, ಖುಷಿ: ಅಮೆರಿಕದ ವಾಯುಪಡೆ ಪೈಲಟ್‌ಗಳ ಮನದಾಳ…

Pinterest LinkedIn Tumblr

yudda

ಬೆಂಗಳೂರು: ‘ಯುದ್ಧವೆಂದರೆ ನನಗಿಷ್ಟ. ಅದು ನಮ್ಮ ಪಾಲಿಗೆ ಹಬ್ಬ. ಏಕೆಂದರೆ ನಮ್ಮ ಸಾಮರ್ಥ್ಯ ಮೆರೆಯಲು ಇದೊಂದು ಅತ್ಯುತ್ತಮ ಅವಕಾಶ. ದೇಶದ ಜನರ ಪಾಲಿಗಂತೂ ಇದು ಹೆಮ್ಮೆಯ ವಿಷಯ’

–ಹೀಗೆಂದು ಹೇಳಿ ಸಹ ಪೈಲಟ್‌ ಹೆಗಲ ಮೇಲೆ ಕೈಇಟ್ಟಿದ್ದು ಕ್ಯಾಪ್ಟನ್‌ ಜೇಸನ್‌ ಲೋಲರ್‌. ಯಲಹಂಕ ವಾಯು­ನೆಲೆಯಲ್ಲಿ ನಡೆಯುತ್ತಿರುವ ‘ಏರೋ ಇಂಡಿಯಾ’ ಪ್ರದರ್ಶನದ ವೇಳೆ ‘ಪ್ರಜಾವಾಣಿ’ ಜೊತೆ ಮಾತಿಗಿಳಿದ ಅವರ ಧ್ವನಿಯಲ್ಲಿ ಏನನ್ನೋ ಸಾಧಿಸಿದ ಖುಷಿ ಇತ್ತು. ಸದಾ ಯುದ್ಧದಲ್ಲಿ ತೊಡಗಿರ­ಬೇಕೆಂಬ ಹಂಬಲವಿತ್ತು.

ಅಂದಹಾಗೆ, ಜೇಸನ್‌ ಅವರು ಅಮೆರಿ­ಕದ ವಾಯುಪಡೆಯ ಯುದ್ಧ ವಿಮಾನ ‘ಎಫ್‌–15ಇ’ ಪೈಲಟ್‌. ‘ಎಫ್‌–15 ಸಿ’ ಯುದ್ಧ ವಿಮಾನ ಚಲಾಯಿಸಿದ ಅನುಭ­ವವೂ ಇದೆ. ಅವರು ಇರಾಕ್‌ನಲ್ಲಿ ಸದ್ದಾಂ ಹುಸೇನ್‌ ಹಾಗೂ ಆಫ್ಘಾನಿಸ್ತಾನ­ದಲ್ಲಿ ಬಿನ್‌ ಲಾಡೆನ್‌ ವಿರುದ್ಧದ ಕಾರ್ಯಾ­­ಚರಣೆಯಲ್ಲಿ ಪಾಲ್ಗೊಂಡಿ­ದ್ದ­ವರು. ‘ಸುಮಾರು 19 ವರ್ಷಗಳಿಂದ ಪೈಲಟ್‌ ಆಗಿ ಈ ವಿಮಾನದಲ್ಲಿ ಕಾರ್ಯ­ನಿರ್ವಹಿಸುತ್ತಿದ್ದೇನೆ. ಮನೆಯಲ್ಲಿರುವು­ದ­ಕ್ಕಿಂತ ಹೆಚ್ಚು ಕಾಲವನ್ನು ವಿಮಾನದಲ್ಲಿ ಕಳೆದಿದ್ದೇನೆ. ಈ ಯುದ್ಧ ವಿಮಾನ ಆಗಸ­ದಲ್ಲಿನ ರಾಜ. ನನ್ನ ಪಾಲಿನ ಗೆಳೆಯ. ಕ್ಷಿಪಣಿ ಪ್ರಯೋಗದಲ್ಲಿ ಎತ್ತಿದ ಕೈ’ ಎಂದು ಅವರು ತಿಳಿಸಿದರು.

‘ಕಾರ್ಯಾಚರಣೆ ಸಮಯದಲ್ಲಿ ಎರಡು ವರ್ಷ ಇರಾಕ್‌ನಲ್ಲಿ ಹಾಗೂ 180 ದಿನ ಆಪ್ಘಾನಿಸ್ತಾನದಲ್ಲಿ ಇರಬೇಕಾ­ಯಿತು. ಎರಡೂ ಕಾರ್ಯಾಚರಣೆಗಳಲ್ಲಿ ಯಶಸ್ಸು ಲಭಿಸಿದ್ದು ನನ್ನ ಪಾಲಿನ ಸ್ಮರಣೀಯ ಕ್ಷಣ’ ಎಂದು ಹೆಮ್ಮೆಯಿಂದ ನುಡಿದರು.

ಯುದ್ಧವನ್ನು ದೇಶದ ಜನರು ಇಷ್ಟ­ಪಡುತ್ತಾರೆಯೇ ಎಂಬ ಪ್ರಶ್ನೆಗೆ ಒಮ್ಮೆ ನಕ್ಕು ಮಾತು ಮುಂದುವರಿಸಿದ ಅವರು, ‘ಇಷ್ಟಪಡದಿರಲು ಕಾರಣವೇ ಇಲ್ಲ. ಯುದ್ಧ ಮುಗಿಸಿ ಸ್ವದೇಶಕ್ಕೆ ಮರಳುವಾಗ ಸಿಗುವ ಪ್ರತಿಕ್ರಿಯೆ ಎಲ್ಲವನ್ನು ಹೇಳುತ್ತದೆ. ಜನರು ದಾರಿಯುದ್ದಕ್ಕೂ ನಿಂತು ಚಪ್ಪಾಳೆ ತಟ್ಟಿ ಸ್ವಾಗತಿಸುತ್ತಾರೆ’ ಎಂದರು.

‘ಎಫ್‌–15ಇ’ ವಿಮಾನವು ಅಮೆರಿಕದ ಪೆಸಿಫಿಕ್‌ ವಾಯುಪಡೆಯ ಜಪಾನ್‌ (ಕಡೆನಾ) ವಾಯುನೆಲೆಯಲ್ಲಿ ಬಿಡಾರ ಹೂಡಿರುತ್ತದೆ. ದಾಳಿ ಹಾಗೂ ರಕ್ಷಣೆ ಎರಡೂ ಉದ್ದೇಶಗಳಿಗೆ ಬಳಕೆಯಾಗುತ್ತದೆ.

ದಂಪತಿ ಪೈಲಟ್‌ಗಳ ಸಾಧನೆ: ಮಿಲಿಟರಿ ಸರಕು ಸಾಗಿಸುವ ‘ಸಿ–17 ಗ್ಲೋಬ್‌ ಮಾಸ್ಟರ್‌–3’ ವಿಮಾನದ ಪೈಲಟ್‌ ಕ್ಯಾಪ್ಟನ್‌ ರುಶ್‌ ಟೇಲರ್‌ ಕೂಡ ಆಫ್ಘಾನಿಸ್ತಾನದಲ್ಲಿ ಲಾಡೆನ್‌ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ­ವರು. ಅಂದಹಾಗೆ, ರುಶ್‌ ಅವರ ಗೆಳತಿ ಕೂಡ ‘ಸಿ–17’ ವಿಮಾನದ ಪೈಲಟ್‌.

ಕಾರ್ಯಾಚರಣೆ ಸಂದರ್ಭದಲ್ಲಿ ರುಶ್‌ ಅವರು ಸೇನಾ ಸಿಬ್ಬಂದಿಗೆ ಸಂಬಂಧಿಸಿದ ಸರಕು ಸಾಗಣೆ ಕಾರ್ಯದಲ್ಲಿ ತೊಡಗಿದ್ದರಂತೆ. ‘ದಾಳಿಗೆ ಅಗತ್ಯ ಇರುವ ಯುದ್ಧೋಪಕರಣಗಳನ್ನು ಸಾಗಿಸಲು ಸುಮಾರು 50–60 ಬಾರಿ ಆಪ್ಘಾನಿಸ್ತಾನಕ್ಕೆ ಭೇಟಿ ನೀಡಬೇಕಾ­ಯಿತು’ ಎಂದು ನೆನಪಿಸಿಕೊಂಡರು.

Write A Comment