ಕರ್ನಾಟಕ

‘ಸಾರಂಗ್‌’ ತಂಡದಲ್ಲಿ ದಂಪತಿಯ ಮೋಡಿ

Pinterest LinkedIn Tumblr

dampati

ಬೆಂಗಳೂರು: ಯಲಹಂಕ ವಾಯುನೆಲೆ­ಯಲ್ಲಿ ಅದ್ಭುತ ಚಮತ್ಕಾರದ ಮೂಲಕ ಸಾವಿರಾರು ಜನರಲ್ಲಿ ರೋಮಾಂಚನ ಮೂಡಿಸುತ್ತಿರುವ ‘ಸಾರಂಗ್‌’ ಹೆಲಿಕಾಪ್ಟರ್‌ ಯಶಸ್ಸಿನ ಹಿಂದೆ ದಂಪತಿಯ ಮೋಡಿ ಕೆಲಸ ಮಾಡುತ್ತಿದೆ.

ಈ ದಂಪತಿ ಹೆಸರು ದೀಪಿಕಾ ಮಿಶ್ರಾ ಹಾಗೂ ಸೌರಭ್‌ ಕಾಕರ್‌. ಭಾರತ ವಾಯುಪಡೆಯ ವೈಮಾನಿಕ ಪ್ರದರ್ಶನ ತಂಡ ‘ಸಾರಂಗ್‌’ ಹೆಲಿಕಾಪ್ಟರ್‌ಗೆ ಸ್ಕ್ವಾಡ್ರನ್‌ ಲೀಡರ್‌ ದೀಪಿಕಾ ಅವರು ಪೈಲಟ್‌. ಪತಿ ಸೌರಭ್‌ ಅವರು ಹೆಲಿಕಾಪ್ಟರ್‌ನ ತಾಂತ್ರಿಕ ಅಧಿಕಾರಿ.

‘ಏರೋ ಇಂಡಿಯಾ’ದಲ್ಲಿ ಸಾರಂಗ್‌ ಏರೋಬಾಟಿಕ್ಸ್‌ ಹೆಲಿಕಾಪ್ಟರ್‌ಗಳು ಪ್ರತಿ ದಿನ ಎರಡು ಬಾರಿ ಪ್ರದರ್ಶನ ನೀಡುತ್ತಾ ಜನರ ಮನಸ್ಸು ಗೆದ್ದಿವೆ. ಇನ್ನೂ ಒಂದು ದಿನ ಆಗಸದಲ್ಲಿ ನರ್ತಿಸಿ ಮತ್ತಷ್ಟು ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಇಡಲು ಕಾಯುತ್ತಿವೆ.

ಸಾರಂಗ್‌ ತಂಡದಲ್ಲಿ ಪೈಲಟ್‌ ಆಗಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯನ್ನು ದೀಪಿಕಾ ಹೊಂದಿದ್ದಾರೆ. 2014ರ ಜುಲೈನಲ್ಲಿ ಅವರು ಸಾರಂಗ್‌ ತಂಡಕ್ಕೆ ಸೇರಿದ್ದರು. ಅದಕ್ಕೂ ಮೊದಲು ‘ಚೀತಾ’ ತಂಡದ­ಲ್ಲಿ­ದ್ದರು. ಅದರಲ್ಲಿ 1600 ಗಂಟೆ ಕಾಲ ಹಾರಾಟದ ಅನುಭವ ಪಡೆದಿದ್ದಾರೆ. ಅದಕ್ಕೂ ಮೊದಲಿ­ನಿಂದಲೇ ಪತಿ ಸೌರಭ್‌ ಸಾರಂಗ್‌  ತಂಡದಲ್ಲಿ ಕಾರ್ಯ­ನಿರ್ವಹಿಸುತ್ತಿದ್ದಾರೆ. ಅವರು ಏರೋನಾಟಿಕಲ್‌ ಎಂಜಿನಿಯರ್‌.

‘ಇದೊಂದು ವಿಶೇಷ ಅನುಭವ. ಎಲ್ಲ­ಕ್ಕಿಂತ ಮುಖ್ಯವಾಗಿ ಅದ್ಭುತ ಅವಕಾಶ. ಜೊತೆಗೆ ದೊಡ್ಡ ಜವಾಬ್ದಾರಿಯೂ ಇದೆ’ ಎನ್ನುತ್ತಾರೆ ದೀಪಿಕಾ.

ದೀಪಿಕಾ ಅವರು ಕೆಲವೇ ದಿನಗಳಲ್ಲಿ ಸಾರಂಗ್‌ ತಂಡದ ಪೂರ್ಣಪ್ರಮಾಣದ ಪೈಲಟ್‌ ಆಗಿ ಕಾರ್ಯನಿರ್ವ­ಹಿಸಲಿ­ದ್ದಾರೆ. ಸದ್ಯ ಅವರು ‘ಸೇಫ್ಟಿ ಆಫೀಸರ್‌’ ಆಗಿ ಕೆಲಸ ಮಾಡುತ್ತಿದ್ದಾರೆ.

ಮತ್ತೊಬ್ಬ ಮಹಿಳೆ: ದೀಪಿಕಾ ಬಳಿಕ ಸಾರಂಗ್‌ ತಂಡ ಸೇರಿದ ಮತ್ತೊಬ್ಬ ಮಹಿಳೆ ಎಂದರೆ ಸಂದೀಪ್‌ ಸಿಂಗ್‌. ಅವರು ತಾಂತ್ರಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ವಾಯುಪಡೆಯಲ್ಲಿ  ಕಾರ್ಯನಿರ್ವ­ಹಿಸ­ಬೇಕು ಎಂಬುದು ನನ್ನ ಕನಸಾಗಿತ್ತು. ಸಾರಂಗ್‌ ಮೂಲಕ ಆ ಕನಸು ನನಸಾ­ಗಿದೆ. ಸಾರಂಗ್‌ ತಂಡಕ್ಕೆ ವಿಶ್ವದಲ್ಲೇ ಪ್ರಮುಖ ಸ್ಥಾನವಿದೆ. ಏಕೆಂದರೆ ಬ್ರಿಟನ್‌ನ ಬ್ಲ್ಯೂ ಈಗಲ್ಸ್‌ ಹೊರತುಪಡಿಸಿದರೆ ವಿಶ್ವದಲ್ಲಿ ಹೆಲಿಕಾಪ್ಟರ್‌ ಮೂಲಕ ಪ್ರದರ್ಶನ ನೀಡುವ ಏಕೈಕ ತಂಡವಿದು’ ಎಂದು ಫ್ಲೈಟ್‌ ಲೆಫ್ಟಿನೆಂಟ್‌ ಸಂದೀಪ್‌ ಹೆಮ್ಮೆಯಿಂದ ಹೇಳುತ್ತಾರೆ.

ಸಾರಂಗ್‌ ತಂಡದ ವ್ಯವಸ್ಥಾಪಕಿ ಭಾವನಾ ಮೆಹ್ರಾ. ಈ ತಂಡದವರು ಆಗಸದಲ್ಲಿ ಚಿತ್ತಾರ ಮೂಡಿಸುತ್ತಾ ಜನರ ಚಿತ್ತ ಸೆಳೆಯುವಾಗ ಮೆಹ್ರಾ ವೀಕ್ಷಕ ವಿವರಣೆಯಲ್ಲಿ ತೊಡಗಿರುತ್ತಾರೆ.

Write A Comment