ಕರ್ನಾಟಕ

‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನ ವೀಕ್ಷಿಸಿ ತಂದೆ­ಯೊಂದಿಗೆ ಮನೆಗೆ ಮರಳು­ತ್ತಿದ್ದ ಒಂದೇ ಕುಟುಂಬದ ಮೂರು ಮಕ್ಕಳ ಸಾವು: ರಸ್ತೆ ಬದಿಯ ಬಾವಿಗೆ ಬಿದ್ದ ಬೈಕ್‌

Pinterest LinkedIn Tumblr

makk

ಬೆಂಗಳೂರು: ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನ ವೀಕ್ಷಿಸಿ ತಂದೆ­ಯೊಂದಿಗೆ ಮನೆಗೆ ಮರಳು­ತ್ತಿದ್ದ ವೇಳೆ ಬೈಕ್‌, ರಸ್ತೆ ಬದಿಯ ಬಾವಿಗೆ ಬಿದ್ದು ಒಂದೇ ಕುಟುಂಬದ ಮೂರು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ಯಲಹಂಕ ಉಪನಗರ ಸಮೀಪದ ಕೆಂಚೇನಹಳ್ಳಿ­ಯಲ್ಲಿ ಶನಿವಾರ ನಡೆದಿದೆ.

ಯಲಹಂಕ ಉಪನಗರ ಬಳಿಯ ಅನಂತಪುರ ಗ್ರಾಮದ ಸಿಂಗಾರ ವೇಲು (13), ಕವಿತಾ (11) ಮತ್ತು ಗೋಕುಲ್‌ (8) ಮೃತಪಟ್ಟವರು. ಅವರ ತಂದೆ ವೆಂಕಟರಾಜು ಅವರು ಪ್ರಾಣಾಪಾಯದಿಂದ ಪಾರಾ­ಗಿದ್ದಾರೆ.

ವೆಂಕಟರಾಜು, ಬೇಗನೆ ಮನೆ ತಲುಪಲು ಮುಖ್ಯರಸ್ತೆಗೆ ಬದಲಾಗಿ ತೋಟವೊಂದರ ಕಾಲುದಾರಿಯಲ್ಲಿ ಬೈಕ್‌ ಓಡಿಸಿಕೊಂಡು ಹೋಗುತ್ತಿ­ದ್ದರು. ಈ ವೇಳೆ ಚಕ್ರ ಕಲ್ಲಿನ ಮೇಲೆ ಹತ್ತಿದ್ದರಿಂದ ಬೈಕ್‌ ಅಡ್ಡಾದಿಡ್ಡಿ ಚಲಿಸಿ, ರಸ್ತೆ ಪಕ್ಕದ ತೆರೆದ ಬಾವಿಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೈಕ್‌ನ ಜತೆಯೇ ಸುಮಾರು 30 ಅಡಿ ಆಳದ ಬಾವಿಗೆ ಬಿದ್ದ ಸಿಂಗಾರ ವೇಲು, ಕವಿತಾ ಮತ್ತು ಗೋಕುಲ್‌ ನೀರಿನಲ್ಲಿ ಮುಳುಗಿ

ಮೃತಪಟ್ಟಿದ್ದಾರೆ. ವೆಂಕಟರಾಜು, ಈಜಿ ಬಾವಿಯಿಂದ ಮೇಲೆ ಬಂದಿದ್ದಾರೆ. ಅವರಿಗೆ ತರಚಿದ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯ ನೆರವಿನಿಂದ ರಾತ್ರಿ ವೇಳೆಗೆ ಮೂರೂ ಶವಗಳನ್ನು ಬಾವಿ­ಯಿಂದ ಮೇಲಕ್ಕೆ ಎತ್ತಿ ಆಸ್ಪತ್ರೆಗೆ ಸಾಗಿಸಿದರು.

ಬಾವಿ ನೆಲಮಟ್ಟಕ್ಕಿದ್ದು, ಅದರ ಸುತ್ತ ತಡೆಗೋಡೆ ನಿರ್ಮಿಸಿಲ್ಲ. ವೆಂಕಟ­ರಾಜು, ಇದೇ ಮೊದಲ ಬಾರಿಗೆ ಆ ರಸ್ತೆಯಲ್ಲಿ ಹೋಗಿದ್ದರು. ಹೀಗಾಗಿ ಅವರಿಗೆ ರಸ್ತೆಯ ಪರಿಚಯ­ವಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಮಿಳುನಾಡು ಮೂಲದ ವೆಂಕಟ­ರಾಜು, ದೊಡ್ಡಬಳ್ಳಾಪುರ ರಸ್ತೆ  ಸಮೀಪದ ಅನಂತಪುರ ಕ್ರಾಸ್‌ನಲ್ಲಿ  ಗುಜರಿ ಅಂಗಡಿ ಇಟ್ಟುಕೊಂಡಿದ್ದಾರೆ. ಸಿಂಗಾರ ವೇಲು, ಕವಿತಾ ಮತ್ತು ಗೋಕುಲ್‌ ಕ್ರಮವಾಗಿ ಸ್ಥಳೀಯ ಖಾಸಗಿ ಶಾಲೆಯಲ್ಲಿ ಏಳು, ಐದು ಹಾಗೂ ಎರಡನೇ ತರಗತಿ ಓದುತ್ತಿದ್ದರು.

ಆಕಸ್ಮಿಕ ಘಟನೆ
ಇದೊಂದು ಆಕಸ್ಮಿಕ ಘಟನೆ. ಪತಿ ಮಕ್ಕಳನ್ನು ತುಂಬಾ ಪ್ರೀತಿಸು­ತ್ತಿದ್ದರು ಎಂದು ವೆಂಕಟರಾಜು ಅವರ ಪತ್ನಿ ಹೊಂಗೇಶ್ವರಿ ಅವರು ಹೇಳಿಕೆ ಕೊಟ್ಟಿದ್ದಾರೆ. ಘಟನೆ ಸಂಬಂಧ ಯಲಹಂಕ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
–ವಿಕಾಸ್‌ಕುಮಾರ್‌ ವಿಕಾಸ್‌,   ಈಶಾನ್ಯ ವಿಭಾಗದ ಡಿಸಿಪಿ

Write A Comment