ರಾಷ್ಟ್ರೀಯ

ವಿಶ್ವ ಮೆಚ್ಚಿದ ಸಾಹಸ: ಸಾರಿಸ್ಕಾಗೆ ಹುಲಿ ಮರು ಪಯಣದ ಕಥನ

Pinterest LinkedIn Tumblr

huli

ಕಳೆದ ನಾಲ್ಕು ವರ್ಷಗಳಲ್ಲಿ ಹುಲಿಗಳ ಸಂಖ್ಯೆ ದೇಶದಲ್ಲಿ ಶೇ 30ರಷ್ಟು ಹೆಚ್ಚಾಗಿದೆ. ಜನವರಿ 20ರಂದು ಪ್ರಕಟಗೊಂಡ ಹುಲಿ ಸಮೀಕ್ಷೆಯ ಪ್ರಕಾರ ಪ್ರಸ್ತುತ ದೇಶದಲ್ಲಿ 2,226 ಹುಲಿಗಳಿವೆ.

ಪ್ರಕೃತಿ ಆಹಾರ ಸರಪಳಿಯಲ್ಲಿ ಅತ್ಯಂತ ಮೇಲೆ ಇರುವ ಹುಲಿಗಳು ಉಳಿಯುವುದು ಹಾಗೂ ಅವುಗಳ ಸಂಖ್ಯೆ ಹೆಚ್ಚುವುದು ಎಂದರೆ ಪರೋಕ್ಷವಾಗಿ ಕಾಡು ಉಳಿಯುವುದು, ವಿಸ್ತರಿಸುವುದು, ಬಲಿಪ್ರಾಣಿ (ಜಿಂಕೆ ಇತ್ಯಾದಿ) ಸಂಖ್ಯೆ ವೃದ್ಧಿಯಾವುದು ಎಂದೂ ಅರ್ಥ.

ಕಾಡು, ಹುಲಿ ಸಂರಕ್ಷಣೆ ವಿಚಾರಗಳು ಪ್ರಸ್ತಾಪವಾದಾಗಲೆಲ್ಲಾ ಪರಿಸರ ಪ್ರಿಯರು ರಾಜಸ್ತಾನದ ಸಾರಿಸ್ಕಾದ ಬಗ್ಗೆ ಮಾತನಾಡುತ್ತಾರೆ. ಹಲವು ಕಾರಣಗಳಿಂದ ಹುಲಿ ಸಂತತಿ ನಾಮಾವಶೇಷವಾಗಿದ್ದ ಸಾರಿಸ್ಕಾ ಕಾಡಿನಲ್ಲಿ ಇಂದು ಹುಲಿ ಹೆಜ್ಜೆಗಳು ಮತ್ತೆ ಮೂಡಿವೆ.

ಸಾರಿಸ್ಕಾದಲ್ಲಿನ ಹುಲಿ ಮರು ಸೇರ್ಪಡೆ ಯೋಜನೆಯ ವೇಗವರ್ಧಕವಾಗಿ ದುಡಿದವರು ಪಿ.ಎಸ್. ಸೋಮಶೇಖರ್. ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕಿನ ಪುರಿಗಾಲಿ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸಸ್ಯಶಾಸ್ತ್ರ ಸ್ನಾತಕೋತ್ತರ ಪದವಿ ಪಡೆದ ಈ ಐಎಫ್ಎಸ್ (1983, ರಾಜಸ್ತಾನ ಕೇಡರ್) ಅಧಿಕಾರಿ ಹುಲಿ ಸ್ಥಳಾಂತರದ ಸಾಹಸವನ್ನು ‘ಸಾಪ್ತಾಹಿಕ ಪುರವಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಅಂದಹಾಗೆ, ಸೋಮಶೇಖರ್ ಅವರ ಸಾಧನೆಗೆ ಪ್ರಸಕ್ತ ಸಾಲಿನ ‘ಆರ್‌ಬಿಎಸ್ ಅರ್ಥ್‌ ಹೀರೋ’ ಪ್ರಶಸ್ತಿ ಸಂದಿದೆ. ಪ್ರಸ್ತುತ ಅವರು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಇನ್‌ಸ್ಪೆಕ್ಟರ್ ಜನರಲ್ ಆಗಿ, ದಕ್ಷಿಣ ಭಾರತದ ನಾಲ್ಕೂ ರಾಜ್ಯಗಳ ಹೊಣೆ ಹೊತ್ತಿದ್ದಾರೆ.

ರಾಜಸ್ತಾನದಲ್ಲಿ ವ್ಯಾಪಿಸಿರುವ ಅರಾವಳಿ ಪರ್ವತ ಶ್ರೇಣಿಯಲ್ಲಿ ಇರುವ ಸಾರಿಸ್ಕಾ ಅರಣ್ಯ ಪ್ರದೇಶ ನೈಸರ್ಗಿಕವಾಗಿ ಹುಲಿಗಳು ಕಾಣಿಸುವ ಪಶ್ಚಿಮದ ತುದಿ. ಇಲ್ಲಿಂದ ಮುಂದೆ ಯಾವ ಪಶ್ಚಿಮ ದೇಶಗಳ ಕಾಡುಗಳಲ್ಲೂ ನೈಸರ್ಗಿಕ ಹುಲಿ ಸಂತತಿ ಇಲ್ಲ.

ಹುಲಿ ಸಂರಕ್ಷಣಾ ತಾಣವಾಗಿ ಸಾರಿಸ್ಕಾವನ್ನು ಭಾರತ ಸರ್ಕಾರ ಘೋಷಿಸಿದ್ದು 1974ರಲ್ಲಿ. ಅದಕ್ಕೆ ಮೊದಲು ಅದು ಬೇಟೆಗಾರರ ಸ್ವರ್ಗವಾಗಿತ್ತು. ಅಲ್ವಾರ್ ಮಹಾರಾಜರು 1902ರಲ್ಲಿ ಇಲ್ಲಿ ಬೇಟೆ ಅರಮನೆಯನ್ನೇ ಕಟ್ಟಿಸಿದ್ದರು. ಹಲವು ಬೇಟೆ ಶಿಬಿರಗಳೂ ಅಲ್ಲಿದ್ದವು.

ಬ್ರಿಟಿಷರು ಮತ್ತು ಇತರ ರಾಜ್ಯಗಳೊಂದಿಗೆ ಮೈತ್ರಿ ಕಾಪಾಡಿಕೊಳ್ಳುವ ರಾಜತಾಂತ್ರಿಕ ಕ್ರಮವಾಗಿ ಅಲ್ವಾರ್ ಮಹಾರಾಜರು ಬೇಟೆಯನ್ನು ಬಳಸುತ್ತಿದ್ದರು.ಸಾರಿಸ್ಕಾದಲ್ಲಿ ಹುಲಿಯ ಬಹಿರಂಗ ಬೇಟೆ ಕೊನೆಗೊಂಡಿದ್ದು 1965ರಲ್ಲಿ. ಅಂದಿನಿಂದಲೂ ಹುಲಿ ಸಂರಕ್ಷಿತ ಅರಣ್ಯವಾಗಿ ಸಾರಿಸ್ಕಾ ವನ್ಯಲೋಕದ ಪ್ರಮುಖ ಆಕರ್ಷಣೆಯಾಗಿದೆ.

2004ರಲ್ಲಿ ಸಾರಿಸ್ಕಾದಲ್ಲಿದ್ದ ಮೂಲ ಹುಲಿ ಸಂತತಿಯ ಕೊನೆಯ ಹುಲಿಯ ಕಳ್ಳಬೇಟೆ ನಡೆಯಿತು. ಇದಾದ ನಂತರ ಸುಮಾರು 4 ವರ್ಷ ಸಾರಿಸ್ಕಾ ಕಾಡಿನಲ್ಲಿ ಹುಲಿಗಳು ಕಾಣಿಸಲೇ ಇಲ್ಲ. ಸಾರಿಸ್ಕಾದಲ್ಲಿ ಹುಲಿ ಕಾಣೆಯಾಗಲು ಅನೇಕ ಕಾರಣಗಳಿವೆ. ಅವುಗಳಲ್ಲಿ ಬೇಟೆಯೂ ಒಂದು.

ರಾಜರ ಕಾಲದಲ್ಲಿ ಸಾರಿಸ್ಕಾದಲ್ಲಿ ದನ ಮೇಯಿಸಲು ಅವಕಾಶ ಕೊಟ್ಟಿದ್ದರು. ದನಗಳ ಹಿಂದೆ ಬಂದ ಜನರು ನೆಲೆ ನಿಂತ ತಾಣಗಳು ಕ್ರಮೇಣ ‘ಗ್ವಾಡಾ’ (ಹಟ್ಟಿ) ಗಳಾಗಿ ಬೆಳೆದವು. ಈ ಗ್ವಾಡಾಗಳಲ್ಲಿ ಕಷ್ಟ ಸಹಿಷ್ಣುತೆಗೆ ಹೆಸರುವಾಸಿಯಾದ ಗುಜ್ಜರ್ ಸಮುದಾಯಕ್ಕೆ ಸೇರಿದವರು ನೆಲೆಸಿದ್ದಾರೆ.

ಜೀವನ ನಿರ್ವಹಣೆಗೆ ಹಾಲು ಮಾರುವ ಕಸುಬು ಅವರದು. ಇದರಿಂದಾಗಿ, ಸಾರಿಸ್ಕಾದಲ್ಲಿ ಕ್ರಮೇಣ ‘ಮನುಷ್ಯ ಸಾಕುವ, ಹುಲ್ಲು ಮೇಯುವ ಪ್ರಾಣಿಗಳ ಒತ್ತಡ’ ಹೆಚ್ಚಾಯಿತು. ಕಾಡಿನ ಮೇಲೆ ಇದು ಬೀರಬಹುದಾದ ದುಷ್ಪರಿಣಾಮದ ಅರಿವಾದರೂ ಸರ್ಕಾರಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ.

ಇದರಿಂದ ಕಾಡಿನಲ್ಲಿ ಸ್ವಚ್ಛಂದವಾಗಿ ಬದುಕುತ್ತಿದ್ದ ಪ್ರಾಣಿಗಳ ಆವಾಸಸ್ಥಾನ ಕಡಿಮೆಯಾಯಿತು.
ಸಾರಿಸ್ಕಾ ಒಂದು ರೀತಿಯಲ್ಲಿ ‘ಭೂ ದ್ವೀಪ’ ಇದ್ದಂತೆ. ಸಾರಿಸ್ಕಾದ ಹುಲಿಗಳಿಗೆ ಇತರ ಕಾಡಿನ ಸಂಪರ್ಕವೇ ಇಲ್ಲ.

ಹುಲಿ ಸಂಚಾರವೇ ಇಲ್ಲದ ಕಾರಣ ಸೋದರ ಸಂಬಂಧಿಗಳೊಂದಿಗೇ ಲೈಂಗಿಕ ಸಂಪರ್ಕ ಏರ್ಪಟ್ಟು, ಹಲವು ಪ್ರತಿಕೂಲ ಪರಿಣಾಮ ಕಂಡುಬಂದವು. 2004ರಿಂದ 2012ರ ನಡುವೆ ಸಾರಿಸ್ಕಾದಲ್ಲಿ ಹುಲಿ ಮರಿಗಳು ಆಟವಾಡಲೇ ಇಲ್ಲ. 2012ರಲ್ಲಿ ಗರ್ಭ ಧರಿಸಿದ್ದು ಸಾರಿಸ್ಕಾದಲ್ಲಿ ಮೂಲ ವಂಶದ ಹುಲಿಯಲ್ಲ ಎಂಬುದು ಗಮನಾರ್ಹ ಸಂಗತಿ.

1994ಲ್ಲಿ ಸಾರಿಸ್ಕಾ ಕಾಡಿಗೆ ಹೊಂದಿಕೊಂಡಿದ್ದ ಗುಡ್ಡಗಳಲ್ಲಿ ಗಣಿಗಾರಿಕೆ ಆರಂಭವಾಯಿತು. ‘ತರುಣ್ ಭಾರತ್’ ಸಂಸ್ಥೆಯ ರಾಜೇಂದ್ರ ಸಿಂಗ್ (ಇವರಿಗೆ ನಂತರ ಮ್ಯಾಗ್ಸಸೆ ಪ್ರಶಸ್ತಿಯೂ ಬಂತು) ಸುಪ್ರಿಂಕೋರ್ಟ್‌ನಿಂದ ಆದೇಶ ತಂದು ಗಣಿಗಾರಿಕೆ ನಿಲ್ಲಿಸಿದರು.

ಆದರೆ ಅಷ್ಟು ಹೊತ್ತಿಗೆ ಸಾರಿಸ್ಕಾ ಕಾಡಿಗೆ ತೀವ್ರ ಪ್ರಮಾಣದ ಧಕ್ಕೆಯಾಗಿತ್ತು. ಗಣಿಗಾರಿಕೆ ನಿಂತುಹೋದ ಕಾರಣ ಗಣಿ ಕಂಪೆನಿಗಳಿಗೆ ಕಾಡಿನ ಬಗ್ಗೆಯೇ ಸಿಟ್ಟು ಬಂದಿತ್ತು. ಸಾರಿಸ್ಕಾ ಹುಲಿ ನಾಪತ್ತೆ ಪ್ರಕರಣದಲ್ಲಿ ಈ ಕಂಪೆನಿಗಳ ಮೇಲೂ ಅನುಮಾನಗಳು ವ್ಯಕ್ತವಾಗಿದ್ದವು.

ಸುದ್ದಿಸ್ಫೋಟ
ಜೇ ಮಜುಂದಾರ್ ಎಂಬ ಪತ್ರಕರ್ತ ಮಾರ್ಚ್ 2004ರಲ್ಲಿ ಮೊದಲ ಬಾರಿಗೆ ಸಾರಿಸ್ಕಾದಲ್ಲಿ ಹುಲಿಗಳಿಲ್ಲ ಎಂಬ ಲೇಖನ ಬರೆದರು. ಅದು ರಾಷ್ಟ್ರೀಯ ಸುದ್ದಿಯಾಯಿತು.

ಸುದ್ದಿಯನ್ನು ಗಮನಿಸಿದ ತಕ್ಷಣ ರಾಜಸ್ತಾನ ಸರ್ಕಾರ ರಕ್ಷಣಾತ್ಮಕ ಧೋರಣೆಯ ಮೊರೆ ಹೋಯಿತು. ಅರಣ್ಯ ಇಲಾಖೆಗೆ ಶೋಧ ಕಾರ್ಯಾಚರಣೆ ನಡೆಸಲು ಸೂಚಿಸಿತು. ಸತತ ಮೂರು ತಿಂಗಳು ಹುಡುಕಿದರೂ ಹುಲಿ ಕಾಣಿಸಲಿಲ್ಲ.

ರಾಜ್ಯ ಸರ್ಕಾರ ‘ಸಾರಿಸ್ಕಾದಲ್ಲಿ ಹುಲಿಗಳಿಲ್ಲ’ ಎಂದು ಒಪ್ಪಿಕೊಂಡಿತು. ರಾಜಸ್ತಾನದ ಮುಖ್ಯ ವನ್ಯಜೀವಿ ಪ್ರತಿ ಪಾಲಕರು ಮತ್ತು ಇತರ 8 ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಿತು.

ಸುದ್ದಿ ಸ್ಫೋಟಕ್ಕೂ ಎರಡು ತಿಂಗಳು ಮೊದಲು ಹುಲಿ ಗಣತಿ ತಂಡದ ನೇತೃತ್ವ ವಹಿಸಿದ್ದ ಕ್ಷೇತ್ರೀಯ ನಿರ್ದೇಶಕರು ರಾಜ್ಯದ ಮುಖ್ಯ ವನಪಾಲಕರಿಗೆ ‘ಸಾರಿಸ್ಕಾದಲ್ಲಿ ಹುಲಿಗಳ ಸಂಖ್ಯೆ ಆತಂಕಕಾರಿಯಾಗಿ ಕಡಿಮೆಯಾಗುತ್ತಿದೆ. ಈ ಕುರಿತು ತಜ್ಞರಿಂದ ಪರಿಶೀಲನೆ ನಡೆಸಬೇಕು’ ಎಂದು ಪತ್ರ ಬರೆದಿದ್ದರು. ಆದರೆ ಆಗ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ.

ಪ್ರಧಾನಿ ಮಧ್ಯಪ್ರವೇಶ
ಹುಲಿ ನಾಪತ್ತೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ರಾಜಸ್ತಾನಕ್ಕೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದರು. ಅವರು ದೆಹಲಿಗೆ ಹಿಂದಿರುಗಿದ ನಂತರ ಪರಿಸರ ವಿಜ್ಞಾನಿ ಸುನೀತಾ ನಾರಾಯಣ್ ನೇತೃತ್ವದಲ್ಲಿ ಹುಲಿ ಕಾರ್ಯಪಡೆ ರಚನೆಯಾಯಿತು.

ಪರಿಸರ ತಜ್ಞ ವಾಲ್ಮೀಕಿ ಥಾಪರ್ ಮತ್ತು ಭಾರತ ವನ್ಯಜೀವಿ ಸಂಸ್ಥೆಯ ವಿಜ್ಞಾನಿಗಳು ಮತ್ತು ಹುಲಿ ಯೋಜನೆಯ ಹಿರಿಯ ಅಧಿಕಾರಿಗಳು ಕಾರ್ಯಪಡೆಯ ಮುಂಚೂಣಿಯಲ್ಲಿದ್ದರು.

ದೇಶದ ಅರಣ್ಯ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ಕಾಲಘಟ್ಟವದು. ಈ ಸಮಿತಿಯು ದೇಶದ ಎಲ್ಲ ಹುಲಿ ವಾಸ್ತವ್ಯದ ತಾಣಗಳಿಗೆ ಭೇಟಿ ನೀಡಿ ‘ಜಾಯ್ನಿಂಗ್ ಡಾಟ್ಸ್’ ಹೆಸರಿನ ಸಂಶೋಧನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು.

ಇತ್ತ ರಾಜಸ್ತಾನದಲ್ಲಿ ಮುಖ್ಯಮಂತ್ರಿ ವಸುಂಧರ ರಾಜೆ ಸಿಂಧ್ಯಾ ಹುಲಿ ನಾಪತ್ತೆ ಕುರಿತು ತನಿಖೆ ನಡೆಸಲು ಹಿರಿಯ ರಾಜಕಾರಣಿ ವಿ.ಪಿ. ಸಿಂಗ್ ನೇತೃತ್ವದಲ್ಲಿ ‘ಉನ್ನತಾಧಿಕಾರ ಸಮಿತಿ’ ರಚಿಸಿದರು.

ಈ ಸಮಿತಿಯು ವಿಧಾನಸಭೆಗೆ ಸಲ್ಲಿಸಿದ ವರದಿಯಲ್ಲಿ ರಾಜಸ್ತಾನದ ವನ್ಯಜೀವಿ ಸಂರಕ್ಷಣಾ ತಾಣಗಳ ನಿರ್ವಹಣೆ ಸಮಸ್ಯೆ, ಪ್ರಾಣಿ ಗಣತಿ ತಂತ್ರದಲ್ಲಿ ಇರುವ ಲೋಪಗಳ ಬಗ್ಗೆ ಪ್ರಸ್ತಾಪಿಸಿತು.

‘ಸಾರಿಸ್ಕಾಗೆ ಹುಲಿಗಳನ್ನು ಬಿಡಬೇಕು’ ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತು. ತನ್ಮೂಲಕ ವನ್ಯಜೀವಿ ವಿಜ್ಞಾನದಲ್ಲಿ ಜಗತ್ತಿನ ಅತಿ ದೊಡ್ಡ ಸಾಹಸಕ್ಕೆ ರಾಜಸ್ತಾನ ಅರಣ್ಯ ಇಲಾಖೆ ಹೆಗಲು ಕೊಡುವ ಸಾಹಸಕ್ಕೆ ಶ್ರೀಕಾರ ಹಾಕಿತು. ಅರಣ್ಯ ಇಲಾಖೆಗೆ ತಾನು ಕಳೆದುಕೊಂಡಿದ್ದ ಪ್ರತಿಷ್ಠೆಯನ್ನು ಮರುಗಳಿಸಲು ಅವಕಾಶ ನೀಡಿದ ವಾಕ್ಯ ಇದು.

ಹುಲಿ ಸ್ಥಳಾಂತರಿಸಲು ಮಾರ್ಗದರ್ಶನ ನೀಡುವಂತೆ ರಾಜಸ್ತಾನ ಸರ್ಕಾರ ಡೆಹ್ರಾಡೂನ್‌ನಲ್ಲಿರುವ ವೈಲ್ಡ್‌ ಲೈಫ್‌ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯನ್ನು ಕೋರಿತು. ಅಲ್ಲಿನ ಕ್ಷೇತ್ರೀಯ ನಿರ್ದೇಶಕರು, ರಾಜಸ್ತಾನ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಇತರ ತಜ್ಞರು ಜೊತೆಗೂಡಿ ‘ಹುಲಿಗಳ ಮರು ಸೇರ್ಪಡೆ ಹೇಗೆ?’ (ಹೌ ಟು ರಿ ಇಂಟ್ರಡ್ಯೂಸ್ ಟೈಗರ್?) ಎಂಬ ವರದಿ ಸಿದ್ಧಪಡಿಸಿದರು.

ಕೇಂದ್ರ ಸರ್ಕಾರದ ಷರತ್ತು
ವನ್ಯಜೀವಿ ಸಂಶೋಧನಾ ಸಂಸ್ಥೆಯು ತನ್ನ ವರದಿಯಲ್ಲಿ ‘ಮರು ಸೇರ್ಪಡೆ ಯೋಜನೆಯು ನಿಧಾನ ಚೇತರಿಕೆ ತಂತ್ರ ಅನುಸರಿಸಬೇಕು’ (ರಿಕವರಿ ಪ್ಲಾನ್ ಶುಡ್ ಬಿ ಬೇಸ್ಡ್ ಆನ್ ಸಾಫ್ಟ್ ರಿಕವರಿ ಮೆಕ್ಯಾನಿಸಮ್) ಎಂದು ಸ್ಪಷ್ಟವಾಗಿ ಬರೆದಿತ್ತು.

ಸ್ಥಳಾಂತರಗೊಳಿಸಲು ಗುರುತಿಸಿದ ಹುಲಿಯ ವರ್ತನೆ ಮತ್ತು ಆರೋಗ್ಯವನ್ನು ಬಹುಕಾಲ ಗಮನಿಸಬೇಕು. ನಂತರ ಅದನ್ನು ಬಿಡುವ ಸ್ಥಳದಂಥದ್ದೇ ವಾತಾವರಣವನ್ನು ನಿರ್ದಿಷ್ಟ ಜಾಗದಲ್ಲಿ ಮರು ಸೃಷ್ಟಿಸಿ, ಹುಲಿಯನ್ನು ‘ಕೃತಕ’ ಬಂಧನದಲ್ಲಿ ಇರಿಸಬೇಕು.

ಹುಲಿಯ ಆರೋಗ್ಯ ಮತ್ತು ವರ್ತನೆಯಲ್ಲಿ ಯಾವುದೇ ತೊಂದರೆಯಿಲ್ಲ ಎಂದು ತಜ್ಞರಿಗೆ ಮನವರಿಕೆಯಾದ ನಂತರವಷ್ಟೇ ಅದನ್ನು ಕಾಡಿಗೆ ಬಿಡುಗಡೆ ಮಾಡಬೇಕು ಎನ್ನುವುದು ‘ಹುಲಿ ಸೇರ್ಪಡೆ ವರದಿ’ಯಲ್ಲಿದ್ದ ಮುಖ್ಯ ಮಾರ್ಗಸೂಚಿ ಅಂಶಗಳಾಗಿದ್ದವು.

ಸಾರಿಸ್ಕಾದಂಥದ್ದೇ ವಾತಾವರಣ ಹೊಂದಿರುವ ಮತ್ತು ಸಾರಿಸ್ಕಾದಂತೆಯೇ ಅರಾವಳಿ ಪರ್ವತ ಶ್ರೇಣಿಯಲ್ಲಿರುವ ರಣಥಂಬೋರ್ ಕಾಡಿನಿಂದ ಹುಲಿಗಳನ್ನು ಆರಿಸಿ, ಸಾರಿಸ್ಕಾ ಕಾಡಿಗೆ ಬಿಡಲು ತಜ್ಞರು ಸೂಚಿಸಿದ್ದರು.

ವನ್ಯಜೀವಿ ಸಂರಕ್ಷಣ ಕಾಯ್ದೆಯ ಪ್ರಕಾರ ಷೆಡ್ಯೂಲ್-1ರ ಪ್ರಕಾರ, ಪ್ರಾಣಿಗಳ ಸ್ಥಳಾಂತರಕ್ಕೆ ಕೇಂದ್ರ ಸರ್ಕಾರದ ಅನುಮತಿ ಬೇಕು. ಅದರಂತೆ ರಾಜಸ್ತಾನ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತು. ಆದರೆ ಕೇಂದ್ರವು ‘ಸಾರಿಸ್ಕಾದ ಸ್ಥಿತಿ ಸುಧಾರಿಸುವವರೆಗೆ ಹುಲಿ ಸ್ಥಳಾಂತರಕ್ಕೆ ಅನುಮತಿ ನೀಡುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿತು.

ಸಾರಿಸ್ಕಾ ಹುಲಿ ಪರಿಯೋಜನ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ ನಂತರ ರಾಜಸ್ತಾನ ಅರಣ್ಯ ಇಲಾಖೆಯು ಮನವಿ ಸಲ್ಲಿಸಿದಾಗ; ನಾಲ್ಕು ಷರತ್ತುಗಳನ್ನು ಪೂರೈಸಿದ ನಂತರ ಅನುಮತಿ ನೀಡುವುದಾಗಿ ಸ್ಪಷ್ಟಪಡಿಸಿತು.

ಆ ಷರತ್ತುಗಳೆಂದರೆ:
1. ಸಾರಿಸ್ಕಾ ಕಾಡಿನಲ್ಲಿರುವ ಎಲ್ಲ ಗ್ವಾಡಾಗಳ ಸ್ಥಳಾಂತರ.
2. ಸಾರಿಸ್ಕಾದಲ್ಲಿ ಹುಲಿ ಕಣ್ಮರೆಯಾದಾಗ ಇದ್ದ ಅರಣ್ಯ ಇಲಾಖೆ ಸಿಬ್ಬಂದಿಯ ವರ್ಗಾವಣೆ.
3. ಕಾಡಿನಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ನಿಯಂತ್ರಣ, ಮಾರ್ಗ ಬದಲಾವಣೆ.
4. ಸಾರಿಸ್ಕಾ ಕಾಡಿನಲ್ಲಿರುವ ‘ಪಾಂಡವಪೋಲ್ ಹನುಮಾನ್ ಮಂದಿರ’ಕ್ಕೆ ಬರುವ ಭಕ್ತರ ನಿಯಂತ್ರಣ.

ಗ್ರಾಮೀಣಾಭಿವೃದ್ಧಿಯಿಂದ ಅರಣ್ಯ ಸಂರಕ್ಷಣೆಗೆ…
ರಾಜಸ್ತಾನ ಸರ್ಕಾರ 2005ರ ಜನವರಿಯಲ್ಲಿ ಸಾರಿಸ್ಕಾ ಹುಲಿ ಪರಿಯೋಜನೆಯ ಕ್ಷೇತ್ರ ನಿರ್ದೇಶಕನನ್ನಾಗಿ ನನ್ನನ್ನು ನೇಮಿಸಿತು. ಅಲ್ಲಿಯವರೆಗೆ ನಾನು ಗ್ರಾಮೀಣಾಭಿವೃದ್ಧಿ ಇಲಾಖೆಯ ಅರಣ್ಯ ಉತ್ಪನ್ನಗಳ ಮೂಲಕ ಜನರ ಜೀವನ ಮಟ್ಟ ಸುಧಾರಿಸುವ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ.

ನಾನು ಸಾರಿಸ್ಕಾಗೆ ಬಂದಾಗ ಅಲ್ಲಿ ಹುಲಿ ಇರಲಿಲ್ಲ. ಹುಲಿ ಬೇಟೆಗೆ ಅರಣ್ಯ ಇಲಾಖೆ ಸಿಬ್ಬಂದಿಯೇ ಕಾರಣ ಎಂದು ಜನ ನಮ್ಮನ್ನು ಅನುಮಾನಿಸುತ್ತಿದ್ದರು. ಮೇಲಿನವರ ತಾತ್ಸಾರ ಮತ್ತು ಸ್ಥಳೀಯರ ಅಸಹಕಾರದಿಂದ ಸಿಬ್ಬಂದಿ ಕೆಲಸದ ಹುಮ್ಮಸ್ಸು ಕಳೆದುಕೊಂಡಿದ್ದರು. ಇಂಥ ಪ್ರತಿಕೂಲ ಸ್ಥಿತಿಯಲ್ಲಿಯೇ ನನ್ನ ಕೆಲಸ ಆರಂಭವಾಯಿತು.

ಇದೇ ಸಂದರ್ಭ, ಇನ್ನೊಂದೆಡೆ ಪ್ರಧಾನಿ ನಿರ್ದೇಶನದಂತೆ ಸಿಬಿಐ ಅಧಿಕಾರಿಗಳು ಸಾರಿಸ್ಕಾದಲ್ಲಿ ಹುಲಿ ನಾಪತ್ತೆಯಾದ ಬಗ್ಗೆ ತನಿಖೆ ನಡೆಸುತ್ತಿದ್ದರು. ಸಿಬಿಐ ಅಧಿಕಾರಿಗಳಿಗೆ ನೆರವಾಗುವುದು ನನ್ನ ಹೊಣೆಗಾರಿಕೆಯ ಭಾಗವಾಗಿತ್ತು.

ಗುಟ್ಟು-ರಟ್ಟು
ರೈಲ್ವೆ ಪೊಲೀಸರು ರಾಜಸ್ತಾನ ಅರಣ್ಯ ಇಲಾಖೆ ಕಾರ್ಯಾಚರಣೆ ಪಡೆಯ ನೆರವಿನೊಂದಿಗೆ ಸೆಪ್ಟೆಂಬರ್ 29, 2005ರಲ್ಲಿ ಮೂವರು ಬೇಟೆಗಾರರನ್ನು ಬಂಧಿಸಿದರು. ಅವರಲ್ಲಿ ಕಲ್ಯಾ ಭಾವುರೇಯ ಎಂಬ ಕುಖ್ಯಾತ ಬೇಟೆಗಾರನೂ ಸೇರಿದ್ದ.

ಇದೇ ಸಂದರ್ಭ ಸನ್ಸಾರ್ ಚಂದ್ ಮತ್ತು ನಾರಾಯಣ್ ಎಂಬ ಕುಖ್ಯಾತ ಹುಲಿ ಚರ್ಮ ವ್ಯಾಪಾರಿಗಳನ್ನೂ ಸಿಬಿಐ ಬಂಧಿಸಿತು. ಇವರ ವಿಚಾರಣೆ ವೇಳೆ ಸಾರಿಸ್ಕಾದಲ್ಲಿ ಹುಲಿ ನಾಮಾವಶೇಷವಾಗಿದ್ದು ಹೇಗೆ? ಎಂಬ ರಹಸ್ಯ ಬಯಲಾಯಿತು. ಹುಲಿಯ ಚರ್ಮ–ಮೂಳೆಯ ವ್ಯಾಪಾರದ ಅಂತರರಾಷ್ಟ್ರೀಯ ಜಾಲ ಬೆಳಕಿಗೆ ಬಂತು.

ಗಣಿಗಾರಿಕೆ, ಮಾನವ ಹಸ್ತಕ್ಷೇಪ, ದನಕರುಗಳ ಅತಿಮೇಯುವಿಕೆ ಸಾರಿಸ್ಕಾದಲ್ಲಿ ಹುಲಿ ಸಂತತಿ ಕ್ಷೀಣಿಸಲು ಪ್ರಮುಖ ಕಾರಣಗಳಾಗಿದ್ದವು. ಬೇಟೆಗಾರರು ಅತಿ ಕಡಿಮೆ ಅವಧಿಯಲ್ಲಿ ಸುಮಾರು 13 ಹುಲಿಗಳನ್ನು ಕೊಂದಿದ್ದರು.ಸಾರಿಸ್ಕಾದ ಸರಾಸರಿ ಹುಲಿ ಸಂಖ್ಯೆ ಎಂದಿಗೂ 15ರಿಂದ 20 ಮೀರಿರಲಿಲ್ಲ.

ಆದರೆ ಹುಲಿ ಗಣತಿಯಲ್ಲಿ ಅನುಸರಿಸುತ್ತಿದ್ದ ದೋಷಪೂರಿತ ಪದ್ಧತಿಯಿಂದ ಹೆಚ್ಚಿನ ಸಂಖ್ಯೆ ಕಂಡು ಬರುತ್ತಿತ್ತು.ನಂತರದ ದಿನಗಳಲ್ಲಿ ಸಿಬಿಐ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊಟ್ಟ ವರದಿಗಳನ್ನು ಆಧರಿಸಿ ಹುಲಿ ಸಂರಕ್ಷಣೆಗೆ ಅನುಸರಿಸಬೇಕಿದ್ದ ಶಿಷ್ಟಾಚಾರಗಳಲ್ಲಿ ಕೆಲವು ಮಾರ್ಪಾಡು ಸೂಚಿಸಿತು.

ಸಿಬಿಐ ತನ್ನ ವರದಿಯಲ್ಲಿ ‘ಸಾರಿಸ್ಕಾ ಹುಲಿ ಬೇಟೆಯಲ್ಲಿ ರಾಜಸ್ತಾನ ಅರಣ್ಯ ಇಲಾಖೆ ಸಿಬ್ಬಂದಿಯ ನೇರ ಪಾತ್ರ ಇಲ್ಲ’ ಎಂದು ಸ್ಪಷ್ಟವಾಗಿ ಬರೆಯಿತು. ಇದು ನಮ್ಮ ಸಿಬ್ಬಂದಿಯಲ್ಲಿ ಹೊಸ ಹುಮ್ಮಸ್ಸು ಮೂಡಿಸಿತು.

ಭಯಾನಕ ಬೇಟೆ
ಸಾರಿಸ್ಕಾದಲ್ಲಿ ಹುಲಿ ಬೇಟೆಗೆ ಉರುಳು ಹಾಕುವ ತಂತ್ರ ಅನುಸರಿಸಲಾಗಿತ್ತು. ಹುಲಿಗಳನ್ನು ಬೇಟೆಗಾರರು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. 2–3 ಹುಲಿಗಳ ಸಂಚಾರಿ ಜಾಡು ಸೇರುವ ಸ್ಥಳದಲ್ಲಿ ತಂತಿಯ ಉರುಳು ಹಾಕಿ, ಸಮೀಪದ ಮರದ ಮೇಲೆ ಮರೆ (ಮಚಾನ್) ಕಟ್ಟಿಕೊಂಡು ಕಾಯುತ್ತಿದ್ದರು.

ಹುಲಿಯೊಂದು ಉರುಳಿಗೆ ಬಿದ್ದ ತಕ್ಷಣ ಕೆಳಗಿಳಿದು ಬಂದು, ಅದನ್ನು ಕೊಂದು, ಚರ್ಮ, ಮೂಳೆ ಮತ್ತು ಮಾಂಸದ ಉಪಯುಕ್ತ ಭಾಗ ಸಂಗ್ರಹಿಸಿ ಅದರ ಕಳೇಬರವನ್ನು ಯಾರ ಕಣ್ಣಿಗೂ ಬೀಳದಂತೆ ನಾಶಪಡಿಸುತ್ತಿದ್ದರು. ಕೇವಲ ಅರ್ಧಗಂಟೆಯಲ್ಲಿ ಈ ಎಲ್ಲವನ್ನೂ ಮುಗಿಸಿ ಬೇಟೆಗಾರರು ಕಾಡು ಬಿಟ್ಟು ಓಡುತ್ತಿದ್ದರು.

ಭಗಾನಿ ಹಳ್ಳಿಯ ಸ್ಥಳಾಂತರ
ಸಾರಿಸ್ಕಾದೊಳಗಿದ್ದ ಭಗಾನಿ ಎಂಬ ಹಳ್ಳಿಯನ್ನು 2008ರಲ್ಲಿ ಸ್ಥಳಾಂತರಿಸಿದೆ. ಇದಕ್ಕಾಗಿ ಸಾರಿಸ್ಕಾದಿಂದ 130 ಕಿ.ಮೀ ದೂರದಲ್ಲಿ 220 ಹೆಕ್ಟೇರ್ ಅರಣ್ಯ ಭೂಮಿಯನ್ನು ರಾಜಸ್ತಾನ ಸರ್ಕಾರ ಒದಗಿಸಿತು. ಪ್ರತಿ ಕುಟುಂಬಕ್ಕೆ ರೂ 1 ಲಕ್ಷ ಪರಿಹಾರ ಕೊಟ್ಟೆವು. 2009ರಲ್ಲಿ ಕಂಕ್ವಾಡಿ, ಉಮ್ಹ್ರಿ, ರೋಟ್್ಕ್ಯಲಾ ಸ್ಥಳಾಂತರವಾಯಿತು.

ತಾನು ವಿಧಿಸಿದ್ದ ಷರತ್ತುಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ, ಸಿಬಿಐ ವರದಿ ಮತ್ತು ರಾಜಸ್ತಾನ ಸರ್ಕಾರದ ಉತ್ಸುಕತೆ ಗಮನಿಸಿ ಕೇಂದ್ರ ಸರ್ಕಾರವು ಸಾರಿಸ್ಕಾಕ್ಕೆ ಹುಲಿ ಸ್ಥಳಾಂತರಿಸಲು 2008ರಲ್ಲಿ ಅನುಮತಿ ನೀಡಿತು.

ಹುಯಿಲು, ಗುಲ್ಲು, ಆತಂಕ
ಹುಲಿ ಸ್ಥಳಾಂತರಕ್ಕೆ ಕ್ಷಣಗಣನೆ ಆರಂಭವಾಗಿತ್ತು. ಆದರೆ, ಅರವಳಿಕೆ ಚುಚ್ಚುಮದ್ದು ಕೊಡುವುದು ಹುಲಿಯ ಜೀವಕ್ಕೆ ಆಪತ್ತು ತಾರದೇ? ಹುಲಿ ಎಷ್ಟು ಹೊತ್ತು ನಶೆಯಲ್ಲಿರುತ್ತದೆ? ನಶೆ ಇಳಿದ ನಂತರ ಅದರ ವರ್ತನೆ ಹೇಗಿರುತ್ತದೆ? ಅದು ಬೇರೆ ಕಾಡಿಗೆ ಹೊಂದಿಕೊಳ್ಳಬಲ್ಲುದೆ? ಎಂಬ ಪ್ರಶ್ನೆಗಳು ನಮ್ಮನ್ನು ಕಾಡುತ್ತಿದ್ದವು.

ಇದರ ಜೊತೆಗೆ ಅಂದಿನ ದಿನಗಳಲ್ಲಿ ಹುಲಿ ತಜ್ಞರು ಎನಿಸಿಕೊಂಡವರು ಹಲವು ಅನುಮಾನಗಳನ್ನು ಮುಂದಿಟ್ಟರು. ‘ವಿಶ್ವದಲ್ಲಿ ಎಲ್ಲಿಯೂ ಇಂಥ ಪ್ರಯೋಗ ನಡೆದಿಲ್ಲ. ಮೂಲ ನೆಲೆಯಿಂದ ಸ್ಥಳಾಂತರಗೊಂಡ ಹುಲಿ ಹೊಸ ತಾಣದಲ್ಲಿ ಬೇಟೆಯಾಡುವುದಿಲ್ಲ; ಉಪವಾಸ ಬಿದ್ದು ಸತ್ತು ಹೋಗುತ್ತದೆ.

ಬದಲಾದ ಪರಿಸರಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ರೋಗ ಬಂದು ಸಾಯುತ್ತದೆ. ರಾಜಸ್ತಾನ ಅರಣ್ಯ ಇಲಾಖೆ ಸಲ್ಲದ ಕೆಲಸಕ್ಕೆ ಕೈ ಹಾಕಿದೆ’ ಎಂದು ಹುಯಿಲಿಡುತ್ತಿದ್ದರು.

ನಾವು ತಜ್ಞರ ನೆರವಿನೊಂದಿಗೆ ಸ್ಥಳಾಂತರ ಕಾರ್ಯಾಚರಣೆಗೆ ಪ್ರತಿ ನಿಮಿಷದ ಕಾರ್ಯ ಯೋಜನೆ ಸಿದ್ಧಪಡಿಸಿದೆವು. ಮೂಲ ನೆಲೆಯಿಂದ (ರಣಥಂಬೋರ್) ಗಮ್ಯ ನೆಲೆಗೆ (ಸಾರಿಸ್ಕಾ) 150 ಕಿ.ಮೀ. ಅಂತರವಿತ್ತು.ಸ್ಥಳಾಂತರಗೊಳಿಸುವ ಸಂದರ್ಭ ಹುಲಿಯ ಮಾನಸಿಕ ಒತ್ತಡ, ದೈಹಿಕ ಶ್ರಮ ಕಡಿಮೆ ಮಾಡುವ ದೃಷ್ಟಿಯಿಂದ ಈ ಕಾರ್ಯಕ್ಕೆ ಹೆಲಿಕಾಫ್ಟರ್ ಬಳಸಲು ನಿರ್ಧರಿಸಿದೆವು.

ಮೊದಲು ಬಂದದ್ದು ಗಂಡು!
ಜೂನ್ 28, 2008ರಂದು ರಣಥಂಬೋರ್‌ನಲ್ಲಿ ಗಂಡು ಹುಲಿಗೆ ಅರವಳಿಕೆ ಮದ್ದು ಹೊಡೆದು ಪಂಜರಕ್ಕೆ ತಂದೆವು. ನಂತರ ಅದನ್ನು ಹೆಲಿಕಾಫ್ಟರ್ ಮೂಲಕ ಸಾರಿಸ್ಕಾಗೆ ಸ್ಥಳಾಂತರಿಸಲಾಯಿತು.

ಇದಕ್ಕಾಗಿಯೇ ಕಾಡಿನ ಅಂಚಿನಲ್ಲಿ ರೂಪಿಸಿದ್ದ ಬಯಲು ನಿಗಾವಣೆ ತಾಣಕ್ಕೆ (ಎನ್ಕ್ಲೋಷರ್) ಹುಲಿಯನ್ನು ಬಿಡುಗಡೆ ಮಾಡಿದೆವು.ಜುಲೈ 4, 2008ರಂದು ಸಾರಿಸ್ಕಾ ನಿಗಾವಣೆ ತಾಣಕ್ಕೆ ಹೆಣ್ಣು ಹುಲಿಯನ್ನು ತಂದೆವು.

ಎರಡೂ ಹುಲಿಗಳು ಸಾರಿಸ್ಕಾದಲ್ಲಿ ಪರಸ್ಪರ ಸಮೀಪದಲ್ಲಿಯೇ ಬಯಲು ನಿಗಾವಣೆ ತಾಣದಲ್ಲಿದ್ದರೂ ಒಂದು ಹುಲಿಗೆ ಮತ್ತೊಂದು ಹುಲಿ ಸನಿಹದಲ್ಲಿಯೇ ಇರುವುದು ಅರಿವಿಗೆ ಬಾರದಂತೆ ಎಚ್ಚರ ವಹಿಸಲಾಗಿತ್ತು. ಎರಡೂ ಹುಲಿಗಳಿಗೆ ಜೀವಂತ ಬಲಿ ಪ್ರಾಣಿಯನ್ನು ಆಹಾರವಾಗಿ ನೀಡಲಾಯಿತು.

ಆದರೆ ಹೆಣ್ಣು ಹುಲಿ ಒಂದು ವಾರ ಏನನ್ನೂ ತಿನ್ನಲಿಲ್ಲ. ಕೊನೆಗೆ ಎರಡೂ ಹುಲಿಗಳಿಗೆ ರೇಡಿಯೋ ಕಾಲರ್ ಹಾಕಿ ಕಾಡಿಗೆ ಬಿಟ್ಟೆವು. ಆಶ್ಚರ್ಯ ಎಂದರೆ ನಿಗಾವಣೆ ತಾಣದಿಂದ ಬಿಡುಗಡೆಯಾದ ಗಂಡು ಹುಲಿ ನೇರವಾಗಿ ರಣಥಂಬೋರ್ ಇದ್ದ ದಿಕ್ಕಿನತ್ತ ಮುಖಮಾಡಿ ಒಂದೇ ಸಮನೆ ನಡೆಯತೊಡಗಿತು.

ಇದು ತಾನಾಗಿಯೇ ಕಾಡು ಬಿಟ್ಟು ಹೋಗಬಹುದು ಎನಿಸಿತು. ಕಾಡಿಗೆ ಹೋದ ಹೆಣ್ಣು ಹುಲಿ ಮೂರು ತಿಂಗಳು ಯಾರ ಕಣ್ಣಿಗೂ ಬೀಳಲಿಲ್ಲ. ಆದರೆ ಅದು ಜೀವಂತವಾಗಿದೆ ಎಂಬುದು ಮಾತ್ರ ರೇಡಿಯೋ ಸಿಗ್ನಲ್‌ಗಳಿಂದ ಖಚಿತಗೊಂಡಿತ್ತು.

ರಣಥಂಬೋರ್‌ನತ್ತ ಮುಖಮಾಡಿದ್ದ ಹುಲಿಯ ಮಾರ್ಗವನ್ನು ನಮ್ಮ ಸಿಬ್ಬಂದಿ ಜಾಣತನದಿಂದ ಬದಲಿಸಿದರು. ರೇಡಿಯೋ ಕಾಲರ್ ಮೂಲಕ ಹೆಣ್ಣು ಹುಲಿಯ ಜಾಡು ಹಿಡಿದಿದ್ದ ತಜ್ಞರಿಗೆ ಕೊನೆಗೂ ಅದರ ದರ್ಶನ ಪ್ರಾಪ್ತಿಯಾಯಿತು.

ಎಲ್ಲವೂ ಒಂದು ಹಂತಕ್ಕೆ ಬಂದಿದೆ ಎನಿಸಿದ ಮೇಲೆ, ಫೆಬ್ರುವರಿ 25, 2009ರಲ್ಲಿ ಮತ್ತೊಂದು ಹೆಣ್ಣು ಹುಲಿಯನ್ನು ಇದೇ ಕ್ರಮದಲ್ಲಿ ಸಾರಿಸ್ಕಾ ಕಾಡಿಗೆ ಬಿಟ್ಟೆವು. ಜುಲೈ 20 ಮತ್ತು 28ರಂದು ಮತ್ತೆರೆಡು ಹೆಣ್ಣು ಹುಲಿಗಳು ಸಾರಿಸ್ಕಾಗೆ ಸೇರಿದವು. ಫೆಬ್ರುವರಿ 23, 2011ರಲ್ಲಿ ಭರತ್‌ಪುರ ವಲಯದಲ್ಲಿ ತರಲೆ ಮಾಡುತ್ತಿದ್ದ ತುಡುಗು ಹುಲಿ ಸಾರಿಸ್ಕಾ ಒಡಲು ಸೇರಿತು. 2012ರಲ್ಲಿ ಮತ್ತೆರೆಡು ಹೆಣ್ಣು ಹುಲಿಗಳು ಸೇರ್ಪಡೆಯಾದವು.

ಇಷ್ಟೆಲ್ಲಾ ಆದರೂ ನನಗೆ ಮಾತ್ರ ನೆಮ್ಮದಿ ಸಿಗಲಿಲ್ಲ. ಏಕೆಂದರೆ 2008ರಿಂದ 2012ರವರೆಗೆ ಸಾರಿಸ್ಕಾದಲ್ಲಿ ಹುಲಿಗಳು ಮರಿ ಹಾಕಿರಲಿಲ್ಲ. ‘ಸ್ಥಳಾಂತರಗೊಂಡ ಹುಲಿಗಳು ಸಂತಾನೋತ್ಪತ್ತಿಗೆ ಗಮನ ನೀಡುವುದಿಲ್ಲ’ ಎಂದು ಕೆಲವರು ಬೊಬ್ಬಿಡಲು ಆರಂಭಿಸಿದರು. ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಗಳು ಪ್ರಕಟವಾಗತೊಡಗಿದವು.

2012ರಲ್ಲಿ ಎಸ್-1 (ಟಿಪ್ಪು) ಹೆಸರಿನ ಗಂಡು ಹುಲಿಯು, ಎಸ್-2 ಎಂಬ ಹೆಣ್ಣು ಹುಲಿಯನ್ನು ಕೂಡಿದ ಬಗ್ಗೆ ಮಾಹಿತಿ ಲಭಿಸಿತು. ನಂತರ ಬೇರೆ ಹುಲಿಗಳೂ ನೈಸರ್ಗಿಕ ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ತೊಡಗಿಕೊಂಡವು. ಇಂದು ಸಾರಿಸ್ಕಾದಲ್ಲಿ 4 ಮರಿ ಹುಲಿಗಳು, 9 ದೊಡ್ಡ ಹುಲಿಗಳು ಇವೆ.

ಸಾರಿಸ್ಕಾ ಪ್ರಯೋಗ ಯಶಸ್ಸಿನಿಂದ ಪ್ರೇರಣೆ ಪಡೆದ ಮಧ್ಯ ಪ್ರದೇಶ ಸರ್ಕಾರವು ಅದೇ ಕಾರ್ಯತಂತ್ರ ಅನುಸರಿಸಿ ಪನ್ನಾ ಮತ್ತು ಸತ್ಕೋಶಿಯಾ ಅಭಯಾರಣ್ಯಗಳಿಗೆ ಹುಲಿಗಳನ್ನು ಸ್ಥಳಾಂತರ ಮಾಡಿತು.

ಮಧ್ಯಪ್ರದೇಶ ಅರಣ್ಯ ಇಲಾಖೆ ಅಧಿಕಾರಿಗಳು ಸಾರಿಸ್ಕಾಗೆ ಭೇಟಿ ನೀಡಿ ನಾವು ನಡೆಸಿದ ಪ್ರಯೋಗದ ಸಂಪೂರ್ಣ ಮಾಹಿತಿ ಪಡೆದರು. ಹುಲಿಗಳು ನಾಮಾವಶೇಷವಾಗಿದ್ದ ಪನ್ನಾದಲ್ಲಿ ಇಂದು 28 ಹುಲಿಗಳು ಪತ್ತೆಯಾಗಿವೆ. ಇದು ಹೆಮ್ಮೆಯ ಸಂಗತಿ.

ಖುಷಿ ಇದೆ, ತೃಪ್ತಿ ಇಲ್ಲ
ನಮ್ಮ ದೇಶದಲ್ಲಿ ಇಂದು ಸುಮಾರು 2226 ಹುಲಿಗಳು ಪತ್ತೆಯಾಗಿವೆ. ಈ ಎಲ್ಲ ಹುಲಿಗಳು ಅಭಯಾರಣ್ಯದಲ್ಲಿಯೇ ವಾಸಿಸುತ್ತಿಲ್ಲ ಎಂಬುದನ್ನು ಗಮನಿಸಬೇಕು. ಅಭಯಾರಣ್ಯಗಳ ಸುತ್ತಲ ಪ್ರದೇಶ ನಿರ್ವಹಣೆ, ಒಂದು ಅಭಯಾರಣ್ಯದಿಂದ ಮತ್ತೊಂದು ಅಭಯಾರಣ್ಯಕ್ಕೆ ಪ್ರಾಣಿಗಳು ಸಂಚರಿಸಲು ಸಾಧ್ಯವಾಗುವ ಕಾರಿಡಾರ್‌ಗಳನ್ನು ರೂಪಿಸುವುದು, ಕಾಡಿನ ಮೇಲೆ ಮನುಷ್ಯನ ಅವಲಂಬನೆ ಕಡಿಮೆ ಮಾಡುವುದು ನಮ್ಮೆದುರು ಇರುವ ಸದ್ಯದ ಸವಾಲುಗಳು.

ನನಗೆ ಚಿಕ್ಕಂದಿನಿಂದಲೂ ಕಾಡು ಅಂದ್ರೆ ಒಂಥರಾ ಪ್ರೀತಿ. ನಾನು ಕೇವಲ ಹೊಟ್ಟೆಪಾಡಿಗಾಗಿ ಕಾಡು ಕಾಯುವ ಕೆಲಸ ಮಾಡುತ್ತಿಲ್ಲ. ಐಎಫ್ಎಸ್ ಅಧಿಕಾರಿಯಾಗಬೇಕೆಂದು ನಿಶ್ಚಯ ಮಾಡಿದೆ; ಅದನ್ನೇ ಓದಿದೆ; ಹಾಗೆಯೇ ಆದೆ. ದೇವರು ದೊಡ್ಡವನು. ನಾನು ಇಷ್ಟಪಟ್ಟ ಕೆಲಸ ನನಗೆ ಸಿಕ್ಕಿದೆ.ನನ್ನ ವೃತ್ತಿ ಜೀವನದಲ್ಲಿ ಸಾರಿಸ್ಕಾ ಪ್ರಯೋಗ ಮರೆಯಲಾಗದ ಅನುಭವ. ಅಲ್ಲಿ ಮಾಡಿದ ಕೆಲಸ ನನಗೆ ಖುಷಿ ಕೊಟ್ಟಿದೆ; ತೃಪ್ತಿ ನೀಡಿಲ್ಲ.

Write A Comment