ಬೆಂಗಳೂರು: ಕೆರೆಗಳ ರಕ್ಷಣೆ ಬಗ್ಗೆ ಅರಿವು ಮೂಡಿಸಲು ‘ನಮ್ಮ ಬೆಂಗಳೂರು ಫೌಂಡೇಶನ್’ ಜೆ.ಪಿ.ನಗರ 7ನೇ ಹಂತದಲ್ಲಿರುವ ಪುಟ್ಟೇನಹಳ್ಳಿ ಕೆರೆ ಆವರಣದಲ್ಲಿ ಶನಿವಾರ ‘ಕೆರೆ ಹಬ್ಬ’ ಕಾರ್ಯಕ್ರಮವನ್ನು ಏರ್ಪಡಿಸಿತ್ತು.
ಉತ್ಸಾಹಿಗಳು ಕೆರೆಯ ಸುತ್ತ ವಿವಿಧ ಚಿತ್ತಾರ ಬಿಡಿಸುವ ಮೂಲಕ ಕೆರೆ ಹಬ್ಬಕ್ಕೆ ಮೆರುಗು ನೀಡಿದರು. ಮಕ್ಕಳು ಕೆರೆ ಆವರಣದಲ್ಲಿ ಗಾಳಿಪಟ ಹಾರಿಸುವ ಮೂಲಕ ಖುಷಿಪಟ್ಟರು. ಅಲ್ಲದೇ, ಕೆರೆಗಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಫೌಂಡೇಶನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಧರ್ ಪಬ್ಬಿಶೆಟ್ಟಿ ಮಾತನಾಡಿ, ‘ಸಾರ್ವಜನಿಕರು ಎಚ್ಚೆತ್ತುಕೊಂಡರೆ ಮಾತ್ರ ಕೆರೆಗಳನ್ನು ಉಳಿಸಬಹುದಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಕೆರೆ ಹಬ್ಬ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಫೌಂಡೇಶನ್ ವತಿಯಿಂದ ೨೦೧೯ರ ಅಂತ್ಯದ ವೇಳೆಗೆ ೬೦ ಕೆರೆಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ’ ಎಂದರು.