ಕರ್ನಾಟಕ

ಒಲ್ಲದ ಬಾಂಧವ್ಯ ಬೇಕೆ?

Pinterest LinkedIn Tumblr

bhec21aatma1-cut

ಮೊನ್ನೆ ತಮ್ಮ ಮಗಳ ಮದುವೆ ಆಹ್ವಾನ ಪತ್ರಿಕೆ ನೀಡಲು ಬಂದಿದ್ದ ವ್ಯಕ್ತಿಯೊಬ್ಬರು, ಮದುವೆ ಮಾಡುವಾಗ ಎದುರಿಸಬೇಕಾದ ಆರ್ಥಿಕ, ಸಾಮಾಜಿಕ ಮತ್ತು ಭಾವನಾತ್ಮಕ ಸಂಕಷ್ಟಗಳ ಕುರಿತು ಒಂದಷ್ಟು ಹರಟಿದರು.

ತಮ್ಮ ಭಾವಿ ಅಳಿಯ ವಿದೇಶದಲ್ಲಿರುವುದಾಗಿಯೂ, ಸುಸಂಸ್ಕೃತ ಕುಟುಂಬದ ಕುಡಿಯಾಗಿರುವುದಲ್ಲದೇ ಕೈ ತುಂಬಾ ಸಂಬಳ ಎಣಿಸುತ್ತಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡರು. ಆನಂತರ ‘ಆದರೆ…?’  ಎನ್ನುತ್ತಲೇ ಶುರುವಾಯಿತು.

ಏನ್ ಹಾಗಂದ್ರೆ ಅಂತ ನಾವು ಕೇಳುವ ಮೊದಲೇ, ತಮ್ಮ ದುಗುಡವನ್ನೂ ಹಂಚಿಕೊಂಡರು. ‘ಹುಡುಗನಿಗೆ ಸ್ವಲ್ಪ ಅನುಮಾನದ ರೋಗ. ಕಳೆದ ವಾರ ದಾವಣಗೆರೆಯಲ್ಲಿರುವ ಸ್ನೇಹಿತೆಯ ಮನೆಗೆ ಮಗಳು ಒಬ್ಬಳೇ ಹೋಗಿದ್ದಳು. ಈ ವಿಚಾರವನ್ನು ತನ್ನ ಗಂಡನಾಗಲಿರುವವನಿಗೂ ತಿಳಿಸಿದಳು. ಅದಕ್ಕೆ, ಒಬ್ಬಳೇ ಯಾಕೆ ಹೋದೆ? ಅಂತ ಪ್ರಶ್ನಿಸಿದ್ದಾನೆ.

ಮದುವೆಗೂ ಮುನ್ನವೇ ತನ್ನ ಮೇಲೆ ಹಕ್ಕು ಚಲಾಯಿಸಲು ಬರುತ್ತಿರುವ, ತನ್ನ ಚಾರಿತ್ರ್ಯದ ಕುರಿತು ಅನುಮಾನ ವ್ಯಕ್ತಪಡಿಸುತ್ತಿರುವ ಹುಡುಗನ ವರ್ತನೆಯಿಂದ ಸಿಟ್ಟಾದ ನಮ್ಮ ಮಗಳು ಅವನೊಂದಿಗೆ ಜಗಳವಾಡಿದ್ದಾಳೆ. ಆನಂತರ, ಹುಡುಗ ಸರಿಯಿಲ್ಲ ಡ್ಯಾಡಿ. ಈಗ್ಲೇ ನನ್ನ ಮೇಲೆ ಅನುಮಾನ ಪಡುವವನು ಇನ್ನು ಮದುವೆ ಆದ್ಮೇಲೆ ಏನ್ ಗತಿ. ನಾನಂತೂ ಅವನನ್ನು ಮದುವೆ ಆಗಲ್ಲ. ಈ ಮದುವೆ ಬೇಡ’ ಅಂತ ಮಗಳು ಹಟ ಹಿಡಿದಳು.

ಅಷ್ಟೊತ್ತಿಗಾಗಲೇ ನಿಶ್ಚಿತಾರ್ಥ ಮುಗಿದು, ಕಲ್ಯಾಣ ಮಂಟಪಕ್ಕೆ ಮುಂಗಡ ಕೊಡಲಾಗಿತ್ತು. ಅಷ್ಟು ಸಾಲದೆಂದು ಮದುವೆ ಆಹ್ವಾನ ಪತ್ರಿಕೆಯನ್ನು ಒಂದಷ್ಟು ಜನರಿಗೆ ಹಂಚಲಾಗಿತ್ತು. ಈ ಸಂದರ್ಭದಲ್ಲಿ ಮದುವೆ ನಡೆಯದಿದ್ದರೆ  ನಮ್ಮ ಮಾನ ಮರ್ಯಾದೆ ಮೂರು ಕಾಸಿಗೆ ಹರಾಜಾಗುತ್ತಿತ್ತು. ಕೈಯಲ್ಲಿ ಕಾಸಿಲ್ಲದಿದ್ದರೂ ಹೇಗೋ ಸಾಲ ಮಾಡಿ ಹೊಂದಿಸಿ ಮದುವೆ ಮಾಡುತ್ತಿದ್ದೇನೆ.

ಇಂಥ ಸ್ಥಿತಿಯಲ್ಲಿ, ಮದುವೆ ನಿಂತರೆ ಏನ್ ಗತಿ ಅಂತ ಯೋಚನೆ ಶುರುವಾಯ್ತು. ಮಗಳಿಗೆ ಏನೇನೋ ಹೇಳಿ ಸಮಾಧಾನ ಪಡಿಸಿದೆ. ಆ ಹುಡುಗನಿಗೆ ಫೋನ್ ಮಾಡಿ ಬೈದು  ಮಗಳ ಬಳಿ ಕ್ಷಮೆ ಕೋರುವಂತೆ ಮಾಡಿದೆ. ಅಂತೂ ಹೇಗೋ ಎಲ್ಲ  ಸರಿ ಆಯಿತು’ ಎಂದು ಅವರು ನಿಟ್ಟುಸಿರು ಬಿಟ್ಟರು.

ಭಾವಿ ಗಂಡನ ‘ಅನುಮಾನ ರೋಗ’ದ ಕುರಿತು ಆತಂಕ ವ್ಯಕ್ತಪಡಿಸುತ್ತಿರುವ ಹುಡುಗಿಯ ದುಗುಡ ನಿವಾರಣೆಯಾಗುವ ಮುನ್ನವೇ ಅವಳು ಹಸೆಮಣೆ ಏರಿದಳು. ಸದ್ಯ ಹೇಗೋ ಮದುವೆ ಮಾಡಿದರೆ ಸಾಕು ಎಂಬ ಮನಸ್ಥಿತಿಯಲ್ಲಿರುವ ಅಪ್ಪನಿಗೆ ಏನನ್ನೂ ಹೇಳಲಾಗದೆ  ದಾಂಪತ್ಯ ಬದುಕಿಗೆ ಕಾಲಿರಿಸಿದಳು.

ಕೆಲವೊಮ್ಮೆ ಹುಡುಗಿಯರೂ ಕೊನೆಯ ಗಳಿಗೆಯವರೆಗೂ ಸುಮ್ಮನಿದ್ದು, ಮದುವೆಯ ದಿನ ಪರಾರಿಯಾಗುವುದು ಅಥವಾ ಅಲ್ಲಗಳೆಯುವುದು ನಡೆದೇ ಇದೆ. ಅಮ್ಮ ಅಪ್ಪನ ಒತ್ತಾಯಕ್ಕೆ ಮಣಿದವರು, ಪ್ರತಿಕಾರಾತ್ಮಕವಾಗಿ ಎಂಬಂತೆ ಬಂಧುಗಳ ಮುಂದೆ ಅಲ್ಲಗಳೆಯುತ್ತಾರೆ.

ಆದರೆ ವಿವಾಹಕ್ಕೂ ಮುನ್ನ ಎಲ್ಲವೂ ಸರಿ ಇರುವಂತೆ ತೋರುವ ಸಂಬಂಧಗಳಲ್ಲೇ ಬಿರುಕು ಮೂಡುವುದು, ಮದುವೆಗೂ ಮುನ್ನವೇ ಅಭದ್ರ ಭಾವ ಕಾಡುತ್ತಿದ್ದರೆ ಆ ಮದುವೆ ನಡೆಯಲೇ ಬೇಕೆ? ಕೇವಲ ಶಾಮಿಯಾನ, ಅಡುಗೆ, ಛತ್ರ, ಒಡವೆಗಳಿಗೆ ಖರ್ಚು ಮಾಡಿರುವುದರಿಂದ ಮದುವೆಯ ಬಂಧನಕ್ಕ ಒಳಗಾಗಲೇಬೇಕೆ?

ಹೇಗೋ ತೇಪೆ ಹಾಕಿ ಮದುವೆ ಮಾಡಿದರಾಯಿತು. ಆನಂತರ ಎಲ್ಲವೂ ಸರಿ ಹೋಗುತ್ತದೆ ಎನ್ನುವ ಪೋಷಕರ ಭಂಡ ಧೈರ್ಯ, ಮಗಳ ಬದುಕನ್ನು ಎಲ್ಲಿಗೆ ಕೊಂಡೊಯ್ಯಬಹುದು?

ಈ ಮೇಲಿನ ಪ್ರಕರಣ ಒಂದು ನಿದರ್ಶನವಷ್ಟೇ. ನಿಗದಿಯಂತೆ ಮದುವೆ ನಡೆಯದಿದ್ದರೆ ತಮ್ಮ ಕುಟುಂಬದ ಘನತೆಗೆ ಕುಂದುಂಟಾಗುತ್ತದೆ ಎಂಬುದನ್ನೇ ಮುಂದು ಮಾಡಿ, ಹುಡುಗನ ಅಥವಾ ಹುಡುಗಿಯ ಅವಗುಣಗಳು ತಿಳಿದ ಮೇಲೂ ಮದುವೆ ನಿಲ್ಲಿಸಬಾರದೆ? ಎಲ್ಲಕ್ಕೂ ಋಣಾನುಬಂಧ, ಹಣೆಬರಹದ ಪಟ್ಟ ಕಟ್ಟಿ ಒಲ್ಲದ ಬಾಂಧವ್ಯಕ್ಕೆ ಒಳಪಡಿಸಬೇಕೆ?

‘ಮಾನ-ಮರ್ಯಾದೆ’ಯ ಗೋಡೆಗಳ ನಡುವೆ ಸಿಕ್ಕು  ಯುವಜನರ ಮನಸು ಒಡೆದು ಹೋಗುತ್ತಿವೆ. ಬಾಂಧವ್ಯದ ಆರಂಭವಾಗಬೇಕಿರುವುದು ವಿಶ್ವಾಸ ಮತ್ತು ಪ್ರೀತಿಯ ಮೇಲೆ. ಅವಮಾನ ಮತ್ತು ಅನುಮಾನಗಳ ಮೇಲಲ್ಲ. ಯಾವುದಕ್ಕೂ  ಹೆತ್ತವರ ಬಳಿ ತಮ್ಮ ನಿಲುವನ್ನು ಸ್ಪಷ್ಟ ಪಡಿಸುವುದು ಒಳಿತು.

ಮದುವೆ ಮುರಿದರೆ…
ಅನಿವಾರ್ಯ ಕಾರಣಗಳಿಂದ ಎರಡು ಜೀವಗಳು ಒಗ್ಗೂಡಬೇಕಾದ ಮದುವೆ ಮುರಿದು ಬಿದ್ದ ಪ್ರಸಂಗಗಳಿಗೆ ಒಂದಲ್ಲ ಒಂದು ಸಂದರ್ಭದಲ್ಲಿ ಸಾಕ್ಷಿಯಾಗಿರುತ್ತೇವೆ. ಅಂಥ ಪರಿಸ್ಥಿತಿಯಿಂದ ಆದ ಇರುಸು–ಮುರುಸು, ಅವುಗಳಿಂದ ಗೆದ್ದು ಬಂದ ಬಗೆ, ಆ ಸಂದರ್ಭವನ್ನು ಎದುರಿಸಿದ ಬಗೆ ನಿಮ್ಮ ಅನುಭವದ ಬುತ್ತಿಯಲ್ಲಿದ್ದರೆ ಅವನ್ನು ಅಕ್ಷರ ರೂಪಕ್ಕೆ ಇಳಿಸಿ.

ಯಾರನ್ನೂ ದೂರದೇ, ಒಂದು ಸಂದರ್ಭವನ್ನು ಸ್ವೀಕರಿಸಿ ಅದರಿಂದ ಕಲಿತ ಪಾಠವನ್ನು ಲೇಖನಕ್ಕೆ ಇಳಿಸಿ. ಇದು ಮಾನಸಿಕವಾಗಿ ಕುಗ್ಗಿದವರಿಗೆ ಬೆಂಬಲಿಸುವ ಯತ್ನವೂ ಆಗಬಹುದು.ಬರಹ 250 ಶಬ್ದಗಳಿಗೆ ಮೀರಬಾರದು. ಕೊನೆಯ ದಿನ ಮಾರ್ಚ್‌ 7.
ಇ ಮೇಲ್‌ ವಿಳಾಸ: bhoomika@prajavani.co.in

Write A Comment