ಕರ್ನಾಟಕ

ಶಿವಮೊಗ್ಗ ಪರಿಸ್ಥಿತಿ ನಿಯಂತ್ರಣದಲ್ಲಿ; ಇಂದು ಬಂದ್‌ ಕರೆ

Pinterest LinkedIn Tumblr

si

ಶಿವಮೊಗ್ಗ: ಶಿವಮೊಗ್ಗದಲ್ಲಿ ಕೋಮು ಗಲಭೆ­ಯಿಂದ ಉಂಟಾಗಿದ್ದ ಪ್ರಕ್ಷುಬ್ಧ ಪರಿಸ್ಥಿತಿ ಶುಕ್ರವಾರ ನಿಯಂತ್ರಣ­ದಲ್ಲಿತ್ತು. ವಿಶ್ವ ಹಿಂದೂ ಪರಿಷತ್‌ ಶನಿವಾರ ಬಂದ್‌ಗೆ ಕರೆ ನೀಡಿದೆ. ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ನಿಷೇ­ಧಾಜ್ಞೆ­ಯನ್ನು ಇದೇ 25ರವರೆಗೆ  ಮುಂದು­ವ­ರಿಸಲಾಗಿದೆ.

ರೂ 10 ಲಕ್ಷ ಪರಿಹಾರ: ಹಲ್ಲೆಯಲ್ಲಿ ಗಾಯ­ಗೊಂಡು ಮೃತಪಟ್ಟ ಖಾಸಗಿ ಕಂಪೆನಿ ಉದ್ಯೋಗಿ ವಿಶ್ವನಾಥ್‌ ಶೆಟ್ಟಿ ಅವರ ಕುಟುಂಬಕ್ಕೆ ಸರ್ಕಾರ ರೂ 10 ಲಕ್ಷ ಪರಿ­ಹಾರ ಘೋಷಿ­ಸಿದ್ದು ಜಿಲ್ಲಾ ಉಸ್ತು­ವಾರಿ ಸಚಿವ ಕಿಮ್ಮನೆ ರತ್ನಾಕರ ರೂ5 ಲಕ್ಷ ಮುಂಗಡ­ವಾಗಿ ನೀಡಿ­ದರು. ಅವರ ಇಬ್ಬರು ಮಕ್ಕಳ ಶಿಕ್ಷಣದ ಹೊಣೆಯನ್ನು ಸರ್ಕಾರವೇ ವಹಿಸಿಕೊ­ಳ್ಳಲಿದೆ ಎಂದು ಭರವಸೆ ನೀಡಿದರು.
ನಂದಿನಿ ಲೇಔಟ್‌ನ ಅವರ ಪೋಷಕರ ಮನೆಯಿಂದ ಹೊರಟ ಪಾರ್ಥಿವ ಶರೀ­ರದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು.

ಎಂಟು ವರ್ಷಗಳ ಹಿಂದೆ ಮದುವೆ­ಯಾಗಿದ್ದ 34 ವರ್ಷದ ವಿಶ್ವನಾಥ್‌ ಅವರ ಮೊದಲ ಪತ್ನಿ ಅನಾರೋಗ್ಯದ ಕಾರಣ ಮೃತಪಟ್ಟಿದ್ದು, ಕಳೆದ ವರ್ಷ­ವಷ್ಟೇ ಮರು ಮದುವೆಯಾಗಿದ್ದರು.

ಬಿಗಿ ಬಂದೋಬಸ್ತ್‌: ನಗರದ ಎಲ್ಲೆಡೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದ್ದು, 2 ಸಾವಿರ ಸಿಬ್ಬಂದಿ ನಿಯೋಜಿಸಲಾಗಿದೆ.
ನಾಲ್ವರು ಎಸ್‌ಪಿ, 8 ಡಿವೈಎಸ್‌ಪಿ, 120 ಪಿಎಸ್‌ಐ ಸೇರಿದಂತೆ ಹಲವು ಮೀಸಲು ಪಡೆ ತುಕಡಿ ನಿಯೋಜಿಸ ಲಾಗಿದೆ.

ಬೈಕ್, ಲಾರಿ ಜಖಂ: ಶುಕ್ರವಾರ ಪರಿಸ್ಥಿತಿ ನಿಯಂತ್ರಣ­ದಲ್ಲಿದ್ದರೂ, ವಿನೋಬನಗರ ಪೊಲೀಸ್‌ ಚೌಕಿಯಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಲಾರಿ ಜಖಂಗೊ­ಳಿಸಿದ್ದಾರೆ. ಕುಂಬಾರ ಗುಂಡಿ, ಗಾಂಧಿ ಬಜಾರ್‌, ಜಿಲ್ಲಾ ಪಂಚಾಯ್ತಿ, ಜೈಲ್‌ ಸರ್ಕಲ್‌ ಬಳಿ ನಾಲ್ಕು ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಅದರಲ್ಲಿ ಟಿ.ವಿ ವಾಹಿನಿ­ಯೊಂದರ ಕ್ಯಾಮೆರಾಮನ್‌ ಬೈಕ್‌ ಸಹ ಒಳಗೊಂಡಿದೆ. ಕೆಲವೆಡೆ ಸಣ್ಣಪುಟ್ಟ ಹಲ್ಲೆಯ ಯತ್ನಗಳು ನಡೆದಿವೆ.

ಗಾಜನೂರು ಗ್ರಾಮಸ್ಥರ ಪ್ರತಿಭಟನೆ: ಸಮಾವೇಶಕ್ಕೆ ಆಗಮಿಸಿದ್ದ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ತೀರ್ಥ­ಹಳ್ಳಿ ರಸ್ತೆಯಲ್ಲಿರುವ ಕೆಲ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಗ್ರಾಮಸ್ಥರನ್ನು ಥಳಿಸಿದ್ದಾರೆ. ಅವರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಗಾಜನೂರು ಸುತ್ತಮುತ್ತಲ ಗ್ರಾಮಸ್ಥರು ಅರಣ್ಯ ಇಲಾಖೆ ಚೆಕ್‌­ಪೋಸ್ಟ್ ಬಳಿ ಕೆಲ ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.

ಆರೋಪಿಗಳ ಬಂಧನಕ್ಕೆ ಬಿಜೆಪಿ ಆಗ್ರಹ: ಪಿಎಫ್‌ಐ ಸಂಘಟನೆಯ ಸಮಾ­ವೇಶಕ್ಕೆ ರಾಷ್ಟ್ರೀಯ ಮುಖಂಡರೂ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯ­ಗಳಿಂದ ಕಾರ್ಯಕರ್ತರು ಆಗಮಿ­ಸಿದ್ದರೂ, ಪೊಲೀಸರು ಸೂಕ್ತ ಬಂದೋಬಸ್ತ್‌ ಕಲ್ಪಿಸಿಲ್ಲ. ದೇಶದ ವಿರುದ್ಧ ಘೋಷಣೆ ಕೂಗಿದರೂ, ನಿಯಂತ್ರಿಸಿಲ್ಲ.

ಹೊರ ರಾಜ್ಯದ ವಾಹನ­ಗಳಲ್ಲಿ ಮಾರಕಾಸ್ತ್ರ ಇದ್ದರೂ ವಶಕ್ಕೆ ಪಡೆದಿಲ್ಲ. ಕೂಡಲೇ, ಎಲ್ಲ ಆರೋಪಿ­ಗಳನ್ನು ಬಂಧಿಸಬೇಕು ಎಂದು ಬಿಜೆಪಿ ಮುಖಂಡರಾದ ಕೆ.ಎಸ್.ಈಶ್ವರಪ್ಪ, ಆಯನೂರು ಮಂಜುನಾಥ್‌, ಆರ್‌. ಕೆ.ಸಿದ್ದರಾಮಣ್ಣ ಮತ್ತಿತರರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಇಂದೂ ಶಾಲೆಗೆ ರಜೆ
ನಗರ ವ್ಯಾಪ್ತಿಯ ಎಲ್ಲ ಶಾಲಾ–ಕಾಲೇಜುಗಳಿಗೆ ಫೆ. 21ರಂದು ರಜೆ ಘೋಷಿಸಲಾಗಿದೆ. ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಹಾಕಲಾಗಿರುವ ನಿಷೇಧಾಜ್ಞೆ (144 ಸೆಕ್ಷನ್‌)ಯನ್ನು ಫೆ. 25ರವರೆಗೂ ಮುಂದುವರಿಸ­ಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ತಿಳಿಸಿದ್ದಾರೆ.

mo1

Write A Comment