ಕರ್ನಾಟಕ

ರೈಲು ಪ್ರಯಾಣಿಕರ ಸುರಕ್ಷತೆಗೆ ಹೊಸ ವ್ಯವಸ್ಥೆ; ‘ವಾಟ್ಸ್‌ ಆ್ಯಪ್‌’ ಸಹಾಯವಾಣಿ ಸೇವೆಗೆ ಮುಕ್ತ

Pinterest LinkedIn Tumblr

wat

ಬೆಂಗಳೂರು: ರೈಲ್ವೆ ಪ್ರಯಾಣಿಕರ ಸುರಕ್ಷತೆಗಾಗಿ ದೇಶ­ದಲ್ಲೇ ಮೊದಲ ಬಾರಿಗೆ ರಾಜ್ಯ ರೈಲ್ವೆ ಪೊಲೀಸರು ಪ್ರಾರಂಭಿಸಿರುವ ‘ವಾಟ್ಸ್‌ ಆ್ಯಪ್‌’ ಸಹಾಯ­ವಾಣಿಯು ಶುಕ್ರವಾರದಿಂದ ಸೇವೆ ಆರಂಭಿಸಿದೆ.

ನಗರ ರೈಲು ನಿಲ್ದಾಣದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಗೃಹ ಸಚಿವ ಕೆ.ಜೆ.ಜಾರ್ಜ್‌ ಅವರು ಈ ಸೇವೆಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ರೈಲು ಮತ್ತು ರೈಲು ನಿಲ್ದಾಣಗಳಲ್ಲಿ ನಡೆಯಬಹು­ದಾದ ಅಪ­ರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳ­ಲಾಗಿದೆ. ಪ್ರಯಾ­ಣಿಕರ ಸುರಕ್ಷತೆ ದೃಷ್ಟಿಯಿಂದ ಸಹಾಯ­ವಾಣಿ­ಗಳನ್ನು  ಪ್ರಾರಂಭಿ­ಸ­ಲಾಗಿದೆ. ಪ್ರಯಾಣಿಕರು ಇವುಗಳ ಸದುಪ­ಯೋಗ ಪಡೆದು­ಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಸಿಬ್ಬಂದಿ ಕೊರತೆ ಇರುವುದರಿಂದ ರೈಲ್ವೆ ಪೊಲೀಸರಿಗೆ ಕೆಲಸದ ಒತ್ತಡ ಹೆಚ್ಚಿದೆ. ಈ ಕೊರತೆ ನೀಗಿಸಲು 260 ನಾಗರಿಕರನ್ನು ಅರೆ­ಕಾಲಿಕ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ. ಅವ­ರನ್ನು ‘ವಿಶೇಷ ಅಧಿ­ಕಾರಿ’­ಗಳೆಂದು ಪರಿ­ಗಣಿಸಿ, ಇಲಾಖೆಯಿಂದ ಗುರು­ತಿನ ಚೀಟಿ ನೀಡಲಾಗಿದೆ. ಗಸ್ತು ತಿರುಗುವುದು, ಆರೋಪಿಗಳ ಸುಳಿವು ಸೇರಿದಂತೆ ಪೊಲೀಸರು ನಿರ್ವಹಿಸುವ ಎಲ್ಲ ಕೆಲಸ­ವನ್ನು ಅವರೂ ನಿಭಾಯಿಸ­­ಲಿದ್ದಾರೆ’ ಎಂದರು.

‘ರೈಲ್ವೆ ಇಲಾಖೆಯಲ್ಲಿ ಸಹಾಯವಾಣಿ ಕೇಂದ್ರ­ಗ­ಳನ್ನು ಆರಂಭಿಸಿರುವುದು ಶ್ಲಾಘನೀಯ. ಇದ­ರಿಂದ ಅಪರಾಧ ಕೃತ್ಯಗಳ ನಿಯಂತ್ರಣ    ಸಾಧ್ಯ­ವಾಗಲಿದೆ’ ಎಂದು  ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.

‘ಕೊರತೆ ನೀಗಿಸಿ’: ‘ರೈಲುಗಳ ರಕ್ಷಣೆಯ ಉದ್ದೇಶ­ದಿಂದ 1887ರಲ್ಲಿ ರೈಲ್ವೆ ಪೊಲೀಸ್ ವ್ಯವಸ್ಥೆ ಜಾರಿಗೆ ಬಂದಿದೆ. ರಾಜ್ಯದ 18 ರೈಲ್ವೆ ಪೊಲೀಸ್ ಠಾಣೆಗಳ ವ್ಯಾಪ್ತಿಗೆ 352 ನಿಲ್ದಾಣಗಳು ಹಾಗೂ 628 ಪ್ಲಾಟ್‌ಫಾರ್ಮ್‌ಗಳು ಒಳಪಡುತ್ತವೆ. ನಿತ್ಯ 1,131 ರೈಲುಗಳು ಸಂಚಾರ ನಡೆಸುತ್ತಿದ್ದು, ಎಂಟೂವರೆ ಲಕ್ಷ ಮಂದಿ ಪ್ರಯಾಣ ಮಾಡು­ತ್ತಾರೆ’ ಎಂದು ರೈಲ್ವೆ ವಿಭಾಗದ ಎಡಿಜಿಪಿ ಆರ್‌.ಪಿ.ಶರ್ಮಾ ಹೇಳಿದರು.

‘ಇಷ್ಟೊಂದು ವಿಸ್ತಾರ ಹೊಂದಿರುವ ವಿಭಾಗವು ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಹಲವು ವರ್ಷಗಳ ಹಿಂದೆ ಮಂಜೂರಾದ ಹುದ್ದೆಗಳೇ ಈಗಲೂ ಮುಂದುವರಿಯುತ್ತಿವೆ. ಹೀಗಾಗಿ ಹೊಸ ಹುದ್ದೆಗಳ ಸೃಷ್ಟಿ ಸೇರಿದಂತೆ ಇಲಾಖೆಯನ್ನು ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಗೃಹ ಸಚಿವರಲ್ಲಿ ಮನವಿ ಮಾಡಿದರು.

ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್‌ ರೋಕುಮ ಪಚಾವೊ,  ರಾಜ್ಯ ಪೊಲೀಸ್ ಗೃಹ ಮಂಡಳಿಯ ಡಿಜಿಪಿ ಸುಶಾಂತ್ ಮಹಾಪಾತ್ರ, ರೈಲ್ವೆ ಡಿಐಜಿ ಶ್ರೀಕಂಠಯ್ಯ ಉಪಸ್ಥಿತರಿದ್ದರು.

ಉಚಿತ ಸಹಾಯವಾಣಿ
‘ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಪೊಲೀಸರು ಪ್ರಾರಂಭಿಸಿರುವ ಉಚಿತ ಸಹಾಯ­­ವಾಣಿ ಕೇಂದ್ರಕ್ಕೂ ಶುಕ್ರವಾರ ಚಾಲನೆ ದೊರೆ­ಯಿತು. ಅಪರಾಧ ಚಟು­ವಟಿಕೆಗಳು ಅಥವಾ ರೈಲು ಅಪಘಾತದಂಥ ತುರ್ತು ಸಂದರ್ಭ­ಗಳಲ್ಲಿ ಸಾರ್ವಜನಿಕರು 1800 425 1363 (ಶುಲ್ಕ ರಹಿತ) ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು.

‘ವಾಟ್ಸ್‌ ಆ್ಯಪ್’ ಸಹಾಯವಾಣಿ
‘ಕಳವು, ದರೋಡೆ, ಅನುಚಿತ ವರ್ತನೆ ಸೇರಿ­ದಂತೆ ರೈಲಿನಲ್ಲಿ ಅಪರಾಧ ಚಟು­ವಟಿಕೆ­ಗಳು ನಡೆದಾಗ ಪ್ರಯಾಣಿಕರು ‘94808 02140’ ಮೊಬೈಲ್ ಸಂಖ್ಯೆಗೆ ವಾಟ್ಸ್‌ ಆ್ಯಪ್‌ ಮೂಲಕ ದೂರು ಸಲ್ಲಿಸಬಹುದು’ ಎಂದು ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಎಸ್‌.ಎನ್‌.­ಸಿದ್ದ­ರಾಮಪ್ಪ ತಿಳಿಸಿದರು. ‘ದಿನದ 24 ಗಂಟೆಯೂ ಈ ಸೇವೆ ಲಭ್ಯ­ವಿದೆ. ಅಪರಾಧ ಚಟುವಟಿಗಳು ನಡೆದಾಗ ಪ್ರಯಾ­ಣಿ­ಕರು ತಾವು ಚಲಿಸು­ತ್ತಿರುವ ಮಾರ್ಗ, ಬೋಗಿ ಸಂಖ್ಯೆ, ಪ್ರಸ್ತುತ ಸ್ಥಳದ ವಿವರವನ್ನು ವಾಟ್ಸ್‌ ಆ್ಯಪ್‌ನಲ್ಲಿ ಕಳುಹಿ­ಸ­ಬೇಕು. ಸಾಧ್ಯ­ವಾ­ದರೆ ಮೊಬೈಲ್‌­ನಲ್ಲಿ ಆರೋಪಿ­ಗಳ ಛಾಯಾ­­­­ಚಿತ್ರ­ವನ್ನು ಕ್ಲಿಕ್ಕಿಸಿ ಕಳುಹಿಸಬೇಕು’ ಎಂದರು.

51 ಮಹಿಳಾ ಪೊಲೀಸರು
‘ರೈಲ್ವೆ ಸಚಿವಾಲಯವು 1,599 ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌ಗಳ ನೇಮಕಕ್ಕೆ ಮಂಜೂ­­ರಾತಿ ನೀಡಿದೆ. ಅದರಲ್ಲಿ ನೈರುತ್ಯ ರೈಲ್ವೆ ವಿಭಾಗಕ್ಕೆ 51 ಮಹಿಳಾ ಕಾನ್‌ಸ್ಟೆಬಲ್‌­ಗಳು ನೇಮಕ­ವಾಗ­ಲಿ­ದ್ದಾರೆ’ ಎಂದು ರೈಲ್ವೆ ಅಧಿಕಾರಿ­ಗಳು ಮಾಹಿತಿ ನೀಡಿದರು.

Write A Comment