ಕರ್ನಾಟಕ

ಬೆಂಗಳೂರಿನ ಆನಂದರಾವ್‌ ವೃತ್ತದಲ್ಲಿರುವ ಜೆಡಿಎಸ್‌ ಕಚೇರಿ ಸ್ಥಳಾಂತರ ಕೆಲಸ ಶುರು

Pinterest LinkedIn Tumblr

jds

ಬೆಂಗಳೂರು: ಇಲ್ಲಿನ ಆನಂದ­ರಾವ್‌ ವೃತ್ತದಲ್ಲಿ­ರುವ ತನ್ನ ಕಚೇರಿ­ಯನ್ನು ಕಾಂಗ್ರೆಸ್‌ ಪಕ್ಷಕ್ಕೆ ಒಂದೆರಡು ದಿನಗ­ಳಲ್ಲಿ ಹಸ್ತಾಂತರ ಮಾಡಲು ನಿರ್ಧರಿ­ಸಿರುವ ಜೆಡಿಎಸ್‌, ಈ ಕಟ್ಟಡದಲ್ಲಿದ್ದ ಸಾಮಾನು ಸರಂಜಾಮುಗಳನ್ನು ಹೊರಕ್ಕೆ ಸಾಗಿಸುವ ಕೆಲಸವನ್ನು ಶನಿವಾರ ಆರಂಭಿಸಿದೆ.

ದಳ ಕಚೇರಿ ಇದ್ದ ಕಟ್ಟಡ ಕಾಂಗ್ರೆಸ್‌ಗೆ ಸೇರಿದ್ದು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಜೆಡಿಎಸ್‌ ಸಲ್ಲಿಸಿರುವ ಪರಿಹಾರಾತ್ಮಕ ಅರ್ಜಿ ಇನ್ನೂ ವಿಚಾ­ರಣೆಗೆ ಬಂದಿಲ್ಲ. ಹೀಗಾಗಿ ಕಟ್ಟಡ ತೆರವು ಮಾಡುವುದು ಜೆಡಿಎಸ್‌ಗೆ ಅನಿವಾರ್ಯವಾಗಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.­ದೇವೇ­ಗೌಡರ ಉಪಸ್ಥಿತಿ­ಯಲ್ಲೇ ಕಟ್ಟಡ­ದ­ಲ್ಲಿದ್ದ ನಾಮಫಲಕ­ಗಳನ್ನು ತೆರವು­ಗೊಳಿಸ­ಲಾಯಿತು. ಪೀಠೋ­ಪ­ಕರಣ, ಕಡತಗ­ಳನ್ನು ಹೊರಕ್ಕೆ ಸಾಗಿ­ಸಲು ಏರ್ಪಾಟು ಮಾಡಲಾಗುತ್ತಿದೆ. ಭಾನುವಾರ ಅಥವಾ ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಅವರಿಗೆ ಕಚೇರಿ ಕಟ್ಟಡದ ಕೀಲಿಯನ್ನು ಹಸ್ತಾಂತರ ಮಾಡುವ ಸಾಧ್ಯತೆ ಇದೆ. ಪರಮೇಶ್ವರ್‌ ಅವರಿಗೆ ಪತ್ರವೊಂದನ್ನು ಬರೆಯಲು ದೇವೇ­ಗೌಡರು ನಿರ್ಧರಿಸಿ­ದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮೊದಲ ಮಹಡಿಯಲ್ಲಿದ್ದ ಪೀಠೋ­ಪ­ಕ­ರಣಗಳನ್ನು ಕೆಳಕ್ಕೆ ತರಲಾಗಿದೆ. ಭಾನುವಾರ ಅವುಗಳನ್ನು ಬೇರೆಡೆಗೆ ಸಾಗಿಸಲಾಗುತ್ತದೆ. ಒಕ್ಕಲಿಗರ ಭವನಕ್ಕೆ ಕಚೇರಿಯನ್ನು ಸ್ಥಳಾಂತರ ಮಾಡುವ ನಿರ್ಧಾರ ಕೈಬಿಟ್ಟಿರುವ ಜೆಡಿಎಸ್‌ ಈಗ ಶೇಷಾದ್ರಿ­ಪುರ ಅಥವಾ ಸುತ್ತ­ಮುತ್ತ­ಲಿನ ಪ್ರದೇಶದಲ್ಲಿ ಖಾಸಗಿ ಮನೆ­ಯೊಂ­ದನ್ನು ಬಾಡಿಗೆಗೆ ಪಡೆಯಲು ಮುಂದಾ­ಗಿದೆ.

ಕಚೇರಿ ಆವರಣದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ದೇವೇಗೌಡ, ‘ಈಗ ಕಚೇರಿಯಲ್ಲಿರುವ ಪೀಠೋಪ­ಕರಣ, ಕಡಗಳನ್ನು ಹೊರಕ್ಕೆ ಇರಿಸು­ವಂತೆ ಸೂಚನೆ ನೀಡಿದ್ದೇನೆ. ಬೇರೆ ಕಟ್ಟಡ ಗುರುತಿಸಿದ ಬಳಿಕ ಅಲ್ಲಿಗೆ ತೆಗೆದು­ಕೊಂಡು ಹೋಗುತ್ತೇವೆ. ಒಕ್ಕಲಿ­ಗರ ಸಂಘದಲ್ಲಿ ಎಲ್ಲ ಪಕ್ಷಗಳ ಸದಸ್ಯರೂ ಇದ್ದಾರೆ. ಅಲ್ಲಿ ಬೇರೆ ಪಕ್ಷದ­ವರಿಂದ ವಿರೋಧ ವ್ಯಕ್ತವಾಗ­ಬಹುದು ಎಂಬ ಕಾರ­ಣಕ್ಕೆ ಒಕ್ಕಲಿಗರ ಭವನಕ್ಕೆ ಕಚೇರಿ ಸ್ಥಳಾಂತರ ಮಾಡುತ್ತಿಲ್ಲ’ ಎಂದು ಹೇಳಿದರು.

Write A Comment