ಕರ್ನಾಟಕ

‘ಕಾನೂನಿನಿಂದ ಅತ್ಯಾಚಾರ ನಿಯಂತ್ರಣ ಅಸಾಧ್ಯ’: ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿ.ಎಸ್‌.ಮಳಿಮಠ

Pinterest LinkedIn Tumblr

ka

ಬೆಂಗಳೂರು:  ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸು­ವುದರಿಂದ ಅತ್ಯಾಚಾರ ಪ್ರಕರಣ ತಡೆ­ಯಲು ಸಾಧ್ಯವಿಲ್ಲ. ಕಾನೂನು ಕೇವಲ ಶಿಕ್ಷೆ ವಿಧಿಸು­ತ್ತದೆ ಅಷ್ಟೆ. ಹಾಗಾಗಿ ಅತ್ಯಾಚಾರ ನಿಯಂತ್ರಿ­ಸುವ ಮಾರ್ಗ­ಗಳನ್ನು ಕಂಡುಕೊಳ್ಳಬೇಕಾದ ಅಗತ್ಯ­ವಿದೆ ಎಂದು ಕರ್ನಾಟಕ ಮತ್ತು ಕೇರಳ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿ.ಎಸ್‌.­ಮಳಿಮಠ ಅಭಿಪ್ರಾಯ­ಪಟ್ಟರು.

ನಗರದಲ್ಲಿ ನಡೆದ ಬಿಎಂಎಸ್‌ ಕಾನೂನು ಕಾಲೇಜಿನ ಸುವರ್ಣ ಮಹೋತ್ಸವದ ಸಮಾ­ರೋಪ ಸಮಾರಂಭದಲ್ಲಿ ಮಾತನಾಡಿದರು.
‘ನಿನ್ನ ಮೇಲೆ ಅತ್ಯಾಚಾರವೆಸಗಿದರೆ ಅಂಥ­ವರನ್ನು ನೇಣಿಗೇರಿಸುತ್ತೇವೆ’ ಎಂದು ಹೇಳಿದರೆ ಹೇಗೆ? ಕಾನೂನು ಶಿಕ್ಷೆ ನೀಡುತ್ತದೆಯೇ ಹೊರತು ಅತ್ಯಾಚಾರವನ್ನು ನಿಯಂತ್ರಿಸುವುದಿಲ್ಲ. ಉತ್ತಮ ಚಾರಿತ್ರ್ಯದ ವ್ಯಕ್ತಿತ್ವ ಹೊಂದಿದವರು ಮಾತ್ರ ಇಂಥ ಕೃತ್ಯ ಎಸಗುವುದಿಲ್ಲ ಎಂದರು.

‘ಕಾನೂನು ಉಲ್ಲಂಘನೆ ಹೆಚ್ಚುತ್ತಿದೆ. ವಿದ್ಯಾ­ವಂತರೇ ಭ್ರಷ್ಟಾಚಾರದಲ್ಲಿ ತೊಡಗಿ­ದ್ದಾರೆ. ಮಂತ್ರಿ­ಗಳು, ಶಾಸಕರು, ಅಧಿಕಾರಿಗಳ ಮೇಲೆ ಭ್ರಷ್ಟಾ­ಚಾರದ ಪ್ರಕರಣಗಳು ದಾಖಲಾಗಿವೆ. ಮೋಸ, ಅತ್ಯಾಚಾರ, ಕೊಲೆ, ಸುಲಿಗೆ ಹೆಚ್ಚುತ್ತಿದೆ. ಕಾನೂನು ಇದ್ದರೂ ಮಹಿಳೆಯರಿಗೆ ಸುರಕ್ಷತೆ ಇಲ್ಲ. ವಕೀಲರ ಕೈಯಲ್ಲೂ ಮಹಿಳೆಯರು ಸುರಕ್ಷಿ­ತವಾಗಿಲ್ಲ’ ಎಂದು ಮಳಿಮಠ ಅವರು ವಿಷಾದಿಸಿದರು.

ಕಾನೂನು ಕ್ಷೇತ್ರದಲ್ಲಿ ಬೆಳವಣಿಗೆ ಆಗಿಲ್ಲ: ‘ವೈದ್ಯಕೀಯ, ಎಂಜಿನಿಯರ್‌, ತಾಂತ್ರಿಕ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಅಪಾರ ಬೆಳವ­ಣಿಗೆ ಆಗಿದೆ. ಹೊಸ ಹೊಸ ಸಂಶೋಧನೆಗಳು, ಆವಿಷ್ಕಾರಗಳು ನಡೆ­ಯುತ್ತಿವೆ. ಆದರೆ, ಕಾನೂನು ಕ್ಷೇತ್ರ ನಿಂತ ನೀರಾಗಿದೆ. ಹಿಂದೆ ಮಾಡಿದ್ದ ಕಾನೂನುಗಳನ್ನು ನಾವು ಅನುಷ್ಠಾನ­ಗೊಳಿಸುತ್ತಿದ್ದೇವೆ ಅಷ್ಟೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕೇರಳ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್‌.ಆರ್‌.­ಬನ್ನೂರಮಠ, ಹಿರಿಯ ವಕೀಲ ಡಾ.ಬಿ.­ವಿ.­ಆಚಾರ್ಯ, ಬಿಎಂಎಸ್‌ ಕಾನೂನು ಕಾಲೇಜಿನ ಅಧ್ಯಕ್ಷೆ ಡಾ.ರಾಗಿಣಿ ನಾರಾ­ಯಣ, ಟ್ರಸ್ಟಿಗಳಾದ ಡಾ.ಪಿ.ದಯಾ­ನಂದ ಪೈ, ಕೆ.ಜೈರಾಜ್‌, ಕಾಲೇಜಿನ ಸಲಹೆ­ಗಾರ ಡಾ.ವಿ.ಬಿ.ಕುಟಿನ್ಹೊ ಹಾಗೂ ಪ್ರಾಂಶುಪಾಲರಾದ ಡಾ.ಸೀಮಾ ಸುರೇಂದ್ರನ್‌ ಇದ್ದರು.

ವಕೀಲರ ಪರಿಷತ್-: ನೋಂದಣಿಗೆ ಹೊಸ ಕಾನೂನು– ಚಿಂತನೆ
‘ರಾಜ್ಯ ವಕೀಲರ ಪರಿಷತ್ತಿನಲ್ಲಿ ಹೆಸರು ನೋಂದಣಿ ನಿಯಮಕ್ಕೆ ಬದ­ಲಾ­ವಣೆ ತರಲು ಚಿಂತಿಸು­ತ್ತಿದ್ದೇವೆ. ಬೇರೆ ವೃತ್ತಿ ಮಾಡಿ­­ಕೊಂಡು ವಕಾಲತ್ತಿ­ನಲ್ಲಿ ತೊಡಗು­ವವರಿಗೆ ನೋಂದಣಿ ನಿರ್ಬಂಧಿಸ­ಲಾಗು­ವುದು. ಪೂರ್ಣಾ­ವಧಿ ವಕೀಲ ವೃತ್ತಿಯಲ್ಲಿ ತೊಡಗುವ­ವರಿಗೆ ಮಾತ್ರ ಈ ಸೌಲಭ್ಯ ಕಲ್ಪಿಸ­ಲಾಗು­ವುದು’ ಎಂದು ಪರಿಷತ್‌ ಅಧ್ಯಕ್ಷ ಪಿ.ಪಿ.ಹೆಗ್ಡೆ ಅವರು ತಿಳಿಸಿದರು.

‘ಪರಿಷತ್ತಿನಲ್ಲಿ ಹೆಸರನ್ನು ನೋಂದಾ­­ಯಿಸಿ ಬೇರೆ ಬೇರೆ ವೃತ್ತಿ­ಯಲ್ಲಿ ತೊಡಗಿ­ರುವ ವಿಷಯ ಗಮ­ನಕ್ಕೆ ಬಂದಿದೆ. ಕೆಲ­ವರು ರಿಯಲ್‌ ಎಸ್ಟೇಟ್‌ ದಂಧೆಯಲ್ಲಿ ತೊಡಗಿ­­ದ್ದಾರೆ. ಇದು ಪರಿಷತ್ತಿನ ನಿಯ­ಮಕ್ಕೆ ವಿರುದ್ಧ. ಪರಿಷತ್ತಿ­ನಲ್ಲಿ ನೋಂದಣಿ ಮಾಡಿ­ಕೊಳ್ಳು­ತ್ತಿ­ರುವ ಕಾನೂನು ವಿದ್ಯಾರ್ಥಿ­ಗಳ ಸಂಖ್ಯೆ­ಯಲ್ಲೂ  ಕುಸಿತ­ವಾಗಿದೆ. ಹೆಚ್ಚಿನ­ವರು ಬಹು­ರಾಷ್ಟ್ರೀಯ ಕಂಪೆನಿ­ಗಳಿಗೆ ಕಾನೂನು ಸಲಹೆಗಾರರಾಗಿ ಹೋಗುತ್ತಿದ್ದಾರೆ’ ಎಂದು ಹೇಳಿದರು.

Write A Comment