ರಾಷ್ಟ್ರೀಯ

ಕೇಜ್ರಿ ಸಂಪುಟದಲ್ಲಿ 6 ಮಂತ್ರಿಗಳು

Pinterest LinkedIn Tumblr

pvec14215swakejri

ನವದೆಹಲಿ: ಲೆಫ್ಟಿನೆಂಟ್‌ ಗವರ್ನರ್‌ ನಜೀಬ್‌ ಜಂಗ್‌ ಅವರು ಕೇಜ್ರಿ­ವಾಲ್‌ ಹಾಗೂ ಅವರ ಸಂಪುಟ ಸದಸ್ಯ­ರಿಗೆ ಪ್ರಮಾಣ ವಚನ ಬೋಧಿಸಿದರು.

ಮನೀಷ್‌ ಸಿಸೋಡಿಯಾ, ಅಸೀಂ ಅಹಮದ್‌ ಖಾನ್‌, ಸಂದೀಪ್‌ ಕುಮಾರ್‌, ಸತ್ಯೇಂದ್ರ ಜೈನ್‌, ಗೋಪಾಲ್‌ ರಾಯ್‌ ಮತ್ತು ಜಿತೇಂದ್ರ ಸಿಂಗ್‌ ತೋಮರ್‌ ಕೇಜ್ರಿವಾಲ್‌ ಸಂಪುಟ ಸೇರಿದ ಸಚಿವರು. ಮನೀಷ್‌ ಸಿಸೋಡಿಯಾ ಹೊಸ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಆಗಿದ್ದಾರೆ.

ಮಾಮೂಲಿನಂತೆ ಕಡು ನೀಲಿ ಬಣ್ಣದ ತುಂಬು ತೋಳಿನ ಸ್ವೆಟರ್‌, ತಲೆ ಮೇಲೆ ಬಿಳಿ ಬಣ್ಣದ ಟೋಪಿ ತೊಟ್ಟಿದ್ದ ಕೇಜ್ರಿವಾಲ್‌ ಪ್ರಮಾಣ ವಚನ ಸ್ವೀಕರಿಸಿ ಬೆಂಬಲಿಗರಿಗೆ ಕೈ ಬೀಸಿದರು. ಸಿಸೋ­ಡಿಯಾ ತುಂಬು ತೋಳಿನ ಕೆಂಪು ಸ್ವೆಟರ್‌, ಬಿಳಿ ಟೋಪಿ ಧರಿಸಿದ್ದರು. ಐತಿ­ಹಾಸಿಕ ಕ್ಷಣಗಳನ್ನು ಕಣ್ತುಂಬಿ­ಕೊ­ಳ್ಳಲು  ದೆಹಲಿ ವಿವಿಧೆಡೆ­ಗಳಿಂದ­ಲ್ಲದೆ, ನೆರೆ ರಾಜ್ಯ­ಗಳಿಂದಲೂ ಬೆಂಬಲಿಗರು ರಾಮ­ಲೀಲಾ ಮೈದಾನಕ್ಕೆ ಧಾವಿಸಿದ್ದರು.

ಮುಖ್ಯಮಂತ್ರಿ ಪ್ರಮಾಣ ವಚನಕ್ಕೆ ಮಕ್ಕಳು, ಮಹಿಳೆಯರೂ, ವೃದ್ಧರೂ ಸೇರಿದಂತೆ ಎಲ್ಲ ವಯೋಮಾನದ ಜನ ಬಂದಿದ್ದರು. ಕೆಲವರು ರಾಷ್ಟ್ರ ಧ್ವಜಗಳನ್ನು ಹಿಡಿದಿದ್ದರು. ಅನೇಕರ ಕೈಗಳಲ್ಲಿ ಪಕ್ಷದ ಚಿಹ್ನೆ ‘ಪೊರಕೆ’ ಇತ್ತು.  ಪ್ರಧಾನಿ ಮೋದಿ, ಕೇಂದ್ರ ಸಚಿವರು ಸೇರಿದಂತೆ ಗಣ್ಯರು ಯಾರೂ ಸಮಾ­ರಂಭ­ದಲ್ಲಿ ಪಾಲ್ಗೊಳ್ಳಲಿಲ್ಲ.

‘ಅಧಿಕಾರದ ಮದ ಅಪಾಯ’
‘ಅಧಿಕಾರದ ಮದ ನೆತ್ತಿಗೆ ಏರದಂತೆ ನಡೆದು­ಕೊಳ್ಳಬೇಕು. ಅಧಿ­ಕಾರದ ಅಹಂಕಾರ­ದಿಂದಲೇ ಬಿಜೆಪಿ, ಕಾಂಗ್ರೆಸ್‌ ಪಕ್ಷ­ಗಳು ಸೋಲು ಕಂಡಿದ್ದು’ ಎಂದು ಕೇಜ್ರಿವಾಲ್‌ ನೆನಪಿಸಿದರು.

ರಾಮಲೀಲಾ ಮೈದಾನದಲ್ಲಿ ಶುಕ್ರವಾರ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದ ನಂತರ ಮಾತನಾಡಿದ ಅವರು,  ‘ಕಾರ್ಯಕರ್ತರು ಸೌಜನ್ಯ­ದಿಂದ ನಡೆದು­ಕೊಳ್ಳಬೇಕು. ದುಂಡಾವರ್ತಿ ಮಾಡ­ಬಾರದು. ಯಾರಾ­­ದರೂ ಆಮ್‌ ಆದ್ಮಿಗಳೆಂದು ಹೇಳಿ­ಕೊಂಡು ಗೂಂಡಾ­ಗಿರಿ ಮಾಡಿದರೆ ಕೂಡಲೇ ಬಂಧಿಸಿ’ ಎಂದು ವೇದಿಕೆ­ಯಿಂದಲೇ ಪೊಲೀಸರಿಗೆ ಮುಖ್ಯಮಂತ್ರಿ ಸೂಚಿಸಿ­ದರು.

ಚುನಾವಣೆ ಫಲಿತಾಂಶ ದೊಡ್ಡ ಪವಾಡ. ಒಟ್ಟು 70 ಸ್ಥಾನದಲ್ಲಿ ಮೂರು ಬಿಟ್ಟು ಉಳಿದೆಲ್ಲ­ವನ್ನು ಗೆಲ್ಲು­ವುದು ಹುಡುಗಾಟವಲ್ಲ. ನಿಜಕ್ಕೂ ಇದು ‘ದೇವರೇ ಕರುಣಿಸಿದ ಪವಾಡ’ ಎಂದು ವಿಶ್ಲೇಷಿಸಿದರು.

‘ದೆಹಲಿಯ ಜನ ನಮ್ಮನ್ನು ಪ್ರೀತಿಸುತ್ತಾರೆಂದು ಗೊತ್ತಿತ್ತು. ಆದರೆ, ಇಷ್ಟರ ಮಟ್ಟಿಗೆ ಪ್ರೀತಿಸುತ್ತಾ­ರೆಂದು ಗೊತ್ತಿರಲಿಲ್ಲ’ ಎಂದು ಹೇಳುವಾಗ ಭಾವೋನ್ಮಾದ­ಕ್ಕೊಳಗಾದರು. ‘ನಾವು ಸಾಮಾನ್ಯರಿಗಿಂತ ಯಾವುದೇ ರೀತಿ ದೊಡ್ಡ­ವ­ರಲ್ಲ. ಎಎಪಿ ಸರ್ಕಾರದಲ್ಲಿ ವಿಐಪಿ ಸಂಸ್ಕೃ­ತಿಗೆ ಅವಕಾಶ ಇಲ್ಲ ಎಂದು’  ಸ್ಪಷ್ಟಪಡಿಸಿದರು.

Write A Comment