ಕರ್ನಾಟಕ

ಶತಕದಂಚಿನಲ್ಲಿ ಮೈಸೂರು ಸ್ಯಾಂಡಲ್‌ ಸಾಬೂನು

Pinterest LinkedIn Tumblr

33333333_0

1916ರಲ್ಲಿ ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿನ ಅರಣ್ಯ ಇಲಾಖೆಗೆ ಭೇಟಿ ನೀಡಿದ್ದ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು, ಅಲ್ಲಿ ಸಂಗ್ರಹಿಸಿಟ್ಟಿದ್ದ ಶ್ರೀಗಂಧ ಮರದ ತುಂಡುಗಳ ರಾಶಿಯನ್ನು ಕಂಡರು. ಅವರಿಗೆ, ಆ ಮರಗಳಿಂದ ಗಂಧದ ಎಣ್ಣೆ ತೆಗೆಯಬಾರದೇಕೆ ಎಂಬ ಆಲೋಚನೆ ಬಂದಿತು. ಆಗ ದಿವಾನರಾಗಿದ್ದ ಸರ್‌ ಎಂ. ವಿಶ್ವೇಶ್ವರಯ್ಯ ಹಾಗೂ ಸರ್‌ ಆಲ್‌ಫ್ರೆಡ್‌ ಚಾಟರ್‌ಟನ್‌ ಜತೆಗೆ ಚರ್ಚಿಸಿದ ಮಹಾರಾಜರು, ಶ್ರೀಗಂಧದ ಎಣ್ಣೆ ತೆಗೆಯುವುದಕ್ಕೆ ಸಂಬಂಧಿಸಿದಂತೆ ಯೋಜನೆ ಸಿದ್ಧಪಡಿಸಲು ಸೂಚಿಸಿದರು. ಅದು ಶ್ರೀಗಂಧದ ಎಣ್ಣೆ ತಯಾರಿಕೆಗೆ, ನಂತರ ಮೈಸೂರು ಸ್ಯಾಂಡಲ್‌ ಸಾಬೂನು ಜನ್ಮತಳೆಯಲು ನಾಂದಿ ಹಾಡಿತು.

ಹತ್ತಾರು ವರ್ಷಗಳ ಹಿಂದೆ ಅಂಗಡಿಗೆ ಹೋಗಿ ‘ಮೈಸೂರು ಸ್ಯಾಂಡಲ್‌ ಸೋಪ್ ಕೊಡಿ’ ಎಂತಲೇ ಕೇಳುವುದಿತ್ತು. ಆಗ ಹೆಚ್ಚು ಆಯ್ಕೆಗಳಿರಲಿಲ್ಲ!

ಈಗ ಆಯ್ಕೆಗಳು ಬಹಳಷ್ಟಿದ್ದರೂ ಮೈಸೂರು ಸ್ಯಾಂಡಲ್‌ ಸಾಬೂನು ಬಳಸುವವರಿಗೇನೂ ಕಮ್ಮಿ ಇಲ್ಲ. ಈಗಲೂ ಮೈಸೂರು ಸ್ಯಾಂಡಲ್ ಸಾಬೂನು ಎಂದರೆ ಆಹಾ!… ಎನ್ನುವವರೇ ಹೆಚ್ಚು. ಅದರ ಗುಣಮಟ್ಟ ಹಾಗೂ ಪರಿಮಳಕ್ಕೆ ಮನಸೋಲದವರಿಲ್ಲ.

ಇದಕ್ಕೆ ಮುಖ್ಯ ಕಾರಣ; ಸಾಬೂನು ತಯಾರಿಕೆಗೆ ನೈಸರ್ಗಿಕ ಶ್ರೀಗಂಧದ ಎಣ್ಣೆಯನ್ನು ಬಳಸುತ್ತಿರುವುದು. ಹಾಗೆ ಶ್ರೀಗಂಧದ ಎಣ್ಣೆಯಿಂದ ಕೂಡಿದ ಅತಿ ಹೆಚ್ಚು ಸಾಬೂನು ತಯಾರಿಸುವ ರಾಜ್ಯದಲ್ಲಿಯ ಏಕೈಕ ಸಂಸ್ಥೆ ‘ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ’ (ಕೆಎಸ್‌ಡಿಎಲ್‌).

ಇದು ಮೊದಲಿಗೆ ‘ಸರ್ಕಾರಿ ಸಾಬೂನು ಕಾರ್ಖಾನೆ’ ಎಂದೇ ಹೆಸರಾಗಿತ್ತು. 1980ರ ದಶಕದಲ್ಲಿ ‘ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ’ ಎಂದು ಮರು ನಾಮಕರಣಗೊಂಡಿತು. ಕೆಎಸ್‌ಡಿಎಲ್‌, ಈಗಲೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೈಸೂರು ಸ್ಯಾಂಡಲ್‌ ಸಾಬೂನು ಹಾಗೂ ಶ್ರೀಗಂಧದ ಎಣ್ಣೆಗೆ ಖ್ಯಾತಿ ಪಡೆದಿದೆ. ಹೀಗಾಗಿ, ಮೈಸೂರು ಪರಂಪರೆಯ, ಸಂಸ್ಕೃತಿಯ ಪ್ರತೀಕವಾಗಿ ‘ಸುಗಂಧ ರಾಯಭಾರಿ’ ಎಂದೇ  ಗುರುತಿಸಿಕೊಂಡಿದೆ.

ಮೈಸೂರು ಶ್ರೀಗಂಧದ ಸಾಬೂನು ಹಾಗೂ ಶ್ರೀಗಂಧದ ಎಣ್ಣೆ ತಯಾರಿಸುವ ‘ಕೆಎಸ್‌ಡಿಎಲ್‌’ಗೆ ಈಗ ಶತಮಾನದ ಸಂಭ್ರಮ. 1916ರಲ್ಲಿ ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿಯ ಅರಣ್ಯ ಇಲಾಖೆಗೆ ಭೇಟಿ ಕೊಟ್ಟಿದ್ದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು, ಅಲ್ಲಿ ಹೇರಳವಾಗಿ ಸಂಗ್ರಹಿಸಿದ್ದ ಶ್ರೀಗಂಧ ಮರಗಳ ರಾಶಿಯನ್ನು ಕಂಡರು. ಅಮೂಲ್ಯ ಹಾಗೂ ಅಪರೂಪದ ವೃಕ್ಷ ಸಂಪತ್ತು ಎನಿಸಿಕೊಂಡಿದ್ದ ಆ ಮರಗಳಿಂದ ಗಂಧದ ಎಣ್ಣೆ ತೆಗೆಯಬಾರದೇಕೆ ಎಂಬ ಆಲೋಚನೆ ಮಹಾರಾಜರಿಗೆ ಬಂದಿತು. ಆಗ ದಿವಾನರಾಗಿದ್ದ ಸರ್‌ ಎಂ. ವಿಶ್ವೇಶ್ವರಯ್ಯ ಹಾಗೂ ಸರ್‌ ಆಲ್‌ಫ್ರೆಡ್‌ ಚಾಟರ್‌ಟನ್‌ ಜತೆಗೆ ಚರ್ಚಿಸಿದ ಮಹಾರಾಜರು, ಶ್ರೀಗಂಧದ ಎಣ್ಣೆ ತಯಾರಿಸುವುದಕ್ಕೆ ಸಂಬಂಧಿಸಿದಂತೆ ಯೋಜನೆ ಯೊಂದನ್ನು ಸಿದ್ಧಪಡಿಸುವಂತೆ ಸೂಚಿಸಿದರು.

ಐಐಎಸ್‌ಸಿಯಲ್ಲಿ ಸಂಶೋಧನೆ
ಶ್ರೀಗಂಧದ ಮರಗಳ ತುಂಡುಗಳಿಂದ ತೈಲ ತೆಗೆಯುವ ಮೊಟ್ಟ ಮೊದಲ ಪ್ರಯತ್ನ ಹೀಗೆ ಆರಂಭ ಗೊಂಡಿತು. ಬೆಂಗಳೂರಿನ ‘ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌’ನ (ಐಐಎಸ್‌ಸಿ) ವಿಜ್ಞಾನಿ ಗಳು ಗಂಧದ ಎಣ್ಣೆ ತೆಗೆಯುವುದಕ್ಕೆ ಸಂಬಂಧಿಸಿದ ಸಂಶೋಧನೆಯಲ್ಲಿ ತೊಡಗಿದರು. ಪ್ರೊ. ಸದ್ಬರೊ ಮತ್ತು ವ್ಯಾಟ್ಸನ್‌ ನೇತೃತ್ವದ ತಂಡ ಶ್ರೀಗಂಧದ ಮರದಿಂದ ಸುಗಂಧ ತೈಲ ತೆಗೆಯುವ ಪ್ರಯತ್ನದಲ್ಲಿ ಯಶಸ್ವಿಯಾಯಿತು. ಈ ಬಗೆಯಲ್ಲಿ ಸುಗಂಧಭರಿತ ನೈಸರ್ಗಿಕ ತೈಲ ಮೈಸೂರು ಸೇರಿದಂತೆ ಇಡೀ ನಾಡಿಗೆ ಮೊದಲ ಬಾರಿಗೆ ಪರಿಚಯವಾಯಿತು. ಇದರಿಂದ ಮೈಸೂರು ರೇಷ್ಮೆ, ಮೈಸೂರು ಚಿಗುರೆಲೆ ಮೊದಲಾದವುಗಳಿಂದ ಹೆಸರಾಗಿದ್ದ ಮೈಸೂರು ಸಂಸ್ಥಾನದ ಪರಂಪರೆಯ ಹೆಗ್ಗುರುತುಗಳ ಸಾಲಿಗೆ ಶ್ರೀಗಂಧದ ಎಣ್ಣೆಯೂ ಸೇರ್ಪಡೆಯಾಯಿತು.

ಗಂಧದ ಎಣ್ಣೆಯ ತಯಾರಿಕೆಯು ಯಶಸ್ವಿಯಾದ ನಂತರ 1916ರಲ್ಲಿ ಬೆಂಗಳೂರಿನಲ್ಲಿ ಮರದ ತೊಗಟೆ ತೆಗೆದು ಚಿಕ್ಕ ಗಾತ್ರಕ್ಕೆ ಶ್ರೀಗಂಧದ ತುಂಡುಗಳನ್ನು ಸಿದ್ಧಪಡಿಸುವ ಘಟಕ ಆರಂಭವಾಯಿತು.

ಮರುವರ್ಷ, ಅಂದರೆ 1917ರಲ್ಲಿ ಮೈಸೂರಿನ ಅರದನಹಳ್ಳಿ (ಈಗಿನ ಅಶೋಕಪುರಂ) ಶ್ರೀಗಂಧದ ಎಣ್ಣೆ ಕಾರ್ಖಾನೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್‌ ಆರಂಭಿಸಿದರು. 36 ಎಕರೆಗಳ ವಿಶಾಲವಾದ ಪ್ರದೇಶದಲ್ಲಿ ನೆಲೆಗೊಂಡಿರುವ ಶ್ರೀಗಂಧದ ಎಣ್ಣೆ ಕಾರ್ಖಾನೆ ಯಲ್ಲಿ ಈಗಲೂ ಶ್ರೀಗಂಧದ ಎಣ್ಣೆ, ಅಗರಬತ್ತಿ ಹಾಗೂ ಧೂಪವನ್ನು ತಯಾರಿಸಲಾಗುತ್ತದೆ.

ಎರಡನೇ ತಲೆಮಾರು
ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ನಂತರ ಅವರ ಪುತ್ರ ಜಯಚಾಮರಾಜೇಂದ್ರ ಒಡೆಯರ್‌ ಅವರು ಗಂಧದ ಎಣ್ಣೆ ಕಾರ್ಖಾನೆಯನ್ನು ಮುನ್ನಡೆಸಿದರು. ಪುಟ್ಟ ಗಂಧದ ಮರದ ಮೇಲೆ ಅವರು, ತಮ್ಮ ಪತ್ನಿ ಸತ್ಯ ಪ್ರೇಮಕುಮಾರಿ ಅವರೊಂದಿಗೆ 1938ರಲ್ಲಿ ಇಂಗ್ಲಿಷಿನಲ್ಲಿ ಸಹಿ ಮಾಡಿದ್ದನ್ನು ಈಗಲೂ ಸಂಗ್ರಹಿಸಿಡಲಾಗಿದೆ.

200 ಮಂದಿಗೆ ನೌಕರಿ
‘ಈ ಹಿಂದೆ 200 ಕಾರ್ಮಿಕರು ಈ ಕಾರ್ಖಾನೆ ಯಲ್ಲಿದ್ದರು. ಈಗ ಕೆಲಸ ಕಾಯಂ ಆಗಿರುವ 40 ಕಾರ್ಮಿಕರಿದ್ದಾರೆ. ಗುತ್ತಿಗೆ ಆಧಾರದಲ್ಲಿ 120 ಕಾರ್ಮಿಕರು ದುಡಿಯುತ್ತಿದ್ದಾರೆ’ ಎಂದು ವಿವರಿಸುತ್ತಾರೆ ಶ್ರೀಗಂಧದ ಎಣ್ಣೆ ತಯಾರಿಕೆ ವಿಭಾಗದ ಮುಖ್ಯಸ್ಥ ಕೆ.ಪಿ. ನಾಗೇಂದ್ರ.

1980ರ ದಶಕಕ್ಕೂ ಮುನ್ನ ಶ್ರೀಗಂಧದ ಎಣ್ಣೆಯನ್ನು ದೇಶದ ವಿವಿಧೆಡೆಗಷ್ಟೇ ಅಲ್ಲದೆ ವಿವಿಧ ದೇಶಗಳಿಗೂ ಬ್ಯಾರೆಲ್‌ಗಳ ಲೆಕ್ಕದಲ್ಲಿ ರಫ್ತು ಮಾಡಲಾಗುತ್ತಿತ್ತು. ಆದರೆ, 1987ರಲ್ಲಿ ರಫ್ತು ವಹಿವಾಟು ಸ್ಥಗಿತಗೊಳಿಸಲಾಯಿತು. ಶ್ರೀಗಂಧದ ಮರಗಳ ಕೊರತೆ ಎದುರಾಗಿದ್ದೇ ಇದಕ್ಕೆ ಕಾರಣ. ಈಗಲೂ ಶ್ರೀಗಂಧದ ಎಣ್ಣೆ ಉತ್ಪಾದಿಸಲಾಗುತ್ತದೆ. ಆದರೆ, ಅದಷ್ಟನ್ನೂ ಸಾಬೂನು ಹಾಗೂ ಶ್ರೀಗಂಧದ ಎಣ್ಣೆ ಮಾರಾಟಕ್ಕೆ ಮಾತ್ರ ಬಳಸಲಾಗುತ್ತದೆ.

ಇದಕ್ಕಾಗಿ ವಾರ್ಷಿಕ 2,300 ಕೆ.ಜಿಗಳಷ್ಟು ಶ್ರೀಗಂಧದ ತುಂಡುಗಳು ಬೇಕಾಗುತ್ತವೆ. ಅಂದರೆ ಸುಮಾರು 70 ಟನ್ ಭಾರದ ಶ್ರೀಗಂಧ ಮರಗಳನ್ನು ಕತ್ತರಿಸಿ ಬರಬೇಕಾಗುತ್ತದೆ. ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ಧಾರವಾಡ, ಶಿವಮೊಗ್ಗ ಹಾಗೂ ಮೈಸೂರಿನ ವಿವಿಧ ಭಾಗಗಳಿಂದ ಶ್ರೀಗಂಧದ ಮರಗಳು ಮೈಸೂರಿಗೆ ರವಾನೆ ಆಗುತ್ತವೆ. ಐದು ಗ್ರಾಂ ಶ್ರೀಗಂಧದ ಎಣ್ಣೆಗೆ ಈಗ ರೂ1,800 ಹಾಗೂ 10 ಗ್ರಾಂಗೆ ರೂ3,600 ದರ ನಿಗದಿಪಡಿಸಲಾಗಿದೆ. ಮೈಸೋಪು ಹಾಗೂ ಬಟ್ಟೆ ತೊಳೆಯುವ ಸಾಬೂನು ಬೆಂಗಳೂರಿನ ರಾಜಾಜಿನಗರದಲ್ಲಿರುವ ಕೈಗಾರಿಕೆ ಪ್ರದೇಶದಲ್ಲಿಯ ಕಾರ್ಖಾನೆಯಲ್ಲಿ ಸಿದ್ಧಗೊಳ್ಳುತ್ತವೆ.

ವಿದೇಶಿ ಉಡುಗೊರೆ ಪ್ರೇರಣೆ
1918ರಲ್ಲಿ ಫ್ರಾನ್ಸ್‌ನಿಂದ ಬಂದ ಅತಿಥಿಗಳು, ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗೆ ಅಪರೂಪದ ಕಾಣಿಕೆ ನೀಡಿದರು. ಯಾವುದು ಆ ಅಪರೂಪದ ಕಾಣಿಕೆ ಎಂದರೆ; ಅವು ಅಮೋಘವಾದ ಸುವಾಸನೆಯ ಸಾಬೂನು ಬಿಲ್ಲೆಗಳಾಗಿದ್ದವು. ಅಚ್ಚರಿಯ ಸಂಗತಿ ಏನೆಂದರೆ, ಭಾರತದಲ್ಲಿ ಸಿದ್ಧಪಡಿಸಿದ ಶ್ರೀಗಂಧ ಎಣ್ಣೆಯನ್ನು ಬಳಸಿಯೇ ಪರಿಮಳದ ಆ ಸಾಬೂನು ಬಿಲ್ಲೆಗಳನ್ನು ಫ್ರಾನ್ಸ್‌ನಲ್ಲಿ ತಯಾರಿಸಲಾಗಿತ್ತು! ಆಗ ಮಹಾರಾಜರು, ‘ನಾವೂ ಏಕೆ ಸಾಬೂನು ತಯಾರಿಸಬಾರದು?’ ಎಂದು ಆಲೋಚಿಸಿದರು.

ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದ ಅವರು, ರಸಾಯನಶಾಸ್ತ್ರದಲ್ಲಿ ಅಧ್ಯಯನ ಮಾಡಿದ್ದ ಎಸ್‌.ಜಿ.ಶಾಸ್ತ್ರಿ ಅವರನ್ನು ತರಬೇತಿಗಾಗಿ ಲಂಡನ್‌ಗೆ ಕಳುಹಿಸಿದರು. ವಿದೇಶದಿಂದ ಮೈಸೂರಿಗೆ ಮರಳಿದ ಎಸ್‌.ಜಿ.ಶಾಸ್ತ್ರಿ ಅವರು, ಸ್ಥಳೀಯವಾಗಿ ಕೆಲವು ಪ್ರಯೋಗಗಳನ್ನು ನಡೆಸಿದರು. ಕೆಲವು ದಿನಗಳ ನಂತರ ಮೈಸೂರು ಸ್ಯಾಂಡಲ್‌ ಸಾಬೂನು ಜನ್ಮತಳೆಯಿತು.

ಮೊದಲ ಸಾಬೂನು
ಅದು ಉಳಿದ ಸಾಬೂನುಗಳಂತೆ ಸಾಧಾರಣವಾದ ಆಕಾರದಲ್ಲಿ ಇರಬಾರದು ಎಂಬ ಆಲೋಚನೆಯಲ್ಲಿ ತುಸು ಭಿನ್ನವಾದ ಅಚ್ಚು ತಯಾರಿಸಿದರು. ಹೊರಗಿನ ಗಾಳಿ, ಬಿಸಿಲು, ತೇವಾಂಶ, ತಾಪಕ್ಕೆ ಬಣ್ಣಗೆಡದಂತೆ, ಸಾಬೂನು ದೀರ್ಘ ಕಾಲ ಶ್ರೀಗಂಧದ ಪರಿಮಳವನ್ನು ಕಳೆದುಕೊಳ್ಳದಂತೆ ಭದ್ರವಾಗಿರಿಸಲು ವಿಶಿಷ್ಟವಾದ ಹೊರಕವಚವನ್ನೂ ತಯಾರಿಸಲಾಯಿತು. ಹೀಗೆ ಬಹಳ ಮುತುವರ್ಜಿಯಿಂದ ತಯಾರಾದ ‘ಮೈಸೂರು ಸ್ಯಾಂಡಲ್‌ ಸಾಬೂನು’ 1918ರಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡಿತು.

ಹೀಗೆ 97 ವರ್ಷಗಳ ಹಿಂದೆ ಶುರುವಾದ ‘ಮೈಸೂರು ಸ್ಯಾಂಡಲ್‌ ಸಾಬೂನು’ ಯಾತ್ರೆ, ಈಗಲೂ ಮುಂದುವರಿದಿದೆ. ಮೊದಲಿನಷ್ಟು ಇಲ್ಲದೇ ಇದ್ದರೂ ಸಹ ಆ ಶ್ರೀಗಂಧ ಪರಿಮಳದ ಸಾಬೂನು, ಈಗಲೂ ಗರಿಮೆ, ಜನಪ್ರಿಯತೆ ಉಳಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಬಹಳ ವೈವಿಧ್ಯಮಯವಾದ ನೂರಾರು ಸಾಬೂನುಗಳಿದ್ದರೂ ಮೈಸೂರ್‌ ಸ್ಯಾಂಡಲ್‌ ಸೋಪ್‌ ಬಳಸುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿಯೇ ಇದೆ ಎನ್ನುತ್ತಾ ಹಳೆಯ ಮತ್ತು ಈಗಿನ ದಿನಗಳನ್ನು ಮೆಲಕು ಹಾಕುತ್ತಾರೆ ನಾಗೇಂದ್ರ.

ಈಗಲೂ ಕೂಡಾ ಸಾಬೂನಿನ ಗುಣಮಟ್ಟ ಹೆಚ್ಚಿಸುವ, ಬೇರೆಯದೇ ಆಕಾರ, ಬಣ್ಣ, ಸುವಾಸನೆ ನೀಡುವ ವಿಚಾರದಲ್ಲಿ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ‘ಮೈಸೂರು ಮಿಲೆನಿಯಂ’ ಎಂಬ ವಿಶೇಷ ಗುಣಮಟ್ಟದ ಶ್ರೀಗಂಧ ಪರಿಮಳದ ಸಾಬೂನನ್ನು ತಿಂಗಳುಗಳ ಹಿಂದೆಯೇ ರೂಪಿಸಲಾಗಿದ್ದು, ರೂ720ಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಶ್ರೀಗಂಧದ ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿ ತಯಾರಿಸಲಾಗುತ್ತಿದೆ ಎನ್ನುತ್ತಾರೆ ಸಾಬೂನು ತಯಾರಿಕೆ ವಿಭಾಗದ ಮುಖ್ಯಸ್ಥ.

Write A Comment