ಕರ್ನಾಟಕ

ಉದ್ಧಾರಕನ ವೇಷದಲ್ಲಿ ಇಂಗ್ಲಿಷ್: ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಮತ

Pinterest LinkedIn Tumblr

pvec14Ajji-1

ಬೆಂಗಳೂರು: ‘ಆಧುನಿಕತೆ ಶತ್ರುವಾಗಿ ಬಂದಿದ್ದರೆ ನಾವೆಲ್ಲ ಎದುರಿಸುತ್ತಿದ್ದೆವು. ಆಧುನಿಕತೆ ಉದ್ಧಾರಕನ ರೀತಿಯಲ್ಲಿ ಮಿತ್ರನಾಗಿ ಬಂತು. ಹಾಗಾಗಿ ನಾವೆಲ್ಲ ಮಾರು ಹೋದೆವು. ಅದೇ ರೀತಿ ಇಂಗ್ಲಿಷ್‌ ಸಹ ಬಂದಿದೆ’ ಎಂದು ಹಿರಿಯ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ವಿಶ್ಲೇಷಿಸಿದರು.

‘ಅಂಕಿತ ಪುಸ್ತಕ’ ಪ್ರಕಾಶನದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್‌ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅವರ ‘ಅಡಗೂಲಜ್ಜಿ’ ಕಾದಂಬರಿ ಹಾಗೂ ‘ಕನ್ನಡಾಭಿಮಾನ’ ಕನ್ನಡ ಪರ ಚಿಂತನ ಕೃತಿ (ಮೂರನೇ ಮುದ್ರಣ) ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹಳ್ಳಿಯ ತಾಯಿ ಸಹ ಮಗನಿಗೆ ಇಂಗ್ಲಿಷ್‌ ಶಿಕ್ಷಣ ನೀಡಬೇಕು ಎಂದು ಬಯಸುತ್ತಿದ್ದಾಳೆ. ಇಂಗ್ಲಿಷ್‌ ಭಾಷೆ ಅಂತಹ ಮೋಡಿ ಮಾಡಿದೆ. ಇಂಗ್ಲಿಷ್‌ ಭಾಷೆ­ಯನ್ನು ವಿರೋಧಿಸುವ ಸಾಧ್ಯತೆಗಳು ಸಹ ಕಾಣುತ್ತಿಲ್ಲ’ ಎಂದರು.

‘ನಮ್ಮ ಬದುಕನ್ನು ತುಂಬಾ ಅಲ್ಲೋಲಕಲ್ಲೋಲ ಮಾಡುತ್ತಿರುವುದು ಸಮೂಹ ಮಾಧ್ಯಮಗಳು. ನಿತ್ಯ ನೂರಾರು ಚಾನೆಲ್‌ಗಳನ್ನು ನೋಡುತ್ತೇವೆ. ಯಾವು­ದರ ಬಗ್ಗೆಯೂ ಧ್ಯಾನಸ್ಥ ಮನಸ್ಥಿತಿ ಇಲ್ಲ. ಮಕ್ಕಳು ಮಾಧ್ಯಮಗಳ ದಾಸ್ಯಕ್ಕೆ ಒಳಗಾಗುತ್ತಿದ್ದಾರೆ. ಸಮಾಜ ರೂಪಿಸುವವರು ನಾವೇ ಎಂಬ ಅಹಂಕಾರ ಮಾಧ್ಯಮಗಳಿಗೆ ಬಂದಿದೆ’ ಎಂದರು.

‘ಇಡೀ ಸಮಾಜವನ್ನು ಒಳಗೊಳ್ಳುವ ಶಕ್ತಿ ಸೃಜನ­ಶೀಲತೆಗೆ ಇದೆ. ಸೃಜನಶೀಲತೆಗೆ ದಾಸ್ಯವನ್ನು ಕಿತ್ತೊಗೆ­ಯುವ, ಪಟ್ಟಭದ್ರ ಹಿತಾಸಕ್ತಿಯನ್ನು ವಿರೋಧಿ­­ಸುವ ಶಕ್ತಿ ಇದೆ. ದುರಂತವೆಂದರೆ ಅನೇಕ ಸಲ ಸೃಜನಶೀಲ ಶಕ್ತಿಗಳು ಪಟ್ಟಭದ್ರ ಹಿತಾಸಕ್ತಿಗಳ ಮುಂದೆ ಮಂಡಿ­ಯೂರಿ ಕೂರುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿ­ದರು. ‘ಜನಸಂಸ್ಕೃತಿ ಜಡವಾದುದು ಅಲ್ಲ, ಪುರಾತನ­ವಾದುದು ಅಲ್ಲ. ಜನಪದವನ್ನು ಪುನರ್‌­ವ್ಯಾಖ್ಯಾನ ಮಾಡುವ ರೀತಿಯಲ್ಲಿ ಬರಗೂರು ಅವರು ಈ ಕಾದಂಬರಿ ಬರೆದಿದ್ದಾರೆ’ ಎಂದು ವ್ಯಾಖ್ಯಾನಿಸಿದರು.

ಕೃತಿ ಬಿಡುಗಡೆ ಮಾಡಿದ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ‘ಈ ಹಿಂದೆ ಶಾಲೆಗಳಲ್ಲಿ ವಾರಕ್ಕೆ ಒಂದು ಗಂಟೆ ಕತೆ ಹೇಳಲಾಗುತ್ತಿತ್ತು. ಈಗ ಅಂತಹ ಸಂಸ್ಕೃತಿ ಇಲ್ಲ. ಕತೆ ನಮ್ಮಿಂದ ದೂರ ಆಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಡಾ. ಬರಗೂರು ರಾಮಚಂದ್ರಪ್ಪ ಮಾತನಾಡಿ, ಜನ ಉಳಿದರೆ ಭಾಷೆ ಉಳಿಯುತ್ತದೆ. ಜನಗಳ ಮೂಲಕ ಭಾಷೆಯನ್ನು ನೋಡುವ ತಾತ್ವಿಕತೆ ಬೆಳೆಸಿ­ಕೊಳ್ಳಬೇಕು. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಮೂಲಕ ಮಾತೃಭಾಷಾ ಶಿಕ್ಷಣಕ್ಕಾಗಿ ಹೋರಾಟ ನಡೆಯಬೇಕು. ಇದಕ್ಕೆ ರಾಷ್ಟ್ರವ್ಯಾಪಿ ಹೋರಾಟ ಅಗತ್ಯ ಎಂದರು.

Write A Comment