ಕನ್ನಡ ವಾರ್ತೆಗಳು

ಎಚ್1ಎನ್1 ಎದುರಿಸಲು ಮುಂಜಾಗೃತಾ ಕ್ರಮಕ್ಕೆ ಜಿಲ್ಲಾಡಳಿತ ಸನ್ನದ್ಧ : ಎ.ಬಿ. ಇಬ್ರಾಹೀಂ

Pinterest LinkedIn Tumblr

DC_ press_meet_1

ಮಂಗಳೂರು, ಫೆ. 14 : ಎಚ್1 ಎನ್1 ರೋಗದ ಬಗ್ಗೆ ಜಿಲ್ಲೆಯ ಜನರು ಯಾವುದೇ ಕಾರಣಕ್ಕೂ ಭಯ ಪಡುವ ಅಗತ್ಯವಿಲ್ಲ. ಅಗತ್ಯ ಔಷಧ ಹಾಗೂ ಸಕಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಕೈಗೊಳ್ಳುವ ಮೂಲಕ ರೋಗವನ್ನು ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಹೇಳಿದ್ದಾರೆ. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ರೋಗದ ಬಗ್ಗೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಆರೋಗ್ಯ ಅಧಿಕಾರಿಗಳಿಗೆ ಸೋಂಕಿನ ಗುಣ ಲಕ್ಷಣ, ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೋಗದ ಬಗ್ಗೆ ಜಿಲ್ಲೆಯ ಜನತೆ ಆತಂಕ ಪಡಬೇಕಾಗಿಲ್ಲ. ಸಾಕಷ್ಟು ಪ್ರಮಾಣದಲ್ಲಿ ಸಂಬಂಧಪಟ್ಟ ಗುಳಿಗೆಗಳು ಲಭ್ಯವಿದ್ದು, ಈ ರೋಗದ ಚಿಕಿತ್ಸೆಗೆ ನೀಡಲಾಗುವ ಟಾಮಿಫ್ಲೂ ಅಥವಾ ಝನಮಿವೆರ್ ಎಂಬ ಗುಳಿಗೆಗಳು ದುಬಾರಿಯಾಗಿರುವ ಕಾರಣ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಉಚಿತವಾಗಿ ನೀಡುವ ವ್ಯವಸ್ಥೆಯನ್ನು ಕೂಡಾ ಕಲ್ಪಿಸಲಾಗಿದೆ. ಎಚ್1ಎನ್1 ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸೋಂಕು ರೋಗವಾಗಿರುವ ಕಾರಣ ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದರು. ಜಿಲ್ಲೆಯಲ್ಲಿ ಒಟ್ಟು 2,000ದಷ್ಟು ಈ ಗುಳಿಗೆಗಳು ಲಭ್ಯವಿದ್ದು, ತಾಲೂಕು ಆಸ್ಪತ್ರೆಗಳಲ್ಲಿ ತಲಾ 200 ಗುಳಿಗೆಗಳನ್ನು ಈಗಾಗಲೇ ಸರಬರಾಜು ಮಾಡಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾ ಗಿದೆ ಎಂದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಕೃಷ್ಣ ರಾವ್ , ಈ ಸೋಂಕು ಶೀತ, ಜ್ವರ, ಕೆಮ್ಮು, ಮೂಗಿನ ಸೋರುವಿಕೆ, ತಲೆನೋವು, ಮೈಕೈ ನೋವು, ಚಳಿ ಮತ್ತು ಸುಸ್ತು ಮೊದಲಾದ ಲಕ್ಷಣಗಳಿಂದ ಕೂಡಿರುತ್ತದೆ. ರೋಗ ಲಕ್ಷಣ ಕಂಡು ಬಂದಾಗ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆಯುವುದು ಅಗತ್ಯ. ರೋಗ ಲಕ್ಷಣಗಳು ಕಂಡು ಬಂದಲ್ಲಿ ಮೂಗು, ಗಂಟಲಿನ ಸ್ರಾವದ ಲೇಪನವನ್ನು ಪ್ರಯೋಗಶಾಲೆಯಲ್ಲಿ ಪರೀಕ್ಷೆಗೆ ಒಳಪಡಿಸಿ ಸೋಂಕನ್ನು ದೃಢಪಡಿಸಲಾಗುತ್ತದೆ ಎಂದು ಹೇಳಿದರು. ಕೆಮ್ಮುವಾಗ, ಸೀನುವಾಗ ಕರವಸ್ತ್ರ ಹಾಗೂ ಟಿಶ್ಯೂ ಪೇಪರ್‌ನಿಂದ ಮೂಗನ್ನು ಮುಚ್ಚಿಕೊಳ್ಳುವುದು, ಆಗಾಗ ಕೈಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸುವುದು, ವೈಯಕ್ತಿಕ ಸ್ವಚ್ಛತೆ ಕಾಪಾಡುವುದು, ಸ್ನಾನ ಮಾಡಿ ಶುಭ್ರ ಬಟ್ಟೆಗಳನ್ನು ಧರಿಸುವುದು, ಜನನಿಬಿಡ ಪ್ರದೇಶದಿಂದ ದೂರವಿರುವುದು, ಸೋಂಕಿತರ ಅತೀ ಸಮೀಪ ಹೋಗದಿರುವುದು,

ಹಸ್ತಲಾಘವ, ತಬ್ಬಿಕೊಳ್ಳುವುದು, ಚುಂಬನ ಹಾಗೂ ಕಣ್ಣು- ಮೂಗು- ಬಾಯಿಯನ್ನು ಆಗಾಗ ಕೈಯಿಂದ ಮುಟ್ಟಿದಿರುವ ಮೂಲಕ ಈ ಸೋಂಕು ಹರಡದಂತೆ ತಡೆಗಟ್ಟಬಹುದು ಎಂದು ಅವರು ವಿವರಿಸಿದರು. ಸೋಂಕಿತ ಮಕ್ಕಳಲ್ಲಿ ತೀವ್ರ ಉಸಿರಾಟದ ತೊಂದರೆ, ಮೈ ನೀಲಿಯಾಗುವುದು, ಸಾಕಷ್ಟು ದ್ರವ ಪದಾರ್ಥ ಸೇವನೆಗೆ ತೊಂದರೆ, ಎಚ್ಚರ ತಪ್ಪುವಿಕೆ, ಅತಿಯಾದ ಕಿರಿಕಿರಿ, ತೀವ್ರತರದ ಜ್ವರ ಮತ್ತು ಕೆಮ್ಮು, ಜ್ವರದ ಜೊತೆ ಮೈ ಮೇಲೆ ಗೊಬ್ಬೆಗಳಂತಹ ಲಕ್ಷಣಗಳನ್ನು ಕಾಣಬಹುದು. ದೊಡ್ಡವರಲ್ಲಿ ಎದೆ ಹಾಗೂ ಹೊಟ್ಟೆಯಲ್ಲಿ ನೋವು ಅಥವಾ ಒತ್ತಡ, ಇದ್ದಕ್ಕಿದ್ದಂತೆ ತಲೆ ಸುತ್ತುವಿಕೆ, ನಿರಂತರ ವಾಂತಿ, ಕೆಲಸದಲ್ಲಿ ಗೊಂದಲ ಗೋಜು ಮೊದಲಾದ ಲಕ್ಷಣಗಳು ಗೋಜರಿಸುತ್ತ್ತವೆ. ಇಂತಹ ಲಕ್ಷಣಗಳು ಕಂಡು ಬಂದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು. ಸಭೆಯಲ್ಲಿ ಮನಪಾ ಆಯುಕ್ತೆ ಹೆಫ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕಿ ಡಾ. ರಾಜೇಶ್ವರಿ ದೇವಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಜೇಶ್, ಮನಪಾ ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದ.ಕ. ಜಿಲ್ಲೆಯಲ್ಲಿ 7 ಪ್ರಕರಣಗಳು ಪತ್ತೆ: 2 ಸಾವು:

ದ.ಕ. ಜಿಲ್ಲೆಯಲ್ಲಿ ಈವರೆಗೆ 37 ಶಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 7 ಪ್ರಕರಣಗಳು ದೃಢಪಟ್ಟಿವೆ. ಏಳು ಮಂದಿಯಲ್ಲಿ ಓರ್ವ ರೋಗಿ ಮಾತ್ರ ದ.ಕ. ಜಿಲ್ಲೆಯವರಾಗಿದ್ದು, ಇಬ್ಬರು ಹೊರ ರಾಜ್ಯದವರಾಗಿದ್ದಾರೆ (ಗುಜರಾತ್ ಮತ್ತು ಕೇರಳ ಮೂಲದವರು. ಇವರಿಬ್ಬರೂ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ). ಇಬ್ಬರು ಸೋಂಕಿತರು ಮಡಿಕೇರಿ ಹಾಗೂ ಇಬ್ಬರು ಉಡುಪಿ ಜಿಲ್ಲೆಯವರಾಗಿದ್ದಾರೆ. ದ.ಕ. ಜಿಲ್ಲೆಯ ಸೋಂಕಿತ ವ್ಯಕ್ತಿ ಚಿಕಿತ್ಸೆಯಿಂದ ಗುಣಮುಖ ಹೊಂದಿದ್ದು, ಉಳಿದ ನಾಲ್ಕು ಮಂದಿಯ ಚಿಕಿತ್ಸೆ ನಡೆಯುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಕೃಷ್ಣ ರಾವ್ ತಿಳಿಸಿದ್ದಾರೆ. ರೋಗ ಲಕ್ಷಣ ಕಂಡು ಬಂದಾಕ್ಷಣ ಯಾವುದೇ ಕಾರಣಕ್ಕೂ ಸಂಬಂಧಪಟ್ಟ ಔಷಧಿ ತೆಗೆದುಕೊಳ್ಳುವ ಅಗತ್ಯವಿಲ್ಲ. ರೋಗ ದೃಢ ಪಟ್ಟ ಬಳಿಕ ಮಾತ್ರವೇ ಮಾತ್ರೆಗಳನ್ನು ವೈದ್ಯರ ಸಲಹೆಯ ಮೇರೆಗೆ ಪಡೆಯಬೇಕಾಗುತ್ತದೆ. ಹಾಗಾಗಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕ ಅಥವಾ ಭಯ ಪಡುವ ಅಗತ್ಯವಿಲ್ಲ. ಎಚ್ಚರಿಕೆ ವಹಿಸುವ ಮೂಲಕ ರೋಗ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.

Write A Comment