ಕರ್ನಾಟಕ

ನಾನೂ ಉದ್ಯಮಿ: ಮೈಕ್‌ ಆಪರೇಟರ್ ಉದ್ಯಮಿಯಾದ ಕಥೆ

Pinterest LinkedIn Tumblr

4com-garment-(1)_0

ಹಲೋ ಮೈಕ್ ಚೆಕ್‌… ಮೈಕ್ ಚೆಕ್‌… ಎಂದು ಪರೀಕ್ಷಿಸುತ್ತಾ ಬದುಕು ಆರಂಭಿಸಿ, ಮೈಕ್‌ನಲ್ಲಿ ಮಾತನಾಡಿದವರ ಮಾತುಗಳನ್ನು ಆಲಿಸಿ, ಅದರಂತೆಯೇ ಮುನ್ನಡೆದು ಉದ್ಯಮಿಯಾದ ಯುವಕನ ಯಶೋಗಾಥೆ ಇದು.

ಇವರು ಮಹಮದ್‌ ಶಫೀಕ್‌. ಕೊಪ್ಪಳದ ಹೂವಿನಾಳು ರಸ್ತೆಯ ಕುವೆಂಪು ನಗರದಲ್ಲಿ ಇಂದು ಎಂಎಸ್‌ಕೆ ಗಾರ್ಮೆಂಟ್ಸ್‌ ತಲೆಯೆತ್ತಿ ನಿಂತಿದೆ. ಎಂಎಸ್‌ಕೆ ಎಂಟರ್‌ಪ್ರೈಸಸ್ ಅಡಿ ಈ ಸಂಸ್ಥೆಯಿದೆ. ಏನಿಲ್ಲವೆಂದರೂ ಇಂದು ತಿಂಗಳಿಗೆ ನಾಲ್ಕೈದು ಲಕ್ಷ ರೂಪಾಯಿ ವಹಿವಾಟು ನಡೆಸುತ್ತಿದೆ. ಜವಳಿ ಕ್ಷೇತ್ರ, ಸಿದ್ಧ ಉಡುಪು, ಹೊಲಿಗೆ ಬಗ್ಗೆ ಯಾವುದೇ ಪ್ರಾಥಮಿಕ ಜ್ಞಾನವೂ ಇಲ್ಲದ ವ್ಯಕ್ತಿಯೊಬ್ಬ ಸಿದ್ಧ ಉಡುಪು ತಯಾರಿಕೆ ಮತ್ತು ಮಾರಾಟ ಕ್ಷೇತ್ರದಲ್ಲಿ ಬೆಳೆದ ಪರಿಯೇ ರೋಚಕ.

ಮಹಮದ್‌ ಶಫೀಕ್‌ ಸಿದ್ಧ ಉಡುಪು ಘಟಕವನ್ನು ಕಟ್ಟಿಬೆಳೆಸಿ, ಹತ್ತಾರು ಮಂದಿಗೆ ಉದ್ಯೋಗ ನೀಡಿದ್ದನ್ನು ಅವರದೇ ಮಾತುಗಳಲ್ಲಿ ಕೇಳೋಣ.
‘ಸುಮಾರು 15 ವರ್ಷಗಳ ಹಿಂದೆ ಕೊಪ್ಪಳದ ಯೂನಸ್‌ ರೇಡಿಯೊ ಸೆಂಟರ್‌ ಹೆಸರಿನ ಲೌಡ್‌ ಸ್ಪೀಕರ್‌ ಬಾಡಿಕೆ ಕೊಡುವ ಸಂಸ್ಥೆಯಲ್ಲಿ ಕೆಲಸಕ್ಕಿದ್ದೆ. ಸಭೆ ಸಮಾರಂಭಗಳಿಗೆ ಧ್ವನಿವರ್ಧಕ ಅಳವಡಿಸುವುದು, ಕುರ್ಚಿ, ಶಾಮಿಯಾನಾ ಹಾಕುವುದು ನನ್ನ ಕೆಲಸ. ತಿಂಗಳಿಗೆ ಒಂದೂವರೆ ಸಾವಿರ ರೂಪಾಯಿ ವೇತನ ಇತ್ತು. ಅದು ಬದುಕಿಗೆ ಏನೂ ಸಾಲುತ್ತಿರಲಿಲ್ಲ. ನಂತರ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮೈಕ್‌ ಆಪರೇಟರ್‌ ಆಗಿ ದಿನಗೂಲಿ ಕೆಲಸಕ್ಕೆ ಸೇರಿದೆ. ಆಗ ತಿಂಗಳಿಗೆ ಮೂರು ಸಾವಿರ ರೂಪಾಯಿ ವೇತನವಿತ್ತು.

ಬದುಕು ಬದಲಿಸಿದ ಸಭೆಗಳು…
ಜಿಲ್ಲಾ ಪಂಚಾಯಿತಿಯಲ್ಲಿ ಪ್ರಗತಿ ಪರಿಶೀಲನಾ ಸಭೆ, ಸಾಮಾನ್ಯ ಸಭೆ ಇತ್ಯಾದಿ ನಡೆಯುತ್ತಲೇ ಇರುತ್ತವೆ. ಈ ಸಭೆಗಳಲ್ಲಿ ಸ್ವಂತ ಉದ್ಯೋಗ, ಸಾಲ ಸೌಲಭ್ಯ, ಸಬ್ಸಿಡಿಗಳು… ಹೀಗೆ ಸರ್ಕಾರದಿಂದ ಬಡವರಿಗೆ ಇರುವ ಹಲವಾರು ಆರ್ಥಿಕ ನೆರವಿನ ಯೋಜನೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದವು. ಅವುಗಳನ್ನು ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದೆ.

ಹೌದು, ನಾನು ಉದ್ಯಮಿಯಾಗಬೇಕು ಎಂಬ ಕನಸು ಚಿಗುರಿದ್ದೇ ಆವಾಗ. ಅದನ್ನು ನನ್ನೊಳಗೇ ಮೊದಲು ಖಚಿತಪಡಿಸಿಕೊಂಡೆ.
ನಾನೂ ಉದ್ಯಮಿ ಆಗಬೇಕು. ನನ್ನಂತಹ ಹಲವರಿಗೆ ಉದ್ಯೋಗ ಕೊಡಬೇಕು. ನನ್ನ ಜತೆ ಇತರರೂ ಆರ್ಥಿಕವಾಗಿ ಬೆಳೆಯಬೇಕು ಎಂಬ ಮಹದಾಸೆಯೂ ಇತ್ತು. ಜಿಲ್ಲಾ ಪಂಚಾಯಿತಿಯ ಅಧಿಕಾರಿಯೊಬ್ಬರು ಒಂದು ದಿನ ಕರೆದು ಹೇಳಿದರು. ನಿನ್ನ ನೌಕರಿ ಕಾಯಂ ಆಗುವುದು ಖಾತ್ರಿ ಇಲ್ಲ. ನೀನು ಬೇರೇನಾದರೂ ಮಾಡುವ ಆಲೋಚನೆ ಇಟ್ಟುಕೊಂಡಿದ್ದರೆ ಅದನ್ನೇ ಮಾಡು. ಸ್ವಂತ ಉದ್ಯಮ ಆರಂಭಿಸು. ದೃತಿಗೆಡಬೇಡ ಎಂದರು.

ಕೆಲಸದಿಂದ ಬಂದ ಸಂಬಳದಲ್ಲಿಯೇ ಆವರೆಗೆ ಅಲ್ಪ ಸ್ವಲ್ಪ ಹಣ ಉಳಿಸಿದ್ದೆ. ಆ ದುಡ್ಡನ್ನೇ ಮೂಲ ಬಂಡವಾಳವಾಗಿ ಇಟ್ಟುಕೊಂಡು ಸಣ್ಣಪುಟ್ಟ ಗುತ್ತಿಗೆ ಕೆಲಸ ಕೈಗೊಳ್ಳಲು ಶುರು ಮಾಡಿದೆ.

ಯಾವುದಾದರೂ ಸಂಸ್ಥೆಗಳಿಗೆ ಬಾಡಿಗೆಗೆ ಪಾತ್ರೆ ಒದಗಿಸುವುದು. ವಿದ್ಯುತ್‌ ಕೆಲಸಗಳ ನಿರ್ವಹಣೆ, ಸಿವಿಲ್‌ ಕಾಮಗಾರಿಗಳು ಇತ್ಯಾದಿ.
ಸ್ವಲ್ಪಮಟ್ಟಿಗೆ ಭೂ ವ್ಯವಹಾರದಲ್ಲೂ ತೊಡಗಿಸಿಕೊಂಡೆ. ಹೂವಿನಾಳು ರಸ್ತೆಯ ಬಳಿ ನಮ್ಮ ಸಂಸ್ಥೆ ನೆಲೆಗೊಂಡಿರುವ ಈ ಜಮೀನನ್ನೂ ಖರೀದಿಸಿದೆ. ದೇವರು ಕೈಬಿಡಲಿಲ್ಲ. ಇಂಥದ್ದೇ ಉದ್ಯಮ ಎಂಬ ನಿರ್ದಿಷ್ಟ ಆಲೋಚನೆಯೂ ಇರಲಿಲ್ಲ.

ಇದೇ ಸ್ಥಳದಲ್ಲಿ ಪುಟ್ಟ ಕಟ್ಟಡ ಕಟ್ಟಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಿದೆ. ಆದರೆ, ಮಿನರಲ್‌ ವಾಟರ್‌ ಮಾರುಕಟ್ಟೆಯಲ್ಲಿ ವಿಪರೀತ ಸ್ಪರ್ಧೆ ಇದೆ. ಸಾಲದ್ದಕ್ಕೆ ಐಎಸ್‌ಐ ಮಾರ್ಕ್‌ ಬೇಕು ಎಂದು ಕೇಳುತ್ತಾರೆ. ಅದೆಲ್ಲ ಕಾರ್ಪೊರೇಟ್‌ ಕಂಪೆನಿಗಳ ಹುನ್ನಾರ ಅಷ್ಟೆ. ಏನು ಮಾಡಲಿ? ಅನಿವಾರ್ಯವಾಗಿ ನೀರಿನ ಘಟಕವನ್ನು ಕೆಲ ಕಾಲ ಸ್ಥಗಿತಗೊಳಿಸಿದೆ.

ಆದರೆ, ನೀರಿನ ಗುಣಮಟ್ಟ ಎಲ್ಲವನ್ನೂ ಖಾತ್ರಿಪಡಿಸಿಕೊಂಡ ಸರ್ಕಾರಿ ಅಧಿಕಾರಿಗಳೇ ತಮ್ಮ ಮನೆಗಳಿಗೆ ನೀರು ಬೇಕು ಎಂದು ಬೇಡಿಕೆ ಇಟ್ಟರು. ಇದೀಗ ಅದನ್ನು 20 ಲೀಟರ್‌ ಕ್ಯಾನ್‌ಗೆ ₨5ರಂತೆ ಪೂರೈಸುತ್ತಿದ್ದೇನೆ. ಇದು ಮಾರಾಟ ಅಲ್ಲ. ಸಮಾಜ ಸೇವೆ. ಘಟಕದ ನಿರ್ವಹಣೆ ಮತ್ತು ವಿದ್ಯುತ್‌ ವೆಚ್ಚಕ್ಕಾಗಿ ಕನಿಷ್ಠ ಮೊತ್ತ ಪಡೆಯುತ್ತಿದ್ದೇನೆ.

ಹೀಗೆ ಯೋಚನೆಗಳು ತಲೆ ಕೊರೆಯುತ್ತಲೇ ಇದ್ದವು. ಒಂದು ದಿನ ಜವಳಿ ಮತ್ತು ಕೈಮಗ್ಗ ಇಲಾಖೆಯ ಸಹಾಯಕ ನಿರ್ದೇಶಕ ಕೀರ್ತಪ್ಪ ಗೋಟೂರು ಅವರನ್ನು ಭೇಟಿಯಾಗಿ ನನ್ನ ಆಸೆ ನಿವೇದಿಸಿದೆ. ಅವರು ಸ್ಫೂರ್ತಿ ನೀಡಿ ಬೆಂಬಲಿಸಿದರು.

ಕೈಹಿಡಿದ ಹೊಲಿಗೆ
ಜವಳಿ ಮತ್ತು ಕೈಮಗ್ಗ ಇಲಾಖೆಯಿಂದಲೇ  ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡರು. ಓಣಿ ಓಣಿ ಓಡಾಡಿ ಕೆಲಸದ ಅಗತ್ಯವಿರುವ ಮಹಿಳೆಯರನ್ನು ಮನವೊಲಿಸಿ ತರಬೇತಿಗೆ ಕಳುಹಿಸಿದೆ. ನಾನೂ ತರಬೇತಿ ಪಡೆದೆ. ಮತ್ತದೇ ಛಲ. ನಾನು ಉದ್ಯಮಿ ಆಗಬೇಕು. ಸಿದ್ಧ ಉಡುಪು ಉದ್ಯಮದಲ್ಲಿ ಒಂದು ಪ್ರಯೋಗ.

ಅಧ್ಯಯನ ಆರಂಭ
ಘಟಕ ಆರಂಭಿಸುವುದಕ್ಕೂ ಮುನ್ನ ಬಳ್ಳಾರಿಗೆ ಹೋಗಿ ಅಲ್ಲಿ ಈಗಾಗಲೇ ಇರುವ ಜೀನ್ಸ್‌ ಉಡುಪು ತಯಾರಿಕಾ ಘಟಕಗಳಿಗೆ ಭೇಟಿ ನೀಡಿದೆ. ಆದರೆ, ಅನೇಕರು ಸಿದ್ಧ ಉಡುಪು ಉದ್ಯಮದ ಬಗ್ಗೆ ನಕಾರಾತ್ಮಕವಾಗಿಯೇ ಮಾತನಾಡಿ ನಿರಾಶೆ ಗೊಳಿಸಿದರು.

‘ಗಾರ್ಮೆಂಟ್‌ ಉದ್ಯಮ ತುಂಬಾ ರಿಸ್ಕ್. ಈಗಾಗಲೇ ಹಲವಾರು ಘಟಕಗಳು ಮುಚ್ಚಿವೆ. ಸುಮ್ಮನೆ ಕೈ ಸುಟ್ಟುಕೊಳ್ಳುತ್ತೀರಿ?’ ಎಂದು ಹೆದರಿಸಿದವರೇ ಬಹಳ ಮಂದಿ.

ಆದರೆ, ನಾನು ಎದೆಗುಂದಲಿಲ್ಲ. ಮುಚ್ಚಿದ ಘಟಕಗಳಿಗೂ ಭೇಟಿ ನೀಡಿದೆ. ಅವು ಯಾವ ಕಾರಣಕ್ಕೆ ಮುಚ್ಚಿದವು ಎಂಬುದನ್ನೂ ತಿಳಿದುಕೊಂಡೆ. ಏಕೆಂದರೆ ಇದೇ ಲೋಪ ನನ್ನ ಉದ್ಯಮದಲ್ಲಿ ಆಗಬಾರದಲ್ಲ.

ಯಾವ ಸಿದ್ಧ ಉಡುಪು ಘಟಕವೂ ಸೂಕ್ತ ಮಾರುಕಟ್ಟೆ ಇಲ್ಲದ ಕಾರಣದಿಂದ ಮುಚ್ಚಿರಲಿಲ್ಲ. ಸಮರ್ಪಕವಾದ ನಿಗಾ, ಪರಿಶ್ರಮ ಇಲ್ಲದೇ, ವಿಪರೀತ ಸಾಲದ ಸುಳಿಗೆ ಸಿಲುಕಿ ಸ್ಥಗಿತಗೊಂಡಿದ್ದವು.

ಮುನ್ನೆಚ್ಚರಿಕೆ ವಹಿಸಿದ ನಾನು ನಮ್ಮ ಸಿದ್ಧ ಉಡುಪು ಘಟಕ ಸ್ಥಾಪನೆಗೆ ಮಿತಿ ಮೀರಿ ಸಾಲ ಮಾಡಲು ಹೋಗಲಿಲ್ಲ. ಇದ್ದುದನ್ನೇ ಬಳಸಿಕೊಂಡು. ಹಂತಹಂತವಾಗಿ ಘಟಕ ವಿಸ್ತರಿಸುವ ನಿರ್ಧಾರ ಮಾಡಿದೆ.

ಈಗ ನನ್ನ  ಬ್ಯಾಂಕ್‌ ಸಾಲದ ಕಂತು ಬಾಕಿ ಇಲ್ಲ. ನಾನು ಶಿಫಾರಸು ಮಾಡಿದರೆ ಬ್ಯಾಂಕ್‌ನವರು ಸಾಲ ಕೊಡುವಷ್ಟು ವಿಶ್ವಾಸ ಗಳಿಸಿದ್ದೇನೆ.

ಟೈಲರ್ ಅಂಗಡಿ ಅಧ್ಯಯನ
ಉದ್ಯಮಕ್ಕೆ ಮಹಿಳೆಯರನ್ನೇ ಆಯ್ಕೆ ಮಾಡಲೂ ಕಾರಣವಿದೆ. ಕೊಪ್ಪಳದಲ್ಲಿ ಹಲವಾರು ಟೈಲರಿಂಗ್‌ ಅಂಗಡಿಗಳು ಮುಚ್ಚಿಹೋಗಿದ್ದವು. ಕಾರಣ ಕಾರ್ಮಿಕರ ಸಮಸ್ಯೆ. ಪುರುಷ ಕಾರ್ಮಿಕರು ಒಂದು ದಿನ ಬಂದರೆ ಮರುದಿನವೂ ಬರುತ್ತಾರೆ ಎಂಬ ಖಾತ್ರಿ ಇಲ್ಲ.  ಅರ್ಧ ಕೆಲಸ ಮಾಡಿಟ್ಟು ಅಂಗಡಿ ಬಿಟ್ಟು ಹೋಗುವುದು, ಯಾವುದೋ ಚಟಕ್ಕೆ ಬಲಿಯಾಗುವುದು. ಕೊನೆಗೆ ಮಾಲೀಕನಿಗೇ ಟೋಪಿ ಹಾಕಿದ ಹತ್ತಾರು ಘಟನೆಗಳು ನಡೆದಿದ್ದವು. ಅದಕ್ಕಾಗಿ ಮಹಿಳೆಯರಿಗೆ ತರಬೇತಿ ಕೊಡಿಸಿ ಕೆಲಸದಲ್ಲಿ ತೊಡಗಿಸಿದೆ. ಘಟಕ ಸ್ಥಾಪನೆಗೆ ಯೂನಿಯನ್‌ ಬ್ಯಾಂಕ್‌ ಸಾಲ ಕೊಟ್ಟಿತು.

ಗಂಟೆ ಬಾರಿಸುವುದಿಲ್ಲ
ಇಲ್ಲಿ ಇಂತಿಷ್ಟೇ ಹೊತ್ತಿಗೆ ಬರಬೇಕು, ಹೋಗಬೇಕು ಎಂಬ ನಿರ್ಬಂಧವೂ ಇಲ್ಲ. ಮಹಿಳೆಯೊಬ್ಬಳು ಬೆಳಿಗ್ಗೆ ತನ್ನೆಲ್ಲ ಕೆಲಸ ಮುಗಿಸಿದ ಬಳಿಕ ಬರುತ್ತಾಳೆ. ಇಲ್ಲಿ ತಡವಾಗಿ ಬಂದರೆ, ತನ್ನ ನಿಗದಿತ ಕೆಲಸ ಮುಗಿಸಿ ತಡವಾಗಿಯೇ ವಾಪಸ್‌ ಹೋಗುತ್ತಾಳೆ. ಇದರಿಂದ ಅವಳ ದುಡಿಮೆ, ಮನೆಯ ಕಾಳಜಿ ಎರಡರಲ್ಲೂ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ. ಇದು ಅವರಿಗೆ ಇಷ್ಟವಾಗುತ್ತದೆ. ಮಹಿಳೆಯರು ಪುರುಷರ ಬಟ್ಟೆಗಳನ್ನು ಇಷ್ಟೊಂದು ಸುಂದರವಾಗಿ ಹೊಲಿಯುವುದು ನೋಡಿ ನಗರದ ಟೈಲರ್‌ಗಳ ಕಣ್ಣು ಬಿದ್ದಿದೆ. ನಾವು ಬಟ್ಟೆ ಕೊಡುತ್ತೇವೆ. ಮನೆಯಲ್ಲೇ ಹೊಲಿದು ಕೊಡಿ ಎಂದು ಕೇಳುತ್ತಿದ್ದಾರೆ. ಅವರು ನೇರವಾಗಿ ಕೇಳಲಿ. ಸಂತೋಷದಿಂದ ಕಳುಹಿಸುತ್ತೇನೆ. ಅದರಿಂದ ನಾನು ಇನ್ನಷ್ಟು ಹೊಸಬರಿಗೆ ಅವಕಾಶ ಕೊಡಬಹುದು. ಹೋದವರು ಸ್ವಾವಲಂಬಿಗಳಾಗಿ ಬಾಳಬಹುದಲ್ಲವೇ’.

ಮಾರಾಟ ವ್ಯವಸ್ಥೆ
‘ಸಿದ್ಧ ಉಡುಪುಗಳ ಮಾರಾಟಕ್ಕೆ ನಾನು ಯಾವುದೇ ಪ್ರಚಾರ ತಂತ್ರ ಅನುಸರಿಸಿಲ್ಲ. ಘಟಕದ ಬಳಿಯೇ ಇರುವ ಪುಟ್ಟ ಕೊಠಡಿಯ ಕಪಾಟುಗಳಲ್ಲಿ ಪ್ಯಾಂಟ್‌, ಷರ್ಟ್‌ ಜೋಡಿಸಿಡಲಾಗಿದೆ. ಇಲ್ಲೇ ಟ್ರಯಲ್‌ ರೂಂ ಕೂಡಾ ಇದೆ. ಏನಿಲ್ಲವೆಂದರೂ ದಿನಕ್ಕೆ 50ರಿಂದ 60 ಉಡುಪುಗಳು ಮಾರಾಟವಾಗುತ್ತವೆ. ಬಂದ ಗ್ರಾಹಕರೇ ಇತರರಿಗೆ ಹೇಳುತ್ತಾರೆ. ಷೋರೂಂಗೆ ಬಾಡಿಗೆ ಸುರಿದು ದುಬಾರಿ ಬೆಲೆಗೆ ಮಾರುವುದಿಲ್ಲ.  ಹಬ್ಬ ಹರಿದಿನಗಳಲ್ಲೂ ಇದೇ ಬೆಲೆ. ಪ್ರತಿ ಉತ್ಪನ್ನದಲ್ಲಿ 50ರಿಂದ 60 ರೂಪಾಯಿ ಉಳಿದರೆ ಸಾಕು. ಇದುವರೆಗೆ ಬೇರೆ ಮಾರುಕಟ್ಟೆಗೆ ಕೊಟ್ಟಿಲ್ಲ. ನನಗೂ ಮತ್ತು ಅವರಿಗೂ ವ್ಯವಹಾರ ಮತ್ತು ತತ್ವದಲ್ಲಿ ಹೊಂದಾಣಿಕೆ ಆದರೆ ಮಾತ್ರ ಕೊಡುತ್ತೇನೆ. ಷೋರೂಂಗಳಿಗೆ ಕೊಟ್ಟರೆ ನಾನು ಇಲ್ಲಿ ಮಾರಾಟ ಮಾಡಬಾರದು, ಸಾಲವಾಗಿ ಕೊಡಬೇಕು. ಅವರದೇ ಮಾರಾಟ ಬೆಲೆ ಎಂದೆಲ್ಲಾ ನೂರೆಂಟು ನಿಬಂಧನೆಗಳನ್ನು ಹೇಳುತ್ತಾರೆ. ಅದಕ್ಕೆಲ್ಲಾ ನಾನು ಸಿದ್ಧನಿಲ್ಲ. ನನ್ನ ಗ್ರಾಹಕರನ್ನು ಕಳೆದುಕೊಳ್ಳಲೂ ಸಿದ್ಧವಿಲ್ಲ’.

ಗ್ರಾಹಕರೇ ಸಲಹೆಗಾರರು
ಫ್ಯಾಷನ್‌ ಯುಗದಲ್ಲಿ ಬದಲಾವಣೆಗಳು ಸಹಜ. ಈ ಬಗ್ಗೆ ಗ್ರಾಹಕರೇ ಸಲಹೆ ಕೊಡುತ್ತಾರೆ. ವಿನ್ಯಾಸ ಕೇಳುತ್ತಾರೆ. ಅದರಂತೆ ಒಂದೊಂದೇ ವಿನ್ಯಾಸ ಪ್ರಯೋಗ ಮಾಡುತ್ತೇನೆ. ಉತ್ಪನ್ನದಲ್ಲಿ ಸಣ್ಣ ಲೋಪ ಇದ್ದರೂ ಬದಲಾಯಿಸಿ ಕೊಡುತ್ತೇನೆ. ಗ್ರಾಹಕರು ಮುಲಾಜಿಲ್ಲದೇ ಹೇಳಿಕೊಳ್ಳಬೇಕು.

ಮುಂದೆ?
ಟಿ ಶರ್ಟ್‌ ಹೊಲಿಗೆ, ನಮ್ಮದೇ ಆದ ಬ್ರ್ಯಾಂಡ್‌ ವಸ್ತ್ರಗಳ ವಿನ್ಯಾಸ ಮತ್ತು ತಯಾರಿಕೆ ಜತೆಗೆ ಆಕರ್ಷಕವಾದ ಪ್ಯಾಕೇಜ್‌ ಮೂಲಕ ಮಾರುಕಟ್ಟೆಗೆ ಲಗ್ಗೆ ಇಡುವ ಆಲೋಚನೆ ಇದೆ.

ವಲಸೆ ತಡೆಯಬಹುದು
ನಾವು ಸರಿಯಾಗಿದ್ದರೆ ಉದ್ಯಮದಲ್ಲಿ ನಷ್ಟ ಇಲ್ಲ. ಉದ್ಯೋಗಿಗಳೂ ಕೆಲಸ ಸಿಕ್ಕ ತೃಪ್ತಿಯಲ್ಲಿದ್ದಾರೆ. ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿ ಆದರೆ ಏಕೆ ವಲಸೆ ಹೋಗುತ್ತಾರೆ. ಅಲ್ಲವೇ?
– ಮಹಮದ್‌ ಶಫೀಕ್‌, (ಮೊ:  94486 94996)

Write A Comment