ಕರ್ನಾಟಕ

ಪ್ರೇಮಿಗಳ ದಿನಕ್ಕೆ ತಾಜ್‌ಮಹಲ್‌ ಗುಲಾಬಿ

Pinterest LinkedIn Tumblr

METRO

ಪ್ರೀತಿ ಎಂಬ ಸಾಗರಕ್ಕೆ ಇನ್ನೂ ಕಾಲಿಡದವರು, ಹೊಸದಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಕಾತರದಿಂದ ಕಾಯುತ್ತಿರುವವರು, ಈಗಾಗಲೇ ಪ್ರೀತಿಯಲ್ಲಿ ಬಿದ್ದವರು… ಹೀಗೆ ಪ್ರೀತಿಯನ್ನು ಆರಾಧಿಸುವ ಪ್ರತಿಯೊಬ್ಬರ ಕೈಯಲ್ಲೂ ಪ್ರೇಮಿಗಳ ದಿನದಂದು ಕೆಂಪು ಗುಲಾಬಿ ಹೂ ತನ್ನ ನಗು ಚೆಲ್ಲುತ್ತಿರುತ್ತದೆ. ಇದರಿಂದಲೇ ಪ್ರೇಮಿಗಳ ದಿನದಂದು ಕೆಂಪು ಗುಲಾಬಿಗೆ  ವಿಶೇಷ ಸ್ಥಾನ ಲಭಿಸಿದೆ.

ಹೂಗಳ ರಾಣಿ ಕೆಂಪು ಗುಲಾಬಿಗೆ ವಿಶ್ವದೆಲ್ಲೆಡೆ ಬೇಡಿಕೆ. ಇದರಿಂದಲೇ ರೈತರು ಪ್ರೇಮಿಗಳ ದಿನಕ್ಕಾಗಿ ಹೆಚ್ಚಾಗಿ ಕೆಂಪು ಗುಲಾಬಿಗಳನ್ನು ಬೆಳೆಯುತ್ತಾರೆ. ಅದರಲ್ಲೂ ಈ ಬಾರಿ ಪ್ರೇಮಿಗಳ ದಿನಕ್ಕಾಗಿಯೇ 50 ಲಕ್ಷ ಡಚ್ ವೆರೈಟಿಯ ಕೆಂಪು ಗುಲಾಬಿ ವಿದೇಶಕ್ಕೆ ಹಾರಲು ಕಾಯುತ್ತಿವೆ.

ಪ್ರೇಮಿಗಳ ದಿನಕ್ಕೆಂದೇ ಬೆಂಗಳೂರಿನ ಸುತ್ತಮುತ್ತ ಬೆಳೆಯುವ ‘ಡಚ್‌’ ಕೆಂಪು ಗುಲಾಬಿಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ಡಚ್‌ ಗುಲಾಬಿ ಬೆಳೆಯುವ ರೈತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಗುಲಾಬಿ ಬೆಳೆಯುವ ರೈತರ ಸಂಖ್ಯೆಯಲ್ಲಿ ಶೇ 30ರಿಂದ 40ರಷ್ಟು ಏರಿಕೆಯಾಗಿದೆ. ಕಳೆದ ಬಾರಿ 40 ಲಕ್ಷಕ್ಕೂ ಹೆಚ್ಚು ಡಚ್‌ ಗುಲಾಬಿಗಳನ್ನು ವಿದೇಶಕ್ಕೆ ರಫ್ತು ಮಾಡಲಾಗಿತ್ತು.

ಡಚ್‌ ಗುಲಾಬಿಯಲ್ಲಿ ಮುಳ್ಳು ರಹಿತ ಗ್ರ್ಯಾಂಡ್‌ ಗಾಲ, ಫಸ್ಟ್‌ ರೆಡ್‌ ಹಾಗೂ ತಾಜ್‌ಮಹಲ್‌ ವೆರೈಟಿ ಇವೆ. ಇವುಗಳಲ್ಲಿ ಮೂರು ವರ್ಷಗಳ ಹಿಂದೆ ಗ್ರ್ಯಾಂಡ್‌ ಗಾಲ ಹಾಗೂ ಫಸ್ಟ್‌ರೆಡ್‌ ವೆರೈಟಿ ಗುಲಾಬಿಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಆದರೆ ಕಳೆದ ಮೂರು ವರ್ಷಗಳಿಂದಿಚೆಗೆ ತಾಜ್‌ಮಹಲ್‌ ಗುಲಾಬಿಗೆ ಬೇಡಿಕೆ ಹೆಚ್ಚಾಗಿದೆ.

ಹಾಲೆಂಡ್‌ ಹಾಗೂ ಜರ್ಮನಿ ಮೂಲದ ಡಚ್‌ ಗುಲಾಬಿ ಬೆಳೆಯಲು ಬೆಂಗಳೂರಿನ ವಾತಾವರಣ ಅನುಕೂಲಕರವಾಗಿದೆ. ಹೀಗಾಗಿಯೇ ಪುಣೆಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಡಚ್‌ ಗುಲಾಬಿ ಬೆಳೆದರೆ, ಬೆಂಗಳೂರಿನ ಸುತ್ತಮುತ್ತಲಿನ ದೊಡ್ಡಬಳ್ಳಾಪುರ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಹೊಸೂರಿನ ಸುತ್ತಮುತ್ತಲ ರೈತರು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾರೆ. ಈ ಹಿಂದೆ 110 ಎಕರೆ ಪಾಲಿಹೌಸ್‌ಗಳಲ್ಲಿ ಬೆಳೆಯಲಾಗುತ್ತಿದ್ದ ಗುಲಾಬಿ ಬೆಳೆ ಈಗ 250 ಹೆಕ್ಟೇರ್‌ಗಳಿಗೆ ವಿಸ್ತರಣೆಯಾಗಿದೆ.

ಕಳೆದ ವರ್ಷವೂ ತಾಜ್‌ಮಹಲ್‌ ವೆರೈಟಿ ಗುಲಾಬಿಗೆ ಬೇಡಿಕೆ ಹೆಚ್ಚಿದ್ದು, ಒಂದು ಹೂವಿನ ಬೆಲೆ ರೂ. 15 ರಿಂದ ರೂ. 20 ಇತ್ತು. ಇದರಿಂದ ಪ್ರೇರಿತರಾದ ರೈತರು ಈ ಬಾರಿ ಹೆಚ್ಚಾಗಿ ತಾಜ್‌ಮಹಲ್‌ ವೆರೈಟಿ ಗುಲಾಬಿಯನ್ನೇ ಬೆಳೆದಿದ್ದಾರೆ. ಇದರಿಂದಾಗಿ ಈ ಬಾರಿ ಮಾರುಕಟ್ಟೆಯಲ್ಲಿ ತಾಜ್‌ಮಹಲ್‌ ಪೂರೈಕೆ ಹೆಚ್ಚಾಗಿದ್ದು, ಬೆಲೆ ಸ್ವಲ್ಪ ಇಳಿದಿದೆ. ಸದ್ಯಕ್ಕೆ ಒಂದು ತಾಜ್‌ಮಹಲ್‌ ಗುಲಾಬಿ ಬೆಲೆ  ರೂ. 12 ರಿಂದ ರೂ. 17 ಇದೆ. ಇನ್ನು ಗ್ರ್ಯಾಂಡ್‌ ಗಾಲ ಹಾಗೂ ಫಸ್ಟ್‌ ರೆಡ್‌ ಗುಲಾಬಿ ಒಂದರ ಬೆಲೆ ರೂ. 7ರಿಂದ ರೂ. 13 ಇದೆ.

‘ಗಲ್ಫ್‌, ಸಿಂಗಪುರ ಹಾಗೂ ಮಲೇಷಿಯಾಗಳಿಂದ ತಾಜ್‌ಮಹಲ್‌ ವೆರೈಟಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಯುರೋಪ್‌ ಹಾಗೂ ಆಸ್ಟ್ರೇಲಿಯಾಗಳಿಂದ ಗ್ರ್ಯಾಂಡ್‌ ಗಾಲ ಮತ್ತು ಫಸ್ಟ್‌ರೆಡ್‌ ಗುಲಾಬಿಗಳಿಗೆ ಬೇಡಿಕೆ ಬಂದಿದೆ. ಇದರಿಂದ ಜನವರಿ 27ರಿಂದಲೇ ವಿದೇಶಗಳಿಗೆ ಗುಲಾಬಿಗಳನ್ನು ರಫ್ತು ಮಾಡಲಾಗುತ್ತಿದ್ದು, ಫೆ.11ರವರೆಗೆ ಈ ರಫ್ತು ಪ್ರಕ್ರಿಯೆ ಮುಂದುವರಿಯಲಿದೆ. ವಿದೇಶಗಳಲ್ಲಿ ಫೆಬ್ರುವರಿ ತಿಂಗಳಿನಲ್ಲಿ ಪ್ರೇಮಿಗಳ ದಿನಕ್ಕೆ ಮುಂಚಿತವಾಗಿ ‘ಚಾಕೊಲೆಟ್‌ ಡೆ’ ಸೇರಿದಂತೆ ನಾನಾ ರೀತಿಯ ದಿನಗಳನ್ನು ಆಚರಿಸಲಾಗುತ್ತದೆ. ಅದಕ್ಕಾಗಿಯೇ ಒಂದು ತಿಂಗಳು ಮುಂಚಿತವಾಗಿ ಗುಲಾಬಿಗಳ ರಫ್ತು ಪ್ರಾರಂಭವಾಗುತ್ತದೆ. ಒಮ್ಮೆ ರಫ್ತಾಗುವ ಗುಲಾಬಿ 10ರಿಂದ 12 ದಿನಗಳು ತಾಜಾ ಆಗಿರುತ್ತವೆ’ ಎನ್ನುತ್ತಾರೆ ಸೌತ್‌ ಇಂಡಿಯಾ ಫ್ಲೋರಿಕಲ್ಚರ್‌ ಅಸೋಸಿಯೇಷನ್‌  ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್‌ ರಾವ್‌.

‘ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳೆಯುವ ಗುಲಾಬಿಗಳ ಒಟ್ಟು ಉತ್ಪಾದನೆಯಲ್ಲಿ ಶೇ 30ರಷ್ಟನ್ನು ಮಾತ್ರ ವಿದೇಶಗಳಿಗೆ ರಫ್ತು ಮಾಡಿ, ಉಳಿದದ್ದನ್ನು ಸ್ಥಳೀಯವಾಗಿ ಬಳಸಿಕೊಳ್ಳಲಾಗುತ್ತದೆ.

ನಗರದಲ್ಲಿ 12 ರಿಂದ 15 ಉದ್ಯಮಿಗಳು ಹೂಗಳ ರಫ್ತು ಪ್ರಕ್ರಿಯೆಯಲ್ಲಿ ತೊಡಗುತ್ತಾರೆ. ಇನ್ನೂ ಪ್ರೇಮಿಗಳ ದಿನದ ಸಂದರ್ಭದಲ್ಲಿ ಮಾತ್ರ ಕೆಂಪು ಗುಲಾಬಿಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಉಳಿದಂತೆ ನಾನಾ ಬಣ್ಣದ ಗುಲಾಬಿಗಳನ್ನೂ ಇಲ್ಲಿ ಬೆಳೆಯಲಾಗುತ್ತದೆ’ ಎಂದು ವಿವರಿಸುತ್ತಾರೆ ಜಯಪ್ರಕಾಶ್‌ ರಾವ್‌.

ಪ್ರತಿದಿನವೂ ಹೂವಿನ ಉಡುಗೊರೆ
ಪ್ರೇಮಿಗಳ ದಿನಕ್ಕಿಂತ ಮುಂಚಿತವಾಗಿ ವಿದೇಶ ಸೇರಿದಂತೆ ನಮ್ಮ ದೇಶದಲ್ಲೂ ‘ರೋಜ್‌ ಡೇ’, ‘ಪ್ರಪೋಸ್‌ ಡೇ’, ‘ಹಗ್‌ ಡೇ’, ‘ಟೆಡ್ಡಿ ಡೇ’, ‘ಚಾಕೊಲೇಟ್‌ ಡೇ’, ‘ಕಿಸ್‌ ಡೇ’ ಹೀಗೆ ನಾನಾ ರೀತಿಯ ದಿನಗಳಲ್ಲಿ ಪ್ರೇಮಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಒಂದು ದಿನ ಗುಲಾಬಿ, ಒಂದು ದಿನ ಚಾಕೊಲೇಟ್‌, ಒಂದು ದಿನ ಟೆಡ್ಡಿಬೇರ್ ನೀಡುವ ಮೂಲಕ ತಮ್ಮ ಪ್ರೀತಿ ಪಾತ್ರರ ಮನಸ್ಸಿಗೆ ಹತ್ತಿರವಾಗಲು ಪ್ರಯತ್ನಿಸುತ್ತಾರೆ. ಈ ಎಲ್ಲಾ ದಿನಗಳಲ್ಲೂ ಪ್ರೀತಿ ಪಾತ್ರರಿಗೆ ಕೆಂಪು ಗುಲಾಬಿ ನೀಡಲಾಗುತ್ತದೆ. ನಂತರ ಕೊನೆಯ ದಿನವಾಗಿ ಫೆ.14ರಂದು ಪ್ರೇಮಿಗಳು ‘ವ್ಯಾಲೆಂಟೈನ್‌ ಡೇ’ ಆಚರಿಸುತ್ತಾರೆ. ಗುಲಾಬಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಸಂಕೇತ. ಹೀಗಾಗಿ ಎಲ್ಲರೂ ಕೆಂಪು ಗುಲಾಬಿ ಇಷ್ಟಪಡುತ್ತಾರೆ. ಒಂದು ವೇಳೆ ಸ್ನೇಹಿತರು ತಮ್ಮ ನೆಚ್ಚಿನ ಸ್ನೇಹಿತರಿಗೆ ತಮ್ಮ ಪ್ರೀತಿಯನ್ನು ಹೇಳಬೇಕಾದಾಗ ಮಾತ್ರ ಹಳದಿ ಬಣ್ಣದ ಗುಲಾಬಿಯನ್ನು ನೀಡುತ್ತಾರೆ.

– ಪರ್ವೀನ್‌ ಚೌಧರಿ

ಉತ್ತಮ ವಾತಾವರಣ
1995–96ರಿಂದ ಹೈದರಾಬಾದ್‌, ಪುಣೆ ಹಾಗೂ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಡಚ್‌ ವೆರೈಟಿ ಗುಲಾಬಿಗಳನ್ನು ಬೆಳೆಸುವ ಪ್ರಯತ್ನ ಪ್ರಾರಂಭವಾಯಿತು. ಹೈದರಾಬಾದಿನಲ್ಲಿ ಈ ಪ್ರಯತ್ನ ಸಫಲವಾಗಲಿಲ್ಲ. ಆದರೆ ಪುಣೆ ಹಾಗೂ ಬೆಂಗಳೂರಿನಲ್ಲಿ ಡಚ್‌ ಗುಲಾಬಿ ಬೆಳೆಯುವ ಪ್ರಯತ್ನ ಯಶಸ್ವಿಯಾಗಿದೆ. ದೇಶದಲ್ಲಿ ಡಚ್‌ ಗುಲಾಬಿ ಬೆಳೆಯಲು ಬೆಂಗಳೂರಿನ ವಾತಾವರಣ ಅನುಕೂಲಕರವಾಗಿದೆ. ಹೀಗಾಗಿಯೇ ಪುಣೆಯಲ್ಲಿ ಬೆಳೆಯುವ ಗುಲಾಬಿ ಮೊಗ್ಗಿನ ಗಾತ್ರ ಸ್ವಲ್ಪ ಚಿಕ್ಕದಾಗಿದ್ದರೆ, ಬೆಂಗಳೂರಿನಲ್ಲಿ ಬೆಳೆಯುವ ಮೊಗ್ಗಿನ ಗಾತ್ರ ತುಸು ದಪ್ಪವಾಗಿರುತ್ತದೆ. ಇದರಿಂದಲೇ ಬೆಂಗಳೂರಿನ ಗುಲಾಬಿಗಳಿಗೆ ಬೇಡಿಕೆ ಹೆಚ್ಚು.

– ಜಯಪ್ರಕಾಶ್‌ ರಾವ್‌, ಪ್ರಧಾನ ಕಾರ್ಯದರ್ಶಿ, ಸೌತ್‌ ಇಂಡಿಯಾ ಫ್ಲೋರಿಕಲ್ಚರಿಸ್ಟ್‌ ಅಸೋಸಿಯೇಷನ್‌

Write A Comment