ಕರ್ನಾಟಕ

ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಕೆ.ಎ.ಎಸ್‌. ಅಧಿಕಾರಿಯಾಗಲು ಸಿದ್ಧರಾಗಿ

Pinterest LinkedIn Tumblr

kpec09KAS

ಕರ್ನಾಟಕ ಸರ್ಕಾರ 2014ನೇ ಸಾಲಿಗೆ 440 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಯು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಯಲಿದೆ. ಲೋಕಸೇವಾ ಆಯೋಗದ 1997ರ ನಿಯಮಗಳ ಅನುಸಾರ ಹಾಗೂ ಕಾಲಕಾಲಕ್ಕೆ ಮಾಡಲಾಗಿರುವ ತಿದ್ದುಪಡಿಯ ಮೂಲಕ ಗ್ರೂಪ್‌ ಎ ಮತ್ತು ಬಿ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು.
ಸಹಾಯಕ ಆಯುಕ್ತರು, ಡಿವೈಎಸ್‌ಪಿ, ತಹಶೀಲ್ದಾರ್‌ ಸೆರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿ ಹುದ್ದೆಗಳು ಇದರಲ್ಲಿ ಸೇರಿವೆ. ಈ ಬಾರಿ ಹೈದರಾಬಾದ್‌ ಕರ್ನಾಟಕ ಭಾಗದವರಿಗೆ ಪ್ರತ್ಯೇಕವಾಗಿ ಹಲವು ಹುದ್ದೆಗಳನ್ನು ಮೀಸಲಿಡಲಾಗಿದೆ.

ಪೂರ್ವಭಾವಿ ಪರಿಕ್ಷೆಯು ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಐಎಎಸ್‌ ಪೂರ್ವಭಾವಿ ಪರೀಕ್ಷೆಯ ಸ್ವರೂಪದಲ್ಲಿರುತ್ತದೆ. ಪೂರ್ವಭಾವಿ ಪರೀಕ್ಷೆಯು ವಸ್ತುನಿಷ್ಠ (ಬಹು ಆಯ್ಕೆ) ಮಾದರಿಯ ಎರಡು ಸಾಮಾನ್ಯ ಜ್ಞಾನ ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪ್ರತಿ ಪತ್ರಿಕೆಯು ಎರಡು ಗಂಟೆ ಕಾಲಾವಧಿಯನ್ನು ಹೊಂದಿರುತ್ತದೆ. ಹಾಗೇ ಗರಿಷ್ಠ 200 ಅಂಕಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ಪತ್ರಿಕೆಯಲ್ಲಿ ನೂರು ಪ್ರಶ್ನೆಗಳಿರುತ್ತವೆ. ಒಂದು ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿಪಡಿಸಲಾಗಿದೆ. ತಪ್ಪು ಉತ್ತರವನ್ನು ಗುರುತಿಸುವ ಪ್ರಶ್ನೆಗಳಿಗೆ ಅಂಕಗಳನ್ನು ಕಳೆಯುವ ಋಣಾತ್ಮಕ ಅಂಕ ಪದ್ಧತಿಯನ್ನು ಇದೇ ಮೊದಲ ಬಾರಿಗೆ ಪರಿಚಯಿಸಲಾಗಿದೆ. ಈ ಪದ್ಧತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತಜ್ಞರು ಭಾವಿಸಿದ್ದಾರೆ.

ಕೆಎಎಸ್‌ ಹುದ್ದೆಗಳಿಗೂ ಐಎಎಸ್‌  ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮದ ಮಾದರಿಯನ್ನೇ ಅನುಸರಿಸಲಾಗಿದೆ. ಪೂರ್ವಭಾವಿ ಪರೀಕ್ಷೆಯು ಒಟ್ಟು 400 ಅಂಕಗಳಿಗೆ ನಡೆಸಲಾಗುವುದು. ಎರಡು ಸಾಮಾನ್ಯ ಜ್ಞಾನ ಪತ್ರಿಕೆಗಳ ಪಠ್ಯಕ್ರಮ ಈ ಕೆಳಕಂಡಂತಿದೆ.

ಪತ್ರಿಕೆ–1: ಈ ಪತ್ರಿಕೆಯಲ್ಲಿ 100 ಪ್ರಶ್ನೆಗಳಿರುತ್ತವೆ. ಪ್ರತಿ ಪ್ರಶ್ನೆಗೂ ಎರಡು ಅಂಕಗಳನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಎರಡು ಗಂಟೆಯ ಕಾಲಾವಧಿಯಲ್ಲಿ ಉತ್ತರಿಸಬೇಕು. ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳು, ಕರ್ನಾಟಕವನ್ನು ಮುಖ್ಯವಾಗಿರಿಸಿಕೊಂಡು ಭಾರತ ಇತಿಹಾಸದ ಮೇಲೆ ಪ್ರಶ್ನೆಗಳನ್ನು ಕೇಳಲಾಗುವುದು. ಮುಖ್ಯವಾಗಿ ರಾಷ್ಟ್ರೀಯ ಚಳವಳಿ, ಸ್ವಾತಂತ್ರ್ಯಹೋರಾಟ, ಆ ಕಾಲಘಟ್ಟದ ಸಾಮಾಜಿಕ, ಆರ್ಥಿಕ ಪರಿಸ್ಥಿತಿ, ಸಾಂಸ್ಕೃತಿಕ ಮತ್ತು ರಾಜಕೀಯ ಇತಿಹಾಸದ ಪ್ರಶ್ನೆಗಳಿರುತ್ತವೆ. ಜಾಗತಿಕ ಭೂಗೋಳ, ಭಾರತದ ಭೂಗೋಳ ಸೇರಿದಂತೆ ಕರ್ನಾಟಕ ಭೂಗೋಳವನ್ನು ಮುಖ್ಯವಾಗಿರಿಸಿಕೊಂಡ ಪ್ರಶ್ನೆಗಳು, ಕರ್ನಾಟಕವನ್ನು ಮುಖ್ಯವಾಗಿರಿಸಿಕೊಂಡು ದೇಶದ ರಾಜಕೀಯ ವ್ಯವಸ್ಥೆ, ಆರ್ಥಿಕ ಸುಧಾರಣೆಗಳು, ಗ್ರಾಮೀಣಾಭಿವೃದ್ಧಿ, ಬಡತನ ನಿರ್ಮೂಲನೆ, ಜನಸಂಖ್ಯಾ ಶಾಸ್ತ್ರ ಹಾಗೂ ಸಾಮಾಜಿಕ ಬದಲಾವಣೆಗಳನ್ನು ಒಳಗೊಂಡ ಭಾರತದ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆ, ಈ ಅಂಶಗಳನ್ನು ಪ್ರಾಮುಖ್ಯವಾಗಿರಿಸಿಕೊಂಡು ಪ್ರಶ್ನೆಗಳನ್ನು ಕೇಳಲಾಗುವುದು. ಈ ಪತ್ರಿಕೆಯು ಸಂಪೂರ್ಣವಾಗಿ ಪದವಿ ಮಟ್ಟದಾಗಿರುತ್ತದೆ.

ಪತ್ರಿಕೆ–2: ಈ ಪತ್ರಿಕೆಯಲ್ಲಿ ಅಭ್ಯರ್ಥಿಗಳು ಎರಡು ಗಂಟೆಯ ಕಾಲಾವಧಿಯಲ್ಲಿ 200 ಅಂಕಗಳಿಗೆ 100 ಪ್ರಶ್ನೆಗಳಿಗೆ ಉತ್ತರಿಸಬೇಕು. ರಾಜ್ಯದ ಪ್ರಚಲಿತ ವಿದ್ಯಮಾನಗಳು ಮತ್ತು ರಾಜ್ಯ ಸರ್ಕಾರದ ಯೋಜನೆಗಳು, ದೈನಂದಿನ ವಿಜ್ಞಾನ, ಪರಿಸರ ವಿಜ್ಞಾನ ಮತ್ತು ಸಮಕಾಲೀನ ತಂತ್ರಜ್ಞಾನ ಕುರಿತ ಪ್ರಶ್ನೆಗಳು ಇರುತ್ತವೆ. ವಿಜ್ಞಾನ, ಪರಿಸರ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಎಸ್‌ಎಸ್‌ಎಲ್‌ಸಿ ಮಟ್ಟದಾಗಿರುತ್ತವೆ. ಅಥವಾ ಒಬ್ಬ ಸುಕ್ಷಿತ ವ್ಯಕ್ತಿ ಸಾಮಾನ್ಯವಾಗಿ ತಿಳಿದಿರುವ ಜ್ಞಾನ ಮಟ್ಟದಲ್ಲಿ ವಿಜ್ಞಾನ ಪ್ರಶ್ನೆಗಳನ್ನು ಕೇಳಲಾಗುವುದು. ಎಸ್‌ಎಸ್‌ಎಲ್‌ಸಿ ಮಟ್ಟದ ಮನೋ ಸಾಮರ್ಥ್ಯದ ಪ್ರಶ್ನೆಗಳನ್ನು ಕೇಳಲಾಗುವುದು. ಇದರಲ್ಲಿ ಗ್ರಹಿಕೆ, ತಾರ್ಕಿಕ ಸಮರ್ಥನೆ ಮತ್ತು ವಿಶ್ಲೇಷಣೆ, ನಿರ್ಧಾರ ಕೈಗೊಳ್ಳುವಿಕೆ, ಸಮಸ್ಯೆ ಬಿಡಿಸುವಿಕೆ, ಮೂಲ ಗಣಿದ ಜ್ಞಾನ, ದತ್ತಾಂಶ, ಪರಿಮಾಣ, ಸಂಖ್ಯೆಗಳು, ನಕ್ಷೆಗಳು, ರೇಖಾಚಿತ್ರಗಳು ಮತ್ತು ಕೋಷ್ಟಕಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಇರುತ್ತವೆ. ಎರಡನೇ ಪತ್ರಿಕೆಯಲ್ಲಿ ಮನೋಸಾಮರ್ಥ್ಯ ಮತ್ತು ಗಣಿತದ ಪ್ರಶ್ನೆಗಳನ್ನು ಹೊರತು ಪಡಿಸಿದರೆ ಉಳಿದ ಎಲ್ಲಾ ಪ್ರಶ್ನೆಗಳು ಪದವಿ ಮಟ್ಟದಲ್ಲಿರುತ್ತವೆ.

ಋಣಾತ್ಮಕ ಮೌಲ್ಯಮಾಪನ: ಅಭ್ಯರ್ಥಿಗಳು ತಪ್ಪು ಉತ್ತರವನ್ನು ಗುರುತಿಸಿದ ಪ್ರಶ್ನೆಗೆ ಪಡೆದ ಅಂಕಗಳಲ್ಲಿ 1/4 ಅಂಕವನ್ನು ಕಳೆಯಲಾಗುವುದು. ಅಂದರೆ ಅಭ್ಯರ್ಥಿಯು 100 ಪ್ರಶ್ನೆಗಳಲ್ಲಿ 40 ಪ್ರಶ್ನೆಗಳನ್ನು ತಪ್ಪಾಗಿ ಗುರುತಿಸಿದ್ದರೆ ಅಭ್ಯರ್ಥಿಯು ಪಡೆದ ಒಟ್ಟು ಅಂಕಗಳಲ್ಲಿ 10 ಅಂಕಗಳನ್ನು ಕಳೆಯಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಉತ್ತರವನ್ನು ನಿಖರವಾಗಿ ಗೊತ್ತಿದ್ದಲ್ಲಿ ಮಾತ್ರ ಉತ್ತರಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗದ ವೆಬ್‌ಸೈಟ್‌ http://kpsc.kar.nic.inಗೆ ಲಾಗಿನ್‌ ಆಗುವ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ನಿಖರವಾಗಿ ತಪ್ಪಿಲ್ಲದಂತೆ ಭರ್ತಿ ಮಾಡಬೇಕು. ಆನ್‌ಲೈನ್‌ ಅರ್ಜಿಗೆ  ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್‌ ಮಾಡಿ ಅಪ್‌ಲೋಡ್‌ ಮಾಡಬೇಕು. ಸಾಮಾನ್ಯ ಅಭ್ಯರ್ಥಿಗಳು 300 ರೂಪಾಯಿ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳು 25 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸುವುದು ಕಡ್ಡಾಯ. ಅರ್ಜಿ ಸಲ್ಲಿಸಲು ಫೆಬ್ರುವರಿ 20 ಕಡೆಯ ದಿನವಾಗಿರುತ್ತದೆ. ಪೂರ್ವಭಾವಿ ಪರೀಕ್ಷೆ ಏಪ್ರಿಲ್‌ 19ರಂದು ನಡೆಯಲಿದೆ.

Write A Comment