ಕರ್ನಾಟಕ

ಹಿಂದೂ ಸಮಾಜೋತ್ಸವ: ನಿರ್ಬಂಧ ಮಧ್ಯೆ ಭಾಷಣ; ಕೊನೆ ಕ್ಷಣದಲ್ಲಿ ತೊಗಾಡಿಯಾ ವಿಡಿಯೊ ಪ್ರಸಾರ

Pinterest LinkedIn Tumblr

to

ಬೆಂಗಳೂರು: ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ವಿರಾಟ್‌ ಹಿಂದೂ ಸಮಾಜೋತ್ಸವ’ ಕಾರ್ಯಕ್ರಮದಲ್ಲಿ ಪೊಲೀಸರ ನಿರ್ಬಂಧದ ನಡುವೆಯೂ ವಿಎಚ್‌ಪಿಯ ಅಂತರರಾಷ್ಟ್ರೀಯ ಕಾರ್ಯ­ದರ್ಶಿ ಪ್ರವೀಣ್‌ ತೊಗಾಡಿಯಾ ಅವರು ಮಾಡಿರುವ ಭಾಷಣದ ವಿಡಿಯೊವನ್ನು ಪ್ರಸಾರ ಮಾಡ­ಲಾಯಿತು.

ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನ­ದಲ್ಲಿ ನಡೆದ ಸಮಾಜೋತ್ಸವ ಕಾರ್ಯಕ್ರಮದ  ಅಂತ್ಯಕ್ಕೆ ವಂದನಾರ್ಪಣೆ ಸಲ್ಲಿಸಿದ ನಂತರ ಸಂಘಟ­ಕರು ದಿಢೀರಾಗಿ ಮುದ್ರಿತ ಭಾಷಣವನ್ನು ಪ್ರಸಾರ ಮಾಡಿದರು.

ಈ ಸಂದರ್ಭದಲ್ಲಿ ಮೈದಾನದಲ್ಲಿ ಸೇರಿದ್ದ ಸಭಿಕರು ತಮ್ಮ ಆಸನಗಳಿಂದ ಎದ್ದು ಮೈದಾನದ ಹೊರಗಡೆ ಹೆಜ್ಜೆ ಹಾಕಿದ್ದರು. ದಿಢೀರ್‌ ಆಗಿ ತೊಗಾಡಿಯಾ ಭಾಷಣ ಪ್ರಸಾರ­ವಾಗುತ್ತಿದ್ದಂತೆಯೇ ಮನೆಗೆ ಹೊರಟಿ­ದ್ದ­­ವರು ಅಲ್ಲಲ್ಲೇ ನಿಂತು ಬೃಹತ್‌ ಪರದೆಗಳಲ್ಲಿ ವಿಡಿಯೊ ವೀಕ್ಷಿಸಿದರು. ಇದರಿಂದ ಪುಳಕಿತರಾದ ಜನರು ತೊಗಾಡಿಯಾ ಪರ ಘೋಷಣೆ­ಕೂಗಿದರು.

16 ನಿಮಿಷಗಳ ಈ ಭಾಷಣವನ್ನು ಹೊಸೂರಿನ ಹೋಟೆಲೊಂದರಲ್ಲಿ ಶನಿವಾರ ಚಿತ್ರೀಕರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಪೊಲೀಸರ ಹರಸಾಹಸ: ತೊಗಾಡಿಯಾ ಅವರ ಭಾಷ­ಣದ ವಿಡಿಯೊ  ಪ್ರಸಾರವು ಅನಿರೀಕ್ಷಿತವಾಗಿ ಆರಂಭ­­ವಾ­ಗುತ್ತಿದ್ದಂತೆ ಅದನ್ನು

ತಡೆ­ಯಲು ಪೊಲೀಸರು ಹರ­ಸಾಹಸ­ಪಟ್ಟರು. ವೇದಿಕೆ ಬಳಿ ತೆರಳಿದ ಪೊಲೀಸರು, ಪ್ರಸಾರ ನಿಲ್ಲಿಸುವಂತೆ ಸಂಘಟಕರಿಗೆ ಸೂಚಿಸಿದರು. ಆದರೆ, ಸಂಘಟಕರು ಅದಕ್ಕೆ ಕಿವಿಗೊಡಲಿಲ್ಲ.

ಈ ಹಂತದಲ್ಲಿ ಪೊಲೀಸರೂ ಸಂಘಟಕರ ಜತೆ ಹೆಚ್ಚು ಘರ್ಷಣೆ ಮಾಡಿಕೊಳ್ಳುವುದು ಬೇಡ ಎನ್ನುವ ಕಾರಣಕ್ಕೆ ಸುಮ್ಮನಾದರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಇದ್ದ ಕಾರಣ ಗಲಾಟೆಯ ಮುನ್ಸೂಚನೆ ಕೂಡ ಪೊಲೀಸರಿಗೆ ಸಿಕ್ಕಿತ್ತು ಎನ್ನಲಾಗಿದೆ.

‘ಘರ್‌ ವಾಪಸಿ’ ನಿಲ್ಲಲ್ಲ: ಹಿಂದೂ ಧರ್ಮದಿಂದ ಮತಾಂತರ­ಗೊಂಡ­ವರನ್ನು ಮರು ಮತಾಂತರ ಮಾಡುವ ‘ಘರ್‌ ವಾಪಸಿ’ ಕಾರ್ಯಕ್ರಮವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ತೊಗಾಡಿಯಾ ತಮ್ಮ ಮುದ್ರಿತ ಭಾಷಣದಲ್ಲಿ ಸ್ಪಷ್ಟಪಡಿಸಿದ್ದಾರೆ.

ಧರ್ಮ ಸಹಿಷ್ಣುತೆ ಕುರಿತು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ನೀಡಿರುವ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿ­ರುವ ಅವರು, ‘ಧರ್ಮ ಸಹಿಷ್ಣುತೆ ಬಗ್ಗೆ ನಮಗೆ ಯಾರೊಬ್ಬರೂ ಪಾಠ ಮಾಡ­ಬೇಕಾಗಿಲ್ಲ. ಈ ಬ್ರಹ್ಮಾಂಡ ಉಗಮ­ವಾದಾಗಿನಿಂದಲೂ ನಾವು ಧಾರ್ಮಿಕ ಸಹಿಷ್ಣುತೆ ಹೊಂದಿದ್ದೇವೆ. ಮತಾಂತರ ಮಾಡುತ್ತಿರುವವರಿಗೆ ಸಹಿಷ್ಣುತೆ ಬಗ್ಗೆ ಪಾಠ ಮಾಡಿ. ಇನ್ನು ಮುಂದೆ ಯಾವೊಬ್ಬ ಹಿಂದೂವನ್ನೂ ಮತಾಂತರಗೊಳಿಸಲು ಬಿಡುವುದಿಲ್ಲ’ ಎಂದಿದ್ದಾರೆ.

‘ಸಂವಿಧಾನ ಬದ್ಧವಾಗಿ ಈ ದೇಶ ಹಿಂದೂ ರಾಷ್ಟ್ರ­ವಾಗುವುದನ್ನು ನಾವು ಬಯಸುತ್ತೇವೆ. ಇದು ಸಾಕಾರವಾಗುವವರೆಗೂ ಹೋರಾಟ ಮುಂದು­ವರೆಸು­ತ್ತೇವೆ’ ಎಂದು ಅವರು ಘೋಷಿಸಿದ್ದಾರೆ.

ಹಿಂದೂ ಸಮಾಜದಲ್ಲಿನ ಅಸ್ಪೃಶ್ಯತೆ­ ಹೋಗಲಾಡಿ­ಸಲು ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ.

ಕಾನೂನು ಪ್ರಕಾರ ಕ್ರಮ
ಮುದ್ರಿತ ವಿಡಿಯೊ ಪ್ರಸಾರ ಮಾಡುವ ಮೂಲಕ ಸಂಘಟಕರು ಪೊಲೀಸ್‌ ಕಮಿಷನರ್‌ ಹೊರಡಿಸಿ­ರುವ ಆದೇಶವನ್ನು ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳು­ತ್ತೇವೆ. ಕಾನೂನು ತಜ್ಞ­ರೊಂದಿಗೆ ಚರ್ಚಿಸುತ್ತೇವೆ
–ಅಲೋಕ್‌ ಕುಮಾರ್‌,  ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಕಾನೂನು ಮತ್ತು ಸುವ್ಯವಸ್ಥೆ )

Write A Comment