ಕರ್ನಾಟಕ

ವಿಎಚ್‌ಪಿ ಮುಖಂಡ ಪ್ರವೀಣ್‌ ತೊಗಾಡಿಯಾಗೆ ನಿಷೇಧ: ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲ್ಮನೆಯಲ್ಲಿ ಸಮರ್ಥನೆ

Pinterest LinkedIn Tumblr

si

ಬೆಂಗಳೂರು: ಬೆಂಗಳೂರು ಪ್ರವೇಶಿ ಸಲು ವಿಎಚ್‌ಪಿ ಮುಖಂಡ ಪ್ರವೀಣ್‌ ತೊಗಾಡಿಯಾ ಅವರಿಗೆ ನಿರ್ಬಂಧ ಹೇರಿರುವ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಮೇಲ್ಮನೆ ಯಲ್ಲಿ ಸಮರ್ಥಿಸಿಕೊಂಡರು.

ಕಲಾಪ ಆರಂಭವಾದಾಗ ಬಿಜೆಪಿ ಸದ­ಸ್ಯರು ಈ ವಿಚಾರದ ಬಗ್ಗೆ ನಿಲುವಳಿ ಸೂಚನೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಧರಣಿ ಮುಂದುವರಿಸಿದರು.

‘ಈ ವಿಷಯ ಸದ್ಯ ಹೈಕೋರ್ಟ್‌ ನಲ್ಲಿ ವಿಚಾರಣೆಯಲ್ಲಿರುವುದರಿಂದ ಇಲ್ಲಿ ಚರ್ಚೆ ಮಾಡಲು ನಿಯಮ ಗಳಲ್ಲಿ ಅವಕಾಶ ಇಲ್ಲ’ ಎಂದು ಸಭಾ ನಾಯಕ ಎಸ್‌.ಆರ್‌. ಪಾಟೀಲ ಹೇಳಿದರು.

ಇದನ್ನು ಒಪ್ಪದ ಭಾರತೀಯ ಜನತಾ ಪಕ್ಷದ  ಸದಸ್ಯರು ಗದ್ದಲ ಎಬ್ಬಿಸಿ­ದರು. ಕಾಂಗ್ರೆಸ್‌ ಸದಸ್ಯರೂ  ಕೂಗಾಡಿ ಇನ್ನಷ್ಟು ಗದ್ದಲ ಉಂಟು ಮಾಡಿದರು.

ಇದರ ನಡುವೆಯೇ ನಿಲುವಳಿ ಸೂಚನೆ ಬಗ್ಗೆ ಪ್ರಸ್ತಾವಿಕವಾಗಿ ಮಾತ­ನಾ­ಡಲು ಈಶ್ವರಪ್ಪ ಅವರಿಗೆ ಉಪ ಸಭಾ­ಪತಿ ಪುಟ್ಟಣ್ಣ ಅವಕಾಶ ನೀಡಿದರು.

‘ಪೊಲೀಸರು ಹಿಂದೂ ಸಮಾ ಜೋತ್ಸವ ಕಾರ್ಯಕ್ರಮಕ್ಕೆ ಮತ್ತು  ತೋಗಾಡಿಯಾ ಅವರು ಅದರಲ್ಲಿ ಭಾಗವಹಿಸುವುದಕ್ಕೆ  ಫೆಬ್ರುವರಿ 3ರಂದು ಮೊದಲು ಅನುಮತಿ ನೀಡಿದ್ದರು. ನಂತರ ಏಕಾಏಕಿ ನಿರ್ಬಂಧ ಹೇರಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಿಷೇಧ ಹೇರುವುದು ಪರಿಹಾರವಲ್ಲ.  ಧಾರ್ಮಿಕ, ವಾಕ್‌ ಸ್ವಾತಂತ್ರ್ಯವನ್ನು ನಿರ್ಬಂಧಿಸಲು ಸರ್ಕಾರ ಯತ್ನಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವಾ­ಧಿಕಾರಿ­ಯಾಗಲು ಯತ್ನಿಸುತ್ತಿ­ದ್ದಾರೆ. ಅವ­ರನ್ನು ಯಾರೋ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಈಶ್ವರಪ್ಪ ಆರೋಪಿಸಿದರು.

‘ಮಧ್ಯ­ಪ್ರವೇ­ಶಿಸಿ ಮಾತನಾ­ಡಿದ ಎಸ್‌.ಆರ್‌. ಪಾಟೀಲ, ತೊಗಾಡಿಯಾ ಭೇಟಿಗೆ ನಿರ್ಬಂಧ ವಿಧಿಸಿ ಪೊಲೀಸ್‌ ಕಮಿಷನರ್‌  ಜನವರಿ 31ರಂದೇ ಆದೇಶ ಹೊರ­ಡಿಸಿದ್ದಾರೆ’ ಎಂದು ಸ್ಪಷ್ಟನೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ‘ತೊಗಾಡಿಯಾ ಅವರ ಮೇಲೆ ಈ ಹಿಂದೆಯೂ ನಿರ್ಬಂಧ ಹೇರಲಾಗಿತ್ತು. ಅವರ ವಿರುದ್ಧ ದೇಶದ ವಿವಿಧ ಕಡೆಗಳಲ್ಲಿ 45 ಪ್ರಕರಣಗಳು ದಾಖಲಾಗಿವೆ. ಓವೈಸಿ ಅವರಿಗೂ ನಿರ್ಬಂಧ ಹೇರಿದ್ದೇವೆ’ ಎಂದು ಹೇಳಿದರು.

ರಾಜ್ಯದ 6.25 ಕೋಟಿ ಜನರಿಗೆ ರಕ್ಷಣೆ ಹೊಣೆ ನಮ್ಮ ಮೇಲಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶ­ದಿಂದ ಈ ನಿರ್ಧಾರ ಕೈಗೊಳ್ಳ­ಲಾಗಿದೆ ಎಂದು ಸಮರ್ಥಿಸಿ ಕೊಂಡರು.

‘ಕಮಿಷನರ್‌ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದ­ರಿಂದ ಇಲ್ಲಿ ಚರ್ಚೆಗೆ ಅವಕಾಶ ಇಲ್ಲ. ನಿಲುವಳಿ ಸೂಚನೆಯ ಅಡಿಯಲ್ಲಿ ಪ್ರಸ್ತಾಪಿಸುವ ವಿಷಯವೂ ಇದಲ್ಲ’ ಎಂದು ಅವರು ವಿವರಿಸಿದರು.

ಯಾರು ಗೆಲ್ಲುತ್ತಾರೆ ನೋಡೋಣ?:
ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು, ‘ನಿಷೇಧ ಮಾಡಿದಷ್ಟೂ ಸಂಘಟನೆ   ಬಲ­ವಾಗುತ್ತದೆ. ರಾಷ್ಟ್ರಭಕ್ತನ ಭಾಷ­ಣಕ್ಕೆ ಅಡ್ಡಗಾಲು ಹಾಕಿ ಸರ್ವಾಧಿಕಾರಿ ವರ್ತನೆ ತೋರಿದ್ದೀರಿ. ಇದರಲ್ಲಿ ಹಿಂದೂ ಸಮಾಜ ಗೆಲ್ಲುತ್ತೋ? ನೀವು ಗೆಲ್ಲುತ್ತೀರೋ? ನೋಡೋಣ’ ಎಂದು ಸವಾಲು ಹಾಕಿ, ಧರಣಿ ಕೈ ಬಿಟ್ಟರು.

Write A Comment