ಕರ್ನಾಟಕ

ಟೆಂಡರ್‌ ಇಲ್ಲದೆ ಖರೀದಿ: ಪರಿಷತ್ತಿನಲ್ಲಿ ಬಿಜೆಪಿ ಧರಣಿ, ಕೋಲಾಹಲ: ಕಲಾಪ ಮುಂದಕ್ಕೆ

Pinterest LinkedIn Tumblr

pvec04feb15h Council 01

ಬೆಂಗಳೂರು:   180 ಕೋಟಿ ಮೊತ್ತದ ಸಿಂಗಲ್‌­ಫೇಸ್‌ ಎಲೆಕ್ಟ್ರೋ ಮೀಟರ್‌ಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಸದನ ಸಮಿತಿ ಅಥವಾ ಲೋಕಾಯುಕ್ತ ತನಿಖೆಗೆ ಆದೇಶಿಸಬೇಕು ಎಂದು ವಿಧಾನ ಪರಿಷತ್‌ನಲ್ಲಿ ಮಂಗಳವಾರ ಬಿಜೆಪಿ ಸದಸ್ಯರು ಧರಣಿ ನಡೆಸಿದರು.

ದಕ್ಷ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸುವು­ದಾಗಿ ಆಡಳಿತ ಪಕ್ಷ ಕಾಂಗ್ರೆಸ್‌ ನೀಡಿದ ಉತ್ತರದಿಂದ ಬಿಜೆಪಿ ಸದಸ್ಯರು ತೃಪ್ತರಾಗಲಿಲ್ಲ. ಸದನದಲ್ಲಿ ಗಲಾಟೆ ಮುಂದುವರಿದಿದ್ದರಿಂದ ಬುಧವಾರಕ್ಕೆ ಮುಂದೂಡಲಾಯಿತು. ನಿಯಮ 68ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ, ‘ಇಂಧನ ಇಲಾಖೆಯು 2013ರಿಂದ ಮೂರು ಬಾರಿ ಟೆಂಡರ್‌ ರದ್ದು ಮಾಡಿ ಪಾರದರ್ಶಕ ಕಾಯ್ದೆ (ಕೆಟಿಪಿಪಿ) ನಿಯಮ ಉಲ್ಲಂಘಿಸಿ  180 ಕೋಟಿ ಮೌಲ್ಯದ 20 ಲಕ್ಷ ಮೀಟರ್‌ಗಳನ್ನು ಸರಬರಾಜು ಮಾಡಲು ಆದೇಶ ನೀಡಿದೆ. ಎರಡು ವರ್ಷ ಕಾಲ ಟೆಂಡರ್‌ ಇಲ್ಲದೆಯೇ ಖಾಸಗಿ ಕಂಪೆನಿಗಳಿಗೆ ಆರು ತಿಂಗಳಿಗೊಮ್ಮೆ ಮೂರು ಬಾರಿ ಗುತ್ತಿಗೆ ವಿಸ್ತರಿಸ­ಲಾ­ಗಿದೆ’ ಎಂದು ದೂರಿದರು.

‘ಬೆಸ್ಕಾಂ 2008ರಲ್ಲಿ ಟೆಂಡರ್‌ ಕರೆದು ಪ್ರತಿ ಮೀಟರ್‌ಗೆ 1190  ನಿಗದಿಪಡಿಸಿತ್ತು. ಗುತ್ತಿಗೆ ಅವಧಿ 2013ರ ಆಗಸ್ಟ್‌ 4ಕ್ಕೆ ಮುಗಿದಿತ್ತು. ಆದರೆ, ಅವಧಿಗೆ ಮುಂಚಿತವಾಗಿ ಟೆಂಡರ್‌ ಕರೆದು ಕ್ಷುಲ್ಲಕ ಕಾರಣಕ್ಕೆ ಪ್ರಕ್ರಿಯೆ ರದ್ದುಪಡಿಸಲಾಗಿದೆ. ಜೊತೆಗೆ ಜೆಸ್ಕಾಂ ದರವನ್ನೇ ಅಳವಡಿಸಿಕೊಳ್ಳಲಾಗಿದೆ. ಹೀಗೆ ಟೆಂಡರ್‌ ಇಲ್ಲದೇ ಎಲ್ ಅಂಡ್ ಜಿ ಕಂಪೆನಿಯಿಂದ ಮೀಟರ್ ಖರೀದಿಸಲಾಗಿದೆ. ಇದು ಕಾನೂನು ಬಾಹಿರ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಇಂಧನ ಸಚಿವ ಡಿ.ಕೆ.ಶಿವ­ಕುಮಾರ್‌, ‘ಟೆಂಡರ್‌ನಲ್ಲಿನ ಕೆಲ ಅಡಚಣೆ­ಗಳಿಂದಾಗಿ ಹಾಗೂ ಕಡಿಮೆ ದರ ಇದ್ದರಿಂದ ತುರ್ತು ಸಂದರ್ಭದಲ್ಲಿ ಖರೀದಿಸಲಾಗಿದೆ. ಪ್ರತಿ ವಿಷಯ­ವನ್ನೂ  ಮಹಾ ಲೆಕ್ಕ ಪರಿಶೋಧಕರು (ಸಿಎಜಿ) ಅಡಿಟ್‌ ಮಾಡಿರುತ್ತಾರೆ’ ಎಂದು ಸಮರ್ಥಿಸಿ­ಕೊಂಡರು.

ಆಗ ಗರಂ ಆದ ಈಶ್ವರಪ್ಪ, ‘ಈ ರೀತಿಯ ಮೊಂಡು ವಾದ ಬೇಡ. ನೀವು ಕೇವಲ ಪವರ್‌ ಮಿನಿಸ್ಟರ್‌ ಮಾತ್ರವಲ್ಲ; ಪವರ್‌ಫುಲ್‌ ಮಿನಿಸ್ಟರ್‌. ನಮ್ಮ ಕಾಲದ್ದನ್ನೂ ಸೇರಿಸಿ ಆರಂಭದಿಂದಲೇ ತನಿಖೆ ನಡೆಸಲು ಪ್ರಕರಣವನ್ನು ಲೋಕಾಯುಕ್ತಕ್ಕೆ ನೀಡಿ. ಆಗ ಭ್ರಷ್ಟರು ಯಾರು ಎಂಬುದು ಗೊತ್ತಾಗುತ್ತದೆ’ ಎಂದು ಪಟ್ಟುಹಿಡಿದರು.

‘ಆಡಳಿತ ಮಂಡಳಿ ಸಭೆಯಲ್ಲೂ ಕಾನೂನು ಬಾಹಿರವಾಗಿ ಗುತ್ತಿಗೆ ಅವಧಿ ವಿಸ್ತರಣೆ ಮಾಡಿರುವು­ದಕ್ಕೆ ಒಪ್ಪಿಗೆ ನೀಡಲಾಗಿದೆ. ಎಲ್‌ ಅಂಡ್‌ ಟಿ ಕಂಪೆನಿಗೂ ಮೀಟರ್ ಸರಬರಾಜು  ಮಾಡಲು ಗುತ್ತಿಗೆ ಕೊಡಲಾಗಿದೆ. ಒಂದು ಲಕ್ಷಕ್ಕಿಂತ ಹೆಚ್ಚು ಮೌಲ್ಯದ ವಸ್ತುಗಳ ಖರೀದಿಗೆ ಟೆಂಡರ್ ಕರೆಯಬೇಕು. ತನಿಖೆಗೆ ಹಿಂದೇಟು ಹಾಕುತ್ತಿರು­ವು­ದನ್ನು ನೋಡಿದರೆ ಭ್ರಷ್ಟಾಚಾರದಲ್ಲಿ ಶಿವಕುಮಾರ್‌ ಅವರ ಪಾಲೂ ಇರುವಂತಿದೆ. ಲೂಟಿ ಮಾಡಿರುವ ಅನುಮಾನ ಬರುತ್ತದೆ’ ಎಂದರು.

ಇದಕ್ಕೆ ಸದಸ್ಯ ಗಣೇಶ್‌ ಕಾರ್ಣಿಕ್‌ ಕೂಡ ಧ್ವನಿಗೂಡಿಸಿದರು. ‘ಮೆಸ್ಕಾಂ ಹಾಗೂ ಜೆಸ್ಕಾಂನಲ್ಲಿ ಟೆಂಡರ್‌ ಕರೆಯಲಾಗಿದೆ. ಅದು ಉಳಿದ ಎಸ್ಕಾಂ­ಗಳಿಗೆ ಏಕೆ ಅನ್ವಯಿಸುವುದಿಲ್ಲ? ಕೇವಲ ಎರಡು ಕಂಪೆನಿಗಳಿಗೆ ಪದೇ ಪದೇ ಏಕೆ ವಿಸ್ತರಿಸಿದ್ದೀರಿ?’ ಎಂದು ಪ್ರಶ್ನಿಸಿದರು. ಆಗ ಎದ್ದು ನಿಂತ ಶಿವಕುಮಾರ್, ‘ಈಗಾಗಲೇ ಎರಡು ಕಂಪೆನಿಗಳಿಗೆ ನೀಡಿರುವ ಗುತ್ತಿಗೆಯನ್ನು ರದ್ದುಪಡಿಸುತ್ತೇವೆ.

ಒಂದು ತಿಂಗಳಲ್ಲಿ ಹೊಸದಾಗಿ ಟೆಂಡರ್‌ ಕರೆಯಲಾಗುವುದು. ಏಕರೂಪದ ಮೀಟರ್‌ಗಳನ್ನು ಖರೀದಿ ಮಾಡಲಾಗುವುದು’ ಎಂದು ಭರವಸೆ ನೀಡಿದರು. ಅದಕ್ಕೆ ಒಪ್ಪದ ಬಿಜೆಪಿ ಸದಸ್ಯರು ಸಭಾಪತಿಗಳ ಪೀಠದ ಮುಂದೆ ಧಾವಿಸಿ ಧರಣಿ ನಡೆಸಿದರು. ಜೆಡಿಎಸ್‌ ಸದಸ್ಯ ಬಸವರಾಜ್‌ ಹೊರಟ್ಟಿ ಅವರು, ‘ಈ ಪ್ರಕರಣವನ್ನು ಸದನ ಸಮಿತಿಗೆ ಒಪ್ಪಿಸುವುದು ಒಳ್ಳೆಯದು’ ಎಂದು ಸಲಹೆ  ನೀಡಿದರು.

ಆಗ ಶಿವಕುಮಾರ್‌ ಅವರು, ‘ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಂದ ತನಿಖೆ ಮಾಡಿಸುತ್ತೇವೆ. ಬಿಜೆಪಿ ಸರ್ಕಾರದ ಕಾಲದ ಭ್ರಷ್ಟಾಚಾರವನ್ನೂ ಸೇರಿ ತನಿಖೆಗೆ ಒಳಪಡಿಸುತ್ತೇವೆ’ ಎಂದು ಸದನಕ್ಕೆ ತಿಳಿಸಿದರು. ಸದನ ಸಮಿತಿ ಅಥವಾ ಲೋಕಾಯುಕ್ತ ತನಿಖೆಗೆ ಪ್ರತಿಪಕ್ಷದವರು ಪಟ್ಟು ಹಿಡಿದಿದ್ದರಿಂದ ಕಲಾಪವನ್ನು ಮುಂದೂಡಲಾಯಿತು. ಮತ್ತೆ ಕಲಾಪ ಸೇರಿದಾಗಲೂ ಪಟ್ಟು ಸಡಿಸಲಿಲ್ಲ. ದಕ್ಷ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ಸಭಾನಾಯಕ ಎಸ್‌.ಆರ್‌. ಪಾಟೀಲ ಅವರು ನೀಡಿದ ಭರವಸೆಯನ್ನೂ ಬಿಜೆಪಿಯವರು ಪುರಸ್ಕರಿಸಲಿಲ್ಲ.

ಈ ಸಂದರ್ಭದಲ್ಲಿ ಶಿವಕುಮಾರ್‌ ಹಾಗೂ ಈಶ್ವರಪ್ಪ ನಡುವೆ ಮಾತಿನ ಚಕಮಕಿ ನಡೆಯಿತು. ಪರಸ್ಪರ ಭ್ರಷ್ಟಾಚಾರದ ಆರೋಪ ಮಾಡಿದರು. ಆಗ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಅವರು ಕಲಾಪವನ್ನು ಬುಧವಾರಕ್ಕೆ ಮುಂದೂಡಿದರು.

ಗುರುವಿನ ಕಾನೂನು ಶಿಷ್ಯನಿಂದ ಉಲ್ಲಂಘನೆ!
ಚರ್ಚೆ ಗಂಭೀರ ಸ್ವರೂಪ ಪಡೆದಿದ್ದ ಸಂದರ್ಭದಲ್ಲಿ ಈಶ್ವರಪ್ಪ ಅವರು ಹೇಳಿದ ಮಾತೊಂದು ಸದನವನ್ನು ನಗೆಗಡಲಿನಲ್ಲಿ ತೇಲಿಸಿತು. ಶಿವಕುಮಾರ್‌ ಅವರನ್ನು ಉದ್ದೇಶಿಸಿ, ‘ನಿಮ್ಮ ಗುರು ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಪಾರದರ್ಶಕ ಕಾಯ್ದೆ (ಕೆಟಿಪಿಸಿ) ಜಾರಿಗೆ ತರಲಾಗಿತ್ತು. ಅವರ ಶಿಷ್ಯರಾದ ನೀವೇ ಈಗ ಆ ಕಾಯ್ದೆ ಉಲ್ಲಂಘಿಸುತ್ತಿದ್ದೀರಿ. ಪ್ರಕರಣವನ್ನು ತನಿಖೆಗೆ ಒಳಪಡಿಸಿದರೆ ನಿಮ್ಮ ಗುರುವಿಗೆ ಹಾಗೂ ರಾಜ್ಯದ ಜನರಿಗೆ ಒಳ್ಳೆಯದಾಗಲಿದೆ’ ಎಂದರು.

ಆಗ ಎದ್ದು ನಿಂತ ಶಿವಕುಮಾರ್‌, ‘ಪೇಪರ್‌ನವರೆಲ್ಲಾ ಇದೇ ವಿಷಯವನ್ನು ಲೀಡ್‌ ಮಾಡುತ್ತಾರೆ’ ಎಂದರು.

ದರ ವ್ಯತ್ಯಾಸ
ಮೀಟರ್‌ ಖರೀದಿ ದರದಲ್ಲೂ ವ್ಯತ್ಯಾಸವಿದೆ. ಎಲ್‌ ಅಂಡ್‌ ಟಿ ಕಂಪೆನಿಗೆ ಒಂದು ಮೀಟರ್‌ ಮೂಲ ದರ ₨ 703 ಹಾಗೂ ಎಲ್‌ ಅಂಡ್‌ ಜಿ ಕಂಪೆನಿಗೆ ಒಂದು ಮೀಟರ್‌ ಮೂಲ ದರ ₨ 789 ಎಂದು ನಿಗದಿಪಡಿಸಲಾಗಿದೆ. ಒಂದೇ ಬಗೆಯ ಮೀಟರ್‌ಗಳಿಗೆ ಭಿನ್ನ ದರ ಎಷ್ಟು ಸರಿ?  –ಕೆ.ಎಸ್‌.ಈಶ್ವರಪ್ಪ

ಭ್ರಷ್ಟಾಚಾರದ ಪಿತಾಮಹ
ಭ್ರಷ್ಟಾಚಾ­ರದ ಆರೋಪ ಮಾಡುವ ನೀವು (ಈಶ್ವರಪ್ಪ) ಭ್ರಷ್ಟಾಚಾರದ ಪಿತಾಮಹ, ಭ್ರಷ್ಟಾಚಾರದ ರಾಜ. ‘ನಿಮ್ಮ ಕಾಲ­ದಲ್ಲೂ ಟೆಂಡರ್‌ ನಿಯಮಗಳನ್ನು ಗಾಳಿಗೆ ತೂರ­ಲಾಗಿದೆ. ನಾವು ನಿಯಮಬದ್ಧವಾಗಿಯೇ ಮೀಟರ್‌ ಖರೀದಿಸಿದ್ದೇವೆ. –ಡಿ.ಕೆ.ಶಿವಕುಮಾರ್‌

Write A Comment