ಕರ್ನಾಟಕ

ಆರೋಗ್ಯ ಯೋಜನೆಗೆ ಲಾಟರಿ!: ರಾಜ್ಯ ಸರ್ಕಾರಕ್ಕೆ ಯೋಜನಾ ಮಂಡಳಿ ಶಿಫಾರಸು

Pinterest LinkedIn Tumblr

Idliweb

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಲಾಟರಿ ಆರಂಭಿಸಿ ಅದರಿಂದ ಬರುವ ಹಣದಲ್ಲಿ ‘ಅಣ್ಣಾ ಕರುಣಾ ಆರೋಗ್ಯ ಯೋಜನೆ’ ಜಾರಿಗೆ ತರುವಂತೆ ರಾಜ್ಯ ಯೋಜನಾ ಮಂಡಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿಫಾರಸು ಮಾಡಿದೆ.
ಬಡ ಮತ್ತು ಮಧ್ಯಮ ವರ್ಗದ ಜನರಿಗಾಗಿ ಜಾರಿಗೊಳಿಸುವ ಈ ಯೋಜನೆಗೆ 600 ರಿಂದ 700 ಕೋಟಿ ವೆಚ್ಚವಾಗಬಹುದು ಎಂದು ಮಂಡಳಿ ಅಂದಾಜು ಮಾಡಿದೆ.

ಪ್ರತಿ ಲಾಟರಿ ಟಿಕೆಟ್‌ಗೆ 10 ನಿಗದಿಪಡಿಸಬೇಕು. ಇದರ ಮಾರಾಟ­ದಿಂದ ಸಂಗ್ರಹವಾಗುವ ಹಣವನ್ನು ಈ ಯೋಜನೆಗೆ ಬಳಸುವ ಯೋಚನೆ ಇದೆ. ಈ ಪ್ರಸ್ತಾವನೆಯ ಸಾಧಕ –ಬಾಧಕಗಳ ಬಗ್ಗೆ ಅಧ್ಯಯನ ನಡೆಸಲು ಅದು ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್‌ಗೆ ಕೋರಿದೆ.

ಸೋಮವಾರ (ಫೆ.2) ನಡೆದ ಕರ್ನಾಟಕ ರಾಜ್ಯ ಯೋಜನಾ ಮಂಡಳಿ ಸಭೆಯಲ್ಲಿ ಕೈಗೊಂಡಿರುವ ನಿರ್ಧಾರದ ಬಗ್ಗೆ ವಿಕಾಸಸೌಧದಲ್ಲಿ ಮಂಗಳವಾರ ಮಾಹಿತಿ ನೀಡಿದ ಮಂಡಳಿ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ, ‘ಕೇರಳದಲ್ಲಿರುವ ಕಾರುಣ್ಯ ಬೆನವಲೆಂಟ್‌ ಫಂಡ್‌ ಮಾದರಿಯಲ್ಲಿ ‘ಅಣ್ಣಾ ಕಾರುಣ್ಯ ಆರೋಗ್ಯ ಯೋಜನೆ’ ಜಾರಿಗೆ ಸರ್ಕಾ­ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಕೇರಳದಲ್ಲಿ ಈ ಯೋಜನೆಯ ಮಿತಿ 3 ಲಕ್ಷ ಇದ್ದರೆ, ಇಲ್ಲಿ 5 ಲಕ್ಷ ನಿಗದಿ ಪಡಿಸಲಾಗಿದೆ’ ಎಂದರು. ಆರೋಗ್ಯ ಯೋಜನೆಗಾಗಿ ರಾಜ್ಯದಲ್ಲಿ ನಿಷೇಧಿಸಲಾ­ಗಿರುವ ಲಾಟರಿ ಮೂಲಕ ನಿಧಿ ಸಂಗ್ರಹಿಸಬೇಕೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಒಳ್ಳೆಯ ಉದ್ದೇಶಕ್ಕಾಗಿ ಈ ಯೋಜನೆಯನ್ನು ಪ್ರಸ್ತಾಪಿ­ಸಲಾಗಿದೆ. ದಾನವಾಗಿ 10 ಕೇಳುವುದು ಸರಿಯಾಗು­ವುದಿಲ್ಲ.  ಇದು ಜೂಜಾಟವೂ ಅಲ್ಲ’ ಎಂದರು.

ಈ ಯೋಜನೆ ಮೂಲಕ ರಾಜ್ಯದಲ್ಲಿ ಮತ್ತೆ ಲಾಟರಿ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಉದ್ದೇಶಿಸಿದೆಯೇ ಎಂದು ಕೇಳಿದ್ದಕ್ಕೆ, ‘ನಾವು ಪ್ರಸ್ತಾವನೆ ಮಾತ್ರ ಕಳುಹಿಸಿ­ದ್ದೇವೆ. ಈ ಬಗ್ಗೆ ನಿರ್ಧರಿಸು­ವುದು   ಸರ್ಕಾರಕ್ಕೆ ಬಿಟ್ಟ ವಿಚಾರ’ ಎಂದು ಸ್ಪಷ್ಟಪಡಿಸಿದರು. ಇದರ ಜೊತೆಗೆ, ಕೆಲವು ಬಹು ರಾಷ್ಟ್ರೀಯ ಕಂಪೆನಿ­ಗಳು ಮತ್ತು ಕಾರ್ಪೊರೇಟ್‌ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಲಾಗಿದೆ. ಅವುಗಳ ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌) ನಿಧಿಯನ್ನು ಈ ಯೋಜನೆ­ಯಲ್ಲಿ ವಿನಿಯೋಗಿಸುವಂತೆ ಕೋರಲಾಗು­ವುದು. ಇದರಿಂದ 300 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದರು.

ಅಣ್ಣಾ ಇಡ್ಲಿ ಯೋಜನೆ

ನಗರ ಪ್ರದೇಶಗಳ ಬಡ ಜನರಿಗಾಗಿ ರಾಜ್ಯ ಸರ್ಕಾರ ನಿರ್ವಹಿಸುತ್ತಿರುವ ಕ್ಯಾಂಟೀನ್‌ಗಳ ಮೂಲಕ ‘ಅಣ್ಣಾ ಇಡ್ಲಿ ಯೋಜನೆ’ ಜಾರಿಗೂ ಶಿಫಾರಸು ಮಾಡಲಾಗಿದೆ ಎಂದು ಇಬ್ರಾಹಿಂ ಹೇಳಿದರು.

‘ಈ ಯೋಜನೆ ಅಡಿಯಲ್ಲಿ 5ಕ್ಕೆ 5 ಇಡ್ಲಿ, ಇದರ ಜೊತೆಗೆ ಇದೇ ಮೊತ್ತಕ್ಕೆ ಉಪ್ಪಿಟ್ಟು, ಚಿತ್ರಾನ್ನ, ಪುಳಿಯೊಗರೆ, ಮೊಸರನ್ನ ನೀಡಲಾಗುವುದು. ಬೆಂಗಳೂರು, ಮೈಸೂರು, ಹುಬ್ಬಳ್ಳಿ–ಧಾರವಾಡ, ಮಂಗಳೂರು ಮತ್ತು ಕಲಬುರ್ಗಿಯಲ್ಲಿ ಯೋಜನೆ ಆರಂಭಕ್ಕೆ ಪ್ರಸ್ತಾಸನೆ ಸಲ್ಲಿಸಲಾಗಿದೆ’ ಎಂದರು.

‘ಸದ್ಯ ತಮಿಳುನಾಡಿನಲ್ಲಿ ಜಾರಿಯ­ಲ್ಲಿರುವ ವ್ಯವಸ್ಥೆಯನ್ನು ಅಧ್ಯಯನ ನಡೆಸಲಾಗಿದೆ. ಆರಂಭಿಕವಾಗಿ ಬೆಂಗಳೂರಿನಲ್ಲಿ ಜಾರಿಗೊಳಿಸಲು ಸಲಹೆ ನೀಡಲಾಗಿದೆ. ಪ್ರತಿ ನಗರಕ್ಕೆ ಒಂದು ವರ್ಷಕ್ಕೆ 60 ಕೋಟಿ ಬೇಕಾಬಹುದು’ ಎಂದು ಅವರು ಮಾಹಿತಿ ನೀಡಿದರು.

Write A Comment