ಕರ್ನಾಟಕ

‘ಲಿಂಗದೀಕ್ಷೆ’ ಪಡೆದ ಜರ್ಮನಿಯ ಯೂಥಾ

Pinterest LinkedIn Tumblr

pvec3115bkt3

ಬಾಗಲಕೋಟೆ: ಜರ್ಮನಿಯ ಬರ್ಲಿನ್ ನಿವಾಸಿ ಯೂಥಾ, ಗುಳೇದಗುಡ್ಡದಲ್ಲಿ ಸೋಮ­ವಾರ ನಡೆದ ಇಷ್ಟಲಿಂಗ ಮಹಾ­ಪೂಜೆಯಲ್ಲಿ ಪಾಲ್ಗೊಂಡು, ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾ­ಚಾರ್ಯ ಮಹಾಸ್ವಾಮಿ ಅವರಿಂದ ವಿಧಿವತ್ತಾಗಿ ಇಷ್ಟಲಿಂಗ ದೀಕ್ಷೆ ಸ್ವೀಕರಿಸಿದರು.

ಗುಳೇದಗುಡ್ಡದ ಶ್ರೀ ಕೃಷ್ಣ ಯೋಗಾಶ್ರಮದಲ್ಲಿ ಡಾ.ಬಸವರಾಜ ಹಡಗಲಿ ಹಾಗೂ ಡಾ.ದೀಪು ಹಡಗಲಿ ಅವರ ಬಳಿ ಒಂದು ತಿಂಗಳ ಕಾಲ ಯೋಗ ಹಾಗೂ ಆಯುರ್ವೇದ ಜ್ಞಾನವನ್ನು ಪಡೆದಿದ್ದ ಯೂಥಾ  ಅವರು ‘ಶಿವಯೋಗ’ ಕೈಗೊಳ್ಳುವ ಅಪೇಕ್ಷೆ ವ್ಯಕ್ತಪಡಿಸಿದ್ದರು.
ಒಂದು ತಿಂಗಳಿನಿಂದ ‘ಸಿದ್ಧಾಂತ ಶಿಖಾಮಣಿ’ಯ ಇಂಗ್ಲಿಷ್‌ ಗ್ರಂಥವನ್ನು ಅಧ್ಯಯನ ಮಾಡಿದ ಪರಿಣಾಮವಾಗಿ ಇಷ್ಟಲಿಂಗ ದೀಕ್ಷೆ ಪಡೆಯುವ ಮನಸ್ಸಾಗಿದೆ ಎಂದು ಅವರು ಶ್ರೀಗಳ ಬಳಿ ಅರಿಕೆ ಮಾಡಿಕೊಂಡರು.

ಅವರ ಭಾವನೆಗೆ ಸ್ಪಂದಿಸಿದ ಶ್ರೀಗಳು, ಯೂಥಾ ಅವರ ಪೂರ್ವಶ್ರಮದ ಸಂಸ್ಕಾರಗಳನ್ನು ಬಿಡಿಸಿ, ಲಿಂಗಪೂಜೆಯ ಮಹತ್ವ ಹಾಗೂ ಅದರ ಪರಿಣಾಮಗಳ ಬಗ್ಗೆ ತಿಳಿಸಿಕೊಟ್ಟರು. ಇಷ್ಟಲಿಂಗ ದೀಕ್ಷಾ ಸಂಸ್ಕಾರದ ಬಳಿಕ ಅವರಿಗೆ ‘ಉಮಾ’ ಎಂಬ ಹೆಸರನ್ನು ಶ್ರೀಗಳು ದಯ ಪಾಲಿಸಿದರು.

ಯೂಥಾ ಗೃಹಿಣಿಯಾಗಿದ್ದು, ಎರಡು ಹೆಣ್ಣು ಮತ್ತು ಒಂದು ಗಂಡು ಮಗುವಿನ ತಾಯಿಯಾಗಿದ್ದಾರೆ. ಬರ್ಲಿನ್‌ನಲ್ಲಿ 60 ವರ್ಷ ಮೀರಿದ ವಯಸ್ಸಿನ ಸ್ತ್ರೀ, ಪುರುಷರ ಸ್ಮರಣ ಶಕ್ತಿಯನ್ನು ಹೆಚ್ಚಿಸುವುದಕ್ಕಾಗಿ ಅವರು ಆಯುರ್ವೇದದ ಉಪಚಾರ ಹಾಗೂ ಯೋಗದ ಪ್ರಶಿಕ್ಷಣ ನೀಡುತ್ತಿದ್ದಾರೆ. ಅಲ್ಲದೇ ಮುಂದಿನ ದಿನದಲ್ಲಿ ‘ಸಿದ್ಧಾಂತ ಶಿಖಾಮಣಿ’ಯನ್ನು ಜರ್ಮನಿಯ ವಿದ್ವಾಂಸರಿಂದ ಅನುವಾದ ಮಾಡಿಸಿ, ಬರ್ಲಿನ್‌ನಲ್ಲಿ ಬಿಡುಗಡೆ ಮಾಡಿಸಲು ಇಚ್ಛಿಸಿದ್ದಾರೆ.

Write A Comment