ಕರ್ನಾಟಕ

ಮಾದಿಗರಿಗೆ ಪ್ರತ್ಯೇಕ ಮಂಡಳಿ ರಚಿಸಿ: ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಆಗ್ರಹ

Pinterest LinkedIn Tumblr

pvec03febrMadiga 02

ಬೆಂಗಳೂರು: ‘ಮಾದಿಗ ಸಮುದಾಯದ ಅಭಿವೃದ್ಧಿ­ಗಾಗಿ ಸರ್ಕಾರ ಪ್ರತ್ಯೇಕ ಮಂಡಳಿ ರಚನೆ ಮಾಡಬೇಕು’ ಎಂದು ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಒತ್ತಾಯಿಸಿದರು.

ಆದಿ ಜಾಂಬವ ಮಹಾಸಭಾ ಮತ್ತು ರಾಜ್ಯ ಮಾದಿಗ ಮೀಸಲಾತಿ ಹೋರಾಟ ಸಮಿತಿಗಳ ಒಕ್ಕೂಟದ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಭೋವಿ, ಬಂಜಾರ ಸಮುದಾಯಗಳಿಗೆ ಪ್ರತ್ಯೇಕ ಅಭಿ­ವೃದ್ಧಿ ಮಂಡಳಿ ರಚಿಸಿರುವ  ಮಾದರಿಯಲ್ಲಿ ಮಾದಿ­ಗ­ರಿಗೂ ಪ್ರತ್ಯೇಕ ಮಂಡಳಿ ರಚಿಸಬೇಕು. ಬೆಳ­ಗಾವಿ­ಯಲ್ಲಿ ಸಮುದಾಯದ ಹಕ್ಕುಗಳಿಗಾಗಿ ನಡೆಸಿದ ಪ್ರತಿ­ಭಟನೆಯಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿ­ದಂತೆ ಮಾದಿಗರ ಮೇಲೆ ದಾಖಲಾಗಿರುವ ಮೊಕ­ದ್ದಮೆ­ಗಳನ್ನು ವಜಾಗೊಳಿಸಬೇಕು’ ಎಂದು ಹೇಳಿದರು.

‘ಸಂವಿಧಾನಬದ್ಧ ಹಕ್ಕುಗಳಿಗಾಗಿ ಮಾದಿಗರು ಸಿಡಿದೆದ್ದು ಹೋರಾಟ ನಡೆಸಬೇಕು. ಏಪ್ರಿಲ್‌ನಲ್ಲಿ ನಡೆ­­ಯುವ ಜಾತಿವಾರು ಜನಗಣತಿಯಲ್ಲಿ ರಾಜ್ಯದ ಪ್ರತಿಯೊಬ್ಬ ಮಾದಿಗರು ಜಾತಿಯನ್ನು ‘ಮಾದಿಗ’ ಎಂದು ನಮೂದಿಸಬೇಕು’ ಎಂದು ಕರೆ ನೀಡಿದರು.

ಹಿರಿಯೂರು ಆದಿ ಜಾಂಬವ ಶಾಖಾ ಮಠದ ಷಡಕ್ಷರಿಮುನಿ ಸ್ವಾಮೀಜಿ ಮಾತನಾಡಿ, ‘ಸರ್ಕಾರ ಬಾಬು ಜಗಜೀವನ್‌ ರಾಂ ಅವರ ಹೆಸರಿನಲ್ಲಿ ಮಾದಿಗ ಸಮುದಾಯದ ಮಕ್ಕಳಿಗಾಗಿ ವಸತಿ ನಿಲಯಗಳನ್ನು ತೆರೆಯಬೇಕು’ ಎಂದು ಆಗ್ರಹಿಸಿದರು.

ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಮಾತನಾಡಿ, ‘ಜಾತಿವಾರು ಜನಗಣತಿ ಪಾರದರ್ಶಕ ಮತ್ತು ಅತ್ಯಂತ ವೈಜ್ಞಾನಿಕವಾಗಿದೆ. ಗಣತಿಯ ಅಧಿಕೃತ ಅಂಕಿಅಂಶಗಳು ಸಮುದಾಯಗಳ ಭವಿಷ್ಯ ಬರೆ­ಯು­ತ್ತವೆ. ಆದ್ದರಿಂದ, ಪ್ರತಿಯೊಬ್ಬ ಮಾದಿಗರು ತಪ್ಪದೇ ಜಾತಿಯನ್ನು ನೋಂದಾಯಿಸಬೇಕು’ ಎಂದರು.

‘ಆದಿ ಕರ್ನಾಟಕ ಎನ್ನುವ ಶಬ್ದ ಬಹಳ ಅಪಾಯ­ಕಾರಿ­ಯಾದುದು. ಅದು ನಮ್ಮನ್ನು ನುಂಗಿ ಹಾಕುತ್ತದೆ. ಆದ್ದ­ರಿಂದ ಮಾದಿಗ ಎನ್ನುವ ಸ್ವಾಭಿಮಾನದ ಶಬ್ದ­ವನ್ನೇ ಎಲ್ಲರೂ ಬರೆಸಬೇಕು. ಈ ಕುರಿತಂತೆ ಸಮು­ದಾಯದ ಜನರಲ್ಲಿ ಜಾಗೃತಿ ಮೂಡಿಸಲು ವ್ಯಾಪಕ ಪ್ರಚಾರ ನಡೆಸಬೇಕು’ ಎಂದು ತಿಳಿಸಿದರು.

ಶಾಸಕ ಗೋವಿಂದ ಕಾರಜೋಳ ಮಾತನಾಡಿ, ‘ಮಾದಿಗರನ್ನು ಆದಿ ಜಾಂಬವ, ಮೋಚಿ, ಮಾಂಗ, ಮಾತಂಗ… ಹೀಗೆ ಒಂದೊಂದು ಭಾಗದಲ್ಲಿ ಒಂದೊಂದು ಹೆಸರಿನಿಂದ ಕರೆಯುತ್ತಾರೆ. ಆದರೆ, ಜಾತಿ­ವಾರು ಗಣತಿಯಲ್ಲಿ ರಾಜ್ಯದಾದ್ಯಂತ ಇರುವ ಎಲ್ಲ ಮಾದಿಗರು ಜಾತಿಯನ್ನು ‘ಮಾದಿಗ’ ಎಂದೇ ನಮೂ­ದಿಸಬೇಕು’ ಎಂದರು.

ಆಂಧ್ರಪ್ರದೇಶದ ಕಡಪದ ಆದಿ ಜಾಂಬವ ಮಠದ ಆನಂದಮುನಿ ಸ್ವಾಮೀಜಿ, ಸಂಸದ ಬಿ.ಎನ್‌.ಚಂದ್ರಪ್ಪ, ಶಾಸಕರಾದ ಧರ್ಮಸೇನ, ತಿಮ್ಮರಾಯಪ್ಪ, ದುರ್ಯೋಧನ ಐಹೊಳೆ, ಪಿಳ್ಳಮುನಿಶಾಮಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್‌.­ಹನುಮಂತಯ್ಯ, ಮಾಜಿ ಸಚಿವರಾದ ಎಂ.ಶಿವಣ್ಣ, ಆಂಜನಮೂರ್ತಿ, ರಾಜ್ಯಸಭೆಯ ಮಾಜಿ ಸದಸ್ಯ ಕೆ.ಬಿ.ಕೃಷ್ಣಮೂರ್ತಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮತ್ತಿತರರು ಉಪಸ್ಥಿತರಿದ್ದರು.

Write A Comment