ಕರ್ನಾಟಕ

ಕನ್ನಡ ಮಾಧ್ಯಮದಲ್ಲೇ ಶಿಕ್ಷಣ: ಕಾಯ್ದೆಗೆ ತಿದ್ದುಪಡಿ; ಸಿದ್ದರಾಮಯ್ಯ

Pinterest LinkedIn Tumblr

siddu

ಶ್ರವಣಬೆಳಗೊಳ (ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆ/ಡಾ.ಆ.ನ.ಕೃಷ್ಣರಾಯ ಮಂಟಪ), ಫೆ.1:ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ನೀಡುವುದನ್ನು ಕಡ್ಡಾಯಗೊಳಿಸುವುದಕ್ಕೆ ಪೂರಕವಾಗಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ 2012ಕ್ಕೆ ತಿದ್ದುಪಡಿ ತರುವ ದಿಟ್ಟ ನಿರ್ಧಾರವನ್ನು ನಮ್ಮ ಸರಕಾರ ಕೈಗೊಂಡಿದೆ. ಇಲ್ಲಿಯವರೆಗೆ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಮಕ್ಕಳ ಮಾತೃ ಭಾಷೆಯಲ್ಲಿಯೇ ಇರಬೇಕು ಎಂಬ ಒಕ್ಕಣಿಕೆ ಇತ್ತು. ಅದನ್ನು ಒಂದನೆ ತರಗತಿಯಿಂದ ಐದನೆ ತರಗತಿಯವರೆಗಿನ ಶಿಕ್ಷಣ ಕಡ್ಡಾಯವಾಗಿ ಕನ್ನಡದಲ್ಲಿಯೇ ಇರತಕ್ಕದ್ದು ಎಂದು ತಿದ್ದುಪಡಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ರವಿವಾರ ಪಟ್ಟಣದಲ್ಲಿ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ 81ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷಾ ಮಾಧ್ಯಮ ಕಡ್ಡಾಯಗೊಳಿಸಿರುವ ಆದೇಶವನ್ನು ರದ್ದುಮಾಡಿರುವ ತೀರ್ಪು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪರಿಹಾರ ಅರ್ಜಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಮೊಕದ್ದಮೆಗಳನ್ನು ಎದುರಿಸುವುದಕ್ಕಾಗಿ ಈ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ತಮಿಳುನಾಡು ಸರಕಾರ ಸ್ಥಳೀಯ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಿರುವ ಮಾದರಿ ಆಧರಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಇತ್ತೀಚೆಗೆ ದೇಶದ ಪ್ರಸಿದ್ಧ ಭಾಷಾ ತಜ್ಞರನ್ನು ಕರೆಸಿ ರಾಷ್ಟ್ರೀಯ ವಿಚಾರ ಸಂಕಿರಣ ನಡೆಸಿ ಅವರ ಅಭಿಪ್ರಾಯಗಳನ್ನು ಪಡೆದಿದೆ. ಇದರ ಆಧಾರದಲ್ಲಿ ನಮ್ಮ ಮುಂದಿನ ಕಾನೂನಿನ ಮತ್ತು ರಾಜಕೀಯ ಹೋರಾಟದ ಸ್ವರೂಪವನ್ನು ನಿರ್ಧರಿಸಲಾಗುವುದು. ಕನ್ನಡದ ಭಾಷೆ, ನೆಲ ಮತ್ತು ಜಲದ ರಕ್ಷಣೆ ಬಗ್ಗೆ ನಮ್ಮ ಸರಕಾರದ ಬದ್ಧತೆ ರಾಜಿ ಇಲ್ಲದ್ದು. ಈ ಬಗ್ಗೆ ಅನುಮಾನವೇ ಬೇಡ ಎಂದು ಸಿಎಂ ಭರವಸೆ ನೀಡಿದರು.

ಇಂಗ್ಲಿಷ್ ಭಾಷೆಯ ಹೆಸರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ಹಲ್ಲೆ, ರಾಜ್ಯದ ಭಾಷೆಗಳ ಅಳಿವಿಗೆ ಬೀಸಿದ ಪ್ರಹಾರವಾಗಿದೆ.ರಾಜ್ಯದೊಳಗೆ ಎಲ್ಲ ಭಾಷೆಗಳನ್ನಾಡುವ ಭಾಷಿಕ ಸಮುದಾಯವಿದೆ. ಕನ್ನಡ ಭಾಷೆಯಷ್ಟೇ ಅಲ್ಲದೆ, ಇಲ್ಲಿ ಪ್ರಾದೇಶಿಕ ಭಾಷೆಗಳು ಬಹುದೊಡ್ಡ ಆತಂಕಗಳನ್ನು ಎದರಿಸುತ್ತಿವೆ. ಅವುಗಳ ಅಸ್ತಿತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ವಿದ್ಯಮಾನಗಳು ನಡೆಯುತ್ತಿವೆ. ಇತ್ತೀಚೆಗೆ ಭಾರತದ ಸರ್ವೋಚ್ಚ ನ್ಯಾಯಾಲಯವೂ ಮಗು ಯಾವ ಭಾಷೆಯಲ್ಲಿ ಕಲಿಯಬೇಕು ಎಂಬ ತೀರ್ಮಾನ ಪಾಲಕರಿಗೆ ಸೇರಿದ್ದು ಎಂಬ ತೀರ್ಪು ನೀಡಿದೆ. ಇದು ಕೇವಲ ಕನ್ನಡ ಭಾಷೆಗೆ ಮಾತ್ರವಲ್ಲ, ದೇಶದ ಎಲ್ಲ ಭಾಷೆಗಳಿಗೆ ಬಂದಿರುವ ಕುತ್ತು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಕರ್ನಾಟಕದಲ್ಲಿ ಯಾವುದೇ ಆಡಳಿತ ಬಂದರೂ ಕನ್ನಡ ಸಾಹಿತ್ಯ ಪರಿಷತ್‌ನ ಸ್ವಾಯತ್ತತೆಗೆ ಎಂದೂ ಕಂಟಕ ಬಂದಿಲ್ಲ. ಮುಂದೆಯೂ ಬರುವುದಿಲ್ಲ. ಕೇವಲ ಸಾಹಿತಿಗಳಿಗೆ ಮಾತ್ರವಲ್ಲ, ಬದುಕಿನ ಜ್ಞಾನ ಶಾಖೆಗಳ ಎಲ್ಲ ಸಂಪನ್ಮೂಲ ಇಲ್ಲಿ ಪಾಲ್ಗೊಳ್ಳುತ್ತಿದೆ. ತಮ್ಮ ವಿಚಾರಧಾರೆಯನ್ನು ಜನತೆಗೆ ಹಂಚುತ್ತಿದ್ದಾರೆ. ಇದು ಅಕ್ಷರ ಜಾತ್ರೆಯಾಗಿದೆ. ಇದು ಬದುಕಿನ ವಿಚಾರ ಧಾರೆಗಳನ್ನು ಕುರಿತು ಚರ್ಚಿಸುವ ನುಡಿ ಜಾತ್ರೆಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಬಗ್ಗೆ ಸಿದ್ದರಾಮಯ್ಯ ವಿಶ್ಲೇಷಿಸಿದರು. ಹಾಸನ ಜಿಲ್ಲೆಯ ಕನ್ನಡ ಸಾರಸ್ವತ ಲೋಕಕ್ಕೆ ಗೊರೂರು ರಾಮಸ್ವಾಮಿ ಅಯ್ಯಂಗಾರ್, ರಾಜಾರಾವ್, ಡಾ.ಎಸ್.ಎಲ್.ಭೈರಪ್ಪ, ಡಾ.ಎಚ್.ಜೆ.ಲಕ್ಕಪ್ಪಗೌಡ, ಬಾನುಮುಷ್ತಾಕ್‌ರಂತಹ ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿದೆ ಎಂದು ಅವರು ತಿಳಿಸಿದರು.

ಜಾತಿ ಜಾತಿಗಳ ನಡುವೆ ದ್ವೇಷವನ್ನು ಹುಟ್ಟುಹಾಕುವ ವಿದ್ಯಮಾನಗಳು ನಡೆಯುತ್ತಿವೆ. ಇದು ಬಹಳ ಆತಂಕಕಾರಿ ಸಂಗತಿ. ಯಾವುದೇ ಪ್ರಜ್ಞಾವಂತ ವ್ಯಕ್ತಿಗೆ ಹೆಚ್ಚು ಸಂಕಟವನ್ನು ಉಂಟುಮಾಡುವ ವಿಚಾರ. ಇಂತಹ ಆತಂಕಗಳ ನಿವಾರಣೆಗೆ ಸಮ್ಮೇಳನಗಳು ಆತ್ಮಾವಲೋಕನದ ವೇದಿಕೆಗಳಾಗಬೇಕು. ಅದು ಈ ಸಮ್ಮೇಳನದಲ್ಲಿ ಧರ್ಮಕ್ಷೇತ್ರದಲ್ಲಿ ಆಗುತ್ತದೆನ್ನುವ ನಂಬಿಕೆ ನಮ್ಮದಾಗಿದೆ ಎಂದು ಸಿಎಂ ನುಡಿದರು.

Write A Comment