ಕರ್ನಾಟಕ

ರಾಷ್ಟ್ರೀಯ ವ್ಯಾಜ್ಯ ನೀತಿ ಜಾರಿಗೆ ಚಿಂತನೆ: ಸಚಿವ ಡಿವಿಎಸ್

Pinterest LinkedIn Tumblr

VAKEELA

ತುಮಕೂರು, ಫೆ.1: ವ್ಯಾಜ್ಯಗಳ ಇತ್ಯರ್ಥಕ್ಕೆ ರಾಷ್ಟ್ರೀಯ ವ್ಯಾಜ್ಯ ನೀತಿಯೊಂದನ್ನು ಶೀಘ್ರವೇ ಜಾರಿಗೆ ತರಲಾಗುವುದೆಂದು ಕೇಂದ್ರ ಕಾನೂನು ಚಿವ ಡಿ.ಬಿ.ಸದಾನಂದಗೌಡ ತಿಳಿಸಿದ್ದಾರೆ.
ತುಮಕೂರು ವಕೀಲರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಿದ್ದ ಅವರು, ಈ ವ್ಯಾಜ್ಯ ನೀತಿ ತರುವುದಕ್ಕಾಗಿಯೇ ಈ ಹಿಂದೆ ಸಮಿತಿಗಳನ್ನು ರಚಿಸಲಾಗಿತ್ತು. ಆ ಸಮಿತಿಯಿಂದ ವರದಿ ಪಡೆಯಲಾಗಿದೆ. ಶೀಘ್ರದಲ್ಲೇ ಇಡೀ ರಾಷ್ಟ್ರಕ್ಕೆ ಅನ್ವಯವಾಗುವ ವ್ಯಾಜ್ಯ ನೀತಿಯೊಂದನ್ನು ಜಾರಿಗೆ ತರಲಾಗುವುದು ಎಂದರು.

ವ್ಯಾಜ್ಯಪೂರ್ವ ಪ್ರಕರಣಗಳು ಸಹ ಶೀಘ್ರವಾಗಿ ಇತ್ಯರ್ಥಪಡಿಸುವ ಸಲುವಾಗಿ ಹಾಗೂ ಅವುಗಳಿಗೂ ಮಾನ್ಯತೆ ಸಿಗುವ ರೀತಿಯಲ್ಲಿ ಕಾನೂನಿನ ಬಳಕೆ ಮಾಡಲಾಗುವುದು. ರಾಷ್ಟ್ರದಲ್ಲಿ ಈಗ ಅಸ್ತಿತ್ವದಲ್ಲಿರುವ ಆರ್ಬಿಟ್ರೇಷನ್ ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿಸಿದರು.

ಕೆಳ ಹಂತದ ನ್ಯಾಯಾಲಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವುದನ್ನು ಗಮನಿಸುತ್ತೇವೆ. ಎಲ್ಲೆಲ್ಲಿ ಇಂತಹ ಸೌಕರ್ಯಗಳ ಆವಶ್ಯಕತೆ ಇದೆಯೋ ಅಲ್ಲಿಗೆ ಗಮನ ಹರಿಸಲಾಗುವುದು. ಕೆಳ ಹಂತದ ನ್ಯಾಯಾಲಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಇಂತಹ ಮೂಲಭೂತ ಆವಶ್ಯಕತೆ ಹಾಗೂ ಇ-ಲೈಬ್ರರಿ ವ್ಯವಸ್ಥೆಗಾಗಿ 2,940 ಕೋಟಿ ರೂ.ಗಳನ್ನು ವಿನಿಯೋಗಿಸಲಾಗುವುದು ಎಂದರು.ಶಾಸಕ ಬಿ.ಸುರೇಶಗೌಡ, ವಕೀಲರ ಸಂಘದ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ, ಕಾರ್ಯದರ್ಶಿ ಕೆ.ಎನ್.ಬಸವರಾಜು ಮತ್ತಿತರರಿದ್ದರು.

Write A Comment