ಕರ್ನಾಟಕ

ಸಿದ್ದು, ಖರ್ಗೆ ರಹಸ್ಯ ಭೇಟಿ : ಪರಮೇಶ್ವರ್ ನಿಶ್ಯಸ್ತ್ರ, ಸಿಎಂ ಮತ್ತಷ್ಟು ಬಲಾಡ್ಯ

Pinterest LinkedIn Tumblr

Siddu-and-akharge

ಬೆಂಗಳೂರು, ಜ.27: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವವನ್ನು ಕದಲಿಸಲು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ಇತರೆ ನಾಯಕರು ನಡೆಸಿದ ಸಂಚುಗಳು ಟುಸ್‌ಪಟಾಕಿಗಳಾಗಿದ್ದು ಸಿದ್ದರಾಮಯ್ಯ ಅವರ ಕೈ ಮತ್ತಷ್ಟು ಬಲಗೊಂಡಿದೆ. ಉಪಮುಖ್ಯಮಂತ್ರಿ ಹುದ್ದೆ ಪಡೆಯಲೇಬೇಕು. ಇಲ್ಲವಾದರೆ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುತ್ತೇನೆ ಎಂದು ಹಠಕ್ಕೆ ಬಿದ್ದು ಕಾರ್ಯಾಚರಣೆಗೆ ಇಳಿದಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೊಸ ವರ್ಷದ ದಿನದಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸಂಚಲನ ಮೂಡಿಸಿದ್ದರು. ಅದರ ಬೆನ್ನಲ್ಲೇ ದಲಿತ ಮುಖ್ಯಮಂತ್ರಿ ಎಂಬ ಚರ್ಚೆಯನ್ನೂ ಹುಟ್ಟು ಹಾಕಲಾಗಿತ್ತು. ಈ ಎಲ್ಲಾ ಗೊಂದಲಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆರಳಿದ್ದಾರೆ.

ಇತ್ತೀಚೆಗೆ ರಹಸ್ಯ ಸ್ಥಳದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿಧಾನಸಭೆ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿ ಎಲ್ಲ ಗೊಂದಲಗಳಿಗೂ ಇತಿಶ್ರಿ ಹಾಡಿದ್ದಾರೆ. ಒಂದೆಡೆ ಸ್ಪೀಕರ್ ಕಾಗೋಡು ತಿಮ್ಮಪ್ಪ ರಾಜ್ಯ ಸರ್ಕಾರದ ಕಾರ್ಯವೈಖರಿಗಳ ಬಗ್ಗೆ ಬಹಿರಂಗ ವಾಗ್ದಾಳಿಗಳನ್ನು ಮಾಡಿ ಮುಜುಗರ ಉಂಟು ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ದಲಿತ ಮುಖ್ಯಮಂತ್ರಿ ಎಂಬ ಚರ್ಚೆಯೂ ಆರಂಭವಾಗಿತ್ತು. ಕೆಲ ದಿನಗಳ ಹಿಂದೆ ಕಾಕತಾಳೀಯ ಎಂಬಂತೆ ಪರಮೇಶ್ವರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ರಹಸ್ಯ ಸಭೆ ಮಾಡಿದ್ದರು.

ಇದು ರಾಜ್ಯ ರಾಜಕಾರಣದಲ್ಲಿ ನಾನಾ ರೀತಿಯ ಊಹಾಪೋಹಗಳಿಗೆ ಕಾರಣವಾಗಿತ್ತು. ಪರಿಸ್ಥಿತಿ ಗಂಭೀರತೆ ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ರಹಸ್ಯ ಸ್ಥಳದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಅನಂತರ ದಲಿತ ಮುಖ್ಯಮಂತ್ರಿ ಚರ್ಚೆಯೂ ಮುಂದುವರೆದಿಲ್ಲ. ಸರ್ಕಾರದ ಕಾರ್ಯವೈಖರಿಗಳ ಬಗ್ಗೆ ಕಾಗೋಡು ತಿಮ್ಮಪ್ಪ ಅವರು ಚಕಾರ ಎತ್ತಿಲ್ಲ. ತಾವು ನಡೆಸಿದ ಎಲ್ಲಾ ತಂತ್ರಗಾರಿಕೆಗಳು ವಿಫಲವಾದಾಗ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮುಂಬೈ ಮತ್ತು ದೆಹಲಿಗೆ ತೆರಳಿ ತಮ್ಮ ಗಾಡ್‌ಫಾದರ್ ನಾಯಕರುಗಳನ್ನು ಭೇಟಿ ಮಾಡಿ ಉಪಮುಖ್ಯಮಂತ್ರಿ ಹುದ್ದೆ ಕೊಡುವಂತೆ ದುಂಬಾಲು ಬಿದ್ದಿದ್ದಾರೆ.

ಮಾರ್ಚ್ ಕೊನೆಯ ಅಥವಾ ಏಪ್ರಿಲ್ ವಾರದಲ್ಲಿ ಸಂಪುಟ ಪುನರ್ ರಚನೆ ನಡೆಯುವ ಸಾಧ್ಯತೆಗಳಿದ್ದು, ಆ ಸಂದರ್ಭದಲ್ಲಿ ತಮಗೆ ಉಪಮುಖ್ಯಮಂತ್ರಿ ಹುದ್ದೆ ದೊರೆಯಲೇಬೇಕೆಂದು ಪರಮೇಶ್ವರ್ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ. ಇತ್ತ ಖರ್ಗೆ ಭೇಟಿಯ ನಂತರ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಬಲ ಬಂದಿದೆ. ನಾಯಕತ್ವವನ್ನು ಅಸ್ತಿರಗೊಳಿಸುವ ಯಾವುದೇ ಪ್ರಯತ್ನಗಳಿಗೆ ನನ್ನ ಬೆಂಬಲವಿಲ್ಲ ಎಂದು ಖರ್ಗೆ ಸ್ಪಷ್ಟವಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಕಾಗೋಡು ತಿಮ್ಮಪ್ಪ ಅವರು ಜನಪರ ಕಾಳಜಿಯಿಂದ ಹೇಳುವ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ. ಅವರ ವಿರುದ್ಧ ಹೈಕಮಾಂಡ್‌ಗೆ ದೂರು ನೀಡುವುದು, ಬಹಿರಂಗ ಟೀಕೆ ಮಾಡುವಂತಹ ಚಟುವಟಿಕೆಗಳಲ್ಲಿ ತೊಡಗುವ ಸಚಿವರುಗಳನ್ನು ನಿಯಂತ್ರಿಸಿ ಎಂದು ಖರ್ಗೆ ಸಲಹೆ ನೀಡಿದ್ದಾರೆ. ಜತೆಗೆ ಮತ್ತೊಬ್ಬ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ಸಹ ತಾವೂ ಸಿದ್ದರಾಮಯ್ಯ ಅವರ ಜತೆ ಇರುವುದಾಗಿ ಭರವಸೆ ನೀಡಿದ್ದಾರೆ.

ಹೀಗಾಗಿ ಸಿದ್ದು ವಿರೋಧಿ ಬಣದ ನಾಯಕರುಗಳ ಬತ್ತಳಿಕೆಯಲ್ಲಿ ಅಸ್ತ್ರಗಳೇ ಇಲ್ಲದಂತಾಗಿದ್ದು, ಕೈಕೈ ಹಿಸುಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರ್ಕಾವಾತಿ ಡಿನೋಟಿಫಿಕೇಷನ್ ವಿಷಯದಲ್ಲಿ ಬಿಜೆಪಿ ಕಳೆದ ಮೂರ್ನಾಕಲ್ಕು ತಿಂಗಳುಗಳಿಂದಲೂ ದೂರು ನೀಡುವುದಾಗಿ ಹೇಳುತ್ತಲೇ ಕಾಲ ಕಳೆದು ನಗೆಪಾಟಲಿಗೆ ಈಡಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರ ರಾಜ್ಯಭಾರ ಅಬಾದಿತವಾಗಿ ಮುಂದುವರೆದಿದೆ. ಅತೃಪ್ತರು ಅವಕಾಶಕ್ಕಾಗಿ ಹೊಂಚು ಹಾಕಿ ಕೂತಿದ್ದಾರೆ.

Write A Comment