ಕರ್ನಾಟಕ

ಜಾತಿ ದ್ವೇಷ ಬದಿಗಿಟ್ಟು ದಲಿತ-ಸವರ್ಣೀಯರು ಅರ್ಥಪೂರ್ಣ ಗಣರಾಜ್ಯೋತ್ಸವ

Pinterest LinkedIn Tumblr

pvec27januhun 4

ಹುಣಸೂರು: ತಾಲ್ಲೂಕಿನ ಬಿಳಿಗೆರೆ ಗ್ರಾಮದಲ್ಲಿ ಗಣರಾಜ್ಯೋತ್ಸವವನ್ನು ಅರ್ಥಪೂರ್ಣ­ವಾಗಿ ಆಚರಿಸ­ಲಾ­ಯಿತು. 16 ವರ್ಷಗಳಿಂದ ಹೊಗೆ­ಯಾ­ಡುತ್ತಿದ್ದ ಜಾತಿ ದ್ವೇಷವನ್ನು ಬದಿಗಿಟ್ಟು, ದಲಿತರು ಹಾಗೂ ಸವರ್ಣೀಯರು ಒಂದಾ­ದರು. ಹಲವಾರು ಸವರ್ಣೀ­ಯರು ದಲಿತರ ಮನೆಗಳಿಗೆ ಹೋಗಿ ಆತಿಥ್ಯ­ವನ್ನೂ ಸ್ವೀಕ­ರಿಸಿ ಸಹಬಾಳ್ವೆಗೆ ನಾಂದಿ ಹಾಡಿದರು.

ಈ ಖುಷಿ ಕ್ಷಣಕ್ಕಾಗಿ ದಲಿತ ಕೇರಿಯ ಜನರೆಲ್ಲ ಗಡಿಬಿಡಿಯಿಂದ ತಯಾರಿ ಮಾಡಿ­ಕೊಂಡಿದ್ದರು. ಎಲ್ಲೆಲ್ಲೂ ಸಡಗರ ಮನೆ ಮಾಡಿತ್ತು. ಇಡೀ ಕೇರಿಯನ್ನು ಹಸಿರು ತಳಿರು ತೋರಣ, ಶಾಮಿ­ಯಾನ­ದಿಂದ ಅಲಂ­ಕರಿಸ­ಲಾಗಿತ್ತು. ಮನೆಗೆ ಬಂದ ಸವರ್ಣೀ­ಯ­ರನ್ನು ಕೇರಿಯ ಮಕ್ಕಳು ಆರತಿ ಎತ್ತಿ ತಿಲಕ­ವಿಟ್ಟು ಆತ್ಮೀಯವಾಗಿ ಬರಮಾಡಿಕೊಂಡರು.

ಕೇರಿಯ ಯಜಮಾನ ಸಣ್ಣಯ್ಯ ಅವರು ತಮ್ಮ ಗುಡಿಸಲಿನಲ್ಲೇ ಭೋಜನ ಏರ್ಪಡಿಸಿದ್ದರು. ಸಣ್ಣಯ್ಯ ಅವರ ಪತ್ನಿ ಸುಂದ್ರಮ್ಮ ಲಗುಬಗೆ­ಯಿಂದ ಓಡಾಡಿ ಅತಿಥಿಗಳಿಗೆ ಬಿಸಿ ಬಿಸಿ ಊಟ ಬಡಿಸಿದರು. ರಾಗಿಮುದ್ದೆ, ಉಪ್ಪೆ­ಸರು, ಅವರೆಕಾಯಿ ಪಲ್ಯ, ಅನ್ನ– ಸಾರು, ಜತೆಗೆ ಜಿಲೇಬಿ… ಎಲ್ಲವನ್ನೂ ದಲಿತ ಹಾಗೂ ಸವರ್ಣೀಯ ಸಮಾಜ­ದವರು ಒಂದಾಗಿ ಕುಳಿತು ಸವಿದರು.

ಅಸ್ಪೃಶ್ಯತೆ ಮತ್ತು ಜಾತಿ ನಿರ್ಮೂಲ­ನೆಗಾಗಿ ಹೋರಾಡುವ ರಾಜ್ಯ ಹಿಂದು­ಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ದಲಿತ ಸಂಘರ್ಷ ಸಮಿತಿ ಮುಖಂ­ಡರು ಈ ಸಹಬಾಳ್ವೆಯ ಕಾರ್ಯ­ಕ್ರಮ ಆಯೋ­ಜಿಸಿ­ದ್ದರು. ಶಾಸಕ ಮಂಜು­ನಾಥ್‌, ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್‌. ಶಿವರಾಂ, ಪ್ರೊ.ಎಚ್‌.ಜೆ. ಲಕ್ಕಪ್ಪಗೌಡ, ದಲಿತ ಮುಖಂಡರಾದ ನಿಂಗರಾಜ್‌ ಮಲ್ಲಾಡಿ, ವರದರಾಜು, ಡಿ.ಕುಮಾರ್‌, ವಿವಿಧ ಇಲಾಖೆಗಳ ಅಧಿ­ಕಾರಿ­­ಗಳು ಕಾರ್ಯಕ್ರಮದಲ್ಲಿ ಪಾಲ್ಗೊಂ­ಡರು.

ದಲಿತಕೇರಿಯ ಶಾಮಿಯಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯ­ಕ್ರಮ­­ದಲ್ಲಿ ಎರಡೂ ಸಮಾಜದ ನಾಯ­ಕರು ಸಹಬಾಳ್ವೆಯ ಮಂತ್ರ ಪಠಿಸಿದರು. ಇಲ್ಲಿ ನಡೆದ ಬೆಳವಣಿಗೆ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಶಾಸಕ ಮಂಜುನಾಥ್‌ ಆಶಿಸಿದರು.

ಮರೆತುಹೋದ ಕಹಿ: ಸುಮಾರು 16 ವರ್ಷಗಳ ಹಿಂದೆ ಗ್ರಾಮದ ಬಸವೇಶ್ವರ ಉತ್ಸವದಲ್ಲಿ ದಲಿತರು ಹಾಗೂ ಸವ­ರ್ಣೀಯರ ಮಧ್ಯೆ ಬಿರುಕು ಮೂಡಿತ್ತು. ದಲಿತರು ದೇವಸ್ಥಾನ ಪ್ರವೇಶಿಸಿ ಪೂಜೆ ಮಾಡಲು ಕೆಲವರು ತಕರಾರು ಮಾಡಿ­ದ್ದರು. ಅಂದಿನಿಂದ ಎರಡೂ ಸಮಾಜ­ಗಳ ಮಧ್ಯೆ ವಿರಸ ಮುಂದು­ವರಿದೇ ಇತ್ತು. ಗಣ­ರಾಜ್ಯೋ­ತ್ಸವ­ದಂದು ಎಲ್ಲ ವಿಷ ಗಳಿಗೆಗೆ ಅಂತ್ಯ ಹಾಡಲಾಯಿತು.

Write A Comment