ಬೆಂಗಳೂರು, ಜ.24: ನಿಷೇಧಿತ ನ್ಯಾಷನಲ್ ಡೆಮ್ಯಾಕ್ರೆಟಿಕ್ ಫ್ರೆಂಟ್ ಆಫ್ ಬೋಡೋ ಸಂಘಟನೆಯ ಉಗ್ರನೊಬ್ಬನನ್ನು ಬೆಂಗಳೂರಿನ ಕಾಟನ್ಪೇಟೆಯ ಮನೆಯೊಂದರಲ್ಲಿ ಬಂಧಿಸಲಾಗಿದೆ. ಕೇಂದ್ರ ಗುಪ್ತಚರ ಇಲಾಖೆ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ವಿಶೇಷ ಪೊಲೀಸರ ತಂಡ ಇಂದು ಮುಂಜಾನೆ ಕಾಟನ್ಪೇಟೆಯ ಮನೆಯೊಂದರಲ್ಲಿ ಅಡಗಿದ್ದ ಬಿರ್ಖಾಂಗ್ ಬಸುಮಾತರಿ ನರ್ಜರಿ(24)ಎಂಬ ಉಗ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ತಿಳಿಸಿದ್ದಾರೆ.
ಪ್ರಸ್ತುತ ಬಂಧಿತ ಉಗ್ರನ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದ್ದು, ಮೂಲತಃ ನಾಗಾಲ್ಯಾಂಡ್ನ ವಾಸಿಯಾಗಿರುವ ಈತ ಬೆಂಗಳೂರಿಗೆ ಯಾವಾಗ ಬಂದ, ಇಲ್ಲಿ ಯಾವ ವೃತ್ತಿ ನಡೆಸುತ್ತಿದ್ದ ಮತ್ತು ಈತನಿಗೆ ಯಾರು ಸಹಕಾರ ನೀಡಿದರು ಎಂಬುದರ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಅಸ್ಸೋಂನ ಕೋಕ್ರಝಾರ್ ಜಿಲ್ಲೆಯಲ್ಲಿ ನಡೆದ ದುಷ್ಕೃತ್ಯದಲ್ಲಿ ಈತ ಭಾಗಿಯಾಗಿದ್ದ ಎಂದು ಹೇಳಲಾಗುತ್ತಿದ್ದು, ಸುಮಾರು 12ಕ್ಕೂ ಹೆಚ್ಚು ಮಂದಿಯ ಹತ್ಯೆಯ ಪ್ರಮುಖ ರೂವಾರಿ ಎಂದು ಹೇಳಲಾಗುತ್ತಿದೆ. ಇದಲ್ಲದೆ ಈತ ಬೋಡೋ ಸಂಘಟನೆಯ ಜಿಲ್ಲಾ ಕಮಾಂಡರ್ ಆಗಿದ್ದ ಎಂದು ಮೂಲಗಳು ಹೇಳಿವೆ. ಇತ್ತೀಚೆಗೆ ಅಸ್ಸೋಂನಲ್ಲಿ ನಡೆದಂತಹ ಹಿಂಸಾಚಾರದಲ್ಲಿ ಉಗ್ರರ ಕೈವಾಡ ಇದೆ ಎಂದು ಸಾಭೀತಾಗಿರುವ ಹಿನ್ನೆಲೆಯಲ್ಲಿ ಬೋಡೋ ಸಂಘಟನೆಯ ಉಗ್ರರು ದೇಶದ ಹಲವೆಡೆ ಅಡಗಿರುವ ಮಾಹಿತಿ ಕಲೆಹಾಕುತ್ತಿದ್ದು, ಅದರಂತೆ ಬೆಂಗಳೂರಿನಲ್ಲೂ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ಡಿಸಿಪಿ ಲಾಬೂರಾಮ್ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು. ಬೋಡೋ ಉಗ್ರರನ ಬಂಧನದ ಬಗ್ಗೆ ಅಸ್ಸೋಂ ಪೊಲೀಸರಿಗೂ ಮಾಹಿತಿ ರವಾನಿಸಿದ್ದು, ಇನ್ನೆರಡು ದಿನಗಳಲ್ಲಿ ಅಸ್ಸೋಂ ಪೊಲೀಸರು ನಗರಕ್ಕೆ ಭೇಟಿ ನೀಡಲಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಸಂಜೆಗೆ ತಿಳಿಸಿದ್ದಾರೆ.
