ಬೆಂಗಳೂರು, ಜ.22: ರೇಸ್ಕೋರ್ಸ್ ರಸ್ತೆಯಲ್ಲಿರುವ ಜೆಡಿಎಸ್ ಕಚೇರಿ ವಿವಾದ ಎರಡೂ ಪಕ್ಷಗಳ ಮುಖಂಡರ ನಡುವೆ ವಾದ ವಿವಾದಕ್ಕೆ ಎಡೆಯಾಗಿ ಉದ್ರಿಕ್ತ ಪರಿಸ್ಥಿತಿ ನಿರ್ಮಿಸಿತು. ಜೆಡಿಎಸ್ ಕಚೇರಿ ಪೂರ್ವ ಕಟ್ಟಡ ಕಾಂಗ್ರೆಸ್ಗೆ ಸೇರಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಡಿ.31ರ ಒಳಗಾಗಿ ಕಚೇರಿಯನ್ನು ತೆರವು ಮಾಡಿ ಕಾಂಗ್ರೆಸ್ಗೆ ಬಿಟ್ಟುಕೊಡಬೇಕಿತ್ತು. ಪರ್ಯಾಯ ಜಾಗ ಸಿಗದ ಕಾರಣ ಜೆಡಿಎಸ್ ಮುಖಂಡರು ಇನ್ನಷ್ಟು ಕಾಲಾವಕಾಶ ಕೇಳುತ್ತಿದ್ದಾರೆ. ಈ ನಡುವೆ ಕಚೇರಿ ಹಿಂಭಾಗದ ಖಾಲಿ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಲು ಜೆಡಿಎಸ್ ಮುಖಂಡರು ನಿನ್ನೆ ಜೆಸಿಬಿಯಿಂದ ನೆಲ ಸಮತಟ್ಟು ಮಾಡಿಸಿದ್ದರು.
ಇಂದು ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಮುಖಂಡರಾದ ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ರಾಮಚಂದ್ರಪ್ಪ, ಮುಖ್ಯ ಸಚೇತಕ ಆರ್.ವಿ.ವೆಂಕಟೇಶ್, ಮಾಜಿ ಸಂಸದ ಎಚ್.ಹನುಮಂತಪ್ಪ , ಮಾಜಿ ಮೇಯರ್ ಪಿ.ಆರ್.ರಮೇಶ್, ಬಿಬಿಎಂಪಿ ಸದಸ್ಯರು, ಯುವ ಕಾಂಗ್ರೆಸ್ ಮುಖಂಡರು, ಜೆಡಿಎಸ್ ಕಚೇರಿ ಹಾಗೂ ಖಾಲಿ ಜಾಗ ಕಾಂಗ್ರೆಸ್ ಪಕ್ಷಕ್ಕೆ ಸೇರಿದೆ. ನ್ಯಾಯಾಲಯದಲ್ಲಿ ವಿವಾದ ಇರುವುದನ್ನು ದುರ್ಬಳಕೆ ಮಾಡಿಕೊಂಡು ಜೆಡಿಎಸ್ ತಾತ್ಕಾಲಿಕ ಶೆಡ್ ಹಾಕುವ ಮೂಲಕ ಭೂಮಿ ಒತ್ತುವರಿಗೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ನೆಲಸಮತಟ್ಟು ಮಾಡಿದ್ದ ಜಾಗದ ಸುತ್ತ ಕಾಂಗ್ರೆಸ್ ಬಾವುಟ ನೆಟ್ಟರು.
ಕಾಂಗ್ರೆಸ್ ಕಾರ್ಯಕರ್ತರು ಏಕಾಏಕಿ ಸ್ಥಳಕ್ಕೆ ಆಗಮಿಸಿದ ಮಾಹಿತಿ ಪಡೆದ ಶಾಸಕ ವೈ.ಎಸ್.ವಿ.ದತ್ತ ಹಾಗೂ ಮತ್ತಿತರ ಮುಖಂಡರು ಸ್ಥಳಕ್ಕೆ ಆಗಮಿಸಿ ಪ್ರತಿರೋಧ ವ್ಯಕ್ತಪಡಿಸಿದರು. ಎರಡೂ ಪಕ್ಷಗಳ ನಾಯಕರು, ಕಾರ್ಯಕರ್ತರ ವಾಗ್ವಾದದಿಂದ ಸ್ಥಳದಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಮಧ್ಯ ಪ್ರವೇಶಿಸಿದ ಪೊಲೀಸರು, ಕಾರ್ಯಕರ್ತರು ಹಾಗೂ ಮುಖಂಡರು ಅಲ್ಲಿಂದ ಹೊರ ಕಳುಹಿಸಿದರು. ವಿವಾದ ನ್ಯಾಯಾಲಯದಲ್ಲಿರುವುದರಿಂದ ಯಾರೂ ಮಧ್ಯ ಪ್ರವೇಶ ಮಾಡುವಂತಿಲ್ಲ ಎಂದು ಮುಖಂಡರುಗಳನ್ನು ಹೊರ ಕಳುಹಿಸಿದರು. ನಂತರ ಸುದ್ದಿಗಾರರ ಜತೆ ಮಾತನಾಡಿದ ದತ್ತಾ, ಕಾಂಗ್ರೆಸ್ ದೌರ್ಜನ್ಯ ಮಾಡುತ್ತಿದೆ ಎಂದು ಕಿಡಿಕಾರಿದರು.
ಜೆಡಿಎಸ್ ಕಚೇರಿ ಇರುವ ಕಟ್ಟಡ ಕಾಂಗ್ರೆಸ್ಗೆ ಸೇರಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದರಲ್ಲಿ ಯಾವುದೇ ವಿವಾದ ಇಲ್ಲ. ಆದರೆ ಜೆಡಿಎಸ್ ಕಚೇರಿ ಹಿಂದಿನ ಖಾಲಿ ಜಾಗ ಕಾಂಗ್ರೆಸ್ಗೆ ಸೇರಿದ್ದಲ್ಲ ಎಂದರು. ಆದರೂ ಕಾಂಗ್ರೆಸ್ ದೌರ್ಜನ್ಯ ಮೂಲಕ ಜಾಗ ಕಿತ್ತುಕೊಳ್ಳುವ ಯತ್ನ ನಡೆಸಿದೆ. ನ್ಯಾಯಾಲಯದ ತೀರ್ಪಿನ ಮೇಲೆ ಹಾಗೂ ನೆಲದ ಕಾನೂನಿನ ಮೇಲೆ ಕಾಂಗ್ರೆಸ್ಗೆ ನಂಬಿಕೆ ಇಲ್ಲ ಎಂದು ದತ್ತಾ ಆಕ್ರೋಶ ವ್ಯಕ್ತಪಡಿಸಿದರು. ಎರಡೂ ಪಕ್ಷಗಳ ಕಾರ್ಯಕರ್ತರ ಕೂಗಾಟದಿಂದ ಕೆಲಕಾಲ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾದಾಗ ಪೊಲೀಸರು ಸಕಾಲಕ್ಕೆ ಮಧ್ಯಪ್ರವೇಶಿಸಿ ವಾತಾವರಣವನ್ನು ಸಹಜ ಸ್ಥಿತಿಗೆ ತರಲು ಸಾಧ್ಯವಾಯಿತು.


