ಕರ್ನಾಟಕ

ಭೋವಿ ಬೃಹತ್‌ ಸಮಾವೇಶ: ಭೋವಿ ಅಭಿವೃದ್ಧಿ ನಿಗಮ ಸ್ಥಾಪನೆ: ಸಿ.ಎಂ

Pinterest LinkedIn Tumblr

bhovi

ನೆಲಮಂಗಲ: ಭೋವಿ ಸಮಾಜದ ಅಭಿ­ವೃದ್ಧಿಗಾಗಿ ಪ್ರತ್ಯೇಕ ನಿಗಮ­ವೊಂ­ದನ್ನು ಸ್ಥಾಪಿಸಲಾ­ಗುವುದು ಎಂದು ಮುಖ್ಯ­ಮಂತ್ರಿ ಸಿದ್ಧರಾಮಯ್ಯ ಘೋಷಿಸಿದರು. ಸಮೀಪದ ರಾಷ್ಟ್ರೀಯ ಹೆದ್ದಾರಿ ಪಕ್ಕದ ನೈಸ್‌ ಮೈದಾನದಲ್ಲಿ ಭಾನು­ವಾರ ಏರ್ಪಡಿಸಿದ್ದ ಸಿದ್ದರಾ­ಮೇಶ್ವರ ಜಯಂತ್ಯುತ್ಸವ ಹಾಗೂ ಭೋವಿ ಬೃಹತ್‌ ಸಮಾವೇಶವನ್ನು ಕಲ್ಲು ಒಡೆ­ಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ಭೋವಿ ಜನಾಂಗದ ಅಭಿವೃದ್ಧಿಗೆ ಅಗತ್ಯವಾದ ಅನುದಾನ ನೀಡಲಾ­ಗು­ತ್ತದೆ. ಸಮಾಜದ ಅಭಿವೃದ್ಧಿಗೆ ಬಿಡುಗಡೆ­ಯಾದ ಹಣ ಬಳಕೆ ಆಗದಿದ್ದಾಗ ಅದನ್ನು ಮುಂದಿನ ವರ್ಷದ ಅನು­ದಾ­ನದ ಜತೆ ಸೇರಿಸಿ ನೀಡಲಾಗುತ್ತದೆ’ ಎಂದು ಹೇಳಿದರು. ‘ಭೋವಿ ಜನಾಂಗದಲ್ಲಿ ಶಿಕ್ಷಿತರ ಸಂಖ್ಯೆ ಕಡಿಮೆ ಇದ್ದು, ಶಿಕ್ಷಿತರಾದರೆ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ’ ಎಂದ ಅವರು, ‘ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆ ಹೋಗಿ ಎಲ್ಲ­ರಿಗೂ ಸಂಪತ್ತು, ಅಧಿಕಾರ ಸಮಾನ­ವಾಗಿ ಹಂಚಿಕೆಯಾಗಬೇಕು ಎಂಬುದು ನಮ್ಮ ಸರ್ಕಾರದ ಆಶಯವಾಗಿದೆ’ ಎಂದು ತಿಳಿಸಿದರು. ‘1983ರಿಂದಲೂ ಭೋವಿ ಜನಾಂಗ ನನ್ನ ಜತೆಗಿದೆ’ ಎಂದರು.

ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ‘ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ ಅವರು ಮೈಸೂರಿನ ಭೋವಿ ಜನಾಂಗಕ್ಕೆ ಮೀಸ­ಲಾತಿ ನೀಡಿದ್ದರು. ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅಖಂಡ ಕರ್ನಾ­ಟಕದ ಭೋವಿ ಜನಾಂಗ­ವನ್ನು ಪರಿಶಿಷ್ಟ ಜಾತಿಗೆ ಸೇರಿಸಿದರು. ಭೋವಿ ಅಭಿವೃದ್ಧಿ ನಿಗಮ ಮೈಸೂರಿನವ­ರಾದ ಸಿದ್ಧರಾಮಯ್ಯ ಅವರಿಂದ ಆಗಬೇಕು’ ಎಂದು ಆಶಿಸಿದರು.

‘ಭೋವಿಗಳು ತಲೆ ಒಡೆದು ಬದುಕು­ತ್ತಿಲ್ಲ, ಕಲ್ಲು ಒಡೆದು ಬದುಕು­ತ್ತಿದ್ದಾರೆ. ಪರಿ­ಶಿಷ್ಟ ಜಾತಿ ಪಂಗಡಗಳ ಅಭಿವೃದ್ದಿಗೆ ₨ 11ಸಾವಿರ ಕೋಟಿ ಮೀಸ­ಲಿಡಲಾಗಿದೆ. ಶೇ 11ರಷ್ಟಿರುವ ನಮಗೆ ₨ 1,320 ಕೋಟಿ ಸಿಗಬೇಕಾ­ಗಿತ್ತು. ಅದು ಸಿಗುತ್ತಿಲ್ಲ.  ನಮ್ಮ ಪಾಲು ಕೇಳುತ್ತಿದ್ದೇವೆ’ ಎಂದರು.

ಸಣ್ಣ ನೀರಾವರಿ ಸಚಿವ ಶಿವರಾಜ ಎಸ್.ತಂಗಡಗಿ, ‘ಮುಖ್ಯ­ಮಂತ್ರಿ ಸಿದ್ಧ­ರಾ­ಮಯ್ಯ ಮಂತ್ರಿ ಮಂಡಲದಲ್ಲಿ ಸಮಾನ ಅವಕಾಶ ನೀಡಿ ನನ್ನನ್ನು ಮಂತ್ರಿ ಮಾಡಿ­ದ್ದಾರೆ. ಭೋವಿ ಜನಾಂಗದವರು ಕೆರೆ­ಗಳನ್ನು ಕಟ್ಟುತ್ತಿ­ದ್ದರು. ಸಣ್ಣ ನೀರಾವರಿ ಖಾತೆ ನೀಡುವ ಮೂಲಕ ಅದೇ ಕೆಲಸ ಕೊಟ್ಟಿ­ದ್ದಾರೆ’ ಎಂದರು.

‘ಯಡಿಯೂರಪ್ಪ ಅವರ ಸರ್ಕಾರ­ದಲ್ಲಿ ಸಿದ್ಧರಾಮೇಶ್ವರರ ಜಯಂತಿ­ಆಚರ­ಣೆಗೆ ತರಲಾಯಿತು, ಭೋವಿ ನಿಗಮ ಸ್ಥಾಪನೆಗೂ ಚಾಲನೆ ನೀಡಲಾಗಿತ್ತು’ ಎಂದು ಬಿಜೆಪಿ ಮುಖಂಡ ಅರವಿಂದ ಲಿಂಬಾ­ವಳಿ ತಿಳಿಸಿದರು.  ಇಂಧನ ಸಚಿವ ಡಿ.ಕೆ.ಶಿವಕುಮಾರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಮಾತನಾಡಿದರು.

ಕೋಲಾರ ಕೇಶವ, ಸಂಸದ ಕೆ.ಎಚ್‌.ಮುನಿಯಪ್ಪ, ಶಾಸಕರಾದ ಶ್ರೀನಿವಾಸಮೂರ್ತಿ, ರಘು, ರಾಘವೇಂದ್ರ ಹಿಟ್ನಾಳ್‌, ಮಾನಪ್ಪ ವಜ್ಜಲ್‌, ಮುಖಂಡ­ರಾದ ವೆಂಕಟ­ಸ್ವಾಮಿ, ಎಂ.ವಿ.ನಾಗರಾಜು, ಬಸವ­ರಾಜು, ಭೋವಿ ಸಮಾಜದ ಕಾರ್ಯಾ­ಧ್ಯಕ್ಷ ಮಾಕಳಿ ರವಿ, ಕೆಪಿಸಿಸಿ ಪರಿಶಿಷ್ಟ ಪಂಗಡದ ಎಂ.ರಾಮಪ್ಪ, ಹರಿಕುಮಾರ್‌ ವೇದಿಕೆಯಲ್ಲಿದ್ದರು. ಡಾ.ಚೌಡಯ್ಯ ಅವರ ‘ಭೋವಿ ರತ್ನಗಳು’ ಪುಸ್ತಕವನ್ನು ಬಿಡುಗಡೆ ಮಾಡ­ಲಾಯಿತು ಮತ್ತು ಭೋವಿ ಜನಾಂಗದ ಅಂತರ್ಜಾಲ ತಾಣ ಬಿಡುಗಡೆ ಮಾಡಲಾಯಿತು. www.sjsbhovigurupeeta.com.

ಮುನಿಯಪ್ಪಗೆ ಸಿಗದ ಅವಕಾಶ
ಸಮಾರಂಭದಲ್ಲಿ ಸಂಸದ ಕೆ. ಎಚ್‌. ಮುನಿಯಪ್ಪ ಅವರು ಮಾತನಾಡಲು ಮುಂದಾದಾಗ ಅವರಿಗೆ ಅವಕಾಶ ಕೊಡಲಿಲ್ಲ. ಭೋವಿ ಸಮಾಜವನ್ನು ಪರಿಶಿಷ್ಟ ಪಂಗಡದಿಂದ ತೆಗೆಯಲು ಯತ್ನಿಸಿದವರನ್ನು ಮುಖ್ಯ ಅತಿಥಿಗಳಾಗಿ ಕರೆದು ವೇದಿಕೆ ಮೇಲೆ ಕೂರಿಸಲಾಗಿದೆ. ಸಮಾಜಕ್ಕೆ ದುಡಿದವರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ಮುಖಂಡ ಕೋಲಾರ ಕೇಶವ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದರು.

ಕೆಟ್ಟ ಶಕ್ತಿಗಳನ್ನು ತೊಡೆಯಬೇಕು
ಸಿದ್ದರಾಮಯ್ಯನವರ  ನಾಯಕತ್ವವನ್ನು ಅಲುಗಾಡಿಸಲು ಕೆಟ್ಟ ಶಕ್ತಿಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. ಅಂತಹ ಕೆಟ್ಟ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಹಿಂದುಳಿದ ವರ್ಗಗಳು ಒಂದಾಗಿ ನಿಲ್ಲಬೇಕು
–ಸಚಿವೆ ಉಮಾಶ್ರೀ

Write A Comment