ಕರ್ನಾಟಕ

ರಕ್ತದ ಮಡುವಿನಲ್ಲಿ ದೇವರ ಉತ್ಸವ!: ಮಚ್ಚು ನೋಡಿ ಓಡಿದ ಸ್ವಾಮೀಜಿ

Pinterest LinkedIn Tumblr

pvec18jan15hnr2

ಹನೂರು/ಚಾಮರಾಜನಗರ: ಸಮೀಪದ ಕೂಡ್ಲೂರಿನ ಏಳುದಂಡು ಮುನಿಯಪ್ಪನ ಜಾತ್ರೆಯಲ್ಲಿ ಶನಿವಾರ ಹಲವು ವೈರುಧ್ಯಗಳು ನಡೆದವು. ಜಿಲ್ಲಾಡಳಿತ ಈ ಜಾತ್ರೆಯಲ್ಲಿ ಪ್ರಾಣಿಬಲಿ ನಿಷೇಧಿಸಿದ್ದರೂ ಎರಡು­ಸಾವಿರಕ್ಕೂ ಹೆಚ್ಚು ಪ್ರಾಣಿಗಳನ್ನು ಬಲಿ ನೀಡಲಾಯಿತು! ಇದನ್ನು ತಡೆಯಲು ಹೋದ ಸ್ವಾಮೀಜಿಯೊಬ್ಬರನ್ನು ಭಕ್ತರು ಮಚ್ಚು ತೋರಿಸಿ ಓಡಿಸಿದ್ದೂ ಆಯಿತು. ಅಚ್ಚರಿ ಎಂದರೆ ಈ ಎಲ್ಲ ಘಟನೆಗಳಿಗೆ ಪೊಲೀಸರೇ ‘ಮೂಕ’­ಸಾಕ್ಷಿಯಾದರು!

ಈ ಪ್ರಸಂಗಗಳೆಲ್ಲ ತಮಿಳುನಾಡು ಗಡಿಯಂಚಿನಲ್ಲಿ ನಡೆದಿದ್ದರಿಂದ ಪೊಲೀಸರು ಕೈಕಟ್ಟಿ ನಿಲ್ಲಬೇಕಾಯಿತು. ಕುರಿ, ಕೋಳಿ, ಮೇಕೆಗಳನ್ನು ಬಲಿ ನೀಡುವುದು ಇಲ್ಲಿನ ಹಳೇ ಸಂಪ್ರ­ದಾಯ. ಆದರೆ, ಹೈಕೋರ್ಟ್‌ ಆದೇಶದ ಪ್ರಕಾರ ಜಿಲ್ಲಾಧಿಕಾರಿ ಅವರು ಪ್ರಾಣಿಬಲಿ ನಿಷೇಧಿಸಿ ಆದೇಶ ಹೊರಡಿಸಿದ್ದರು. ಇದರ ಅನ್ವಯ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು.

ದೇವಸ್ಥಾನದ ಮುಂದೆ ದೊಡ್ಡ ಹೊಳೆ ಇದೆ. ಈ ಹೊಳೆಯ ಆಚೆಗಿನ ಪ್ರದೇಶ ತಮಿಳುನಾಡಿಗೆ ಸೇರಿದೆ. ಭಕ್ತರು ಹೊಳೆಯ ಆಚೆಗೆ ಹೋಗಿ ಪ್ರಾಣಿ­ಗಳನ್ನು ಬಲಿ ನೀಡಿದರು. ಇದರಿಂದ ಸ್ಥಳೀಯ ಪೊಲೀಸರು ಏನನ್ನೂ ಮಾಡದಾದರು. ನೋಡನೋಡುತ್ತಿದ್ದಂತೆಯೇ ಅಪಾರ ಸಂಖ್ಯೆಯ ಕೋಳಿ, ಕುರಿ, ಮೇಕೆಗಳ ತಲೆ ಉರುಳಿದವು. ಹೊಳೆದ­ಡವೆಲ್ಲ ಕೆಂಪು ಬಣ್ಣಕ್ಕೆ ತಿರುಗಿತು. ಅಪಾರ ರಕ್ತ ಹೊಳೆಯ ನೀರಿನೊಂದಿಗೆ ಹರಿಯಿತು.

ಕಾಲ್ಕಿತ್ತ ಸ್ವಾಮೀಜಿ: ಜಾತ್ರೆಯಲ್ಲಿ ಬೆಂಗಳೂರು ಮೂಲದ ಪ್ರಾಣಿ ದಯಾ ಸಂಘದ ಸ್ವಾಮೀಜಿ ಮತ್ತು ಅವರ ಕಾರ್ಯಕರ್ತರು ಪ್ರಾಣಿಬಲಿ ತಡೆಗೆ ಜಾಗೃತಿ ಮೂಡಿಸುತ್ತಿದ್ದರು. ಕುರಿಗಳ ತಲೆ ಕತ್ತರಿಸುತ್ತಿದ್ದ ಸ್ಥಳಕ್ಕೆ ಧಾವಿಸಿದ ಸ್ವಾಮೀಜಿ ಅದನ್ನು ರಕ್ಷಿಸಲು ಮುಂದಾದರು. ಈ ವೇಳೆ ಕೆಲವರು ಮಚ್ಚು ಎತ್ತಿಕೊಂಡು ಸ್ವಾಮೀಜಿ ವಿರುದ್ಧವೇ ತಿರುಗಿಬಿದ್ದರು. ಇದರಿಂದ ಸ್ವಾಮೀಜಿ ಮತ್ತು ಅವರ ಕಾರ್ಯಕರ್ತರು ಅಲ್ಲಿಂದ ಕಾಲ್ಕಿತ್ತರು.

Write A Comment