ಕರ್ನಾಟಕ

ನಿಪ್ಪಾಣಿಯ ಮಹೇಶ್‌ ಮಹಾಜನ್‌ ಹಾರುವ ಕಾರು!

Pinterest LinkedIn Tumblr

car

ನಿಪ್ಪಾಣಿ (ಬೆಳಗಾವಿ):  ಈಗ ರಸ್ತೆಗಳ ತುಂಬ ಕಾರುಗಳದ್ದೇ ಕಾರುಬಾರು. ನಿತ್ಯ ಹೊಸ ಹೊಸ ಮಾದರಿಯ ವಾಹನಗಳು ರಸ್ತೆಗಿಳಿಯುತ್ತಿವೆ; ಆದರೆ ರಸ್ತೆ ಮಾತ್ರ ಇದ್ದಷ್ಟೇ ಇದೆ. ಆಂಬುಲೆನ್ಸ್‌ಗೂ ಜಾಗ ಸಿಗದಷ್ಟು ಇಕ್ಕಟ್ಟಾದ ರಸ್ತೆಗಳಲ್ಲಿ ಅಪಘಾತ–ಸಾವು–ನೋವು ಸಾಮಾನ್ಯ ಎನ್ನುವಂತಾಗಿದೆ.

ಆದರೆ, ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ನಿವಾಸಿ ಮಹೇಶ್‌ ಈ ಎಲ್ಲ ಸಮಸ್ಯೆಗೂ ಒಂದು ಪರಿಹಾರವನ್ನು ಕಂಡುಹಿಡಿದಿದ್ದಾರೆ. ಅದು ಹಾರುವ ಕಾರು! ಹಾರಾಟ ನಡೆಸಬಲ್ಲ ಈ ಕಾರು ಅವರ ಸತತ ಅನ್ವೇಷಣೆಯ ಫಲ. ನಗರದ ಮುರಗುಡ್‌ ರಸ್ತೆಯ ದತ್ತ ಕಾಜುನಗರದ ನಿವಾಸಿ, 52 ವರ್ಷದ ಮಹೇಶ್‌ ದತ್ತಾತ್ರೇಯ ಮಹಾಜನ್‌ ಅವರ ಈ ಕಾರಿನ ವಿನ್ಯಾಸಕ್ಕಾಗಿ ಪೇಟೆಂಟ್ ಕೂಡ ಸಿಕ್ಕಿದೆ.

ಏನಿದು ಹಾರುವ ಕಾರು?: ಮಹೇಶ್‌ ಅವರಿಗೆ ಪ್ರೇರಣೆಯಾದುದು ಚಿಕ್ಕ ಮಕ್ಕಳ ಆಟಿಕೆಯಾದ ರಿಮೋಟ್‌ ಕಂಟ್ರೋಲ್‌ ಆಧಾರಿತ ಕಾರುಗಳು. ಅದರಲ್ಲೇ ಕೆಲ ಬದಲಾವಣೆ ಮಾಡಿ ಹೊಸದೊಂದು ಅನ್ವೇಷಣೆ ಮಾಡಬಹುದು ಎಂದು ಅನ್ನಿಸಿದ್ದೇ ತಡ ಕಾರುಗಳನ್ನು ಹಕ್ಕಿಗಳ ತರಹ  ಹಾರಿಸುವ ಬಗ್ಗೆ ಆಲೋಚನೆ ನಡೆಸಿದರು. ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಯಂತ್ರಗಳನ್ನು ಸಮೀಕರಿಸಿ ಹೊಸದೊಂದು ತಂತ್ರಜ್ಞಾನದ ತಟ್ಟೆಯಾಕಾರದ ಹಾರುವ ಕಾರಿನ ಮಾದರಿಯನ್ನು ಸಿದ್ಧಪಡಿಸಿ, ಅದರ ಯಶಸ್ವಿ ಪ್ರಯೋಗವನ್ನೂ ಮಾಡಿದ್ದಾರೆ.

‘ನವೀಕರಿಸಿದಾಗ 1,000– 1,300 ಕೆ.ಜಿ. ಭಾರ ಇರುವ ಇದು ಇಂಧನದ ಮೂಲಕ ಅಂದಾಜು 150 ಅಡಿ ಎತ್ತರದಲ್ಲಿ ಹಾರಾಡ ಬಲ್ಲದು. ಕಾರಿನ ಮಾದರಿಯನ್ನು ಸದ್ಯ ಚೆನ್ನೈನ ಸಂಶೋಧನಾ ಕೇಂದ್ರಕ್ಕೆ ಕಳುಹಿಸಲಾಗಿದೆ’ ಎನ್ನುತ್ತಾರೆ ಮಹಾಜನ್‌.

ಓದಿದ್ದು ಎಂಬಿಎ
ಎಂ.ಬಿ.ಎ ಓದಿರುವ ಮಹೇಶ್‌ ಮಹಾಜನ್‌, ಆಸಕ್ತಿಯಿಂದ ಅನ್ವೇಷಿಸಿದ ಈ ಕಾರಿನ ವಿನ್ಯಾಸ– ಅದರ ಹಾರಾಟದ ದೃಶ್ಯ ಯೂಟ್ಯೂ­ಬ್‌ನಲ್ಲಿ ಹಾಕಿದಾಗ ಜನರು ಮೆಚ್ಚಿಗೆ ಸೂಚಿಸಿದ್ದರು. ಇದರಿಂದ ಪ್ರೇರಿತರಾದ ಅವರು, ವಿನ್ಯಾಸದ ಎಳೆ ಎಳೆಯನ್ನೂ ಬಿಡಿಸಿ ವಿವರಿಸಿ­ದಾಗ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾದರು.

‘ಪೊಲೀಸ್‌, ಆರೋಗ್ಯ ಇಲಾಖೆ ಸೇರಿದಂತೆ ಬಹಳಷ್ಟು ಜನರಿಗೆ ಸಹಕಾರಿಯಾಗಬಲ್ಲ ಈ ವಿನ್ಯಾಸದ ಕಾರಿನ ಮಾದರಿ ಅನ್ವೇಷಣೆ ಈವರೆಗೆ ಎಲ್ಲಿಯೂ ಆಗಿಲ್ಲವೆಂದು ಇಂಟರ್‌ನ್ಯಾಷನಲ್‌ ಪೇಟೆಂಟ್‌ ವರದಿ ತಿಳಿಸಿದೆ’ ಎನ್ನುತ್ತಾರೆ ಮಹೇಶ್‌.

Write A Comment