ಕರ್ನಾಟಕ

ಬೆಳಗಾವಿಯಲ್ಲಿ ಹತ್ಯೆಯಾದ ಮರಿಹುಲಿಯ ದುರಂತ ಕಥೆ

Pinterest LinkedIn Tumblr

tiger

ಅದು ಚಿಕ್ಕಮಗಳೂರು ತಾಲ್ಲೂಕಿನ ಪಂಡರವಳ್ಳಿ ಗ್ರಾಮ. ಕೆಳಗಿಳಿದರೆ ಮುತ್ತೋಡಿ ಕಾಡು. ಕತ್ತೆತ್ತಿದರೆ ಚಂದ್ರದ್ರೋಣ ಪರ್ವತಶ್ರೇಣಿ. ಭದ್ರಾ ಸಂರಕ್ಷಿತ ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಈ ಹಳ್ಳಿಯ ಪ್ರಕೃತಿ ಸೌಂದರ್ಯ ನೋಡಿ ಮನಸೋಲದವರೇ ಇಲ್ಲ. ಇಲ್ಲಿನ ಕಾಫಿ ತೋಟಗಳಲ್ಲಿ ಜಿಂಕೆಯಿಂದ ಆನೆವರೆಗಿನ ಸಸ್ಯಾಹಾರಿ ಪ್ರಾಣಿಗಳೂ, ನರಿಗಳಿಂದ ಹುಲಿವರೆಗಿನ ಮಾಂಸಾಹಾರಿ ಪ್ರಾಣಿಗಳು ಓಡಾಡಿಕೊಂಡಿರುವುದು ಸ್ಥಳೀಯರ ಮಟ್ಟಿಗಂತೂ ಮೊನ್ನೆಮೊನ್ನೆವರೆಗೆ ದೊಡ್ಡ ವಿಷಯವೂ ಆಗಿರಲಿಲ್ಲ.

ಕಳೆದ (2014ರ) ನವೆಂಬರ್ ತಿಂಗಳಲ್ಲಿ ಓರ್ವ ಮಹಿಳೆ ಹುಲಿಗೆ ಬಲಿಯಾಗಿದ್ದೇ ಪಂಡರವಳ್ಳಿ ರಾಜ್ಯಮಟ್ಟದಲ್ಲಿ ದೊಡ್ಡ ಸುದ್ದಿಯಾಯಿತು. ಅಲ್ಲಿದ್ದ ಹುಲಿಯನ್ನು ಸೆರೆ ಹಿಡಿಯುವ, ಸೆರೆ ಹಿಡಿದ ಮೇಲೆ ಏನು ಮಾಡಬೇಕು ಎನ್ನುವ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಯಿತು. ಕೊನೆಗೆ ಅದನ್ನು ಬೆಳಗಾವಿ ಜಿಲ್ಲೆಯ ಭೀಮಗಢ ಅರಣ್ಯಕ್ಕೆ ಬಿಟ್ಟಿದ್ದು, ಅಲ್ಲಿಯೂ ಅದು ದನ, ಕುದುರೆ, ಮಹಿಳೆಯನ್ನು ಕೊಂದು; ಕೊನೆಗೆ ತಾನೂ ಗುಂಡು ತಿಂದು ಸತ್ತು ಹೋಯಿತು.

ಎಲ್ಲ ಘಟನೆಗಳನ್ನು ಒಮ್ಮೆ ಕಣ್ಣಮುಂದೆ ತಂದುಕೊಂಡು ಹಿಂದಿರುಗಿ ನೋಡಿದರೆ ‘ಇನ್ನೂ ಮೂರು ವರ್ಷ ತುಂಬದ, ಪ್ರಾಯಕ್ಕೆ ಬಾರದ ಹುಲಿ ಇಷ್ಟೆಲ್ಲಾ ಭಾನಗಡಿ ಮಾಡಿ ಜೀವ ತೆತ್ತಿದ್ದು ಏಕೆ?’ ಎಂಬ ಪ್ರಶ್ನೆ ಕಾಡದಿರದು.

ಆಡುವ ಮರಿ
ಬೆಳಗಾವಿಯಲ್ಲಿ ಸತ್ತ ಹುಲಿಯ ವಯಸ್ಸು 2 ವರ್ಷದ ಆಸುಪಾಸು. ಅದು 3 ವರ್ಷ ವಯಸ್ಸನ್ನು ಮೀರಿರಲಿಲ್ಲ ಎಂದು ಹೇಳಲಾಗುತ್ತಿದೆ. ಈ ವಯಸ್ಸು ಹುಲಿಗಳು ತಾಯಿಯಿಂದ ಬದುಕುವ ಕಲೆಯನ್ನು ಕಲಿಯುವ ಸ್ಥಿತಿ. ಸಾಮಾನ್ಯವಾಗಿ ಹುಲಿಗಳು ಮನುಷ್ಯರ ಕಣ್ಣಿಗೆ ಬೀಳುವುದಿಲ್ಲ. ಬೇಟೆಯ ಪಾಠ ಹೇಳಿಕೊಡುವ ತಾಯಿಯೇ ಹುಲಿಗಳಿಗೆ ಮನುಷ್ಯರನ್ನು ಕಂಡರೆ ದೂರವಿರಬೇಕು ಎಂಬ ಸಂಗತಿಯನ್ನು ಮನಗಾಣಿಸಿರುತ್ತದೆ. ಆದರೆ ಈ ಹುಲಿಯದ್ದು ವಿಪರೀತ ತುಂಟತನ!

ಪಂಡರವಳ್ಳಿಯಲ್ಲಿ ಮಹಿಳೆಯನ್ನು ಕೊಲ್ಲುವ ಮೊದಲೂ ಇದು ಅನೇಕ ಬಾರಿ ಜನರ ಕಣ್ಣಿಗೆ ಬಿದ್ದಿತ್ತು. ಪ್ರವಾಸಿಗರ ಕಾರನ್ನು ಸುಮಾರು 1 ಕಿ.ಮೀ.ಯಷ್ಟು ದೂರ ಬೆನ್ನಟ್ಟಿದ ಅಪರೂಪದ ದಾಖಲೆಯನ್ನೂ ಈ ಹುಲಿ ನಿರ್ಮಿಸಿತ್ತು. ಮುಂದೆ ಇದೇ ತುಂಟತನವೇ ಮುಳುವಾಗಿ ಅದರ ಪ್ರಾಣ ತೆಗೆಯಿತು. ಬಲಿಯಾದ ಹುಲಿಯ ತಾಯಿಗೆ ಇದೇ ವಯಸ್ಸಿನ ಮತ್ತೊಂದು ಮರಿಯೂ ಇದೆ. ಕ್ಯಾಮೆರಾ ಟ್ರ್ಯಾಪಿಂಗ್‌ಗಳಲ್ಲಿ ಮೂರೂ ಹುಲಿಗಳು ದಾಖಲಾಗಿವೆ. ಆದರೆ ಆ ತಾಯಿ ಮತ್ತು ಸತ್ತ ಹುಲಿಯ ಸೋದರ ಮರಿ ಈವರೆಗೆ ಜನರ ಕಣ್ಣಿಗೆ ಬಿದ್ದಿಲ್ಲ.

ಕಾರಣಗಳ ಸುತ್ತ…
ಹುಲಿಯೊಂದು ಮನುಷ್ಯರನ್ನು ಕೊಲ್ಲಲು ಹತ್ತಾರು ಕಾರಣ ಇರುತ್ತದೆ. ಆದರೆ ಬೆಳಗಾವಿಯಲ್ಲಿ ಸತ್ತ ಪಂಡರವಳ್ಳಿಯ ಹುಲಿ ಮನುಷ್ಯರನ್ನು ಕೊಲ್ಲಲು ನಿಖರ ಕಾರಣ ಈವರೆಗೆ ಪತ್ತೆಯಾಗಿಲ್ಲ. ತಾಯಿಯಿಂದ ಬದುಕುವ ಕಲೆಯನ್ನು ಪೂರ್ತಿ ಕಲಿಯದೇ ಹೋದದ್ದೇ ಇದು ಮನುಷ್ಯರನ್ನು ಕೊಲ್ಲಲು ಕಾರಣ ಎಂಬುದು ಸದ್ಯದ ವಿಶ್ಲೇಷಣೆ. ಚಿಕ್ಕಮಗಳೂರಿನಲ್ಲಿ ಮೊದಲ ಸಲ ಮಹಿಳೆಯನ್ನು ಕೊಂದ ಹುಲಿ ಆಕೆಯ ದೇಹವನ್ನು ತಿಂದಿರಲಿಲ್ಲ. ಆದರೆ ಭೀಮಗಡದಲ್ಲಿ ಮಾತ್ರ ತಾನು ಕೊಂದ ಮಹಿಳೆಯ ದೇಹವನ್ನು ತಿಂದಿತ್ತು. ಭೀಮಗಡ ಸುತ್ತಮುತ್ತಲ ಹತ್ತಾರು ಜಾನುವಾರು, ಕುರಿ ಮೇಕೆಗಳೂ ಹುಲಿಗೆ ಬಲಿಯಾಗಿದ್ದವು.

ಒಬ್ಬ ಮನುಷ್ಯನನ್ನು ಕೊಂದ ಮಾತ್ರಕ್ಕೆ ಹುಲಿಯನ್ನು ನರಭಕ್ಷಕ ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ಅನೇಕ ಸಲ ‘ಅಚಾನಕ್’ ಆಗಿ ಹುಲಿಗಳು ಮನುಷ್ಯರನ್ನು ಕೊಲ್ಲುತ್ತವೆ. ಆದರೆ ತಿನ್ನುವುದಿಲ್ಲ. ಹಸಿವು ತಾಳಲಾರದೆ ಮನುಷ್ಯರನ್ನು ಅನಿವಾರ್ಯವಾಗಿ ಒಂದು ಸಲ ಕೊಂದು ತಿಂದರೂ ಹುಲಿಯಲ್ಲಿ ಅದೇ ಪ್ರವೃತ್ತಿ ಮುಂದುವರಿಯುತ್ತದೆ ಎಂದು ಹೇಳಲು ಆಗುವುದಿಲ್ಲ. ಭದ್ರಾದಲ್ಲಿ ಇರುವ ಬಲಿ ಪ್ರಾಣಿ (ಹುಲಿಗೆ ಆಹಾರ) ಸಂಖ್ಯೆ ಗಮನಿಸಿದರೆ ಪಂಡವರಳ್ಳಿ ಪುಟ್ಟನಿಗೆ ಮನುಷ್ಯರನ್ನು ಕೊಲ್ಲಲು ಕಾರಣವೇ ಇರಲಿಲ್ಲ.

ಬದುಕುತ್ತಿತ್ತೇ ಬಡಜೀವ?
ಸಾಮಾನ್ಯವಾಗಿ ಬೇಟೆಯಾಡಲು ಸಾಧ್ಯವಿಲ್ಲದಷ್ಟು ನಿತ್ರಾಣಗೊಂಡ, ಕೋರೆ ಹಲ್ಲು ಮುರಿದ ಅಥವಾ ಉದುರಿದ, ವಯಸ್ಸಾದ ಮತ್ತು ಪ್ರಾಯದ ಹುಲಿಗಳೊಂದಿಗಿನ ಕಾದಾಟದಲ್ಲಿ ಸಾಮ್ರಾಜ್ಯ ಕಳೆದುಕೊಂಡ ಹುಲಿಗಳು ಮಾತ್ರ ಕಾಡಿನ ಅಂಚಿಗೆ ಬಂದು ಜಾನುವಾರುಗಳನ್ನು ಹಿಡಿಯುತ್ತವೆ. ಅಪರೂಪದ ಪ್ರಕರಣಗಳಲ್ಲಿ ಇವು ನರಭಕ್ಷಕಗಳಾದ ಬಗ್ಗೆ ಮಾಹಿತಿ ಇದೆ. ಆದರೆ ಭೀಮಗಡದ ‘ನತದೃಷ್ಟ ಹುಲಿ’ ಇನ್ನೂ ಎಳೆ ಪ್ರಾಯದ್ದು. ಅಮ್ಮನ ಮಾತು ನಿರ್ಲಕ್ಷಿಸಿಯೋ ಅಥವಾ ಅಮ್ಮ ಹೇಳಿಕೊಟ್ಟ ಪಾಠ ಸರಿಯಾಗಿ ಕಲಿಯದೆಯೋ ನಾಡಿಗೆ ಬಂದು ಗುಂಡಿಗೆ ಬಲಿಯಾಯಿತು.

ಅದರ ವರ್ತನೆ ಗಮನಿಸಿದ್ದ ಹುಲಿತಜ್ಞ ಡಾ. ಉಲ್ಲಾಸ ಕಾರಂತರು ಅದನ್ನು ಮತ್ತೊಮ್ಮೆ ಕಾಡಿಗೆ ಬಿಡುವುದರ ಬಗ್ಗೆ ತಕರಾರು ಎತ್ತಿದ್ದರು. ‘ಈ ಹುಲಿ ಮನುಷ್ಯರನ್ನು ಕಂಡರೆ ಹೆದರುವುದನ್ನು ಕಲಿತಿಲ್ಲ. ಅದನ್ನು ಮತ್ತೆ ಕಾಡಿಗೆ ಬಿಟ್ಟರೆ ತೊಂದರೆಯೇ ಹೆಚ್ಚು. ಇನ್ನೂ ಸಣ್ಣ ಪ್ರಾಯವಾದ ಕಾರಣ ಅದನ್ನು ಕೊಲ್ಲುವುದರ ಬದಲು ಮೃಗಾಲಯದಲ್ಲಿಟ್ಟು ಸಾಕಬೇಕು’ ಎನ್ನುವುದು ಅವರ ವಾದವಾಗಿತ್ತು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಒತ್ತಡ ತಾಳಲಾರದೆ, ಮತ್ತೊಂದು ರೀತಿಯ ವಾದ ಹೆಣೆದು ಸೆರೆಸಿಕ್ಕಿದ್ದ ಹುಲಿಯನ್ನು ಬೆಳಗಾವಿ ಜಿಲ್ಲೆಯ ಭೀಮಗಢ ಕಾಡಿಗೆ ಬಿಡುವ ನಿರ್ಧಾರ ತೆಗೆದುಕೊಂಡರು.

ಪಂಡರವಳ್ಳಿ ಹುಲಿಗೆ ದಾಂಡೇಲಿಯಲ್ಲಿ ಮುಕ್ತಿ ಸಿಗಲಿಲ್ಲ. ಅಲ್ಲಿಂದ ಅದು ಭೀಮಗಢಕ್ಕೆ ಬಂದರೂ ಅದರ ‘ಕಾಲರ್ ಸಿಗ್ನಲ್’ ಒಂದು ತಿಂಗಳು ಪತ್ತೆಯಾಗಲಿಲ್ಲ. ಹುಲಿಯ ಸುದ್ದಿ ಹೊರ ಜಗತ್ತಿಗೆ ‘ಸ್ಫೋಟ’ಗೊಂಡಿದ್ದೇ ಮಹಿಳೆಯೊಬ್ಬರು ಸತ್ತ ನಂತರ. ಕೊನೆಗೆ ಅದನ್ನು ಕೊಲ್ಲಲು ನಿರ್ಧರಿಸಲಾಯಿತು. ಆಮೇಲೆ ಹುಲಿ ಸತ್ತ ಸುದ್ದಿ ಬಂತು. ಮುಂದೇನಾಯಿತು ಎಂಬುದು ಈಗ ಇತಿಹಾಸ.

ರಕ್ಷಣೆಗೆ ಆತಂಕ
‘ಪಂಡರವಳ್ಳಿ ಪುಟ್ಟ’ನ ಪ್ರಕರಣ ಇಂದು ರಾಜ್ಯದ ವನ್ಯಜೀವಿ ಸಂರಕ್ಷಣೆಗೆ ಹಲವು ಬಗೆಯಲ್ಲಿ ಆತಂಕ ತಂದೊಡ್ಡಿದೆ. ಬಯಲುಸೀಮೆಯಲ್ಲಿ ಇಷ್ಟು ದಿನ ಊರ ಮುಂದೆ ಚಿರತೆ ಅಡ್ಡಾಡಿದರೆ ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಆದರೆ ಬೇಟೆ ಪ್ರಾಣಿಗಳ ಬಗ್ಗೆ ಸಮೂಹ ಸನ್ನಿಗೊಳಗಾದಂತೆ ಹೆದರಿರುವ ಜನರು ಸಿಕ್ಕಸಿಕ್ಕಲ್ಲಿ ಅವನ್ನು ಕೊಲ್ಲುವ, ಸೆರೆ ಹಿಡಿಯುವ ಮಾತನ್ನಾಡುತ್ತಿದ್ದಾರೆ. ಕಳೆದ ಜನವರಿ 5ರಂದು ಶಿರಾ ತಾಲ್ಲೂಕು ಮಂಗನಹಳ್ಳಿಯಲ್ಲಿ 2 ವರ್ಷ ಪ್ರಾಯದ ಚಿರತೆ ಮರಿಯನ್ನು ಪೊದೆಗೆ ಹೊಗೆ ಹಾಕಿ, ಕಲ್ಲು ಹೊಡೆದು ಕ್ರೂರವಾಗಿ ಸೆರೆ ಹಿಡಿದ ವಿದ್ಯಮಾನವನ್ನು ಇಲ್ಲಿ ಗಮನಿಸಬಹುದು. ಭದ್ರಾ, ಬಂಡೀಪುರ, ನಾಗರಹೊಳೆಯಂಥ ದಟ್ಟ ಕಾಡಿನ ಅಂಚಿನ ಹಳ್ಳಿಗಳಿಗರಲ್ಲೂ ಇದೇ ಭಾವನೆ ಬಲಿತರೆ ಅರಣ್ಯ ಇಲಾಖೆಯ ಇಷ್ಟು ವರ್ಷದ ಶ್ರಮ ಹೊಳೆಯಲ್ಲಿ ತೊಳೆದ ಹುಣಸೆ ಹಣ್ಣು ಆಗಬಹುದು ಎಂಬ ಆತಂಕ ಕಾಣಿಸಿಕೊಂಡಿದೆ.

ದುರಂತದಲ್ಲೊಂದು ಪಾಠ
ಅರಣ್ಯ ಇಲಾಖೆ ಚುರುಕಾಗಿ ಕೆಲಸ ಮಾಡುತ್ತಿರುವುದರಿಂದ ರಾಜ್ಯದೆಲ್ಲೆಡೆ ಬಲಿಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ. ಇದೇ ಅನುಪಾತದಲ್ಲಿ ಬೇಟೆ ಪ್ರಾಣಿಗಳ ಸಂಖ್ಯೆಯೂ ಹೆಚ್ಚಾಗಬೇಕೆನ್ನುವುದು ನಿಸರ್ಗದ ನಿಯಮ. ಮುಂದಿನ ದಿನಗಳಲ್ಲಿ ಇಂಥ ಮತ್ತೊಬ್ಬ ತುಂಟನೋ ತುಂಟಿಯೋ ಕಾಣಿಸಿಕೊಂಡರೆ ಏನು ಮಾಡಬಾರದು ಎಂಬ ಪಾಠವನ್ನು ‘ಪಂಡರವಳ್ಳಿ ಪುಟ್ಟ’ನ ಪ್ರಕರಣ ಕಲಿಸಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಹುಲಿಗಳು*
ಬಂಡೀಪುರ/ನಾಗರಹೊಳೆ 200
ಭದ್ರಾ 20
ಅಣಶಿ/ದಾಂಡೇಲಿ 05
(*ಅಂದಾಜು ಸಂಖ್ಯೆ)

Write A Comment